ಕರ್ಚೀಫಿನ ಹಾಗೆ ತೆಳ್ಳಗೆ, ಮೆತ್ತಗೆ, ಮಡಚಿಟ್ಟರೆ ಜೇಬಿನೊಳಗಿಡಬಹುದಾದಂತೆ, ಮೆತ್ತಗೆ ಹರಿದು ಸಬ್ಜಿ ಜೊತೆಗೆ ಬಾಯಲ್ಲಿಟ್ಟರೆ ಮೆದುವಾಗಿ ಕರಗುವ ರುಚಿಯಾದ ಚಪಾತಿಯಂತಹ ರುಮಾಲಿ ರೋಟಿ ಉತ್ತರ ಭಾರತದ ಪ್ರಮುಖ ಆಹಾರಗಳಲ್ಲಿ ಒಂದು. ಯಾವುದೇ ಉತ್ತರ ಭಾರತೀಯ ಶೈಲಿಯ ರೆಸ್ಟೋರೆಂಟಿಗೆ ಹೋದರೆ, ಬೇರೆ ಬೇರೆ ಬಗೆಯ ರೋಟಿಗಳ ಪೈಕಿ ರುಮಾಲಿ ರೋಟಿಯೂ (Rumali roti) ಸಾಮಾನ್ಯ. ಆದರೆ, ಇತ್ತೀಚೆಗೆ ಈ ರುಮಾಲಿ ರೋಟಿ (Rumali roti) ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆಯಾ? ಅಥವಾ ರೆಸ್ಟೋರೆಂಟುಗಳ ಮೆನು ಪಟ್ಟಿಯಿಂದಲೇ ಕಾಣೆಯಾಗುತ್ತಿದೆಯಾ? ಹೀಗೊಂದು ಪ್ರಶ್ನೆ ಇದೀಗ ರುಮಾಲಿ ರೋಟಿ ಪ್ರಿಯರಲ್ಲಿ ಎದ್ದಿದೆ. ರುಮಾಲಿ ರೋಟಿ ಇತ್ತೀಚೆಗಿನ ದಿನಗಳಲ್ಲಿ ರೆಸ್ಟೋರೆಂಟುಗಳಿಂದ ಸದ್ದಿಲ್ಲದೆ ಮಾಯವಾಗುತ್ತಿದೆ ಎಂಬ ಚರ್ಚೆಯೊಂದು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹುಟ್ಟಿಕೊಂಡು ಸದ್ದು ಮಾಡುತ್ತಿದೆ.
ಹೌದು. ಕರ್ಚೀಫಿನಂತೆ ಮೆದುವಾಗಿ ಬಟ್ಟೆಯಂತೆ ಇರುವುದಕ್ಕೇ ಇದು ರುಮಾಲಿ ರೋಟಿ. ಇಂತಹ ರುಮಾಲಿ ರೋಟಿ ಇತ್ತೀಚೆಗೆ ರೆಸ್ಟೋರೆಂಟಿನ ಮೆನುಪಟ್ಟಿಯಿಂದ ಕಾಣೆಯಾಗುತ್ತಿರುವುದನ್ನು ಗಮನಿಸಿದ್ದೀರಾ? ಹಾಗಂತ ರುಮಾಲಿ ರೋಟಿ ಪ್ರಿಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯೊಂದನ್ನು ಹುಟ್ಟು ಹಾಕಿರುವುದೇ ತಡ, ಅನೇಕರು ಇದಕ್ಜೆ ತಮ್ಮ ಸಹಮತ ವ್ಯಕ್ತಪಡಿಸುತ್ತಿದ್ದಾರೆ.
ತಂದೂರಿ ರೋಟಿ, ನಾನ್‌ನಿಂದ ಸ್ಪರ್ಧೆ
ರುಮಾಲಿ ರೋಟಿಗೆ ಅತೀವ ಸ್ಪರ್ಧೆಯೊಡ್ಡುವ ರೋಟಿಗಳೆಂದರೆ, ತಂದೂರಿ ರೋಟಿ ಹಾಗೂ ನಾನ್. ಈ ಮೊದಲು ತನ್ನ ವಿಶೇಷತೆಯಿಂದ ಜನರ ಮನಗೆದ್ದಿದ್ದ ರುಮಾಲಿ ರೋಟಿ ಎಲ್ಲೆಡೆಯೂ ಕಾಣಸಿಗುತ್ತಿತ್ತು. ಉತ್ತರ ಭಾರತೀಯರ ಮದುವೆ ರಿಸೆಪ್ಶನ್‌ಗಳಲ್ಲಿ, ಸಮಾರಂಭಗಳಲ್ಲಿ, ರುಮಾಲಿ ರೋಟಿಗೆಂದು ತಟ್ಟೆ ಹಿಡಿದು ಕಾದು ಕೂರುವವರ ಸಂಖ್ಯೆ ಇತ್ತು. ಬಿಸಿಬಿಸಿ ರೊಟ್ಟಿ ಬಂದಂತೆ ಬಿಸಿಬಿಸಿ ವೆಜ್ ನಾನ್‌ವೆಜ್ ಸೈಡ್ ಡಿಶ್ ಜೊತೆಗೆ ಸೇರಿಸಿಕೊಂಡು ತಿನ್ನುವ ಮಂದಿ ಹೆಚ್ಚಿದ್ದರು. ಆದರೆ, ಈಚೆಗೆ ಇದು ಎಲ್ಲೆಡೆ ಕಡಿಮೆಯಾಗುತ್ತಿದೆ.
ಆದರೆ, ಇಂದಿಗೂ ರುಮಾಲಿ ರೋಟಿ ಅಭಿಮಾನಿಗಳ ಒಂದು ದಂಡೇ ಇದೆ ಎಂಬುದು ಈ ಪೋಸ್ಟ್ ಮೂಲಕ ಬೆಳಕಿಗೆ ಬಂದಿದೆ. ಈ ಚರ್ಚೆಯಲ್ಲಿ ಭಾಗವಹಿಸಿರುವ ಅನೇಕರು, ಖಂಡಿತಾವಾಗಿಯೂ ಏನಾದರೂ ಮಾಡಿ ರುಮಾಲಿ ರೋಟಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಂತೆ ಮಾಡಬೇಕಿದೆ ಎಂದು ಪಣ ತೊಟ್ಟಿದ್ದಾರೆ. ರುಮಾಲಿ ರೋಟಿ ಈಗ ಎಲ್ಲೆಡೆ ದೊರಕುತ್ತಿಲ್ಲ. ಭಾರತೀಯ ಅಡುಗೆ ಉಣ್ಣಬೇಕೆಂದು ಹೊರಗೆ ಹೋದರೆ, ಇದಕ್ಕಾಗಿ ಬಹಳ ರೆಸ್ಟೋರೆಂಟುಗಳಲ್ಲಿ ಹುಡುಕಾಡಬೇಕಾದ ಪರಿಸ್ಥಿತಿ ಈಗಿದೆ ಎಂದು ವಿದೇಶದಲ್ಲಿರುವ ರುಮಾಲಿ ರೋಟಿ ಅಭಿಮಾನಿಯೊಬ್ಬರು ಹೇಳಿದ್ದಾರೆ.
ರುಮಾಲಿ ರೋಟಿ ಪ್ರಿಯರ ಅಳಲು
ಇನ್ನೂ ಒಬ್ಬ ರುಮಾಲಿ ರೋಟಿ ಅಭಿಮಾನಿಯೊಬ್ಬರು ಪಂಜಾಬ್‌ನಲ್ಲೂ ಈ ರೋಟಿ ದೊರೆಯುವುದು ಬಹಳ ಕಡಿಮೆಯಾಗಿದೆ. ಇತ್ತೀಚೆಗೆ ರುಮಾಲಿ ರೋಟಿ ಆರ್ಡರ್ ಮಾಡಿದಾಗ, ಈ ರೋಟಿ ಇಲ್ಲ, ಬದಲಾಗಿ ನಾನ್ ತೆಗೆದುಕೊಳ್ಳಿ ಎಂದು ರೆಸ್ಟೋರೆಂಟ್ ಸಲಹೆ ನೀಡಿತು ಎಂದಿದ್ದಾರೆ.
ಇನ್ನೂ ಕೆಲವರು ಇದೊಂದು ರಾಷ್ಟ್ರೀಯ ಸಮಸ್ಯೆ ಎಂದು ಬಣ್ಣಿಸಿದ್ದಾರೆ. ಇನ್ನೂ ಕೆಲವರು, ನಮ್ಮ ಪ್ರೀತಿಯ ರುಮಾಲಿ ರೋಟಿಗೆ ನ್ಯಾಯ ಸಿಗಲೇಬೇಕು, ಮತ್ತೆ ಭಾರತದ ರೆಸ್ಟೋರೆಂಟುಗಳಲ್ಲಿ ರುಮಾಲಿ ರೋಟಿ ಸಿಗುವಂತಾಗಲೇಬೇಕು ಎಂದಿದ್ದಾರೆ. ಇನ್ನೊಬ್ಬರು, ಈ ರುಮಾಲಿ ರೋಟಿ ರೆಸ್ಟೋರೆಂಟುಗಳಿಂದ ನಿಧಾನವಾಗಿ ಮಾಯವಾಗುತ್ತಿರುವುದಕ್ಕೆ ಕಾರಣ ಈಗಿನ ಹೊಸ ಪೀಳಿಗೆ. ಹೊರಗೆ ತಿನ್ನುತ್ತಿರುವ ಹೊಸ ಪೀಳಿಗೆ ರುಮಾಲಿ ರೋಟಿಯನ್ನು ತಿನ್ನುತ್ತಿಲ್ಲ. ಸಹಜವಾಗಿಯೇ, ಜನರ ಆಸಕ್ತಿಗಳಿಗೆ ಅನುಗುಣವಾಗಿ ರೆಸ್ಟೋರೆಂಟುಗಳೂ ಕೂಡಾ ತಮ್ಮ ಮೆನುವಿನಲ್ಲಿ ಮಾರ್ಪಾಡಿ ಮಾಡಿಕೊಂಡಿವೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲ ರುಮಾಲಿ ರೋಟಿ ಪ್ರಿಯರು, ರುಮಾಲಿ ರೋಟಿಯನ್ನು ವಾಪಸ್ ತರಲು ನಾನ್ ಅನ್ನು ಓಡಿಸಲೂ ತಯಾರಾಗಿ ನಿಂತಿದ್ದಾರೆ. ಬಟರ್ ನಾನ್ ಅನ್ನು ಕಡಿಮೆ ಮಾಡಿದರೆ, ರುಮಾಲಿ ರೋಟಿಗೂ ಕೊಂಚ ಜಾಗ ಸಿಕ್ಕೀತು. ಭಾರತದ ಈ ವಿಶೇಷವಾದ ರುಮಾಲಿ ರೋಟಿ ನಮ್ಮ ರೆಸ್ಟೋರೆಂಟುಗಳಿಂದ ಮಾಯವಾಗದಿರಲಿ ಎಂದಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಸೇವ್ ರುಮಾಲಿ ರೋಟಿ ಎಂದು ಹ್ಯಾಶ್‌ಟ್ಯಾಗ್ ಅಭಿಯಾನ ಆರಂಭಿಸಿದ್ದಾರೆ.
ಇದನ್ನೂ ಓದಿ: Stress can cause neck pain: ಕುತ್ತಿಗೆ ನೋವೇ? ಮಾನಸಿಕ ಒತ್ತಡವೂ ಕಾರಣವಾಗಿರಬಹುದು!