Site icon Vistara News

Kitchen tips: ಈರುಳ್ಳಿಯನ್ನು ಹೆಚ್ಚು ಕಾಲ ಉಳಿವಂತೆ ಕಾಪಾಡಲು ಹೀಗೆ ಮಾಡಿ!

keeping onion fresh

ಈರುಳ್ಳಿ (onion) ಇಲ್ಲದೆ ನಮ್ಮ ಒಂದು ದಿನ ಸಾಗದು. ನಿತ್ಯದ ಅಡುಗೆಗೆ ಒಂದಲ್ಲ ಒಂದು ವಿಧದಲ್ಲಿ ಈರುಳ್ಳಿ ಬೇಕೇ ಬೇಕು. ಈರುಳ್ಳಿಗೆ ನಮ್ಮೆಲ್ಲ ಆಹಾರಗಳ ರುಚಿ ಹೆಚ್ಚಿಸುವ ಗುಣವಿದೆ. ಪ್ರತ್ಯೇಕವಾಗಿ ತಿಂದರೆ ಬಾಯಿ ವಾಸನೆ ಬಂದರೂ, ಇದನ್ನು ಯಾವುದಾದರೊಂದು ಆಹಾರಕ್ಕೆ ಪದಾರ್ಥವಾಗಿ ಹಾಕಿದರೆ ಅದರ ರುಚಿಯೇ ಬೇರೆ. ಪಲ್ಯ, ಸಾಂಬಾರು, ವಿವಿಧ ಬಗೆಯ ಸಬ್ಜಿಗಳು, ಚಟ್ನಿ ಹೀಗೆ ನಾನಾ ವಿಧದ ಆಹಾರ ಪದಾರ್ಥಗಳಿಗೆ ಈರುಳ್ಳಿ ಪ್ರಮುಖ ವಸ್ತು. ಇಂತಹ ಈರುಳ್ಳಿಯನ್ನು ಮನೆಯಲ್ಲಿ ಸಾಕಷ್ಟು ದಿನ ಉಳಿಸಿಕೊಳ್ಳುವ ಅಗತ್ಯ ನಮಗೆ ಇದ್ದೇ ಇರುತ್ತದೆ. ನಿತ್ಯವೂ ಈರುಳ್ಳಿ ತರಲು ಯಾರೂ ಮಾರುಕಟ್ಟೆಗೆ ಹೋಗಲಾಗುವುದಿಲ್ಲ. ಒಮ್ಮೆ ತಂದರೆ, ಬಹಳ ದಿನಗಳ ಕಾಲ ನಮ್ಮ ತರಕಾರಿ ಬುಟ್ಟಿಯಲ್ಲಿ ಈರುಳ್ಳಿ ಹಾಯಾಗಿ ಮಲಗಿರಬೇಕು. ಹಾಗಾದರೆ ಈರುಳ್ಳಿಯನ್ನು ಕೆಡದಂತೆ ತಿಂಗಳುಗಟ್ಟಲೆ ಉಳಿಸಿಕೊಳ್ಳುವ ತಂತ್ರಗಳು ಯಾವುವು (kitchen tips) ಎಂಬುದನ್ನು ನೋಡೋಣ.

1. ಈರುಳ್ಳಿಯನ್ನು ಬಿಸಿಲಿನಲ್ಲಿ ಒಣಗಲು ಬಿಡಬಾರದು: ಒಣ, ಶುದ್ಧವಾದ ಆದರೆ ಸೂರ್ಯನ ಬೆಳಕು ಬೀಳದ ಜಾಗದಲ್ಲಿ ಈರುಳ್ಳಿಯನ್ನು ಇಡುವುದು ಉತ್ತಮ. ಈರುಳ್ಳಿ ಬಹಳ ಕಾಲ ಕೆಡದಂತೆ ಇರಲು ಬೇಕಾದ ಉಷ್ಣತೆ ಅಂದಾಜು ೧೨ರಿಂದ ೧೭ ಡಿಗ್ರಿ. ಹೀಗಿದ್ದರೆ ಈರುಳ್ಳಿ ಸುಮಾರು ಮೂರು ತಿಂಗಳವರೆಗೂ ಕೆಡದಂತೆ ಉಳಿಯಬಹುದು.

2. ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಹಾಕಿಡಬೇಡಿ: ಈರುಳ್ಳಿ ಕೆಡದಂತೆ ಉಳಿಯಬೇಕಾದರೆ ಗಾಳಿಯಾಡುವಂತಿರಬೇಕು. ಅಂದರೆ, ಅದನ್ನು ಪ್ಲಾಸ್ಟಿಕ್‌ ಕವರ್‌ನೊಳಗೆ ಹಾಕಿಡಬಾರದು. ಮಾರುಕಟ್ಟೆಯಿಂದ ತಂದ ಕೂಡಲೇ ಈರುಳ್ಳಿಯನ್ನು ತೆರೆದ ಬಾಸ್ಕೆಟ್‌ನಲ್ಲಿ ಹಾಕಿಡಬಹುದು. ಏಪರ್‌ ಬ್ಯಾಗ್‌, ಬಟ್ಟೆ ಚೀಲವಾದರೂ ಒಕೆ. ಆದರೆ, ಮುಚ್ಚಿಡುವುದಕ್ಕಿಂತ ತೆರೆದಿಟ್ಟರೆ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ.

3. ಈರುಳ್ಳಿಯನ್ನು ಫ್ರಿಡ್ಜ್‌ನಲ್ಲಿಡಬಾರದು: ಈರುಳ್ಳಿಯನ್ನು ಎಂದಿಗೂ ಫ್ರಿಡ್ಜ್‌ನಲ್ಲಿ ಇಡಬಾರದು. ಎಷ್ಟೇ ಸೆಖೆಯಿದ್ದರೂ, ತಣ್ಣಗಿರಲಿ ಎಂಬ ಯೋಚನೆಯಿಂದ ಫ್ರಿಡ್ಜ್‌ನಲ್ಲಿಡಲು ಹೊರಡಬೇಡಿ. ಇದರಿಂದ ಈರುಳ್ಳಿ ಹಾಳಾಗುತ್ತದೆ.

4. ದೊಡ್ಡ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ: ಕೊಳ್ಳುವಾಗ ದೊಡ್ಡ ಗಾತ್ರದ ಈರುಳ್ಳಿ ಕೊಂಡುಕೊಳ್ಳಿ. ಒಣಸಿಪ್ಪೆಯ ಪದರುಗಳೂ ಇರಲಿ. ಇಂಥ ಈರುಳ್ಳಿ ಹೆಚ್ಚು ಕಾಲ ಉಳಿಯುತ್ತದೆ. ಕಲೆಗಳೂ ಇಲ್ಲದಂತೆ ನೋಡಿಕೊಳ್ಳಿ. ಯಾಕೆಂದರೆ ಕೆಲವೊಮ್ಮೆ ಒಳಸಿಪ್ಪೆಯ ಒಳಗಿನ ಪದರ ಕೊಳೆಯಲಾರಂಭಿಸಿರುತ್ತದೆ.

5. ಕತ್ತರಿಸಿದ ಹಾಗೂ ಸಿಪ್ಪೆ ಸುಲಿದ ಈರುಳ್ಳಿಯನ್ನು ಆದಷ್ಟು ಬೇಗ ಮುಗಿಸುವುದು ಒಳ್ಳೆಯದು. ಕತ್ತರಿಸಿದ ಈರುಳ್ಳಿಯೇನೋ ಫ್ರಿಡ್ಜ್‌ನಲ್ಲಿಟ್ಟರೆ ಐದಾರು ದಿನ ಉಳಿಯಬಹುದು. ಆದರೂ ಕತ್ತರಿಸಿದ ಈರುಳ್ಳಿ ಫ್ರಿಡ್ಜ್‌ನಲ್ಲಿಡುವುದು ಒಳ್ಳೆಯದಲ್ಲ.

ಇದನ್ನೂ ಓದಿ: Onion Benefits: ಈರುಳ್ಳಿಯೆಂದರೆ ಬಾಯಿ ವಾಸನೆ ಮಾತ್ರವಲ್ಲ!

Exit mobile version