Site icon Vistara News

Kitchen Tips: ಶುಂಠಿಯ ಬೆಲೆಯೂ ಏರಿದೆ! ಹಾಳಾಗದಂತೆ ಹೀಗೆ ಸಂಗ್ರಹಿಸಿಡಿ!

ginger

ಈಗಷ್ಟೇ ಬೆಲೆ ಏರಿಕೆಯನ್ನು ಅನುಭವಿಸಿದ ಟೊಮೇಟೋ (tomato price) ನಿಧಾನವಾಗಿ ಕೆಳಗಿಳಿಯಲು ಸಜ್ಜಾಗುತ್ತಿದ್ದಂತೆ, ಇನ್ನೊಂದೆಡೆ ಶುಂಠಿ ಬೆಲೆ (ginger price) ಏರಿಕೆಯ ಏಣಿಯನ್ನೇರಲು ಹೊರಟಿದೆ! ಮಳೆಗಾಲದಲ್ಲಿ ಶುಂಠಿಯಿಲ್ಲದೆ ದಿನ ಮುಂದೂಡುವುದು ಬಹಳ ಮಂದಿಗೆ ಕಷ್ಟವಿರುವ ಪರಿಸ್ಥಿತಿಯಲ್ಲಿ ಶುಂಠಿಯ ಬೆಲೆ ಏರುತ್ತಲೇ ಇರುವುದು ಸಾಮಾನ್ಯ ಗ್ರಾಹಕರ ಪಾಲಿಗೆ ನುಂಗಲಾರದ ತುತ್ತಾಗಿದೆ. ಕೇರಳದಲ್ಲಿ ಶುಂಠಿಯ ಬೆಲೆ ಕೆಜಿಗೆ ೩೦೦ ಆದರೆ, ಇತರ ಕೆಲವು ರಾಜ್ಯಗಳಲ್ಲೂ, ಕೆಜಿಗೆ ೨೨೦ರಿಂದ ೨೫೦ ರೂಪಾಯಿಗಳವರೆಗೂ ಇವೆ. ಹಾಗಾದರೆ ಬೆಲೆ ಏರಿದೆ ಎಂದು ಶುಂಠಿ ಹಾಕದೆ ಅಡುಗೆ ಮಾಡಲು (kitchen tips) ಸಾಧ್ಯವೇ ಹೇಳಿ! ಈ ಮಳೆಗಾಲದಲ್ಲಿ ಶೀತ, ಕಫ, ನೆಗಡಿಯೆಂದು ಶುಂಠಿ ಕಷಾಯ (ginger kadha) ಮಾಡದೆ ಇರಲಾದೀತೇ? ಹಾಗಾದರೆ, ಒಂದಿಷ್ಟು ಶುಂಠಿಯನ್ನು ಮುಂದಾಲೋಚನೆಯಿಂದ ಸಂಗ್ರಹಿಸಿ ಇಡುವುದೂ ಈ ಮಳೆಗಾಲದಲ್ಲಿ ಒಳ್ಳೆಯದೇ. ಬನ್ನಿ, ಶುಂಠಿಯನ್ನು ಹಾಳಾಗದಂತೆ, ಸಿಪ್ಪೆಯೂ ಪೋಲಾಗದಂತೆ ಹೇಗೆಲ್ಲ ಬಹಳ ದಿನಗಳ ಕಾಲ ಇಡಬಹುದು (ginger storing) ಎಂಬುದನ್ನು ನೋಡೋಣ.

೧. ಶುಂಠಿ ಕಡಿಮೆಗೆ ಸಿಕ್ಕಿತು ಎಂದು ಅಗತ್ಯಕ್ಕಿಂತ ಹೆಚ್ಚೇ ತಂದಿದ್ದರೆ, ಅವುಗಳನ್ನು ತೊಳೆದು ಒದ್ದೆ ಆರಲು ಬಿಟ್ಟು ನಂತರ ಪೇಪರ್‌ ಟವೆಲ್‌ ಒಂದರಲ್ಲಿ ಸುತ್ತಿಟ್ಟುಬಿಡಿ. ಹಾಗೆ ಸುತ್ತಿಟ್ಟದ್ದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಕೆಲದಿನಗಳವೆರೆಗೆ ಶುಂಠಿ ಹಾಗೆಯೇ ತಾಜಾ ಆಗಿ ಇರುತ್ತದೆ. ನೀರು, ತೇವದಿಂದ ದೂರ ಇಡಿ.

೨. ತಾಜಾ ಶುಂಠಿಯ ಸಿಪ್ಪೆ ಸುಲಿದು ಅದನ್ನು ಸಣ್ಣ ಗಾತ್ರದ ತುಂಡುಗಳನ್ನಾಗಿ ಕತ್ತರಿಸಿ ವಿನೆಗರ್‌ನಲ್ಲಿ ಹಾಕಿಟ್ಟು ಕೂಡಾ ಸಂಗ್ರಹಿಸಿ ಇಡಬಹುದು. ಅಥವಾ ನಿಂಬೆರಸ ಹಿಂಡಿಯೂ ಕೆಡದಂತೆ ಇಟ್ಟುಕೊಳ್ಳಬಹುದು.

೩. ಬಹಳ ಶುಂಠಿ ಇವೆ, ಏನು ಮಾಡಲಿ ಎಂದು ಅಂದುಕೊಂಡರೆ ಅವುಗಳ ಸಿಪ್ಪೆ ತೆಗೆದು ಪೇಸ್ಟ್‌ ಮಾಡಿಯೂ ಫ್ರಿಡ್ಜ್‌ನಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು. ಪೇಸ್ಟ್‌ ಮಾಡಿಟ್ಟುಕೊಳ್ಳುವಾಗ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬೇಕಾದಾಗ ಬಳಸಿ.

೪. ಮಳೆಯ ಸಮಸ್ಯೆ ಇಲ್ಲದವರು ಚೆನ್ನಾಗಿ ಬಿಸಿಲು ಇದ್ದರೆ, ಪುಡಿ ಮಾಡಿಟ್ಟುಕೊಳ್ಳಲೂಬಹುದು. ಶುಂಠಿಯ ಸಿಪ್ಪೆ ಸುಲಿದು ಹೆಚ್ಚಿನ ನೀರನ್ನು ಪೇಪರ್‌ ಟವೆಲ್‌ನಿಂದ ಒರೆಸಿಕೊಂಡು ತುರಿದು ಒಣಗಿಸಿ ಇಟ್ಟುಕೊಳ್ಳಬಹುದು. ಬಿಸಿಲು ಇಲ್ಲದಿದ್ದರೆ, ಹೀಗೆ ತುರಿದ ಶುಂಠಿಯನ್ನು, ಓವನ್‌ನಲ್ಲಿ ಒಣಗಿಸಿ ಇಟ್ಟುಕೊಳ್ಳಬಹುದು. ಒಣಗಿದ ಮೇಲೆ ಹಾಗೆಯೇ ಇನ್ನೂ ಪುಡಿಯಾಗಿಸಲೂಬಹುದು.

೫. ಶುಂಠಿಯಿಂದ ಸಿಪ್ಪೆ ಬೇರ್ಪಡಿಸಿ, ಎಸೆದುಬಿಡಬೇಡಿ. ಸಿಪ್ಪೆಯಲ್ಲೂ ಶುಂಠಿಯ ಅಂಶಗಳಿರುವುದರಿಂದ ಅದನ್ನು ಚೆನ್ನಾಗಿ ತೊಳೆದು, ಒಣಗಿಸಿ ಇಟ್ಟುಕೊಳ್ಳಿ. ಇವುಗಳನ್ನು ನಿತ್ಯವೂ ಮಾಡುವ ಚಹಾಕ್ಕೆ, ಅಥವಾ ಶೀತ, ನೆಗಡಿಯ ಕಷಾಯಕ್ಕೆ ಬಳಸಬಹುದು.

ಇದನ್ನೂ ಓದಿ: Ginger Benefits: ಶುಂಠಿ ಎಂಬ ದಿವ್ಯೌಷಧಿ: ಒಂದು ಬೇರಿನ ಹಲವು ಪ್ರಯೋಜನಗಳು!

Exit mobile version