Site icon Vistara News

Kitchen Tips: ನಾವು ಮರೆತಿರುವ ಈ ಅಡುಗೆಯ ಕ್ರಮಗಳು ಹಳತಿರಬಹುದು, ಆದರೆ ಆರೋಗ್ಯಕರ!

old type of grinding

ಈಗಿನ ಫಾಸ್ಟ್‌ ಯುಗದಲ್ಲಿ ಎಲ್ಲವೂ ಫಾಸ್ಟ್‌. ನಮಗೆ ಅಡುಗೆಯೂ ಫಟಾಫಟ್‌ ಆಗಬೇಕು. ಎಲ್ಲವೂ ಇನ್‌ಸ್ಟ್ಯಾಂಟ್‌ ಆಗಿರುವ ಯುಗ ಇದು. ದೋಸೆ, ಉಪ್ಪಿಟ್ಟು, ಪುಳಿಯೋಗರೆ, ಇಡ್ಲಿ ಎಲ್ಲವಕ್ಕೂ ಇನ್‌ಸ್ಟ್ಯಾಂಟ್‌ ಮಿಕ್ಸ್‌ಗಳು (instant mix) ಸಿಗುತ್ತವೆ. ಗಂಟೆಗಟ್ಟೆ ಅಡುಗೆ ಮಾಡಲು ಪುರುಸೊತ್ತು ಯಾರಿಗೂ ಇಲ್ಲ. ಹಾಗಾಗಿ ನಾವು ಈ ಧಾವಂತದ ಯುಗದಲ್ಲಿ ಹಳೆಯ ಅಡುಗೆಯ (cooking methods) ಪದ್ಧತಿಗಳನ್ನು, ಕ್ರಮಗಳನ್ನು ಪರಂಪರಾಗತ ಅಡುಗೆಗಳನ್ನು ನಿಧಾನವಾಗಿ ಮರೆಯುತ್ತಿದ್ದೇವೆ. ಆ ಮೂಲಕ ನಮ್ಮ ಆರೋಗ್ಯವನ್ನೂ ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ಹಿಂದಿನ ಕಾಲದಂತೆ ಅಡುಗೆ ಮಾಡುತ್ತಾ ಕೂತರೆ ದಿನವಿಡೀ ಅಡುಗೆ ಮನೆಯಲ್ಲೇ ಕಳೆಯಬೇಕು ನಿಜ, ಆದರೆ, ಈ ಹೆಸರಿನಲ್ಲಿ ನಾವು ಹಲವು ಬಗೆಯ ಆರೋಗ್ಯಕರ ವಿಧಾನಗಳನ್ನೂ (healthy cooking) ದೂರ ತಳ್ಳುತ್ತಿದ್ದೇವೆ ಎಂಬುದೂ ಅಷ್ಟೇ ಸತ್ಯ. ಹಾಗಾದರೆ ಬನ್ನಿ, ಇತ್ತೀಚೆಗೆ ಕಡಿಮೆಯಾಗುತ್ತಿರುವ ಯಾವೆಲ್ಲ ಅಡುಗೆಯ ಪರಂಪರಾಗತ ವಿಧಾನಗಳು ಆರೋಗ್ಯಕರ (kitchen tips) ಎಂಬುದನ್ನು ನೋಡೋಣ.

1. ನಿಧಾನವಾಗಿ ಅಡುಗೆ ಮಾಡುವುದು: ಈಗ ಫಟಾಫಟ್‌ ಅಡುಗೆ ಶೈಲಿ ಹೆಚ್ಚಿರುವುದರಿಂದ ಪ್ಯಾಕೆಟ್‌ ತೆರೆದು ಪಾತ್ರೆಗೆ ಸುರಿದು ಕುದಿಸುವುದು, ಕಲಸಿ ಬೇಯಿಸುವುದು ಇತ್ಯಾದಿಗಳಷ್ಟೇ ಮಾಡುವ ಕಾಲ. ಆದರೆ, ನಿಧಾನವಾಗಿ ಕಡಿಮೆ ಅಥವಾ ಹದ ಉರಿಯಲ್ಲಿ ಆಹಾರ ಬೇಯಿಸುವುದೂ ಕೂಡಾ ಅತ್ಯಂತ ಅಗತ್ಯ. ನಿಧಾನವಾಗಿ ಅಡುಗೆ ಬೇಯುವಾಗ, ಪ್ರತಿಯೊಂದು ಪದಾರ್ಥವೂ ಒಂದಕ್ಕೊಂದು ಹೊಂದಿಕೊಂಡು ಹದವಾದ ಮಿಶ್ರಣ ತಯಾರಾಗುತ್ತದೆ. ಗಡಿಬಿಡಿಯಲ್ಲಿ ಹೆಚ್ಚಿನ ಉರಿಯಲ್ಲಿ ಬೇಯಿಸಿದ ಆಹಾರಕ್ಕೆ ನಿಧಾನ ಉರಿಯಲ್ಲಿ ಬೇಯಿಸಿದ ಆಹಾರದ ರುಚಿ, ಘಮ ಇರುವುದಿಲ್ಲ. ಗಮನಿಸಿ ನೋಡಿ.

2. ಹುಳಿ ಬರಿಸುವುದು: ಹುಳಿ ಬರಿಸುವುದು ನಮ್ಮ ಆಹಾರ ಕ್ರಮದಲ್ಲಿರುವ ಅತ್ಯಂತ ಹಳೆಯ ವಿಧಾನಗಳಲ್ಲೊಂದು. ದೋಸೆ ಹಿಟ್ಟು ಹುಳಿ ಬರಿಸುವುದು, ಉಪ್ಪಿನಕಾಯಿ, ಮೊಸರು ಮಾಡುವುದು ಇತ್ಯಾದಿ ಇತ್ಯಾದಿ ಆರೋಗ್ಯಕ್ಕೆ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಕೊಡುತ್ತದೆ. ಇದು ಜೀರ್ಣಕ್ರಿಯೆಗೆ, ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಲು ಹಾಗೂ ಸರಿಯಾಗಿ ಪೋಷಕಾಂಶಗಳನ್ನು ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಆದರೆ, ಈಗೆಲ್ಲ ಇನ್‌ಸ್ಟ್ಯಾಂಟ್‌ ಸಿಗುವುದರಿಂದ ಇಂಥ ಪದ್ಧತಿಗಳೂ ನಿಧಾನವಾಗಿ ಕಡಿಮೆಯಾಗುತ್ತಿದೆ.

3. ಕುಟ್ಟಿ ಪುಡಿ ಮಾಡುವುದು: ಮಸಾಲೆಗಳನ್ನು ಕುಟ್ಟಿ ಪುಡಿ ಮಾಡುವುದು ತಲೆತಲಾಂತರಗಳಿಂದ ಬಂಧ ನಮ್ಮ ಪದ್ಧತಿ. ಈಗೆಲ್ಲಾ ಪ್ಯಾಕೆಟ್ಟುಗಳಲ್ಲಿ ಬೇಕು ಬೇಕಾದ ಮಸಾಲೆಗಳು ಸಿಗುವುದರಿಂದ ಯಾರಿಗೂ ಕುಟ್ಟಿ ಪುಡಿ ಮಾಡಿ ಮಸಾಲೆ ತಯಾರು ಮಾಡಲು ಪುರುಸೊತಿಲ್ಲ. ಆದರೆ, ಕುಟ್ಟಿ ಪುಡಿ ಮಾಡಿದ ಮಸಾಲೆ ಅಡುಗೆಯ ಘಮ ಮಾತ್ರ ಬೇರೆಯದೇ ಎಂಬುದನ್ನು ನೀವು ಒಪ್ಪಿಕೊಳ್ಳಲೇಬೇಕು!

4. ಕಲ್ಲಲ್ಲಿ ರುಬ್ಬುವುದು: ಈಗೆಲ್ಲ ಮಿಕ್ಸಿ, ಗ್ರೈಂಡರು ಬಂದ ಮೇಲೆ ರುಬ್ಬುವ ಕಲ್ಲುಗಳೆಲ್ಲ ಬಹುತೇಕ ಮೂಲೆ ಸೇರಿವೆ. ಎಂಥ ಹಳ್ಳಿಯೇ ಆದರೂ, ಇಂದು ರುಬ್ಬುವ ಕಲ್ಲು ಸಿಗುವುದು ಬಹಳ ಅಪರೂಪವೇ ಸರಿ. ಆದರೆ, ರುಬ್ಬುವ ಕಲ್ಲಿನ ಸಹಾಯದಿಂದ ಮಾಡಿದ ಅಡುಗೆಯ ರುಚಿ ಸಾಮಾನ್ಯ ಅಡುಗೆಗಿಂತ ಒಂದು ಪಟ್ಟು ಹೆಚ್ಚೇ ರುಚಿ!

ಇದನ್ನೂ ಓದಿ: Kitchen Tips: ನಾನ್‌ಸ್ಟಿಕ್‌ ಪಾತ್ರೆಗಳನ್ನು ಬಳಸುವಾಗ ನಿಮ್ಮ ಆರೋಗ್ಯದ ಬಗ್ಗೆ ಈ ಅಂಶಗಳು ತಿಳಿದಿರಲಿ!

5. ಹಬೆಯಲ್ಲಿ ಬೇಯಿಸುವುದು: ಹಬೆಯಲ್ಲಿ ಬೇಯಿಸಿ ಮಾಡುವ ಆಹಾರಗಳು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂಬ ಹಿರಿಯರ ಮಾತಿದೆ. ಅದು ನಿಜ ಕೂಡಾ. ಆದರೆ ಈಗೆಲ್ಲಾ ಫಟಾಫಟ್‌ ತಿಂಡಿಯ ಕಾಲದಲ್ಲಿ ಹಬೆಯಲ್ಲಿ ಬೇಯಿಸುವ ತಿಂಡಿಗಳನ್ನು ಮಾಡುವುದೇ ಅಪರೂಪ ಎನ್ನುವಂತಾಗಿದೆ.

ಈ ಎಲ್ಲ ಬಗೆಗಳನ್ನೂ ಮನೆಗಳಲ್ಲಿ ಮತ್ತೆ ಬಳಸುವುದು ಸಾಧ್ಯವಾಗಲಿಕ್ಕಿಲ್ಲ ನಿಜ. ಆದರೆ, ಬಹಳಷ್ಟು ವಿಧಾನಗಳನ್ನು ನಾವು ಈಗಲೂ ಬಳಸಬಹುದು. ಹುಳಿ ಬರಿಸುವುದು, ಹಬೆಯಲ್ಲಿ ಬೇಯಿಸುವುದು ಇತ್ಯಾದಿಗಳನ್ನು ನಿತ್ಯವೂ ಮಾಡಬಹುದಾಗಿದೆ. ಕಲ್ಲಲ್ಲಿ ರುಬ್ಬುವುದು ಈ ಕಾಲಕ್ಕೆ ಕಷ್ಟವಾದರೂ ಕುಟ್ಟಿ ಪುಡಿ ಮಾಡಿ ಮಸಾಲೆಗಳನ್ನು ಮಾಡಿಟ್ಟುಕೊಳ್ಳಬಹುದು. ಹಾಗಾಗಿ, ನೆನಪಿಡಿ. ಕೆಲವು ಬಗೆಯ ಪರಂಪರಾಗತ ಪದ್ಧತಿಗಳನ್ನು ನಮ್ಮ ಮುಂದಿನ ಪೀಳಿಗೆಗೆ ಜೀವಂತವಾಗಿಡುವ ಜವಾಬ್ದಾರಿಯೂ ನಮ್ಮ ಕೈಲಿದೆ, ಅಷ್ಟೇ ಅಲ್ಲ, ನಮ್ಮ ಆರೋಗ್ಯವೂ ನಮ್ಮ ಕೈಯಲ್ಲೇ ಇದೆ.

ಇದನ್ನೂ ಓದಿ: Kitchen Tips: ಈ ಐದು ಆಹಾರಗಳನ್ನು ಪ್ರೆಶರ್‌ ಕುಕ್ಕರಿನಲ್ಲಿ ಬೇಯಿಸಬಾರದು, ಯಾವುದು ಗೊತ್ತೆ?

Exit mobile version