ಕೊತ್ತಂಬರಿ ಸೊಪ್ಪು (coriander leaves) ಒಮ್ಮೆ ತಂದರೆ ಅದನ್ನು ಬಹಳ ದಿನಗಳ ಕಾಲ ಕೆಡದಂತೆ ಉಳಿಸಿಕೊಳ್ಳುವುದೂ ಒಂದು ವಿದ್ಯೆಯೇ. ಯಾವುದೇ ತರಕಾರಿಯಾಗಲಿ, ಸೊಪ್ಪಾಗಲೀ ತಂದ ಮೇಲೆ ಕೆಲದಿನಗಳ ಕಾಲ ಉಳಿಸಿಕೊಳ್ಳಲು ಕೊಂಚ ತಯಾರಿಯನ್ನು ಮಾಡಬೇಕಾಗುತ್ತದೆ. ತಂದು ಹಾಗೆ ಇಟ್ಟರೆ ಎರಡೇ ದಿನಗಳಲ್ಲಿ ಎಲ್ಲ ಕಸದ ಡಬ್ಬಿ ಸೇರಬಹುದು. ತುಂಬ ತೆಗೆದುಕೊಂಡು ಬಂದಾಗ ಎಲ್ಲವನ್ನೂ ಆದಷ್ಟೂ ಕೆಡದಂತೆ ಉಳಿಸಿಕೊಳ್ಳಲು ಗೊತ್ತಿರಬೇಕಾಗುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪನ್ನು ಕೆಡದಂತೆ ಇಡುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಎಷ್ಟೋ ಸಲ, ಏನೆಲ್ಲ ಪ್ರಯತ್ನಗಳನ್ನು ಮಾಡಿ ಕೆಡದಂತೆ ಇಟ್ಟರೂ, ಬಹುಬೇಗನೆ ಇವು ಹಾಳಾಗುತ್ತದೆ. ಹಾಗಾದರೆ ಬನ್ನಿ, ಕೊತ್ತಂಬರಿ ಸೊಪ್ಪನ್ನು ಒಂದು ವಾರಕ್ಕಿಂತಲೂ ಹೆಚ್ಚು ದಿನಗಳ ಕಾಲ ಕೊಳೆಯದಂತೆ ಕಾಪಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ನೋಡೋಣ.
1. ಝಿಪ್ ಲಾಕ್ ಕ್ರಮ: ಸುಲಭ ಹಾಗೂ ಸರಳವಾದ ಕ್ರಮ ಎಂದರೆ ಝಿಪ್ ಲಾಕ್ ಕ್ರಮ. ಕೊತ್ತಂಬರಿ ಸೊಪ್ಪನ್ನು ತಂದ ಕೂಡಲೇ ತೊಳೆದು ಬೇರುಗಳನ್ನು ಕತ್ತರಿಸಿ ತೆಗೆದು ಅವುಗಳ ನೀರನ್ನು ಆರಲು ಬಿಡಿ. ನೀರು ಆರಿದ ಮೇಲೆ ಅವುಗಳ ಝಿಪ್‌ಲಾಕ್ ಬ್ಯಾಕ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ಬೇಕಾದಾಗ ಬೇಕಾದಷ್ಟನ್ನೇ ತೆಗೆದು ಮತ್ತೆ ಹಾಗೆಯೇ ಒಳಗಿಡಿ. ಹೀಗೆ ಮಾಡುತ್ತಿದ್ದರೆ, ಕೊತ್ತಂಬರಿ ಸೊಪ್ಪು ಬೇಗನೆ ಕೊಳೆಯುವುದಿಲ್ಲ.
2. ಡಬ್ಬದಲ್ಲಿಡಿ: ಅತ್ಯುತ್ತಮ ವಿಧಾನ ಎಂದರೆ ಡಬ್ಬದಲ್ಲಿಡುವುದು. ತಂದ ಕೂಡಲೇ ಕೊತ್ತಂಬರಿ ಸೊಪ್ಪನ್ನು ಕ್ಲೀನ್ ಮಾಡಿ, ಸ್ವಚ್ಛ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟು ಅವುಗಳ ಮೇಲೆ ಒಂದು ಪುಟ್ಟ ಬಟ್ಟೆಯನ್ನು ಮುಚ್ಚಿ. ನಂತರ ಡಬ್ಬದ ಮುಚ್ಚಳ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ಎರಡು ವಾರಗಳ ಕಾಲ ಚೆನ್ನಾಗಿ ಉಳಿಯುತ್ತದೆ.
3. ನೀರಿನಲ್ಲಿಡಿ: ಅಯ್ಯೋ, ಕ್ಲೀನ್ ಮಾಡಿ, ನೀರು ಆರಲು ಬಿಟ್ಟು ಆಯಲು ಸಮಯ ಇಲ್ಲ ಎನ್ನುವವರು ನೀವಾಗಿದ್ದರೆ, ನಿಮ್ಮಂಥವರಿಗೆ ಬೆಸ್ಟ್ ವಿಧಾನ ಎಂದರೆ ನೀರಲ್ಲಿ ಹಾಕಿಡುವುದು. ಒಂದು ಗ್ಲಾಸ್‌ನಲ್ಲಿ ನೀರು ತುಂಬಿಸಿ ಅದರಲ್ಲಿ ತಂದ ಕೊತ್ತಂಬರಿ ಸೊಪ್ಪನ್ನು ತೊಳೆದು ಅದರ ದಂಟು ನೀರಲ್ಲಿರುವಂತೆ ನೇರವಾಗಿ ಇಡಿ. ಈ ಗ್ಲಾಸನ್ನು ಹಾಗೆಯೇ ಫ್ರಿಡ್ಜ್‌ನಲ್ಲಿಟ್ಟು ಆಗಾಗ ಎರಡು ಮೂರು ದಿನಕ್ಕೊಮ್ಮೆ ನೀರು ಬದಲಾಯಿಸುತ್ತಿದ್ದರೆ ಕೊತ್ತಂಬರಿ ಸೊಪ್ಪು ಎರಡರಿಂದ ಮೂರು ವಾರಗಳವರೆಗೆ ಕೆಡದೆ ಹಾಗೆಯೇ ಇರುತ್ತದೆ.
4. ಕತ್ತರಿಸಿಡಿ: ಕೊತ್ತಂಬರಿ ಸೊಪ್ಪನ್ನು ಕತ್ತರಿಸಿಡುವ ಮೂಲಕವೂ ಕೆಲಕಾಲ ಹಾಳಾಗದಂತೆ ಕಾಪಾಡಬಹುದು. ತಂದ ಸೊಪ್ಪನ್ನು ತೊಳೆದು ನೀರು ಆರಲು ಬಿಟ್ಟು ಕತ್ತರಿಸಿಟ್ಟು ಗಾಳಿಯಾಡದ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿಟ್ಟರೆ ಎರಡು ವಾರ ಹಾಳಾಗುವುದಿಲ್ಲ.
5. ಸುತ್ತಿಡಿ: ಕೊತ್ತಂಬರಿ ಸೊಪ್ಪನ್ನು ತಂದ ಕೂಡಲೇ ತೊಳೆದು ಬೇರಿ ಕತ್ತರಿಸಿ ಆಯ್ದ ಮೇಲೆ ನೀರು ಆರಲು ಬಿಡಬೇಕು. ನೀರು ಆರಿದ ಸೊಪ್ಪನ್ನು ಮಸ್ಲಿನ್ ಬಟ್ಟೆಯಲ್ಲಿ ಅಥವಾ ಪೇಪರ್‌ನಲ್ಲಿ ಸುತ್ತಿ ಅದನ್ನು ಫ್ರಿಡ್ಜ್‌ನಲ್ಲಿಟ್ಟರೆ ಅದು ಒಂದು ವಾರದವರೆಗೆ ನಿಸ್ಸಂಶಯವಾಗಿ ಕೆಡದೆ ತಾಜಾ ಆಗಿ ಉಳಿಯುತ್ತದೆ.
ಇದನ್ನೂ ಓದಿ: Kitchen Tips: ಮಿಕ್ಸಿ ಗ್ರೈಂಡರಿನ ಕೆಟ್ಟ ವಾಸನೆ ಹಾಗೂ ಜಿಡ್ಡಿನಿಂದ ಮುಕ್ತಿ ಹೇಗೆ? ಇಲ್ಲಿವೆ ಟಿಪ್ಸ್!