Site icon Vistara News

Kiwi benefits | ಕಿವಿ ಹಣ್ಣುಗಳ ಬಗ್ಗೆ ಕೆಲವು ಕಿವಿಮಾತು

kiwi

ಕೋವಿಡ್‌ ಇನ್ನೂ ಮುಗಿದಿಲ್ಲ ಎಂಬ ಎಚ್ಚರಿಕೆಯ ಮಾತು ಎಲ್ಲೆಡೆಯಿಂದ ಕೇಳಿ ಬರುತ್ತಿರುವ ಬೆನ್ನಲ್ಲೇ, ದೇಶದ ಹಲವಾರು ಕಡೆಗಳಲ್ಲಿ ಡೆಂಗೂ ಸುದ್ದಿ ಮಾಡುತ್ತಿದೆ. ಅತಿಯಾದ ಜ್ವರ, ಮೈ-ಕೈ ನೋವು, ತಲೆ ನೋವು ಮುಂತಾದ ಹಲವು ಲಕ್ಷಣಗಳಿಂದ ಆರಂಭವಾಗುವ ಈ ಖಾಯಿಲೆ, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದಿದ್ದರೆ, ಪ್ಲೇಟ್ಲೆಟ್‌ಗಳು ಕಡಿಮೆಯಾಗಿ ವಿವಿಧ ಸಮಸ್ಯೆಗಳಿಗೂ ದಾರಿಯಾಗಿ ಜೀವಕ್ಕೆ ಎರವಾಗುವ ಸಂಭವವೂ ಇಲ್ಲದಿಲ್ಲ. ಈ ರೋಗದ ಸೋಂಕಿಗೆ ಹೋಲಿಸಿದಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದರೂ, ಉಲ್ಭಣಿಸಿದರೆ ಚೇತರಿಕೆಗೆ ಹಲವಾರು ದಿನಗಳು ಬೇಕಾಗುತ್ತವೆ. ಸೊಳ್ಳೆಗಳಿಂದ ಹರಡುವ ಈ ರೋಗ ತಗುಲದಂತೆ ಎಚ್ಚರಿಕೆ ವಹಿಸುವುದು ಎಲ್ಲಾ ರೀತಿಯಲ್ಲೂ ಸೂಕ್ತ. ನಮ್ಮ ಆರೋಗ್ಯವನ್ನು ಜೋಪಾನ ಮಾಡುವಲ್ಲಿ ನಾವು ತಿನ್ನುವ ಆಹಾರಗಳೂ ಪ್ರಮುಖ ಪಾತ್ರ ವಹಿಸುವುದರಿಂದ, ಕಿವಿ ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ.

ಡೆಂಗೂ ಬಂದವರು ಚೇತರಿಸಿಕೊಳ್ಳುವಲ್ಲಿ ಪಪ್ಪಾಯ ಮತ್ತು ಕಿವಿ ಹಣ್ಣುಗಳು ಅತ್ಯಂತ ಪರಿಣಾಮಕಾರಿ ಎಂಬುದು ಈಗಾಗಲೇ ಸ್ಥಿತವಾಗಿದೆ. ಜ್ವರವನ್ನು ಕಡಿಮೆ ಮಾಡುವುದಲ್ಲದೇ ಅದರೊಂದಿಗಿನ ಮೈ-ಕೈ ನೋವುಗಳಂಥ ಇತರ ಲಕ್ಷಣಗಳನ್ನೂ ಶಮನಗೊಳಿಸುತ್ತದೆ. ದೇಹದಲ್ಲಿ ಲಿಂಫೋಸೈಟ್‌ಗಳ ಉತ್ಪತ್ತಿಯನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿಯನ್ನೂ ಬಲಪಡಿಸುತ್ತದೆ. ಹಾಗಾಗಿ ಡೆಂಗೂ ರೋಗಿಗಳಿಗೆ ಪಪ್ಪಾಯದ ಜೊತೆಗೆ ಸಿ ಜೀವಸತ್ವದ ಖನಿಯಂತಿರುವ ಕಿವಿ ಹಣ್ಣುಗಳನ್ನೂ ನೀಡಲಾಗುತ್ತದೆ.

ಇದನ್ನೂ ಓದಿ | Guava benefits | ಪೇರಲೆ ಹಣ್ಣು: ಬಣ್ಣ ಯಾವುದಾದರೆ ಚೆನ್ನ?

ಒಂದಿಷ್ಟು ಮಾಹಿತಿ: ಈ ಹಣ್ಣುಗಳ ಪೂರ್ವಾಪರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವುದಾದರೆ, ಇದರ ಮೂಲ ಚೀನಾ. ನಂತರ ವಿಶ್ವದ ಬೇರೆ ದೇಶಗಳಿಗೆ ಈ ಹಣ್ಣು ಪಸರಿಸಿದ್ದು, ನ್ಯೂಜಿಲೆಂಡ್‌ನ ಕಿವಿಗಳು ಈಗ ಹೆಚ್ಚಿನ ಮಾನ್ಯತೆ ಗಳಿಸಿವೆ. ರುಚಿಯಲ್ಲಿ ಸಿಹಿ ಅಥವಾ ಹುಳಿ ಮಿಶ್ರಿತ ಸಿಹಿ ಇರುವುದು ಸಾಮಾನ್ಯ. ಮೇಲಿನ ಸಿಪ್ಪೆ ಹಸಿರು ಅಥವಾ ತಿಳಿ ಹಳದಿ ಬಣ್ಣದಲ್ಲಿರುತ್ತದೆ. ಸುಮಾರು ನೂರು ಗ್ರಾಂ ನಷ್ಟು ಕಿವಿ ಹಣ್ಣುಗಳಲ್ಲಿ, ದೊರೆಯುವ ಕ್ಯಾಲರಿ ಸುಮಾರು ೬೫. ಈ ಪೈಕಿ, ಶೇ. ೧೪ರಷ್ಟು ಶರ್ಕರ ಪಿಷ್ಟ, ೩ ಗ್ರಾಂ ನಾರು, ಒಂದು ಗ್ರಾಂ ಪ್ರೊಟೀನ್‌ ಮುಖ್ಯವಾಗಿದೆ. ಇದಲ್ಲದೆ ಫೋಲೇಟ್‌ (೭%), ಪೊಟಾಶಿಯಂ (೪%), ತಾಮ್ರ (೧೫%) ಮತ್ತು ವಿಟಮಿನ್‌ ಎ (೯%) ಈ ಹಣ್ಣಿನಲ್ಲಿವೆ. ವಿಟಮಿನ್‌ ಕೆ (೩೪%) ಮತ್ತು ವಿಟಮಿನ್‌ ಸಿ (೮೩) ಜೀವಸತ್ವಗಳ ಆಗರವಿದು. ಸಿ ಜೀವಸತ್ವ ಅತಿ ಸಾಂದ್ರವಾಗಿರುವುದರಿಂದ, ಆಂಟಿಆಕ್ಸಿಡೇಶನ್ ಹೆಚ್ಚಿನ ಪ್ರಮಾಣದಲ್ಲಿ ನಡೆದು, ರೋಗನಿರೋಧಕ ಶಕ್ತಿಯ ವರ್ಧನೆಗೆ ಕಾರಣವಾಗುತ್ತದೆ. ದೇಹದಲ್ಲಿನ ಉರಿಯೂತ ಶಮನ ಮಾಡುವ ಪಾಲಿಫೆನಾಲ್‌ಗಳು ಅಂಶವೂ ಈ ಹಣ್ಣಿನಲ್ಲಿದೆ.

ಲ್ಯೂಟೆನ್‌, ಬೀಟಾ ಕ್ಯಾರೊಟಿನ್‌ನಂಥ ಕೆರೋಟಿನಾಯ್ಡ್ ಅಂಶಗಳು‌ ದೇಹದ ಮೇಲೆ ಉಂಟುಮಾಡುವ ಧನಾತ್ಮಕ ಪರಿಣಾಮ ಅಪಾರ. ರಕ್ತದೊತ್ತಡ ನಿಯಂತ್ರಿಸಿ, ಹೃದ್ರೋಗಗಳನ್ನು ದೂರ ಇರಿಸುವ ಸಾಮರ್ಥ್ಯ ಈ ಪೋಷಕಾಂಶಗಳಿಗಿದೆ. ರಕ್ತದಲ್ಲಿನ ಕೊಲೆಸ್ಟ್ರಾಲ್‌ ಮತ್ತು ಟ್ರೈ ಗ್ಲಿಸರೈಡ್‌ ಕಡಿಮೆ ಮಾಡಿ, ಒಳ್ಳೆಯ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಲ್ಲಿನ ನಾರಿನಂಶದಿಂದ ಜೀರ್ಣಾಂಗದ ಆರೋಗ್ಯಕ್ಕೂ ಇದು ಉಪಕಾರಿಯಾಗಿದೆ.

ಇದನ್ನೂ ಓದಿ | Banana benefits | ತೂಕ ಹೆಚ್ಚಿಸೋಕೂ, ತೂಕ ಇಳಿಸೋಕೂ ಬಾಳೆಹಣ್ಣು!

Exit mobile version