Site icon Vistara News

Lemon uses: ಅಳಿದುಳಿದ ನಿಂಬೆಹಣ್ಣನ್ನು ಎಸೆಯದೆ ಹೀಗೆಲ್ಲಾ ಬಳಸಬಹುದು!

how left over lemon can be used in kitchen

ನಿಂಬೆಹಣ್ಣಿನ ತಾಜಾತನದ ಅನುಭೂತಿ ಯಾರಿಗಿಷ್ಟವಿಲ್ಲ ಹೇಳಿ! ವಿಶೇಷವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿನ ಪಾನಕ (lemon juice) ಕುಡಿದರೆ ಸಾಕು, ಸೆಖೆಯಿಂದ ತತ್ತರಿಸುವ ಜೀವಕ್ಕೆ ಒಡನೆಯೇ ಚೈತನ್ಯ ಬರುತ್ತದೆ. ನಿಂಬೆಹಣ್ಣಿನಲ್ಲಿರುವ ಸಿ ವಿಟಮಿನ್‌ನಿಂದ ನಮ್ಮ ದೇಹಕ್ಕೆ ಸಾಕಷ್ಟು ಆರೋಗ್ಯಕರ ಲಾಭಗಳಿದ್ದು, ಇದು ಕೇವಲ ಪಾನಕ ಮಾತ್ರವಲ್ಲ, ಹಲವಾರು ಉಪಯೋಗಗಳ ಮೂಲಕ  ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ರೂಪುಗೊಂಡಿದೆ. ಬಹಳಷ್ಟು ಸಂದರ್ಭಗಳಲ್ಲಿ ನಿಂಬೆಹಣ್ಣನ್ನು ಕತ್ತರಿಸಿ ಅದರ ಒಂದು ಭಾಗವನ್ನು ಮಾತ್ರ ಬಳಸಿ ಮತ್ತೊಂದು ಭಾಗವನ್ನು ಬಳಸದೆ ಹಾಗೆಯೇ ಬಿಟ್ಟುಬಿಡುತ್ತೇವೆ. ಈ ಅರ್ಧ ನಿಂಬೆಹಣ್ಣು ಬಹಳಷ್ಟು ಸಂದರ್ಭಗಳಲ್ಲಿ ಹಾಳಾಗಿ ಹೋಗುವುದೇ ಹೆಚ್ಚು. ಅಥವಾ ಒಣಗಿ ರಸಹೀನವಾಗಿಬಿಡುತ್ತದೆ. ಹಾಗಾದರೆ, ಹೀಗೆ ಹಾಳಾಗಿ ವೇಸ್ಟಾಗಿಬಿಡುವ ನಿಂಬೆಹಣ್ಣನ್ನು, ಅಥವಾ, ಹೆಚ್ಚುವರಿ ನಿಂಬೆಹಣ್ಣನ್ನು ಹಾಳಾಗುವ ಮೊದಲು ಹೇಗೆಲ್ಲ ಉಪಯೋಗಕ್ಕೆ (Lemon uses) ಬರುವಂತೆ ಮಾಡಬಹುದು ಎಂಬುದನ್ನು ನೋಡೋಣ.

1. ಲೆಮನೇಡ್‌ ಎಸೆನ್ಸ್‌ ಮಾಡಿಡಿ. ನಿಂಬೆಹಣ್ಣು ಸಿಕ್ಕಾಪಟ್ಟೆ ಇದೆ, ಏನು ಮಾಡೋಣ ಎಂಬ ಚಿಂತೆಯಾದರೆ ಅಥವಾ ನಿಂಬೆಹಣ್ಣು ಹಾಳಾಗಿ ವೇಸ್ಟಾಗುತ್ತದೆ ಎನಿಸಿದರೆ ಅಂಥ ನಿಂಬೆಹಣ್ಣನ್ನು ಲೆಮನೇಡ್‌ ಎಸೆನ್ಸ್‌ ಮಾಡಿಟ್ಟುಕೊಳ್ಳಬಹುದು. ಹೀಗೆ ಮಾಡಿಟ್ಟುಕೊಂಡದ್ದನ್ನು ಫ್ರಿಡ್ಜ್‌ನಲ್ಲಿ ಇಟ್ಟುಕೊಂಡು ಬೇಕಾದಾಗ ನಿಂಬೆಹಣ್ಣಿನ ಪಾನಕ ಮಾಡಿ ಕುಡಿಯಬಹುದು. ನಿಂಬೆಹಣ್ಣನ್ನು ಹಿಂಡಿ ರಸ ತೆಗೆದು ಅದರ ಜೊತೆಗೆ ಸಕ್ಕರೆ ಪಾಕವನ್ನು ಮಿಕ್ಸ್‌ ಮಾಡಿ ಒಂದು ಗಾಜಿನ್‌ ಬಾಟಲಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ. ಬೇಕಾದಾಗ, ಸೋಡಾ ಅಥವಾ ನೀರಿನ ಜೊತೆಗೆ ಮೆರೆಸಿ ಲೆಮನೇಡ್‌ ಅಥವಾ ನಿಂಬೆ ಪಾನಕ ಮಾಡಿ ಕುಡಿಯಬಹುದು.

2. ಸಲಾಡ್‌ಗೆ ಬಳಸಿ. ಅರ್ಧ ನಿಂಬೆಹಣ್ಣನ್ನು ಯಾವುದಕ್ಕೋ ಬಳಸಿ, ಅರ್D‌ ತುಂಡನ್ನು ಏನು ಮಾಡಲಿ ಎಂದು ತಿಳಿಯದಾಗಿದ್ದರೆ, ಸಲಾಡ್‌ನ ಮೇಲೆ ಹಿಂಡಿ. ನಿಂಬೆ ರಸ, ಆಲಿವ್‌ ಎಣ್ಣೆ, ಚಿಟಿಕೆ ಉಪ್ಪು, ಒಂದು ಚಮಚ ಜೇನುತುಪ್ಪವನ್ನು ಸೇರಿಸಿದರೆ ಸಲಾಡ್‌ ರುಚಿಯಾಗಿರುತ್ತದೆ.

3. ಮಾಂಸ ಹಾಗೂ ಮೀನನ್ನು ಮ್ಯಾರಿನೇಟ್‌ ಮಾಡಿ ಅದನ್ನು ಮೆದುವಾಗುವಂತೆ ಮಾಡಲು ಬಳಸುಬಹುದು. ನಿಂಬೆಹಣ್ಣಿನಲ್ಲಿರುವ ಅಸಿಡಿಕ್‌ ಪ್ರಕೃತಿಯಿಂದಾಗಿ ಇದು ಸುಲಭವಾಗಿ ಮಾಂಸಾಹಾರವನ್ನು ಮೆದು ಮಾಡುತ್ತದೆ. ನಿಂಬೆರಸ, ಬೆಳ್ಳುಳ್ಳಿ ಹಾಗೂ ನಿಮ್ಮ ಆಯ್ಕೆಯ ಮಸಾಲೆಯನ್ನು ಸೇರಿಸಿ ಕೆಲವು ಗಂಟೆಗಳ ಕಾಲ ಮಾಂಸವನ್ನು ಅಥವಾ ಮೀನನ್ನು ಇಟ್ಟುಕೊಂಡು ನಂತರ ಇದರಿಂದ ತೆಗೆದು ಬೇಯಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಮಿದುವಾಗುತ್ತದೆ.

ಇದನ್ನೂ ಓದಿ: Pregnancy Tips: ಗರ್ಭಿಣಿಯರಿಗೆ ನಿಂಬೆಹಣ್ಣಿನ ಪಾನಕ ಯಾಕೆ ಒಳ್ಳೆಯದು ಗೊತ್ತೇ?

4. ನೀರು, ಹಾಲಿಲ್ಲದ ಚಹಾ, ಕಾಕ್‌ಟೇಲ್‌ ಅಥವಾ ಇನ್ನಾವುದೇ ಜ್ಯೂಸ್‌ಗಳಿಗೆ ನಿಂಬೆಹಣ್ಣನ್ನು ಹಿಂಡುವ ಮೂಲಕವೂ ಇದರ ಪ್ರಯೋಜನ ಪಡೆಯಬಹುದು. ಇದು ಪೇಯಗಳ ರುಚಿಯನ್ನು ಹೆಚ್ಚಿಸುತ್ತದೆ. ಹುಳಿ ರುಚಿಯನ್ನೂ ಸಿಹಿಯ ಜೊತೆಗೆ ಸೇರಿಸುವ ಗುಣ ಇದಕ್ಕಿರುವುದರಿಂದ ರುಚಿ ಪೇಯಗಳು ಇನ್ನಷ್ಟು ರುಚಿಕರವಾಗುತ್ತದೆ.

5. ನಿಂಬೆಹಣ್ಣನ್ನು ಹಾಳಾಗಲು ಬಿಟ್ಟು ಬಿಸಾಡುವ ಬದಲು, ಕೊನೇಪಕ್ಷ ನೀವು ಇದನ್ನು, ಕ್ಲೀನಿಂಗ್‌ ಏಜೆಂಟ್‌ ಆಗಿ ಬಳಸಬಹುದು. ತಾಮ್ರ, ಹಿತ್ತಾಳೆ ಸೇರಿದಂತೆ ಎಲ್ಲ ಬಗೆಯ ಪಾತ್ರೆಗಳನ್ನು ಲಕಲಕ ಹೊಳೆವಂತೆ ಮಾಡಲು, ನಳ್ಳಿ, ಪೈಪ್‌ಗಳನ್ನು ಹೊಳೆವಂತೆ ಮಾಡಲು, ಅಷ್ಟೇ ಅಲ್ಲ, ಬಹುತೇಕ ಎಲ್ಲ ವಸ್ತುಗಳ ಕೊಳೆ ತೊಳೆದು ಹೊಳೆವಂತೆ ಮಾಡುವ ಗುಣ ನಿಂಬೆಯಲ್ಲಿದೆ. ನಿಂಬೆಯ ಸಿಪ್ಪೆಯಿಂದಲೂ ಪಾತ್ರೆಯನ್ನು ಹೊಳೆವಂತೆ ಮಾಡಬಹುದು.

6. ಆಹಾರಕ್ಕೆ ಹುಳಿ ರುಚಿಯನ್ನು ಬರಿಸುವಂತೆ ಮಾಡಲು ನಿಂಬೆಹಣ್ಣಿನ ಅರ್ಧ ಭಾಗವನ್ನು ಹಿಂಡಬಹುದು. ಇದರಿಂದ ಕೇವಲ ಹುಳಿ ರುಚಿಯಲ್ಲದೆ, ನಿಂಬೆ ಹಣ್ಣಿನ ಸತ್ವಗಳೂ ನಮ್ಮ ದೇಹ ಸೇರುತ್ತದೆ. ಸೂಪ್‌, ಸಾಸ್‌, ಸ್ಟ್ಯೂ ಇತ್ಯಾದಿಗಳಿಗೂ ಹಿಂಡಬಹುದು. ನಿಂಬೆ ಇವುಗಳ ರುಚಿಯನ್ನು ಹೆಚ್ಚು ಮಾಡುತ್ತದೆ.

7. ನಿಂಬೆಹಣ್ಣನ್ನು ಉಪ್ಪಿನಲ್ಲಿ ಹಾಕಿಟ್ಟುಕೊಂಡು ಅದನ್ನು ಉಪ್ಪಿನಕಾಯಿ ಮಾಡಬಹುದು. 

ಇದನ್ನೂ ಓದಿ: Benefits Of Lemongrass Tea: ನಿಂಬೆಹುಲ್ಲಿನ ಚಹಾದ ಪ್ರಯೋಜನಗಳು ಗೊತ್ತೇ?

Exit mobile version