ಕೇರಳದ ಹತ್ತು ದಿನಗಳ ಸುಗ್ಗಿ ಹಬ್ಬ ಓಣಂ ಆರಂಭವಾಗಿ ಮುಗಿಯುತ್ತಾ ಬಂದಿದೆ. ಓಣಂ ಎಂದಾಕ್ಷಣ ನಮಗೆ ನೆನಪಾಗುವುದು ಬಣ್ಣ ಬಣ್ಣದ ಹೂವಿನ ರಂಗೋಲಿ, ಸುಂದರ ನಗೆಯ ಕೇರಳ ಸೀರೆಯ ನೀರೆಯರು, ಪಾತಾಳದಿಂದ ಎದ್ದುಬರುವ ಮಹಾಬಲಿಯ ಕಥೆ… ಇತ್ಯಾದಿ. ಆದರೆ ಸುಗ್ಗಿ ಹಬ್ಬದ ಕಡೆಯ ಮತ್ತು ಹತ್ತನೇ ದಿನ ಷಡ್ರಸೋಪೇತವಾದ ಹಬ್ಬದಡುಗೆಗೂ ಪ್ರಖ್ಯಾತಿ ಪಡೆದಿದೆ. ನಮ್ಮ ರಸನ ಮತ್ತು ಜಠರ- ಎರಡಕ್ಕೂ ಅನುಕೂಲವಾದ ಕೆಲವು ಅಡುಗೆಗಳನ್ನು ಇಲ್ಲಿ ವಿವರಿಸಲಾಗಿದೆ.
ಅವಿಯಲ್: ಬಾಳೆಕಾಯಿ, ಕ್ಯಾರೆಟ್, ಆಲೂಗಡ್ಡೆ, ಹುರುಳಿಕಾಯಿ, ನುಗ್ಗೆ ಕಾಯಿಯಂಥ ಕೆಲವು ತರಕಾರಿಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಬೇಯಿಸಿಕೊಳ್ಳಿ. ತರಕಾರಿ ಬೆಂದು ಮೆತ್ತಗಾಗುವುದು ಬೇಡ. ಒಂದು ದೊಡ್ಡ ಕಪ್ ತೆಂಗಿನ ತುರಿಯನ್ನು ಖಾರಕ್ಕೆ ತಕ್ಕಷ್ಟು ಹಸಿ ಮೆಣಸಿನ ಕಾಯಿ ಮತ್ತು ಅರ್ಧ ಚಮಚ ಸಾಸಿವೆಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಬಹುತೇಕ ಬೆಂದಿರುವ ತರಕಾರಿಯೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ತೆಂಗಿನ ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವಿನ ಸೊಪ್ಪಿನಿಂದ ಒಗ್ಗರಣೆ ಮಾಡಿ.
ಕೂಟು: ಮೊದಲಿಗೆ ಕಪ್ಪು ಕಡಲೆಯನ್ನು ಆರೆಂಟು ತಾಸುಗಳ ಕಾಲ ನೆನೆಸಿಟ್ಟು, ನಂತರ ಚನ್ನಾಗಿ ಬೇಯಿಸಿಕೊಳ್ಳಿ. ಬಾಳೆ ಕಾಯಿಯ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಮತ್ತು ಒಂದೆರಡು ಹನಿ ಎಣ್ಣೆ, ಚಿಟಿಕೆ ಅರಿಶಿನ ಮತ್ತು ಕಪ್ಪು ಕಾಳುಮೆಣಸಿನ ಪುಡಿ ಸೇರಿಸಿ ಬೇಯಿಸಿಕೊಳ್ಳಿ. ಒಂದು ಕಪ್ ತೆಂಗಿನ ತುರಿಯನ್ನು ಅರ್ಧ ಚಮಚ ಸಾಸಿವೆ ಮತ್ತು ಎರಡು ಒಣಮೆಣಸಿನ ಕಾಯಿಯೊಂದಿಗೆ ನುಣ್ಣಗೆ ರುಬ್ಬಿಕೊಳ್ಳಿ. ಎಲ್ಲವನ್ನೂ ಸೇರಿಸಿ ಕುದಿಸಿ. ರುಚಿಗೆ ಬೇಕಿದ್ದರೆ ಬೆಲ್ಲ ಸೇರಿಸಬಹುದು. ಇದಕ್ಕೆ ಒಗ್ಗರಣೆಗಾಗಿ ತೆಂಗಿನ ಎಣ್ಣೆಗೆ ಸಾಸಿವೆ, ಉದ್ದಿನ ಬೇಳೆ, ಒಣಮೆಣಸು, ಕರಿಬೇವಿನ ಸೊಪ್ಪನ್ನು ಬಾಣಲೆಗೆ ಹಂತಹಂತವಾಗಿ ಹಾಕಿ. ಎಲ್ಲವೂ ಹುರಿದ ಮೇಲೆ ಹಸಿ ತೆಂಗಿನ ಕಾಯಿ ತುರಿಯನ್ನು ೧/೪ ಕಪ್‌ನಷ್ಟು ಒಗ್ಗರಣೆಗೆ ಹಾಕಿ. ಇದೀಗ ಚನ್ನಾಗಿ ಹುರಿದ ಕೆಂಪಾದ ಮೇಲೆ ಕೂಟಿಗೆ ಸೇರಿಸಿ.
ಅಕ್ಕಿ ಪಾಯಸ: ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಡಿ. ನಂತರ ನೀರು ಬಸಿದು ಸಂಪೂರ್ಣ ಮೆತ್ತಗಾಗುವಷ್ಟು ಹಾಲಿನಲ್ಲೇ ಬೇಯಿಸಿ. ಬೆಂದ ಅಕ್ಕಿ-ಹಾಲಿನ ಮಿಶ್ರಣಕ್ಕೆ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಚನ್ನಾಗಿ ಕುದಿಸಿ. ದ್ರಾಕ್ಷಿ, ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಸೇರಿಸಿ.
ಇದನ್ನೂ ಓದಿ | Eating habit | ಅಡುಗೆ ಮಾಡಿಕೊಳ್ಳುವಷ್ಟು ಸಮಯ ಇಲ್ಲವೇ? ಹಾಗಿದ್ದರೆ ಹೀಗೆ ಮಾಡಿ