ಈಗೆಲ್ಲ ಅಡಿಗೆ ಮಾಡಲು ಯಾರ ಬಳಿ ಸಮಯವಿದೆ ಹೇಳಿ? ಗಂಡ ಹೆಂಡತಿ ಇಬ್ಬರೂ ಹೊರಗೆ ದುಡಿಯುವ ಮಂದಿ ಇದ್ದರಂತೂ ಕೇಳುವುದೇ ಬೇಡ. ಗಡಿಬಿಡಿಯಲ್ಲಿ ಬೆಳಗ್ಗೆ ಎದ್ದು, ಮಕ್ಕಳಿದ್ದರೆ ಅವರನ್ನು ಶಾಲೆಗೆ ಕಳಿಸಿ ಏನಾದರೂ ಹೊಟ್ಟೆಗಿಳಿಸಿ ಸರಿಯಾದ ಸಮಯಕ್ಕೆ ಗಾಡಿ ಹತ್ತಿ ಆಫೀಸಿಗೆ ಸೇರುವಷ್ಟರಲ್ಲಿ ಉಸ್ಸಪ್ಪ ಎಂದೆನಿಸುತ್ತದೆ. ಏನೇ ಮಾಡಿದರೂ ಫಟಾಫಟ್ ಅಡಿಗೆ ಆಗಬೇಕು ಎಂದು ಬಯಸುವ ಕಾಲ ಇದು. ಅಂಥ ಸಂದರ್ಭದಲ್ಲಿ, ಏನು ಮಾಡಬಾರದು ಎಂದೆಲ್ಲ ಯೋಚಿಸಲು ಸಮಯವೂ ಅಲ್ಲಿರುವುದಿಲ್ಲ. ಗಡಿಬಿಡಿಯಲ್ಲಿ ಬಿಸಿಯಾದ್ದೇನನ್ನೋ ಮಿಕ್ಸಿಗೆ (Mixer Grinder) ಹಾಕಿ ರುಬ್ಬಿ, ಸೀಟಿ ಕೂಗಿದ ಕುಕ್ಕರನ್ನು ಒತ್ತಾಯದಲ್ಲಿ ಮುಚ್ಚಳ ತೆರೆದು ಇನ್ನೇನನ್ನೋ ಒತ್ತಡದಲ್ಲಿ ಮಾಡಿ ಮುಗಿಸುವುದು ಸಾಮಾನ್ಯ. ಇಂಥ ಗಡಿಬಿಡಿಯಲ್ಲಿ ಏನೇನೋ ಅವಘಡಗಳೂ ಒಮ್ಮೊಮ್ಮೆ ನಡೆದುಬಿಡುತ್ತದೆ. ಅರ್ಜೆಂಟಾಗಿ ಅಡುಗೆ ಮಾಡುವ ಗೊಂದಲದಲ್ಲಿ ಯಾವುದನ್ನೋ ಮಿಕ್ಸಿಗೆ (Mixer Grinder guide) ಹಾಕಿ, ಆ ಕಡೆ ರುಬ್ಬಲೂ ಆಗದೆ, ತೆಗೆಯಲೂ ಆಗದೆ ಒದ್ದಾಡುವ ಪ್ರಸಂಗವೂ ಇಲ್ಲದಿಲ್ಲ! ಹಾಗಾಗಿ ಬನ್ನಿ, ಈ ಕೆಳಗಿನ ಈ ಎಲ್ಲ ವಸ್ತುಗಳನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬುವುದು ಒಳ್ಳೆಯದಲ್ಲ (Mixer Grinder tips and tricks) ಎಂಬುದನ್ನಾದರೂ ನೆನಪಿನಲ್ಲಿಡಿ.
1. ಬಿಸಿ ದ್ರವ: ದ್ರವಾಹಾರವನ್ನು ಮಿಕ್ಸಿಯಲ್ಲಿ ಹಾಕುವ ಮೊದಲು ಎಚ್ಚರ ವಹಿಸಿ. ಬಿಸಿ ದ್ರವದಲ್ಲಿರುವ ಹಬೆ ಮಿಕ್ಸಿಯ ಒಳಗೆ ಒತ್ತಡವನ್ನು ಹೆಚ್ಚಿಸಿ, ಇದು ಕೆಲವೊಮ್ಮೆ ಸ್ಪೋಟಕ್ಕೂ ನಾಂದಿಯಾಗಬಹುದು. ಅಷ್ಟೇ ಅಲ್ಲ, ಮುಚ್ಚಳ ತೆಗೆಯಲು ಕಷ್ಟವಾಗಬಹುದು. ಹಾಗಾಗಿ, ಬಿಸಿ ತಣಿದ ಮೇಲೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
2. ಐಸ್ ಕ್ಯೂಬ್‌ಗಳು: ಐಸ್‌ಕ್ಯೂಬ್‌ಗಳನ್ನು ಮಿಕ್ಸಿಯಲ್ಲಿ ಹಾಕಿ ತಿರುಗಿಸುವುದರಿಂದ ಬೇರೇನೂ ಸಮಸ್ಯೆಗಳು ಮೇಲ್ನೋಟಕ್ಕೆ ಕಾಣಿಸಲಿಕ್ಕಿಲ್ಲ. ಬಹಳಷ್ಟು ಮಿಕ್ಸಿಗಳು ಐಸ್ ಕ್ಯೂಬ್‌ಗಳಿಗಾಗಿಯೇ ಡಿಸೈನ್ ಮಾಡಿದಂತವುಗಳಾಗಿದ್ದರೂ, ಕೆಲವು ಜಾರ್‌ಗಳ ಬ್ಲೇಡ್‌ಗಳ ಮೇಲೆ ಅನಗತ್ಯ ಒತ್ತಡ ಬಿದ್ದು ಜಾರ್ ಹಾಳಾಗುವ ಸಂಭವ ಇರುತ್ತದೆ.
3. ನಾರಿನಂಶದ ತರಕಾರಿಗಳು: ನಾರಿನಂಶ ಹೆಚ್ಚಿರುವ ತರಕಾರಿಗಳನ್ನು ಮಿಕ್ಸಿಯಲ್ಲಿ ಹಾಕಿದರೆ ನಾರು ಬೇರೆಯಾಗಿ, ಮಿಕ್ಸಿಯ ಬ್ಲೇಡ್‌ಗಳಿಗೆ ಸಿಕ್ಕಿ ಹಾಕಿಕೊಂಡು ತೆಗೆಯಲು ಕಷ್ಟವಾಗಬಹುದು. ಹಾಗಾಗಿ ಇಂತಹ ತರಕಾರಿಗಳನ್ನು ಮಿಕ್ಸಿಯಲ್ಲಿ ಹಾಕಬೇಡಿ.
4. ಮಸಾಲೆಗಳು: ಮಸಾಲೆ ಪುಡಿಯನ್ನು ಮನೆಯಲ್ಲೇ ಮಾಡಿಕೊಳ್ಳುತ್ತೇನೆಂದುಕೊಂಡು ಚೆಕ್ಕೆ, ಜಾಯಿಕಾಯಿಯಂತಹ ಮಸಾಲೆ ಪದಾರ್ಥಗಳನ್ನು ಮಿಕ್ಸಿಯಲ್ಲಿ ಅರೆಯಲು ಪ್ರಯತ್ನ ಪಡಬೇಡಿ. ಇದರಿಂದ ನಿಮ್ಮ ಮಿಕ್ಸಿಯ ಬ್ಲೇಡ್ ಕಿತ್ತು ಹೋಗಬಹುದು.
5. ದೊಡ್ಡ ಬೀಜಗಳು: ಗಟ್ಟಿಯಾದ ದೊಡ್ಡ ದೊಡ್ಡ ಬೀಜಗಳನ್ನೂ ಕೂಡಾ ಮಿಕ್ಸಿಯಲ್ಲಿ ಪುಡಿ ಮಾಡಲು ಹಾಕಿಬಿಡಬೇಡಿ. ಮಿಕ್ಸಿಯ ಬ್ಲೇಡ್ ಹಾಳಾಗಬಹುದು ಅಥವಾ ತುಂಡಾಗಬಹುದು.
ಇದನ್ನೂ ಓದಿ: Kitchen Tips: ಶುಂಠಿಯ ಬೆಲೆಯೂ ಏರಿದೆ! ಹಾಳಾಗದಂತೆ ಹೀಗೆ ಸಂಗ್ರಹಿಸಿಡಿ!
6. ಧಾನ್ಯಗಳು: ಧಾನ್ಯಗಳನ್ನು ನೆನೆಸದೆ ಮಿಕ್ಸಿಯಲ್ಲಿ ಪುಡಿ ಮಾಡಲು ಹೊರಡಬೇಡಿ. ಅಕ್ಕಿ, ರಾಗಿ, ಗೋಧಿಯಂತಹ ಧಾನ್ಯಗಳು ನೋಡಲು ಚಿಕ್ಕದಾಗಿ ಕಾಣಬಹುದು, ಆದರೆ ಗಟ್ಟಿಯಾಗಿರುತ್ತವೆ. ಇದರಿಂದ ಬ್ಲೇಡ್ ಮುರಿಯಬಹುದು. ಅಕ್ಕಿ ಪುಡಿ ಮನೆಯಲ್ಲೇ ಮಾಡಿಕೊಳ್ಳುವೆ ಎಂಬಿತ್ಯಾದಿ ಹೊಸ ಸಾಹಸಗಳನ್ನು ಮಾಡಲು ಹೊರಡಬೇಡಿ. ರುಬ್ಬುವ ಮೊದಲು ಐದಾರು ಗಂಟೆ ಸರಿಯಾಗಿ ನೆನೆಹಾಕಿ ರುಬ್ಬಿ.
7. ಸಂಸ್ಕರಿಸಿದ ಚೀಸ್: ಸಂಸ್ಕರಿಸಿದ ಚೀಸ್ ಅನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಲು ಹೊರಟರೆ ಆಗುವ ಕಷ್ಟ ಸಣ್ಣದಲ್ಲ. ಮಿಕ್ಸಿಯ ಬ್ಲೇಡ್‌ಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡು ರಬ್ಬರ್‌ನಂತಾಗುವ ಚೀಸ್ ಅನ್ನು ಮತ್ತೆ ಮಿಕ್ಸಿಯಿಂದ ಬಿಡಿಸಿಕೊಳ್ಳುವುದೇ ದೊಡ್ಡ ಸಾಹಸ. ಹಾಗಾಗಿ ಚೀಸ್ ಅನ್ನು ಮಿಕ್ಸಿಗೆ ಹಾಕುವ ಸಾಹಸದಿಂದ ದೂರ ಇರಿ.
ಇದನ್ನೂ ಓದಿ: Kitchen Tips : ಅಡುಗೆ ಮನೆಯಿಂದ ಜಿರಲೆಗಳನ್ನು ಓಡಿಸಬೇಕೆ? ಇಲ್ಲಿವೆ ಸರಳ ಉಪಾಯಗಳು!