Site icon Vistara News

Monsoon Food: ಮಳೆಗಾಲದಲ್ಲಿ ಕರಾವಳಿಯ ಜಡಿಮಳೆಗೆ ಈ ಆಹಾರಗಳನ್ನು ಸವಿಯಲೇಬೇಕು!

best time to eat coastal food

ಜೂನ್‌ ಬಂತೆಂದರೆ ಕರ್ನಾಟಕದ ಕರಾವಳಿಯ ಮಂದಿಗೆ ಸಡಗರ, ಸಂಭ್ರಮ. ಮಳೆರಾಯನನ್ನು ಸ್ವಾಗತಿಸಲು ಎಲ್ಲ ಬಗೆಯ ತಯಾರಿಯನ್ನೂ ಅವರು ಮಾಡಿಕೊಂಡಿರುತ್ತಾರೆ. ಕೃಷಿ ಚಟುವಟಿಕೆಗಳಿಗೆ ತಯಾರಿಯಿಂದ ಹಿಡಿದು, ಮಳೆಗಾಲದಲ್ಲಿ ಸೇವಿಸಲು ಆಹಾರ ಸಂಗ್ರಹಣೆಯವರೆಗೆ ಎಲ್ಲವಕ್ಕೂ ಕರಾವಳಿಗರು ತಯಾರಿ ಮಾಡಿಕೊಂಡಿರುವುದು ಅವರ ಬದುಕಿನ ಭಾಗ. ಮಳೆಗಾಲದಲ್ಲಿ ಕರಾವಳಿ ಪ್ರದೇಶದ ಆಹಾರ ಸಂಸ್ಕೃತಿಯೇ ವಿಶೇಷ. ಎಲ್ಲೂ ಸಿಗದ ಅಪರೂಪದ ಸಾಂಪ್ರದಾಯಿಕ ಆಹಾರಗಳು ಇಲ್ಲಿ ದೊರೆಯುತ್ತದೆ. ಬನ್ನಿ ಮಳೆಗಾಲದಲ್ಲಿ ವಿಶೇಷವಾಗಿ ಮಾಡಲಾಗುವ ಕರಾವಳಿ ಭಾಗದ ಬಗೆಬಗೆಯ ಆಹಾರಗಳ ರುಚಿಯನ್ನು ಒಂದೊಂದಾಗಿ ನೋಡೋಣ.

1. ಪತ್ರೊಡೆ: ಕರಾವಳಿಯ ಆಹಾರ ಎಂದಾಗ ಬಹುತೇಕರ ಬಾಯಲ್ಲಿ ಪತ್ರೊಡೆಯ ನೆನಪಾಗಿ ನೀರೂರುವುದುಂಟು. ಮಳೆ ಬಂದಾಗ ತೋಟದ ಸುತ್ತಮುತ್ತಲೆಲ್ಲ ಹೃದಯಾಕಾರದ ಕೆಸುವಿನೆಲೆ ಬೆಳೆಯತೊಡಗುತ್ತದೆ. ಈ ಎಲೆಗಳನ್ನು ಕೊಯ್ದು ತಂದು, ತೊಳೆದು ನೆನೆಸಿಟ್ಟ ಅಕ್ಕಿ, ಕಡ್ಲೆಬೇಳೆಯ ಜೊತೆಗೆ ಒಂದಿಷ್ಟು ಜೀರಿಗೆ, ಕೊತ್ತಂಬರಿ, ಬೆಲ್ಲ, ಮೆಣಸು, ತೆಂಗಿನಕಾಯಿ ಹಾಕಿ ಹಿಟ್ಟು ಮಾಡಿಟ್ಟು, ಒಂದೊಂದೇ ಎಲೆಯ ಮೇಲೆ ಹಿಟ್ಟು ಹಚ್ಚಿ, ಎಲೆಯ ಮೇಲೆ ಎಲೆ ಇಡುತ್ತಾ, ಹಿಟ್ಟನ್ನೂ ಹಚ್ಚುತ್ತಾ ಮಡಚಿ, ಹಬೆಯಲ್ಲಿ ಬೇಯಿಸಿ ಮಾಡುವ ಅಪರೂಪದ ಪರಂಪರಾಗತ ತಿನಿಸು. ಬಹಳ ರುಚಿಯಾದ ಅಷ್ಟೇ ಆರೋಗ್ಯಕರವೂ ಆದ ವಿಶಿಷ್ಠ ತಿನಿಸಿದು. ಬೆಳಗಿನ ತಿಂಡಿಗೆ ಹೇಳಿ ಮಾಡಿಸಿದ್ದು.

2. ನೀರು ದೋಸೆಯ ಜೊತೆ ಬಸವನಹುಳು/ ನರ್ತೆ ಕರಿ: ಕರಾವಳಿಯ ವಿಶಿಷ್ಠ ದೋಸೆಗಳ ಪೈಕಿ ನೀರು ದೋಸೆಯೂ ಒಂದು. ಎಲ್ಲ ಕಾಲದಲ್ಲೂ ಕರಾವಳಿಗರ ಮನೆಗಳಲ್ಲಿ ಸಿಗಬಹುದಾದ ದೋಸೆಯಿದು. ಆದರೆ, ಕಾಲಕ್ಕೆ ತಕ್ಕ ಹಾಗೆ ಇದರ ಜೊತೆಗೆ ಕೊಡುವ ಚಟ್ನಿ ಹಾಗೂ ಕರಿಯಲ್ಲಿ ವೈವಿಧ್ಯತೆ ಇರುತ್ತದೆ. ಮಳೆಗಾಲದಲ್ಲಿ ವಿಶೇಷವಾಗಿ ಗದ್ದೆಗಳ ಬದುಗಳಲ್ಲಿ ನೂರಾರು ಬಸವನ ಹುಳುವಿನ ಜಾತಿಯ ಚಿಪ್ಪಿರುವ ಜೀವಿಯನ್ನು (ಆಡುಭಾಷೆಯಲ್ಲಿ ʻನರ್ತೆʼ ಎಂಬ ಹೆಸರಿನಿಂದ ಕರೆಯುತ್ತಾರೆ) ಹಿಡಿದು ತಂದು ಕರಿ ಮಾಡಲಾಗುತ್ತದೆ. ಅನೇಕರು ಏಡಿಯನ್ನೂ ಹಿಡಿದು ತಂದು ಅಡುಗೆ ಮಾಡುತ್ತಾದೆ. ದೋಸೆಯ ಜೊತೆಗೆ ಅನ್ನದ ಜೊತೆಗೆ ಮಳೆಗಾಲದಲ್ಲಿ ಒಮ್ಮೆಯಾದರೂ ಇದನ್ನು ಮಾಡದಿದ್ದರೆ, ಕರಾವಳಿಗರಿಗೆ ಮಳೆಗಾಲ ಎಂದೆನಿಸದು. ಇನ್ನು ಸಸ್ಯಾಹಾರಿಗಳಾದರೆ, ಮಳೆಗಾಲದಲ್ಲಿ ನೀರು ದೋಸೆಯೊಂದಿಗೆ, ಅಳಿದುಳಿದ ಮಾವಿನಹಣ್ಣಿನ ರಸಾಯನದ ವಿಶೇಷ ಸಮಾರಾಧನೆಯನ್ನೂ ಮಾಡಿ ಸಂಭ್ರಮಿಸುತ್ತಾರೆ.

3. ಕಳಲೆಯ ಭಕ್ಷ್ಯಗಳು: ಮಳೆಗಾಲ ಬಂತೆಂದರೆ ಬಿದಿರಿನ ಸುತ್ತಮುತ್ತ ಪುಟ್ಟ ಪುಟ್ಟ ಮೊಳಕೆಗಳೂ ಮೊಳೆಯತೊಡಗುತ್ತದೆ. ಮಿದುವಾದ ಎಳೆಬಿದಿರನ್ನು ಕಳಲೆ ಅಥವಾ ಕಣಿಲೆ ಎಂದು ಕರೆಯುವ ಕರಾವಳಿಗರಿಗೆ ಒಮ್ಮೆಯಾದರೂ ಮಳೆಗಾಲದಲ್ಲಿ ಇದರ ಅಡುಗೆ ತಿನ್ನದಿದ್ದರೆ ನಿದ್ದೆ ಹತ್ತದು. ಈ ಕಳಲೆಯ ಅಡುಗೆ ಬಲು ರುಚಿ. ಎಳೆ ಬಿದಿರು ಎರಡರಿಂದ ಮೂರು ಅಡಿ ಎತ್ತರ ಬೆಳೆದ ತಕ್ಷಣ ಅದನ್ನು ಕತ್ತರಿಸಿ ತಂದು ಅದರ ಹೊರ ಪದರಗಳನ್ನೆಲ್ಲ ತೆಗೆದು ಒಳಗಿನ ತಿರುಳನ್ನು ಹೆಚ್ಚಿ ಅದರಿಂದ, ಗಸಿ, ಪಲ್ಯ, ಕಡುಬು, ಉಪ್ಪಿನಕಾಯಿ ಸೇರಿದಂತೆ ಅನೇಕ ಬಗೆಯ ಅಡುಗೆಗಳನ್ನು ಮಾಡಲಾಗುತ್ತದೆ.  

ಇದನ್ನೂ ಓದಿ: Monsoon culture: ಮಳೆಯ ಜತೆಗುಂಟು ಸಂಸ್ಕೃತಿಯ ನಂಟು; ಆಚರಣೆ, ಕತೆ, ಹಾಡು ನೂರೆಂಟು

4. ಹಪ್ಪಳ, ಸಂಡಿಗೆ, ಮಾಂಬಳಗಳು: ಬೇಸಿಗೆಯಲ್ಲಿ ಯಥೇಚ್ಛವಾಗಿ ದಕ್ಕಿದ ಹಲಸು ಮಾವುಗಳಿಂದ ಸೂರ್ಯನ ಬಿಸಿಲಿನ ಉಪಯೋಗವನ್ನೂ ಪಡೆದು ಪ್ರತಿ ಮನೆಯಲ್ಲೂ ಮಾಡುವ ಹಲಸಿನಕಾಯಿ ಹಪ್ಪಳ, ಬಗೆಬಗೆಯ ಸಂಡಿಗೆ, ಹಣ್ಣಿನಿಂದ ಮಾಡಿದ ಹಪ್ಪಳ, ಮಾವಿನ ಹಣ್ಣಿನ ರಸವನ್ನಿ ಹಿಂಡಿ ಒಣಗಿಸಿದ ಮಾಂಬಳಗಳೆಲ್ಲ ಮಳೆಗಾಲದ ಆಪತ್ಬಾಂಧವಗಳು. ಮಳೆಗಾಲದಲ್ಲಿ ಸುರಿವ ಜಡಿ ಮಳೆಗೆ ಮನೆಯೊಳಗೆ ಕುಳಿತು ಈ ಎಲ್ಲವುಗಳನ್ನು ಒಂದೊಂದಾಗಿ ಸವಿದು ಮುಗಿಸುವುದೇ ಬಲು ಮಜಾ. ಕೆಂಡದಲ್ಲಿ ಬಿಸಿಬಿಸಯಾಗಿ ಹಪ್ಪಳ ಸುಟ್ಟು ತಿನ್ನುವ ಮಜಾ ಬರುವುದೇ ಮಳೆಗಾಲದಲ್ಲಿ!

5. ಉಪ್ಪಿನಲ್ಲಿ ಹಾಕಿಟ್ಟ ಹಲಸು ಮಾವಿನ ಅಡುಗೆಗಳು: ಹಲಸು ಮಾವನ್ನು ಬೇಸಿಗೆಯಲ್ಲಿ ತಿಂದು ಹಪ್ಪಳ ಮಾಡಿಟ್ಟರಷ್ಟೇ ಸಾಲದು, ಮಳೆಗಾಲಕ್ಕೂ ಸಂಗ್ರಹಿಸಿಡುವ ಅಪರೂಪದ ಕಲೆಯನ್ನು ಕರಾವಳಿಯ, ಪಶ್ಚಿಮ ಘಟ್ಟದ ತಪ್ಪಲ ಮಂದಿಯಿಂದ ನೋಡಿ ಕಲಿಯಬೇಕು. ಹಲಸಿನ ಕಾಯಿಯನ್ನು ಬಿಡಿಸಿ ತೊಳೆಯನ್ನು ಉಪ್ಪುನೀರಿನಲ್ಲಿ ಹಾಕಿಟ್ಟದ್ದು, ಮಾವಿನ ಕಾಯಿಯನ್ನು ಉಪ್ಪಿನಲ್ಲಿ ಹಾಕಿಟ್ಟದ್ದು ಇತ್ಯಾದಿ ಸಂಗ್ರಹಣಾ ವಿಧಾನಗಳಿಂದ ಮಳೆಗಾಲದಲ್ಲಿ ಮತ್ತೆ ಮಾವಿನಕಾಯಿ ಗೊಜ್ಜಿನ ರೂಪದಲ್ಲೋ, ಉಪ್ಪು ತೊಳೆಗಳು ಗಸಿ, ರೊಟ್ಟಿ, ಉಂಡ್ಲೆಕಾಳುಗಳ ರೂಪದಲ್ಲೋ ಮಳೆಗಾಲದಲ್ಲಿ ಪ್ರತ್ಯಕ್ಷವಾಗುತ್ತವೆ. ಮಳೆಗಾಲದಲ್ಲಿ ಧೋ ಎಂದು ಸುರಿವ ಮಳೆಗೆ ಬೇಸಿಗೆಯಲ್ಲಿ ಸಂಗ್ರಹಿಸಿದ ಆಹಾರ ಉತ್ಪನ್ನಗಳೇ ಬಹುದೊಡ್ಡ ವರದಾನವಾಗುತ್ತವೆ. ಇಂತಹ ಸಾಂಪ್ರದಾಯಿಕ ಆಹಾರ ವೈವಿಧ್ಯಗಳೇ ಇಲ್ಲಿನ ಜೀವಾಳಗಳೂ ಆಗಿವೆ.

ಇದನ್ನೂ ಓದಿ: Monsoon Food: ಮಲೆನಾಡಿನ ಈ ರುಚಿಕರ ತಿನಿಸು, ಮಳೆಗಾಲದಲ್ಲೇ ಸವಿದರೆ ಸೊಗಸು!

Exit mobile version