Site icon Vistara News

Monsoon Food Tips: ಮಳೆಗಾಲದಲ್ಲಿ ಮರೆಯಲೇಬಾರದ ಆಹಾರ ಸಂಗ್ರಹಣೆಯ ನವಸೂತ್ರಗಳಿವು!

food safety in monsoon

ಮಳೆಗಾಲ (monsoon) ಬಂತೆಂದರೆ ಖುಷಿಯ ಜೊತೆಗೆ ಸಾಕಷ್ಟು ಸವಾಲುಗಳೂ ಇವೆ. ಮಳೆಗಾಲಕ್ಕೆಂದು ಆಹಾರ ವಸ್ತುಗಳ ಸಂಗ್ರಹಣೆಯ ಜೊತೆಗೆ ಅವುಗಳಿಗೆ ಬಹುಬೇಗ ಹುಳಹುಪ್ಪಟೆ ಹಿಡಿಯದಂತೆ ಕಾಪಾಡಿಕೊಳ್ಳುವುದೂ ಕೂಡಾ ಕಲೆಯೇ. ಈ ಬಗೆಗೆ ಸಾಕಷ್ಟು ಸಾಮಾನ್ಯ ಜ್ಞಾನದ ಜೊತೆಗೆ ಕೆಲವು ಸುಲಭ ಸರಳ ವಿಧಾನಗಳ ಅರಿವೂ ಮುಖ್ಯ. ಮಳೆಗಾಲದಲ್ಲಿ ವಾತಾವರಣದಲ್ಲಿ ಹೆಚ್ಚಿರುವ ತೇವಾಂಶವು ಸಂಗ್ರಹಿಸಿದ ಆಹಾರ ವಸ್ತುಗಳ ಸಂಪರ್ಕಕ್ಕೆ ಬರುವುದರಿಂದ ಬಹುಬೇಗನೆ ಆಹಾರವಸ್ತುಗಳು ಧಾನ್ಯಗಳು, ಅಕ್ಕಿ ಬೇಳೆ ಕಾಳುಗಳು ಹಾಳಾಗಬಹುದು. ಹಾಗಾದರೆ ಬನ್ನಿ, ಕೆಲವು ಸರಳ ವಿಧಾನಗಳಿಂದ ಧಾನ್ಯಗಳು ಹಾಗೂ ಬೇಳೆ ಕಾಳುಗಳನ್ನು ತಿಂಗಳುಗಟ್ಟಲೆ ಹೇಗೆ ಇಟ್ಟುಕೊಳ್ಳಬಹುದು (Monsoon Food Tips) ಎಂಬುದನ್ನು ನೋಡೋಣ.

1. ನೀವು ಗಮನಿಸಿರಬಹುದು. ಸಕ್ಕರೆ ಹಾಗೂ ಉಪ್ಪು ಮಳೆಗಾಲದಲ್ಲಿ ತೇವಾಂಶವನ್ನು ಹೀರಿಕೊಂಡು ಅಂಟಂಟಿನಂತೆ, ಅರ್ಧಂಬರ್ಧ ಕರಗಿಕೊಂಡು ಮುದ್ದೆಯಾಗಿ ಬಿಡುತ್ತವೆ. ಸಕ್ಕರೆ ಹಾಗೂ ಉಪ್ಪು, ವಾತಾವರಣದ ತೇವಾಂಶವನ್ನು ಬಹುಬೇಗನೆ ಹೀರಿಕೊಳ್ಳುವ ಗುಣವಿರುವುದರಿಂದ ಇವುಗಳನ್ನು ಪ್ಲಾಸ್ಟಿಕ್‌ ಡಬ್ಬಗಳ ಬದಲಾಗಿ, ಆದಷ್ಟೂ ಗಾಳಿಯಾಡದ ಗಾಜಿನ ಡಬ್ಬದಲ್ಲಿಡಿ. ಅಲ್ಲದೆ, ಒಂದಷ್ಟು ಅಕ್ಕಿಯನ್ನು ಅದೇ ಡಬ್ಬದಲ್ಲಿ ಹಾಕಿ. ಅಕ್ಕಿ ತೇವಾಂಶವನ್ನು ಹೀರಿಕೊಳ್ಳುವ ಮೂಲಕ ಸಕ್ಕರೆ ಹಾಗೂ ಉಪ್ಪು ಉದುರುದುರಾಗಿ ಹಾಗೆಯೇ ಉಳಿಯುತ್ತವೆ. ಅಕ್ಕಿ ಬೇಡವೆಂದರೆ ಒಂದು ಲವಂಗದ ಮೊಗ್ಗನ್ನೂ ಈ ಡಬ್ಬಕ್ಕೆ ಹಾಕಿಡಬಹುದು.

2. ಬೇಳೆಗಳಿಗೆ ಬಹುಬೇಗನೆ ಹುಳಹಿಡಿಯುವ ಕಾರಣ ಇವುಗಳನ್ನು ಮಳೆಗಾಲದಲ್ಲಿ ಕೊಂಚ ಹುರಿದಿಟ್ಟುಕೊಳ್ಳಬಹುದು. ಹಾಗೆಯೇ ಒಣ ಬಾಣಲೆಯಲ್ಲಿ ಕೊಂಚ ಹರಿದು ತಣ್ಣಗಾಗಲು ಬಿಟ್ಟು ನಂತರ ಗಾಳಿಯಾಡದ ಗಾಜಿನ ಡಬ್ಬಿಯಲ್ಲಿ ಶೇಖರಿಸಿಡಿ.

3. ಒಣಹಣ್ಣುಗಳು ಹಾಗೂ ಒಣಬೀಜಗಳೂ ಕೂಡಾ ಮಳೆಗಾಲದಲ್ಲಿ ಬೇಗ ಹಾಳಾಗುತ್ತವೆ. ಬಾದಾಮಿ, ಗೋಡಂಬಿ ಸೇರಿದಂತೆ ಒಣಹಣ್ಣುಗಳನ್ನು ಝಿಪ್‌ ಲಾಕ್‌ ಕವರ್‌ನಲ್ಲಿ ಶೇಖರಿಸಿ ಫ್ರೀಜರ್‌ನಲ್ಲಿಟ್ಟುಕೊಳ್ಳಬಹುದು. ಬೇಕಾದಾಗ ಸ್ವಲ್ಪ ಸ್ವಲ್ಪೇ ತೆಗೆದು ಬಳಸಬಹುದು.

4. ಚಕ್ಕೆ, ಲವಂಗ, ಕರಿಮೆಣಸು, ಏಲಕ್ಕಿ ಮತ್ತಿತರ ಮಸಾಲೆ ಪದಾರ್ಥಗಳನ್ನು ಮಳೆಗಾಲಕ್ಕೂ ಮೊದಲೇ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಗರಿಗಿಯಾಗಿಸಿ ಪ್ರತ್ಯೇಕವಾಗಿ ಗಾಳಿಯಾಡದ ಡಬ್ಬಗಳಲ್ಲಿ ಸಂಗ್ರಹಿಸಿಡಿ. ಮಳೆಗಾಲದಲ್ಲಿ ಇವು ಹಾಳಾಗದಿದ್ದರೂ, ತಾಜಾತನವನ್ನು ಕಳೆದುಕೊಳ್ಳುತ್ತವೆ.

5. ಅಕ್ಕಿ, ಗೋಧಿ ಸೇರಿದಂತೆ ಧಾನ್ಯಗಳು ಹಾಗೂ ಬೇಳೆ ಕಾಳುಗಳನ್ನು ಸಂಗ್ರಹಿಸಿಡುವ ಡಬ್ಬಿಗಳಲ್ಲಿ ಒಂದು ತುಂಡು ಕರ್ಪೂರವನ್ನೋ ಅಥವಾ ಕಹಿಬೇವಿನ ಎಲೆಯನ್ನೋ ಹಾಕಿಡುವುದರಿಂದಲೂ ಹುಳ ಹಿಡಿಯದಂತೆ ತಪ್ಪಿಸಬಹುದು.

ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!

6. ಸಂಗ್ರಹಿಸಿಡುವ ಡಬ್ಬದಷ್ಟೇ ಸಂಗ್ರಹಿಸಿಡುವ ಜಾಗವೂ ಮುಖ್ಯ. ತೇವಾಂಶವಿಲ್ಲದ ಒಣ ಜಾಗವನ್ನು ಶೇಖರಣೆಗೆಂದು ಇಟ್ಟುಕೊಳ್ಳಿ.

7. ಮಳೆಗಾಲದಲ್ಲಿ ಕೊಂಚ ಬಿಸಿಲು ಬಂತು ಎಂದುಕೊಂಡು ಈಗ ಒಣಗಿಸುವೆ ಎಂದು ಧಾನ್ಯಗಳನ್ನೋ ಬೇಳೆ ಕಾಳುಗಳನ್ನೋ ಬಿಸಿಲಿಗೆ ಹರಡಬೇಡಿ. ಮಳೆಗಾಲದ ಬಿಸಿಲಿನ ವಾತಾವರಣದಲ್ಲೂ ತೇವಾಂಶವಿರುವುದರಿಂದ ಒಣಗಿದೆಯೆಂದು ಅನಿಸಿದರೂ ಅವು ಸರಿಯಾಗಿ ಒಣಗದೆ ಬೇಗ ಹುಳ ಹಿಡಿಯುತ್ತವೆ. ಯಾವುದೇ ಪ್ರಯೋಜನವಾಗದು. ಹಾಗಾಗಿ, ಮಳೆಗಾಲಕ್ಕೂ ಒದಲು ಆಹಾರ ಧಾನ್ಯಗಳನ್ನು ಒಣಗಿಸಿ ಶೇಖರಿಸಿಡುವ ಕಾರ್ಯವನ್ನು ಮಾಡಿ ಮುಗಿಸಬೇಕು.

8. ಕುರುಕಲು ಹಾಗೂ ತಿಂಡಿಗಳನ್ನೂ ಕೂಡಾ ಗಾಳಿಯಾಡದ ಡಬ್ಬಿಗಳಲ್ಲಿಡಿ. ಅವುಗಳು ಬೇಗ ತೇವಾಂಶವನ್ನು ಹೀರಿಕೊಂಡು ಮೆತ್ತಗಾಗಿ ತಿನ್ನಲು ಯೋಗ್ಯವಾಗಿರುವುದಿಲ್ಲ. ಹಪ್ಪಳ ಸೆಂಡಿಗೆಗಳನ್ನು ಕರಿದ ನಂತರವೂ ಆದಷ್ಟೂ ಗಾಳಿಯಾಡದ ಡಬ್ಬದಲ್ಲಿ ಮುಚ್ಚಿಟ್ಟರೆ ಹಾಗೆಯೇ ನಾಲ್ಕೈದು ದಿನಗಳ ಕಾಲ ತಾಜಾ ಆಗಿ ಉಳಿಯುತ್ತದೆ.

9. ಒಂದಕ್ಕಿಂತ ಹೆಚ್ಚು ಬಗೆಯ ಆಃರ ವಸ್ತುಗಳನ್ನು, ಕುರುಕಲುಗಳನ್ನು ಒಂದೇ ಡಬ್ಬದಲ್ಲಿಡಬೇಡಿ. ಪ್ರತಿಯೊಂದಕ್ಕೂ ಪ್ರತ್ಯೇಕ ಡಬ್ಬಗಳಲ್ಲಿ ಹಾಕಿಡಿ. ಬೇರೆ ಬೇರೆ ಬಗೆಯ ತಿಂಡಿಗಳನ್ನು ಅಥವಾ ಧಾನ್ಯಗಳನ್ನು ಒಂದೇ ಡಬ್ಬದಲ್ಲಿ ಹಾಕಿಟ್ಟರೆ ಅವು ಒಂದರಿಂದ ಇನ್ನೊಂದಕ್ಕೆ ತೇವಾಂಶ ಹರಡಿ, ಎಲ್ಲವೂ ಮೆತ್ತಗಾಗುತ್ತವೆ ಅಥವಾ ಹಾಳಾಗುತ್ತವೆ.

ಇದನ್ನೂ ಓದಿ: Monsoon Food: ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಕೆಂಪಕ್ಕಿ ಅನ್ನ!

Exit mobile version