ಭಾರತದ ಫಿಲ್ಟರ್ ಕಾಫಿ ಆಯ್ತು, ಮಸಾಲೆ ಚಹಾ ಆಯ್ತು, ಈದೀಗ ವಡಾಪಾವ್ (Vada Pav) ಸರದಿ. ಹೌದು. ಮುಂಬೈಯ ಅತ್ಯಂತ ಪ್ರಸಿದ್ಧ ತಿನಿಸು ವಡಾಪಾವ್ ಇದೀಗ ವಿಶ್ವದ ಅತ್ಯುತ್ತಮ ಸ್ಯಾಂಡ್‌ವಿಚ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಟೇಸ್ಟ್ ಅಟ್ಲಾಸ್ ಎಂಬ ಸಂಸ್ಥೆ ನಡೆಸುವ ಈ ಸ್ಪರ್ಧೆಯಲ್ಲಿ ವಿಶ್ವದ ವಿವಿದೆಡೆಗಳ ಸ್ಯಾಂಡ್‌ವಿಚ್‌ಗಳು ಕಣದಲ್ಲಿದ್ದವು. ಅವುಗಳ ಪೈಕಿ ಭಾರತದ ವಡಾಪಾವ್ ೧೯ನೇ ಸ್ಥಾನ ಗಳಿಸುವ ಮೂಲಕ ವಿಶವದ ಬೆಸ್ಟ್ ಸ್ಯಾಂಡ್‌ವಿಚ್‌ಗಳ ಟಾಪ್ 20 ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಮೆತ್ತನೆಯ ಬ್ರೆಡ್ ಬನ್ ಒಳಗೆ ಡೀಪ್ ಫ್ರೈ ಮಾಡಿದ ಆಲೂಗಡ್ಡೆಯ ಪ್ಯಾಟಿಯನ್ನು ಒಳಗೆ ಇಟ್ಟು, ಮೆಣಸಿನ ಕಾಂಬಿನೇಶನ್ ಇರುವ ಸ್ಪೈಸಿ ವಡಾ ಪಾವ್ ಮುಂಬೈಯ ಬ್ಯುಸಿ ಧಾವಂತದ ಜನತೆಯ ನಿತ್ಯದ ತಿನಿಸು. ಅಶೋಕ್ ವೈದ್ಯ ಎಂಬ ದಾದರ್ ರೈಲ್ವೇ ಸ್ಟೇಶನ್ ಬಳಿಯ ಬೀದಿ ಬದಿಯ ತಿನಿಸಿನ ಮಾರಾಟಗಾರ 1960 ಹಾಗೂ 1970ರ ಸಮಯದಲ್ಲಿ ಆರಂಭಿಸಿದ ಈ ತಿನಿಸು ಮುಂಬೈಯ ಅತ್ಯಂತ ಪ್ರಸಿದ್ಧ ಬೀದಿಬದಿಯ ತಿನಿಸುಗಳ ಪೈಕಿ ಪ್ರಮುಖವಾದುದು. ಭಾರತದಾದ್ಯಂತ ಇಂದು ವಡಾಪಾವ್‌ಗೆ ಅದರದ್ದೇ ಆದ ಅಭಿಮಾನಿ ಬಳಗವಿದೆ.
ಉನ್ತತ ಪಟ್ಟಿಯಲ್ಲಿ
ಟೇಸ್ಟ್ ಅಟ್ಲಾಸ್ ಪಟ್ಟಿ ಮಾಡಿದ ವಿಶ್ವದ ಸ್ಯಾಂಡ್‌ವಿಚ್‌ಗಳ ಪೈಕಿ ಭಾರತದ ಈ ವಡಾಪಾವ್ ಅನ್ನೂ ಕೂಡ ಉನ್ತತ ಪಟ್ಟಿಯಲ್ಲಿರಿಸಿತ್ತು. ಉದೀಗ ಜನರು ವಡಾಪಾವ್‌ಗೂ ಓಟ್ ಮಾಡಿದ್ದು, ಇದು ಅದನ್ನು ವಿಶ್ವದ ಅತ್ಯಂತ ರುಚಿಕರ ಸ್ಯಾಂಡ್‌ವಿಚ್‌ಗಳ ಪೈಕಿ 19ನೇ ಸ್ಥಾನದಲ್ಲಿರಿಸಿದೆ.
ಬಹಳ ಸುಲಭವಾಗಿ ಮಾಡಬಹುದಾದ ಈ ವಡಾ ಪಾವ್ ಮುಂಬೈಯ ಬಹುತೇಕ ಮಂದಿಯ ಬೆಳಗಿನ ಬ್ರೇಕ್‌ಫಾಸ್ಟ್ ಅಷ್ಟೇ ಅಲ್ಲ, ಮಧ್ಯಾಹ್ನ ಹಸಿವಾದರೆ, ಊಟ, ಸಂಜೆಯ ಆಫೀಸಿನ ಕೆಲಸದ ಗಡಿಬಿಡಿಯ ನಡುವೆ ಹಸಿವಾದಾಗ ತಿನಬಹುದಾದ ಸ್ನ್ಯಾಕ್. ಇನ್ನೂ ಕೆಲವರಿಗೆ ರಾತ್ರಿ ಮನೆಗೆ ಮರಳುವ ಸಂದರ್ಭ ಉಣ್ಣುವ ಊಟ ಕೂಡ. ಬಹಳ ಕಡಿಮೆ ಬೆಲೆಯಲ್ಲಿ ಪ್ರತೀ ಬೀದಿ ಕಾರ್ನರ್‌ಗಳಲ್ಲೂ ದೊರೆಯುವ ಇದರಲ್ಲಿ ಮುಂಬೈ ಮಂದಿಯ ಹೃದಯವೇ ಇದೆ. ಈಗ ಕೇವಲ ಮುಂಬೈ ಮಾತ್ರವಲ್ಲ. ಭಾರತದ ಹಲವು ನಗರಗಳಲ್ಲಿ ವಡಾಪಾವ್ ಸುಲಭವಾಗಿ ದೊರೆಯುತ್ತವೆ ಕೂಡಾ.
ಇದನ್ನು ಹೇಗೆ ತಯಾರಿಸುತ್ತಾರೆ?
ಪಾವ್ ಅನ್ನು ಸ್ವಲ್ಪ ಬೆಣ್ಣೆಯಲ್ಲಿ ತವಾದ ಮೇಲಿಟ್ಟು ಬಿಸಿ ಮಾಡಿ ನಂತರ ಮಧ್ಯದಲ್ಲಿ ಆಲೂಗಡ್ಡೆಯ ಪಲ್ಯವನ್ನು ಡೀಪ್ ಫ್ರೈ ಮಾಡಿ ಮಾಡಿದ ಪ್ಯಾಟಿ ಇಟ್ಟರೆ, ವಡಾ ಪಾವ್ ಸಿದ್ಧ. ಒಳಗಡೆಯ ಪ್ಯಾಟಿಯ ಕಾರಣದಿಂದ ಒಂದೇ ಒಂದು ವಡಾ ಪಾವ್ ತಿಂದರೆ, ಒಂದೆರಡು ಗಂಟೆಗಳ ಕಾಲ ಹೊಟ್ಟೆಗೆ ಮತ್ತೆ ಬೇರೇನೂ ಬೇಡ. ಸಿಹಿ ಹುಳಿ ರುಚಿಯ ಹುಣಸೆ ಚಟ್ನಿ, ಕೊತ್ತಂಬರಿ ಪುದಿನ ಹಸಿಮೆಣಸಿನಕಾಯಿಯ ಹಸಿರು ಚಟ್ನಿ ಎಲ್ಲವೂ ಮಿಕ್ಸ್ ಆಗಿ, ಬಾಯಲ್ಲಿ ಒಂದು ತುಂಡು ಇಟ್ಟರೆ ಬಗೆಬಗೆಯ ರುಚಿಗಳು ಮೈಮನಕ್ಕೆ ಖುಷಿ ತಿಸುತ್ತದೆ. ಅದಕ್ಕಾಗಿಯೇ, ಖಾರ ಪ್ರಿಯರಿಗೂ, ಸಿಹಿ ಪ್ರಿಯರಿಗೂ ಏಕಕಾಲಕ್ಕೆ ಇದು ಇಷ್ಟವಾಗುವುದು. ಇದೀಗ ಇಂಥ ವಡಾ ಪಾವ್ ವಿಶ್ವದ ಎಲ್ಲ ಬಗೆಯ ರುಚಿಯಾದ ಸ್ಯಾಂಡ್‌ವಿಚ್‌ಗಳ ಸಾಲಿನಲ್ಲಿ ನಿಂತಿದ್ದು, ಟಾಪ್ 20ರ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ವಡಾಪಾವ್ ಪ್ರಿಯರಿಗೆ ಸಂತಸವನ್ನು ತಂದಿದೆ.