Site icon Vistara News

National Nutrition week | ದೇಹಕ್ಕೆ ಪೋಷಕಾಂಶ ಒದಗಿಸಲು ಐದು ಸರಳ ಪಾಕಗಳು

nutrition foods

ನಿತ್ಯದ ಬದುಕಿನಲ್ಲಿ ನಾವೆಲ್ಲ ವ್ಯಸ್ತರು. ವೃತ್ತಿ, ಪ್ರವೃತ್ತಿ, ಮನೆ, ಮಠ, ನೆಂಟರು, ಇಷ್ಟರು ಎಲ್ಲರಿಗೂ ಎಲ್ಲದಕ್ಕೂ ಸಮಯ ಕೊಡುತ್ತೇವೆ. ಆದರೆ ನಮಗಾಗಿ ಸಮಯ ಇರುವುದಿಲ್ಲ. ಇದರ ಮೊದಲ ಪೆಟ್ಟು ಬೀಳುವುದು ನಮ್ಮ ಆರೋಗ್ಯದ ಮೇಲೆ. ಪದೇಪದೆ ನೆಗಡಿ-ಜ್ವರ, ತಲೆನೋವು, ಆಯಾಸ, ಅಜೀರ್ಣ, ಹಸಿವೆಯೇ ಇಲ್ಲದಿರುವುದು… ಇಂಥ ಲಕ್ಷಣಗಳನ್ನು ʻಚಿಕ್ಕ-ಪುಟ್ಟ ಸಮಸ್ಯೆʼ ಎಂದು ಕಡೆಗಣಿಸಿ ಬಿಡುತ್ತೇವೆ. ಆದರೆ ಆಯುರ್ವೇದದ ಪ್ರಕಾರ, ಇವೆಲ್ಲ ಕಡೆಗಣಿಸಲ್ಪಟ್ಟ ಆರೋಗ್ಯ ಮತ್ತು ಕುಂಠಿತ ರೋಗನಿರೋಧಕತೆಯ ಚಿಹ್ನೆಗಳು. ಐದು ಸರಳ ಅಡುಗೆ ವಿಧಾನಗಳಿಂದ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಬಹುದು. ಇದರಿಂದ ನಮ್ಮ ಹಸಿವೆ, ಜೀರ್ಣಶಕ್ತಿ ವೃದ್ಧಿಸಿ, ಸುಸ್ತು ಕಡಿಮೆಯಾಗುತ್ತದೆ. ಮಾತ್ರವಲ್ಲ, ಕಣ್ತುಂಬಾ ನಿದ್ದೆ ಬಂದು ದೇಹದ ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಖರ್ಜೂರಾದಿ ಪೇಯ: ಖರ್ಜೂರದಲ್ಲಿರುವ ಪ್ರೊಟೀನ್‌, ಖನಿಜಗಳು ಮತ್ತು ನಾರಿನಂಶ ಹೇರಳವಾಗಿರುವ ಈ ಪೇಯದಿಂದ ಆಯಾಸ ದೂರವಾಗುತ್ತದೆ. ಹೆಚ್ಚು ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯನ್ನು ಹೊಂದಿರುವ ಇದನ್ನು, ಪೇಟೆಯಲ್ಲಿ ದೊರೆಯುವ ಪೇಯಗಳ ಬದಲಿಗೆ, ಎನರ್ಜಿ ಡ್ರಿಂಕ್‌ ಆಗಿ ಉಪಯೋಗಿಸಬಹುದು.

ಬೇಕಾಗುವ ವಸ್ತುಗಳು: ಖರ್ಜೂರ- ೩೦, ದ್ರಾಕ್ಷಿ- ೫೦, ದಾಳಿಂಬೆ- ಅರ್ಧದಷ್ಟು, ಹುಣಸೆ ರಸ- ೧/೨ ಚಮಚ, ನೆಲ್ಲಿಕಾಯಿ ಪುಡಿ, ಒಂದು ಚಿಟಿಕೆ, ಬೆಲ್ಲ- ೨ ಚಮಚ, ನೀರು- ೨ ಕಪ್‌

ವಿಧಾನ: ಎಲ್ಲಾ ವಸ್ತುಗಳನ್ನು ಸುಮಾರು ಎರಡು ತಾಸುಗಳ ಕಾಲ ನೆನೆಸಿಡಿ. ನಂತರ ನೀರನ್ನು ಪ್ರತ್ಯೇಕಿಸಿ ಇಟ್ಟುಕೊಳ್ಳಿ. ಎಲ್ಲವನ್ನೂ ಮಿಕ್ಸರ್‌ನಲ್ಲಿ ಚನ್ನಾಗಿ ತಿರುಗಿಸಿ. ನೆನೆಸಲು ಬಳಸಿದ ನೀರನ್ನೂ ಸೇರಿಸಿ, ಬೇಕಾದ ಹದಕ್ಕೆ ನೀರು ಬೆರೆಸಿ ಕುಡಿಯಿರಿ.

ಮಸಾಲೆ ಮಜ್ಜಿಗೆ: ನಮ್ಮ ಜಠರವನ್ನು ಚುರುಕಾಗಿಸುವ ಮತ್ತು ಇಡೀ ಶರೀರಕ್ಕೆ ಚೈತನ್ಯ ಒದಗಿಸುವ ಉತ್ತಮ ಪೇಯ ಈ ವಿಧಾನದಲ್ಲಿ ತಯಾರಿಸಿದ ಮಜ್ಜಿಗೆ. ಮೋಡ ಕವಿದ ಜಡಭರಿತ ದಿನಗಳಲ್ಲಿ ಬಾಯಿ ರುಚಿಯೂ ಕಡಿಮೆಯಾಗುತ್ತದೆ. ಇಂಥ ಸಂದರ್ಭದಲ್ಲಿ ಆರೋಗ್ಯ ಸುಧಾರಣೆಗೆ ಈ ಮಜ್ಜಿಗೆ ನೆರವಾಗುತ್ತದೆ.

ಬೇಕಾಗುವ ವಸ್ತುಗಳು: ಶುಂಠಿ- ಒಂದಿಂಚು, ಬೆಳ್ಳುಳ್ಳಿ- ೪ ಎಸಳು, ಧನಿಯಾ- ೧/೨ ಚಮಚ, ಜೀರಿಗೆ- ೧/೨ ಚಮಚ, ಕಪ್ಪುಕಾಳುಮೆಣಸು- ೧/೪ ಚಮಚ, ಓಂಕಾಳು (ಅಜವಾನ)- ೧/೪ ಚಮಚ, ಇಂಗು ಮತ್ತು ಅರಿಶಿನ- ಒಂದೊಂದು ಚಿಟಿಕೆ, ಕರಿಬೇವಿನ ಎಲೆ- ೩-೪ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಮಜ್ಜಿಗೆ- ೩ ಕಪ್

ವಿಧಾನ: ಶುಂಠಿ, ಬೆಳ್ಳುಳ್ಳಿ ಮತ್ತು ಬೇವಿನ ಎಲೆಗಳನ್ನು ರುಬ್ಬಿ ಪೇಸ್ಟ್‌ ಮಾಡಿ. ಧನಿಯಾ, ಜೀರಿಗೆ, ಓಂಕಾಳು ಮತ್ತು ಕಾಳುಮೆಣಸುಗಳನ್ನು ಹುರಿದು ಪುಡಿಮಾಡಿಕೊಳ್ಳಿ. ದೊಡ್ಡ ಪಾತ್ರೆಯಲ್ಲಿ ಈ ಎಲ್ಲಾ ವಸ್ತುಗಳನ್ನೂ ಹಾಕಿ, ಮಜ್ಜಿಗೆ ಬೆರೆಸಿ, ಒಂದು ನಿಮಿಷ ಉರಿಯಲ್ಲಿಟ್ಟು ಚನ್ನಾಗಿ ಬಿಸಿಮಾಡಿ. ಇದಕ್ಕೆ ಉಪ್ಪು, ಅರಿಶಿನ ಮತ್ತು ಇಂಗು ಬೆರೆಸಿ ಹದಗೊಳಿಸಿ ಕುಡಿಯಿರಿ.

ಇದನ್ನೂ ಓದಿ | Processed Food | ಸಂಸ್ಕರಿಸಿದ ಆಹಾರ ವಸ್ತುಗಳಿಂದ ಸಣ್ಣ ವಯಸ್ಸಿಗೇ ಕ್ಯಾನ್ಸರ್‌, ಹೃದ್ರೋಗ!

ಹೆಸರು ಬೇಳೆ ಸೂಪ್:‌ ಅತ್ಯಂತ ಆಯಾಸಗೊಂಡ ಸಂದರ್ಭದಲ್ಲಿ ಇಂಥ ಸೂಪ್‌ಗಳು ನಮ್ಮ ಶಕ್ತಿ ಹೆಚ್ಚಿಸಬಲ್ಲವು. ಪ್ರೋಟೀನ್‌, ನಾರು ಮತ್ತು ಕಬ್ಬಿಣದ ಅಂಶ ಹೇರಳವಾಗಿರುವ ಈ ಸೂಪ್‌ ಸುಲಭವಾಗಿ ಜೀರ್ಣವಾಗುತ್ತದೆ.

ಬೇಕಾಗುವ ವಸ್ತುಗಳು: ಹೆಸರು ಬೇಳೆ- ೧/೨ ಕಪ್‌, ಕಾಳು ಮೆಣಸು- ೧/೨ ಚಮಚ, ಒಣಶುಂಠಿ ಪುಡಿ- ೧/೪ ಚಮಚ, ಉಪ್ಪು- ರುಚಿಗೆ, ಒಗ್ಗರಣೆಗೆ- ತುಪ್ಪ, ಸಾಸಿವೆ, ಕರಿಬೇವಿನ ಸೊಪ್ಪು.

ವಿಧಾನ: ಹೆಸರು ಬೇಳೆಯನ್ನು ಕುಕ್ಕರ್‌ನಲ್ಲಿ ಚನ್ನಾಗಿ ಬೇಯಿಸಿಕೊಳ್ಳಿ. ಬೇಯಿಸಿದ ಬೇಳೆಯ ಕಟ್ಟನ್ನು ತೆಗೆಯಿರಿ. ಇದಕ್ಕೆ ಉಪ್ಪು, ಕಾಳುಮೆಣಸಿನ ಪುಡಿ ಮತ್ತು ಶುಂಠಿ ಪುಡಿ ಸೇರಿಸಿ. ತುಪ್ಪದಲ್ಲಿ ಒಗ್ಗರಣೆ ಮಾಡಿದರೆ ಸೂಪ್‌ ಸಿದ್ಧ.

ರಸಾಲ (ಮಜ್ಜಿಗೆ): ಷಡ್ರಸೋಪೇತವಾದ ಮಜ್ಜಿಗೆಯಿದು. ನಾಲಿಗೆ ಮತ್ತು ಜಠರವನ್ನು ಚುರುಕುಗೊಳಿಸುವ ಈ ಪೇಯ, ಉತ್ತಮ ಪ್ರೊಬಯಾಟಿಕ್‌ ಸಹ ಹೌದು.

ಬೇಕಾಗುವ ವಸ್ತುಗಳು: ಹುಳಿ ಇಲ್ಲದ ಮೊಸರು- ೨೦೦ ಮಿ.ಲೀ., ಬೆಲ್ಲ- ೩ ಚಮಚ, ಉಪ್ಪು- ರುಚಿಗೆ, ಕಾಳುಮೆಣಸು- ೧/೨ ಚಮಚ, ಒಗ್ಗರಣೆಗೆ ತುಪ್ಪ, ಸಾಸಿವೆ, ಜೀರಿಗೆ, ಮೆಂತೆ ಮತ್ತು ಕರಿಬೇವಿನ ಎಲೆ.

ವಿಧಾನ: ಹುಳಿ ಇಲ್ಲದ ಮೊಸರಿಗೆ ಬೆಲ್ಲ, ಉಪ್ಪು ಮತ್ತು ಕಾಳುಮೆಣಸಿನ ಪುಡಿ ಬೆರೆಸಿ ಮಿಕ್ಸಿಯಲ್ಲಿ ತಿರುಗಿಸಿ. ಇದಕ್ಕೆ ತುಪ್ಪದಲ್ಲಿ ಒಗ್ಗರಣೆ ಮಾಡಿ ಸೇವಿಸಿ.

ಇದನ್ನೂ ಓದಿ : ತೊಗರಿಯಲ್ಲಿದೆ ಹಾಲಿಗಿಂತ 6 ಪಟ್ಟು ಹೆಚ್ಚು ಕ್ಯಾಲ್ಸಿಯಂ!

ಬಾರ್ಲಿ ಕಡುಬು: ಉತ್ತಮ ಪ್ರಮಾಣದ ಪ್ರೊಟೀನ್‌, ವಿಟಮಿನ್ ಮತ್ತು ಖನಿಜಗಳನ್ನು ಹೊಂದಿದ ಸಿಹಿ ತಿನಿಸಿದು. ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ನೆರವಾಗುವ ಈ ಆಹಾರ, ನಮ್ಮ ಶಕ್ತಿಯನ್ನೂ ವೃದ್ಧಿಸುತ್ತದೆ.

ಬೇಕಾಗುವ ವಸ್ತುಗಳು: ಬಾರ್ಲಿ ಹಿಟ್ಟು- ೧ ಕಪ್‌, ಹಸುವಿನ ಹಾಲು- ೧/೨ ಕಪ್‌, ಬೆಲ್ಲ- ೧/೨ ಕಪ್‌, ತುಪ್ಪ- ೧ ದೊಡ್ಡ ಚಮಚ, ಏಲಕ್ಕಿ- ೩, ತೆಂಗಿನ ತುರಿ- ೩/೪ ಕಪ್‌, ದಾಲ್ಚಿನ್ನಿ ಅಥವಾ ಲವಂಗ ಅಥವಾ ಅರಿಶಿನ ಎಲೆಗಳು- ದೊಡ್ಡದು ೫-೬

ವಿಧಾನ: ಬಾರ್ಲಿ ಹಿಟ್ಟನ್ನು ತುಪ್ಪದಲ್ಲಿ ಸಣ್ಣ ಉರಿಯಲ್ಲಿ ಹುರಿದುಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ತೆಂಗಿನ ತುರಿ ಸೇರಿಸಿ. ಪ್ರತ್ಯೇಕ ಪಾತ್ರೆಯಲ್ಲಿ ಬೆಲ್ಲದ ಪಾಕ ತೆಗೆಯಿರಿ. ಇದಕ್ಕೆ ಹುರಿದ ಹಿಟ್ಟನ್ನು ಸೇರಿಸಿ, ಹಾಲು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಟ್ಟುಕೊಳ್ಳಿ. ಈ ಹಿಟ್ಟನ್ನು ತೊಳೆದು ಸ್ವಚ್ಛಮಾಡಿಟ್ಟುಕೊಂಡ ಅರಿಶಿನ ಅಥವಾ ದಾಲ್ಚಿನ್ನಿ ಎಲೆಗಳ ಮೇಲೆ ಕಡುಬಿನಂತೆ ಹಚ್ಚಿ ಹಬೆಯಲ್ಲಿ ೧೫ ನಿಮಿಷ ಬೇಯಿಸಿ.

Exit mobile version