ಟೊಮೇಟೋ ಆಯ್ತು. ಈಗ ಈರುಳ್ಳಿಯ ಸರದಿ. ದಿನೇ ದಿನೇ ಈರುಳ್ಳಿಯ ದರ (Onion price) ಗಗನಕ್ಕೇರುತ್ತಿದೆ. ಈಗಾಗಲೇ ಶೇ.55ಕ್ಕೂ ಹೆಚ್ಚು ಈರುಳ್ಳಿಯ ದರ ಏರಿದ್ದು, ಕಿಲೋ ಒಂದಕ್ಕೆ 70ರಿಂದ 80 ರೂಪಾಯಿಗಳವರೆಗೂ ದೇಶದ ಹಲವೆಡೆ ಮಾರಾಟವಾಗುತ್ತಿದೆ. ಈರುಳ್ಳಿ ಹಾಗೂ ಟೊಮೇಟೋ (tomato price) ಇಲ್ಲದೆ, ದಿನವೇ ಮುಂದಕ್ಕೆ ಸಾಗದು ಎಂಬಷ್ಟು ಇವೆರಡಕ್ಕೆ ಜೋತುಬಿದ್ದಿರುವ ನಾವುಗಳು ಈಗ ಈರುಳ್ಳಿ ಇಲ್ಲದೆ ಅಡುಗೆ (cooking without onion) ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ಬಂದಿದೆ. ಏನೇ ಅಡುಗೆ ಮಾಡಿದರೂ ಸಾಮಾನ್ಯವಾಗಿ ಈರುಳ್ಳಿಯನ್ನು ಬಳಸದಂತಹ ಅಡುಗೆಗಳು (onion less recipe) ಬಹುತೇಕ ಇಲ್ಲವೆಂದೇ ಹೇಳಬೇಕು. ಅಂಥದ್ದರಲ್ಲಿ ಭಾರತೀಯರಿಗೆ, ಮುಖ್ಯವಾಗಿ ಉತ್ತರ ಭಾರತೀಯ ಗ್ರೇವಿಗಳು ಇತ್ಯಾದಿಗಳಿಗೆ ಈರುಳ್ಳಿ ಇಲ್ಲದೆ ಕೆಲಸ ಮುಂದೆ ಹೋಗದು. ಹಾಗಾಗಿ ಬನ್ನಿ, ಆದಷ್ಟೂ ಈರುಳ್ಳಿಯ ಬಳಕೆಯನ್ನು ಅಡುಗೆಯಲ್ಲಿ ಹೇಗೆ ಕಡಿಮೆ ಮಾಡಬಹುದು ಹಾಗೂ ಈರುಳ್ಳಿಗೆ ಪರ್ಯಾಯವಾಗಿ ಏನನ್ನು ಬಳಸುವ ಮೂಲಕ ರುಚಿಯಾದ ಅಡುಗೆಗಳನ್ನು ಮಾಡಬಹುದು (smart kitchen Tips) ಎಂಬುದನ್ನು ನೋಡೋಣ ಬನ್ನಿ.
1. ಈರುಳ್ಳಿಯೇ ಗ್ರೇವಿಗಳಿಗೆ ಬೇಕು ಎಂಬ ವಿಚಾರವನ್ನು ಮೊದಲು ತಲೆಯಿಂದ ತೆಗೆದು ಹಾಕಿ. ಕೆಲವೊಮ್ಮೆ ಗ್ರೇವಿಗಳಿಗೆ ಕೇವಲ ಹಾಲಿನ ಕ್ರೀಂ ಹಾಗೂ ಮೊಸರೂ ಕೂಡಾ ಅದ್ಭುತವಾಗಿ ಕೆಲಸ ಮಾಡುತ್ತದೆ. ದಪ್ಪ ಗ್ರೇವಿಯನ್ನು ನೀವು ಹೀಗೂ ಮಾಡಬಹುದು. ಇದು ಯಾವ ಈರುಳ್ಳಿ ಹಾಕಿದ ಗ್ರೇವಿಗೂ ಕಡಿಮೆಯಿರದು.
2. ಈರುಳ್ಳಿ ಪೇಸ್ಟನ್ನು ಹಾಕಿ ಮಾಡುವ ಗ್ರೇವಿಗಳಿಗೆ ನೆಲಗಡಲೆಯ ಪೇಸ್ಟ್ ಮಾಡಿ ಹಾಕಿ ನೋಡಿ. ನೆಲಗಡಲೆ ಇಷ್ಟಪಡುವ ಮಂದಿಗೆ ಇದು ಖಂಡಿತ ಇಷ್ಟವಾದೀತು. ಕೊಂಚ ಡಿಫರೆಂಟ್ ಆಗಿರುವ ರುಚಿಯ ಗ್ರೇವಿ ಸಿದ್ಧ.
3. ನೆಲಗಡಲೆ ಇಷ್ಟವಾಗುವುದಿಲ್ಲವೇ? ಹಾಗಿದ್ದರೆ ಗೋಡಂಬಿಯನ್ನು ಕೊಂಚ ಹೊತ್ತು ನೆನೆಸಿ ಪೇಸ್ಟ್ ಮಾಡಿ ಗ್ರೇವಿಗೆ ಸೇರಿಸಬಹುದು. ಶ್ರೀಮಂತ, ಕ್ರೀಮೀಯಾಗಿರುವ ಗ್ರೇವಿಯ ಸ್ವಾದಕ್ಕೆ ನೀವೇ ಮನಸೋಲುವಿರಿ. ಗೋಡಂಬಿ ಇಷ್ಟವಾಗುವುದಿಲ್ಲ ಎಂದಾದರೆ, ಅದರ ಬದಲು ಬಾದಾಮಿ ಪೇಸ್ಟ್ ಮಾಡಿಯೂ ಸೇರಿಸಬಹುದು.
4. ಇದ್ಯಾವುದೂ ಬೇಡವೇ? ಹಾಗಿದ್ದಲ್ಲಿ, ಈರುಳ್ಳಿಯನ್ನು ಬಿಟ್ಟು ಕೇವಲ ಟೊಮೇಟೋ ಪೇಸ್ಟಿಗೆ ಜೈ ಅನ್ನಿ. ಟೊಮೇಟೋವನ್ನು ಬೇಯಿಸಿ, ಸಿಪೆ ತೆಗೆದು ಅದನ್ನು ಮಿಕ್ಸಿಗೆ ಹಾಕಿ ಪೇಸ್ಟ್ ಮಾಡಿ. ಇದನ್ನು ನಿಮ್ಮ ಗ್ರೇವಿಗೆ ಸೇರಿಸಿ ಚೆನ್ನಾಗಿ ಕುದಿಸಿ. ಹುಳಿಹುಳಿಯಾದ ರುಚಿರುಚಿಯಾದ ಗ್ರೇವಿ ಸಿದ್ಧ. ಪನೀರ್ ಜೊತೆಗೆ ಇದು ಉತ್ತಮ ಕಾಂಬಿನೇಶನ್.
5. ಇದ್ಯಾವುದೂ ಬೇಡ ಅಂತೀರಾ? ಹಾಗಾದರೆ, ನಿಮ್ಮ ಸಹಾಯಕ್ಕೆ ಕಡಲೆ ಹಿಟ್ಟು ಬಂದೀತು. ಕಡಲೆ ಹಿಟ್ಟನ್ನು ಸ್ವಲ್ಪ ನೀರಿನಲ್ಲಿ ಮಿಕ್ಸ್ ಮಾಡಿ, ಗಂಟುಗಳಾಗದಂತೆ ಬಿಡಿಸಿಕೊಂಡು ನಿಮ್ಮ ಗ್ರೇವಿಗೆ ಸೇರಿಸಿ ಕುದಿಸಿ. ದಾಲ್ ಜೊತೆಗೂ ಇದು ಅತ್ಯುತ್ತಮ ಬೆರಕೆ. ಇದೂ ಕೂಡಾ ಉತ್ತಮ ಉಪಾಯವೇ.
6. ಇದ್ಯಾವುದೂ ಬೇಡವೇ? ನಿಮಗೆ ಈರುಳ್ಳಿ ಪರಿಮಳವಿಲ್ಲದಿದ್ದರೆ ಗ್ರೇವಿ ರುಚಿಯೇ ಆಗದು ಎಂಬ ಭಾವನೆಯಿದೆಯೇ? ಹಾಗಿದ್ದರೆ ಈರುಳ್ಳಿ ಬದಲಿಗೆ ಸ್ಪ್ರಿಂಗ್ ಆನಿಯನ್ ಹಾಕಿ. ಸಲಾಡ್‌ಗೆ, ಅಥವಾ ಕೆಲವು ಗ್ರೇವಿಗಳಿಗೆ ಸ್ಪ್ರಿಂಗ್ ಆನಿಯನ್ ಒಳ್ಳೆಯ ಜೋಡಿ.
ಇದನ್ನೂ ಓದಿ: Onion Price: ಕೇಂದ್ರ ಸರ್ಕಾರದಿಂದಲೇ ಕಿಲೋ 25 ರೂ.ಗೆ ಈರುಳ್ಳಿ ಮಾರಾಟ; ಎಲ್ಲಿ ನೋಡಿ