Site icon Vistara News

Aloo Baingan: ನಮ್ಮ ಆಲೂ ಬೇಂಗನ್‌ಗೆ ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಸ್ಥಾನ!

aloo baingan

ವಿಶ್ವದ ಅತ್ಯಂತ ಕೆಟ್ಟ ರುಚಿಯ ಆಹಾರಗಳ ಪೈಕಿ ಭಾರತದ ಯಾವುದು ಸ್ಥಾನ ಪಡೆದಿದೆ ಗೊತ್ತೇ? ಆಲೂ ಬೇಂಗನ್ (aloo baingan).‌ ಬದನೆಕಾಯಿ ಹಾಗೂ ಆಲೂಗಡ್ಡೆ ಹಾಕಿ ಮಾಡುವ ಸಬ್ಜಿಯನ್ನು ಬಹುತೇಕ ಮಂದಿ ರುಚಿಯಿಲ್ಲ ಎಂದು ರೇಟ್‌ ಮಾಡಿರುವ ಕಾರಣ ವಿಶ್ವದ ಅತ್ಯಂತ ಕೆಟ್ಟ ಆಹಾರಗಳ ಪೈಕಿ 60ನೇ ಸ್ಥಾನ ಪಡೆದಿದೆ!

ಟೇಸ್ಟ್‌ಅಟ್ಲಾಸ್‌ ಎಂಬ ಹೆಸರಿನಲ್ಲಿ ಬಿಡುಗಡೆಯಾದ ವಿಶ್ವದ 100 ಅತ್ಯಂತ ಕೆಟ್ಟ ಆಹಾರಗಳು ಪಟ್ಟಿಯಲ್ಲಿ 60ನೇ ಸ್ಥಾನದಲ್ಲಿರುವ ಈ ಆಲೂ ಬೇಂಗನ್‌ ಎಂಬ ಸಬ್ಜಿಯನ್ನು ಬಹುತೇಕರು ಕೆಟ್ಟದಾಗಿದೆ ಎಂದಿದ್ದಾರೆ. ಇದಕ್ಕೆ 2.7 ಸ್ಟಾರ್‌ ದೊರೆತಿದ್ದು, ಆ ಮೂಲಕ 60ನೇ ಸ್ಥಾನ ಗಳಿಸಿದೆ.

ಟೇಸ್ಟ್‌ ಅಟ್ಲಾಸ್‌ ಎಂಬ ಈ ಆನ್‌ಲೈನ್‌ ಗೈಡ್‌ ಬದನೆಕಾಯಿಯನ್ನು ಸರಳ ಹಾಗೂ ರುಚಿಕರ ಎಂದು ವಿವರಣೆ ಕೊಟ್ಟಿದ್ದರೂ, ಓದುಗರು ಮಾತ್ರ ಇಷ್ಟಪಟ್ಟಿಲ್ಲ. ಆಲೂ ಬೇಂಗನ್‌ ಎಂಬ ಈ ಸಬ್ಜಿಯನ್ನು ಆಲೂಗಡ್ಡೆ ಹಾಗೂ ಬದನೆಕಾಯಿ ಹಾಕಿ ಜೊತೆಗೆ ಈರುಳ್ಳಿ, ಟೊಮೇಟೋ, ಹಾಗೂ ವಿವಿಧ ಮಸಾಲೆಗಳನ್ನು ಹಾಕಿ ರುಚಿಕರವಾಗಿ ಮಾಡಲಾಗುತ್ತದೆ. ಇದು ಸರಳ ಹಾಗೂ ಸುಲಭದ ದಿಢೀರ್‌ ತಯಾರಾಗಬಲ್ಲ ಭಾರತೀಯ ಅಡುಗೆಗಳಲ್ಲಿ ಪ್ರಮುಖವಾದುದು. ಜೊತೆಗೆ ಇದನ್ನು ಮೊದಲೇ ಮಾಡಿಟ್ಟರೂ, ಹೊತ್ತು ಹೆಚ್ಚಾದಾಗ ರುಚಿಯೂ ಹೆಚ್ಚಾಗುವ ಆಹಾರಗಳ ಪೈಕಿ ಇದು ಒಂದು. ಮುಖ್ಯವಾಗಿ ಚಪಾತಿ, ರೋಟಿ, ನಾನ್‌ ಮತ್ತಿತರ ಉತ್ತರ ಭಾರತದ ಆಹಾರದ ಜೊತೆಗೆ ಉತ್ತಮ ಕಾಂಬಿನೇಶನ್‌ ಆಗಿರುವ ಆಲೂ ಬೇಂಗನ್‌ ಮಾತ್ರ ಯಾಕೋ, ಆನ್‌ಲೈನ್‌ ಓದುಗರಿಗೆ ಹಿಡಿಸಿಲ್ಲ. ಹಾಗಾಗಿ ಇದು ಅತ್ಯಂತ ಕೆಟ್ಟ ಆಹಾರಗಳಲ್ಲಿ ಒಂದಾಗಿರುವ ಸ್ಥಾನ ಪಡೆದಿದೆ.

ಇದಲ್ಲದೆ, ಕೆಟ್ಟ ಆಹಾರದ ಪೈಕಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದ ಆಹಾರ ಹಾಗಾದರೆ ಯಾವುದಿರಬಹುದು ಎಂಬ ಕುತೂಹಲ ನಿಮಗಿರಬಹುದು. ಐಸ್‌ಲ್ಯಾಂಡ್‌ನ ಹಕ್ರಾಲ್‌ ಎಂಬ ಅಡುಗೆ ಟಾಪ್‌ ಒಂದನೇ ಸ್ಥಾನದಲ್ಲಿದೆ. ಜನರಿಗೆ ಇದು ವಿಶ್ವದಲ್ಲೇ ಅತ್ಯಂತ ಕೆಟ್ಟ ರುಚಿಯ ಆಹಾರವೆಂದು ಅನಿಸಿದೆ. ಇದು ಐಸ್‌ಲ್ಯಾಂಡ್‌ನ ಪ್ರಮುಖ ರಾಷ್ಟ್ರೀಯ ಆಹಾರವಾಗಿದ್ದು, ಛಾರ್ಕ್‌ ಮೀನಿನ ಖಾದ್ಯವಾಗಿದೆ. ಗ್ರೀನ್‌ಲ್ಯಾಂಡ್‌ ಶಾರ್ಕ್‌ ಅಥವಾ ಸ್ಲೀಪರ್‌ ಶಾರ್ಕ್‌ನ ವಿಧಗಳಲ್ಲಿ ಇದನ್ನು ತಯಾರಿಸಲಾಗುತ್ತದೆ. ಮೀನನ್ನು ಸುಮಾರು ಮೂರು ತಿಂಗಳ ಕಾಲ ಹುಳಿಬರಿಸಿ ಅದನ್ನು ಬಿಸಿಲಿನಲ್ಲಿ ನಾಲ್ಕೈದು ತಿಂಗಳ ಕಾಲ ಒಣಗಿಸಿದ ಮೇಲೆ ಅದರಿಂದ ತಯಾರಿಸುವ ಅಪರೂಪದ ಖಾದ್ಯವಿದು. ಹೀಗೆ ಒಣಗಿಸಿದ ಶಾರ್ಕ್‌ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟು ಅದನ್ನೇ ಹಕ್ರಾಲ್‌ ಮಾಡುತ್ತಾರೆ.

ಈ ಖಾದ್ಯದಲ್ಲಿ ಎರಡು ವಿಧಗಳಿವೆ. ಕೆಂಪನೆಯ, ಚ್ಯೂಯಿಂಗ್‌ಗಮ್‌ ಮಾದರಿಯ ಗ್ಲೆರ್‌ ಹಕ್ರಾಲ್‌ ಒಂದು ಬಗೆಯಾದರೆ, ಬಿಳಿಯ ಸ್ಕೈರ್ಹಕ್ರಾಲ್‌ ಇನ್ನೊಂದು ಬಗೆಯದು. ಇದರಲ್ಲಿ ಅಮೋನಿಯಾ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವುದರಿಂದ ಇದನ್ನು ಕೇವಲ ದಮ್‌ ಇದ್ದ ಮಂದಿ ತಿನ್ನಬಹುದಾದ್ದು ಎಂಬ ನಂಬಿಕೆ ಇದೆ.

ಎರಡನೇ ಅತೀ ಕೆಟ್ಟ ಆಹಾರದ ಸ್ಥಾನದಲ್ಲಿ ಯುಎಸ್‌ನ ರಾಮೆನ್‌ ಬರ್ಗರ್‌ ಇದ್ದರೆ ಮೂರನೇ ಸ್ಥಾನದಲ್ಲಿ ಇಸ್ರೆಲ್‌ನ ಯೆರುಶಲ್ಮಿ ಕುಗೇಲ್‌ ಇದೆ.

ಇದನ್ನೂ ಓದಿ: Immunity Boosting Foods: ಕೋವಿಡ್‌ ಭೀತಿಯೆ?: ಪ್ರತಿರೋಧಕತೆ ಹೆಚ್ಚಿಸುವ ಆಹಾರ ಸೇವಿಸಿ

Exit mobile version