ಇದೀಗ ಆಹಾರದ ಗುಣಮಟ್ಟವೇ ಸಮಸ್ಯೆ. ಹೊರಗೆ ತಿನ್ನುವ ಎಲ್ಲರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ್ದೇ. ಯಾಕೆಂದರೆ ಒಂಟಿಯಾಗಿ ಬದುಕುವ, ಮನೆಯಿಂದ ದೂರವಿರುವ, ಕೆಲಸದ ಒತ್ತಡದಲ್ಲಿ ಬ್ಯುಸಿಯಾಗಿರುವ ಮಂದಿ ಹೊರಗಿನ ತಿಂಡಿಗಳನ್ನು ಅವಲಂಬಿಸುವುದೇ ಹೆಚ್ಚು. ಬೀದಿಬದಿಯ ತಿನಿಸುಗಳು, ಚಾಟ್‌ಗಳು, ಕಡಿಮೆ ದರದಲ್ಲಿ ಲಭ್ಯವಾಗುವ ತಿನಿಸುಗಳು ಇತ್ಯಾದಿಗಳು ಸುಲಭವಾಗಿ ಆಕರ್ಷಿಸುತ್ತವೆ ನಿಜವಾದರೂ, ಕೆಲವೊಮ್ಮೆ ಇಂತಹ ಆಹಾರಗಳೇ ಅನಾರೋಗ್ಯವನ್ನೂ ತರುತ್ತವೆ. ಮಳೆಗಾಲದಲ್ಲಿ ಈ ಸಂಭವ ಇನ್ನೂ ಹೆಚ್ಚು. ಕಲುಷಿತ ನೀರು, ಕಲುಷಿತ ಆಹಾರ, ಹೆಚ್ಚು ಕಾಲ ಶೇಖರಿಟ್ಟ ಆಹಾರಗಳಿಂದ ತಯಾರಿಸುವ ತಿಂಡಿ ತಿನಿಸುಗಳು, ವಾತಾವರಣದ ತೇವಾಂಶಕ್ಕೆ ಹಾಳಾಗಿ, ಹೊಟ್ಟೆ ಕೆಡುತ್ತದೆ. ಕೆಲವೊಮ್ಮೆ ದೊಡ್ಡ ಸಮಸ್ಯೆಯನ್ನೂ ಹುಟ್ಟುಹಾಕಿ, ಪ್ರಾಣಕ್ಕೂ ಸಂಚಕಾರ ಬರಬಹುದು. ಇತ್ತೀಚೆಗೆ, ಎಫ್‌ಎಸ್‌ಎಸ್‌ಎಐ ನಿಯಮಿತವಾಗಿ ಭಾರತದ ಹಲವು ಆಹಾರಗಳ ಪರೀಕ್ಷೆ ನಡೆಸುತ್ತಿದ್ದು, ಎಚ್ಚರಿಕೆಯನ್ನು ನೀಡುತ್ತಲೇ ಇದೆ. ಬಣ್ಣಬಣ್ಣದ ಕಾಟನ್ ಕ್ಯಾಂಡಿ ರದ್ದಾಯಿತು. ಗೋಬಿ ಮಂಚೂರಿ, ಪಾನಿಪುರಿಯಲ್ಲಿ ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಪತ್ತೆಯೂ ಆಯಿತು. ಇದೀಗ ಶವರ್ಮಾ ಸರದಿ. ಮಾಂಸಾಹಾರ ಇಷ್ಟಪಡುವ ಮಂದಿ, ಅದರಲ್ಲೂ, ಶವರ್ಮಾ ಇಷ್ಟಪಡುವ ಮಂದಿಗೆ, ಅದು ರಾಜ್ಯದಲ್ಲಿ ರದ್ದಾಗುವ ಸುದ್ದಿ ಕೇಳಿ ಆಘಾತವಾಗಿದೆ. ಬಾಯಿ ಚಪ್ಪರಿಸಿಕೊಂಡು ಶವರ್ಮಾ ತಿನ್ನುತ್ತಿದ್ದ ಮಂದಿ ಇದೀಗ ತಮ್ಮ ಮೆಚ್ಚಿನ ತಿನಿಸು ರದ್ದಾದರೆ ಬಾಯಿ ಚಪಲಕ್ಕೇನು ಮಾಡುವುದು ಎಂದು ಚಿಂತೆ ಮಾಡುತ್ತಿದ್ದಾರೆ. ಬನ್ನಿ, ಸಿಂಪಲ್ ಆಗಿ, ಹೊಟೇಲ್‌ಗಿಂತ ಇನ್ನೂ ರುಚಿಕಟ್ಟಾಗಿ, ಅಷ್ಟೇ ಆರೋಗ್ಯಕರವಾಗಿ ಶವರ್ಮಾ ಮನೆಯಲ್ಲೇ (shawarma recipe) ನೀವು ಹೇಗೆ ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ಹೆಚ್ಚು ಕಷ್ಟವೇನಿಲ್ಲ
ಶವರ್ಮಾ ಮಾಡಲು ಹೆಚ್ಚು ಕಷ್ಟವೇನಿಲ್ಲ. ಶವರ್ಮಾದ ಮಸಾಲೆ ಮಿಕ್ಸ್ ನೀವೊಮ್ಮೆ ರೆಡಿ ಮಾಡಿಟ್ಟುಕೊಂಡರೆ ನಿಮ್ಮ ಕೆಲಸ ಅರ್ಧ ಆದಂತೆ. ಈ ಮಸಾಲೆಯ ಮಿಕ್ಸ್ ಹೇಗೆ ಮಾಡೋದು ಎಂದು ತಿಳಿಯೋಣ ಬನ್ನಿ.
ಇದನ್ನೂ ಓದಿ: How To Cook With Garlic: ಅಡುಗೆಗೆ ಬೆಳ್ಳುಳ್ಳಿ ಬಳಸುವಾಗ ಈ 5 ಟಿಪ್ಸ್‌ಗಳನ್ನು ಮರೆಯಲೇಬೇಡಿ!
ಶವರ್ಮಾ ಮಸಾಲೆ
ಕಾಶ್ಮೀರಿ ಕೆಂಪು ಮೆಣಸಿನಕಾಯಿಯನ್ನು ಹುರಿದಿಡಿ. ನಂತರ ಏಲಕ್ಕಿ, ಕರಿಮೆಣಸು, ಸೋಂಪು, ಜೀರಿಗೆ, ಕೊತ್ತಂಬರಿ ಇವೆಲ್ಲವನ್ನೂ ಒಂದೊಂದಾಗಿ ಹುರಿಯಿರಿ. ಇವೆಲ್ಲವೂ ತಣಿದ ಕೂಡಲೇ ಮಿಕ್ಸಿಗೆ ಹಾಕಿ ಚೆನ್ನಾಗಿ ಪುಡಿ ಮಾಡಿ. ಈಗ ಶವರ್ಮಾ ಮಸಾಲೆ ರೆಡಿ. ಒಂದು ಗಾಳಿಯಾಡದ ಡಬ್ಬದಲ್ಲಿ ಈ ಮಸಾಲೆ ಪುಡಿಯನ್ನು ಕೆಲಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿಯೂ ಇಡಬಹುದು. ಇನ್ನು ರುಚಿಯಾದ, ಅಷ್ಟೇ ಆರೋಗ್ಯಕರವಾದ ಶವರ್ಮಾ ಮಾಡುವುದು ಹೇಗೆಂದು ತಿಳಿಯೋಣ. ಒಂದು ಬೇಕಿಂಗ್ ಪಾತ್ರೆಯಲ್ಲಿ ಕಾಲು ಕಪ್ ಮಾಲ್ಟ್ ವಿನೆಗರ್, ಕಾಲು ಕಪ್ ಮೊಸರು, ಒಂದು ಚಮಚ ಎಣ್ಣೆ, ಶವರ್ಮಾ ಮಸಾಲೆ ಪುಡಿ, ರುಚಿಗೆ ಉಪ್ಪು ಇವಿಷ್ಟನ್ನು ಮಿಕ್ಸ್ ಮಾಡಿ ಇದರ ಮೇಲೆ ಫ್ರೆಶ್ ಚಿಕನ್ ತೊಡೆ ಮಾಂಸವನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಎಲ್ಲ ಬದಿಯೂ ಕೋಟಿಂಗ್ ಆಗುವಂತೆ ನೋಡಿಕೊಂಡು ಇದನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಚೆನ್ನಾಗಿ ಮಾರಿನೇಟ್ ಆಗುವಂತೆ ಬಿಡಿ.
ನಂತರ 350 ಡಿಗ್ರಿ ಫ್ಯಾರನ್‌ಹೀಟ್‌ನಲ್ಲಿ ಅವನ್ ಅನ್ನು ಪ್ರಿಹೀಟ್ ಮಾಡಿಕೊಳ್ಳಿ. ಸಣ್ಣ ಬೌಲ್‌ನಲ್ಲಿ ತಾಹಿನಿ, ಕಾಲು ಕಪ್ ಮೊಸರು, ಬೆಳ್ಳುಳ್ಳಿ, ನಿಂಬೆ ರಸ, ಆಲಿವ್ ಆಯಿಲ್ ಹಾಗೂ ಪಾರ್ಸ್ಲೇ ತೆಗೆದುಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು, ಕರಿಮೆಣಸು ಹಾಕಿ ರೆಫ್ರಿಜರೇಟ್ ಮಾಡಿ. ಇದನ್ನು ಚಿಕನ್‌ಗೆ ಕವರ್ ಮಾಡಿ. ೩೦ ನಿಮಿಷಗಳ ಕಾಲ ಅವನ್‌ನಲ್ಲಿ ಬೇಕ್ ಮಾಡಿ. ಒಮ್ಮೆ ನೋಡಿಕೊಂಡು ಚಿಕನ್ ಕಂದು ಬಣ್ಣಕ್ಕೆ ತಿರುಗದಿದ್ದರೆ ಮತ್ತೆ ೧೦ ನಿಮಿಷ ಬೇಕ್ ಮಾಡಿ. ಹೊರತೆಗೆದು ಆಕಾರಕ್ಕೆ ಕತ್ತರಿಸಿಕೊಳ್ಳಿ. ಟೊಮೆಟೋ, ಈರುಳ್ಳಿ, ಕ್ಯಾಬೇಜ್ ತುರಿಯಿಂದ ಅಲಂಕರಿಸಿ. ರೋಲ್ ಮಾಡಿ ತಾಹಿನಿ ಸಾಸ್ ಜೊತೆ ತಿನ್ನಿ. ಇಂತಹ ಪರ್ಫೆಕ್ಟ್ ರುಚಿಯನ್ನು ನೀವು ರೆಸ್ಟೋರೆಂಟ್‌ನಲ್ಲೂ ಅಪರೂಪಕ್ಕಷ್ಟೇ ಕಂಡಿರಬಹುದು. ಈಗ ಯಾವ ಭಯವೂ ಇಲ್ಲದೆ, ಶವರ್ಮಾ ತಿನ್ನಬಹುದು. ಮಳೆಗಾಲಕ್ಕೆ ಪರ್ಫೆಕ್ಟ್ ರುಚಿಯಾದ ಖಾದ್ಯವಿದು.