ಬಹಳಷ್ಟು ಸಾರಿ ನಮಗೆ ಯಾವುದರಲ್ಲಿ ಹೆಚ್ಚು ಪ್ರೊಟೀನ್ ಇದೆ, ಯಾವುದೆಲ್ಲ ತಿಂದರೆ ತೂಕ ಇಳಿಯುತ್ತದೆ ಎಂಬ ವಿಚಾರಗಳ ಬಗ್ಗೆ ಸಾಕಷ್ಟು ಓದಿ ತಿಳಿದುಕೊಂಡರೂ, ಇವೆಲ್ಲ ನಮ್ಮ ನಿತ್ಯ ಜೀವನದಲ್ಲಿ ಹಿಂದಿನಿಂದ ನಡೆದು ಬಂದದ್ದನ್ನು ತ್ಯಜಿಸಿ ಹೊಸದರ ಅನ್ವೇಷನೆಯಲ್ಲಿ ತೊಡಗುತ್ತೇವೆ. ಹೊಸ ಆಹಾರದ ಬೆನ್ನು ಬಿದ್ದು, ಆವುಗಳಿಂದ ನಮಗೆ ಒಳ್ಳೆಯದಾಗುತ್ತದೆ ಎಂದು ನಂಬುತ್ತೇವೆ. ಆದರೆ, ಬಹಳಷ್ಟು ಸಾರಿ ತೂಕ ಇಳಿಸುವ ಹೆಸರಿನಲ್ಲಿ ಹೊಸ ಆಹಾರ ಪದ್ಧತಿ ನಮ್ಮ ದೇಹಕ್ಕೂ ಮನಸ್ಸಿಗೂ ಒಗ್ಗದೆ ಹಿಂಸೆ ಅನುಭವಿಸುತ್ತೇವೆ. ಯಾಕೆಂದರೆ, ಹೊಸ ಬಗೆಯ ಆಹಾರ ಪದ್ಧತಿಗೆ ದೇಹವನ್ನು ಪಳಗಿಸುವುದು ಕಷ್ಟ. ದೇಹ ಪಳಗಿದರೂ ಮನಸ್ಸಿಗೆ ಒಗ್ಗುವುದು ಇನೂ ಕಷ್ಟ. ಆದರೆ, ಹೊಸ ಬಗೆಯ ಪದ್ಧತಿಗಳನ್ನು ಅರಸುವ ಸಂದರ್ಭ ನಮ್ಮಲ್ಲೇ ಇರುವ ನಮ್ಮದೇ ಆದ ಸರಳ ಸುಲಭ ಪೌಷ್ಠಿಕಾಂಶಯುಕ್ತ ಆಹಾರವನ್ನೇ ಎಷ್ಟೋ ಸಾರಿ ಮರೆತುಬಿಡುತ್ತೇವೆ. ದಾಲ್ ಕೂಡಾ ಅಂಥದ್ದೇ ಒಂದು ಸರಳ ಸುಂದರ ಪ್ರೊಟೀನ್‌ಯುಕ್ತ ಬಗೆ. ಇದು, ಹಿಂದಿನಿಂದಲೂ ಭಾರತೀಯ ಮನೆಗಳಲ್ಲಿ ನಮಗೆ ಸದಾ ಪ್ರೊಟೀನ್‌ನ ಕೊರತೆಯಾಗದಂತೆ ನೋಡಿಕೊಳ್ಳುವಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿದೆ.
ಭಾರತೀಯ ಅಡುಗೆಯ ಕರಾಮತ್ತೇ ಅದು. ಇಲ್ಲಿ ನಮ್ಮ ಆಹಾರಕ್ರಮ ದೇಹಕ್ಕೆ ಬೇಕಾದ ಎಲ್ಲವುಗಳ ಮಿಶ್ರಣ. ಕಾರ್ಬೋಹೈಡ್ರೇಟ್, ಪ್ರೊಟೀನ್, ಖನಿಜಾಂಶಗಳು, ವಿಟಮಿನ್ ಎಲ್ಲವೂ ಸರಿಯಾಗಿರುವ ಆಹಾರವನ್ನೇ ನಾವು ನಿತ್ಯ ಸೇವಿಸುವ ಹಾಗೆ ನಮ್ಮ ಆಹಾರ ಪದ್ಧತಿ ಹಿರಿಯರ ಮೂಲಕ ನಮಗೆ ದಾಟಿಸಲ್ಪಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರಕ್ರಮ, ಪಾಶ್ಚಾತ್ಯ ಆಹಾರ ಪದ್ಧತಿಗಳ ಪ್ರೇರಣೆ, ಮನೆಯ ಆರೋಗ್ಯಕರ ಆಹಾರವನ್ನು ಬಿಟ್ಟು ಹೊರಗೇ ಹೆಚ್ಚು ತಿನ್ನುವುದು ಇತ್ಯಾದಿಗಳಿಂದ ಆರೋಗ್ಯ ಬಿಗಡಾಯಿಸಿದೆ. ಬೊಜ್ಜು, ತೂಕದ ಸಮಸ್ಯೆಗಳು, ಮಧುಮೇಹ, ಕೊಲೆಸ್ಟೆರಾಲ್ ಹೆಚ್ಚಾಗುವಿಕೆ, ಥೈರಾಯ್ಡ್ ಸಮಸ್ಯೆ, ವಿಟಮಿನ್ ಕೊರತೆ ಸೇರಿದಂತೆ ಎಲ್ಲ ತೊಂದರೆಗಳೂ ಒಂದೊಂದಾಗಿ ಆರಂಭವಾಗುತ್ತದೆ.
ಇದನ್ನೂ ಓದಿ: Health Tips | ತೂಕ ಇಳಿಸಿ, ಹಸಿವು ನಿಯಂತ್ರಿಸಲು ಬೇಕು ಮಸಾಲೆ ಚಹಾ!
ದಾಲ್ ಎಂಬ ಸರಳ ಸುಲಭ ಅಡುಗೆ ಚಪಾತಿ, ಅನ್ನದ ಜೊತೆಗೆ ಸರಿಯಾಗಿ ಹೊಂದುವಂಥದ್ದು. ಬಿಸಿಬಿಸಿಯಾಗಿ ಬೇಳೆ ಕಾಳುಗಳನ್ನು ಹಾಕಿ ದಾಲ್ ಮಾಡಿದರೆ, ಹೊಟ್ಟೆಗೂ ಹಿತ. ಹೆಸರು ಬೇಳೆ, ತೊಗರಿ ಬೇಳೆ, ಕಡ್ಲೆ ಬೇಳೆ, ಮಸೂರ್ ಬೇಳೆ ಎಲ್ಲವುಗಳೂ ಕೂಡಾ ಬೇರೆ ಬೇರೆ ಬಗೆಯ ದಾಲ್ ಮಾಡುವಲ್ಲಿ ರುಚಿಯನ್ನೂ ಹೆಚ್ಚಿಸುತ್ತವೆ. ಸಿಂಪಲ್ ಆದ, ದಾಲ್ ಫ್ರೈ, ದಾಲ್ ತಡ್ಕಾ, ದಾಲ್ ಪಾಲಕ್, ದಾಲ್ ಮಖನಿ ಸೇರಿದಂತೆ ದಾಲ್‌ನಲ್ಲೂ ತರಹೇವಾರಿ ಬಗೆಗಳಿವೆ. ನಮ್ಮ ದೇಶದಲ್ಲಿ ಲಭ್ಯವಿರುವ ನಾನಾ ಬಗೆಯ ಬೇಳೆಗಳನ್ನು ಹಾಕಿ ಮಾಡಲು ನಾನಾ ಬಗೆಯ ದಾಲ್‌ಗಳಿವೆ. ಹುಡುಕಹೊರಟರೆ, ಹಲವು ಬಗೆ!
ದಾಲ್‌ಗಳ ನಾನಾ ಬಗೆಗಳಲ್ಲಿ ಅತ್ಯಂತ ಸುಲಭ ಸರಳ ದಾಲ್ ಬಗೆ ಎಂದರೆ ಅದು ದಾಲ್ ಫ್ರೈ. ಅನ್ನಕ್ಕಾದರೂ ಸೈ, ಚಪಾತಿ ಜೊತೆಗೂ ಜೈ. ಹೆಸರು ಬೇಳೆಯನ್ನು ಚೆನ್ನಾಗಿ ಬೇಯುವಂತೆ ನೀರು ಹಾಕಿ ಕುಕ್ಕರ್‌ನಲ್ಲಿ ವಿಶಲ್ ಕೂಗಿಸಿ ಕೆಳಗಿಳಿಸಿ ಒಗರಣೆ ಕೊಟ್ಟರೆ ಮುಗಿಯಿತು. ಒಂದಿಷ್ಟು ಜೀರಿಗೆ, ಇಂಗು, ಹಸಿಮೆಣಸು, ಶುಂಠಿಯ ಒಗ್ಗರಣೆ ಹಾಕಿದರೆ, ರುಚಿ. ಬೇಕಾದರೆ, ಈರುಳ್ಳಿ ಟೊಮೇಟೋಗಳನ್ನೂ ಸೇರಿಸಬಹುದು. ಮಸಾಲೆ ಬೇಕಿದ್ದರೆ ಗರಂ ಮಸಾಲೆ ಹಾಕಬಹುದು. ಒಟ್ಟರೆ ಸುಲಭದ ಅಡುಗೆ ಎಂದರೆ ಅದು ದಾಲ್. ಆಫೀಸಿನಿಂದ ಬಂದು ಮಾಡಲು ಸಮಯವಿಲ್ಲದಿದ್ದರೆ, ಪ್ರೊಟೀನ್‌ಗೆ ಕೊರತೆಯಾಗದಂತೆ ನಮ್ಮ ಶಕ್ತಿವರ್ಧನೆಗೆ ಈ ದಾಲ್ ತಯಾರಾಗಿಬಿಡುತ್ತದೆ.
ದಾಲ್‌ಗಳನ್ನು ಮಾಡುವ ಬಗೆಯಲ್ಲಿ ನಾನಾ ವಿಧಗಳಿವೆ. ನಮ್ಮ ದೇಶದಲ್ಲಿ ಒಂದೊಂದು ರಾಜ್ಯಕ್ಕೂ ಆದರದ್ದೇ ಆದ ದಾಲ್ ವೈವಿಧ್ಯವಿದೆ ಬೇರೆಯದೇ ರುಚಿಯಿದೆ. ಪಂಜಾಬಿನ ಮಂದಿ ಮಾಡುವ ದಾಲ್ ತಡ್ಕಾಕ್ಕೂ ಬೆಂಗಾಲಿ ಶೈಲಿಗೂ ವ್ಯತ್ಯಾಸವಿದೆ. ಹೀಗಾಗಿ, ದಾಲ್‌ನಲ್ಲಿ ಪಿಎಚ್‌ಡಿ ಮಾಡುವ ಆಸೆಯಿದ್ದರೆ, ಒಂದೊಂದೇ ರಾಜ್ಯದೊಂದೊಂದೇ ಬಗೆಯ ದಾಲ್‌ಗಳನ್ನು ನಿತ್ಯವೂ ಟ್ರೈ ಮಾಡಿ ನೋಡಬಹುದು. ಆ ಮೂಲಕ ಭಾರತದಲ್ಲಿ ದಕ್ಕುವ ಎಲ್ಲ ಬಗೆಯ ಬೇಳೆಕಾಳುಗಳನ್ನೂ ನೀವು ಹೊಟ್ಟೆ ಸೇರುವಂತೆ ಮಾಡಬಹುದು. ನಿಮ್ಮ ಹೊಟ್ಟೆ ನಿತ್ಯವೂ ಪ್ರೊಟೀನ್‌ನಿಂದ ಸಮೃದ್ಧ!
ಇದನ್ನೂ ಓದಿ: Health Tips | ಈ ಕಾಂಬಿನೇಷನ್ ಆಹಾರಗಳು ತೊಂದರೆ ತರಬಹುದು, ಜಾಗ್ರತೆ!