Site icon Vistara News

Summer Storage Tips: ಬೇಸಿಗೆಯಲ್ಲಿ ಸೊಪ್ಪು- ತರಕಾರಿಗಳು ತಾಜಾ ಇರುವಂತೆ ಮಾಡಲು ಹೀಗೆ ಮಾಡಿ

Summer Storage Tips

ಹಸಿರು ಸೊಪ್ಪು, ತರಕಾರಿಗಳು ನಮ್ಮ ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದವು ಎಂಬುದು ಸರಿಯಷ್ಟೆ. ಆದರೆ ಸೊಪ್ಪು-ತರಕಾರಿಗಳ ರಕ್ಷಣೆಯೇ ಕೆಲವೊಮ್ಮೆ ಸವಾಲಾಗಿ ಬಿಡುತ್ತದೆ. ಇವತ್ತಿಗೆ ಬೇಕಾದ್ದನ್ನು ಇವತ್ತು ತಂದುಕೊಳ್ಳುವುದು ಸಾಧ್ಯವಿಲ್ಲದ ಮಾತು. ಒಮ್ಮೆ ಮಾರುಕಟ್ಟೆಯಿಂದ ತರುವಾಗ ಒಂದು ವಾರಕ್ಕಾಗುವಷ್ಟಾದರೂ ತರಬೇಕು. ತಂದಿದ್ದನ್ನು ಫ್ರಿಜ್‌ನಲ್ಲಿ ಇರಿಸಿಕೊಳ್ಳಬೇಕು. ಅದನ್ನು ಬಳಸುವಾಗ ತೆರೆದು ನೋಡಿದರೆ ಅರ್ಧ ಕೊಳೆತು ಇಲ್ಲವೇ ಒಣಗಿ ಅಥವಾ ಬಾಡಿರುತ್ತದೆ. ತರಕಾರಿಗಳಂತೂ ಕೆಲವೊಮ್ಮೆ ರಬ್ಬರಿನಂಥ ಸ್ಥಿತಿಸ್ಥಾಪಕ ಗುಣವನ್ನು ಗಳಿಸಿಕೊಂಡಿದ್ದರೆ, ಸೊಪ್ಪುಗಳು ಹಸಿರಿನಿಂದ ಕಡು ಹಳದಿ ಬಣ್ಣಕ್ಕೆ ತಿರುಗಿರುತ್ತವೆ. ಅದಿಲ್ಲದಿದ್ದರೆ ಕೊಳೆತು ಮುದ್ದೆಯಾಗಿರುತ್ತವೆ. ಗುಣಮಟ್ಟದ ತರಕಾರಿಯನ್ನು ತಂದರೂ ಅವು ಬಳಸುವಾಗ ತಾಜಾ ಮತ್ತು ಪೌಷ್ಟಿಕವಾಗಿ ಇಲ್ಲದಿದ್ದರೆ ಹೇಗೆ? ಅವುಗಳನ್ನು ತಾಜಾ ಆಗಿ ಇರಿಸಿಕೊಳ್ಳುವುದು (Summer Storage Tips) ಕಷ್ಟವಾದರೂ ಅಸಾಧ್ಯವಂತೂ ಖಂಡಿತ ಅಲ್ಲ. ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಈ ಋತುಮಾನದ ಹಸಿ ಕಾಳುಗಳು, ಸೊಪ್ಪು, ತರಕಾರಿಗಳನ್ನು ಫ್ರಿಜ್‌ನಲ್ಲಿ ವಾರಗಟ್ಟಲೆ ತಾಜಾ, ರುಚಿಕರ ಮತ್ತು ಪೌಷ್ಟಿಕವಾಗಿಯೇ ಇರಿಸಿಕೊಳ್ಳಬಹುದು. ಬೇಕಾದಾಗೆಲ್ಲ ತೆಗೆದು ಉಪಯೋಗಿಸಿಕೊಳ್ಳಬಹುದು. ಹಾಗಾದರೆ ಏನು (Summer Storage Tips) ಮಾಡಬೇಕು?

ಸ್ವಚ್ಛ ಮಾಡುವ ಕ್ರಮ

ಪೇಟೆಯಿಂದ ತರುವ ತರಕಾರಿಗಳನ್ನು ತೊಳೆದು ಸ್ವಚ್ಛ ಮಾಡಿ ಉಪಯೋಗಿಸುವುದನ್ನು ಎಲ್ಲರೂ ಮಾಡುತ್ತೇವೆ. ತೊಳೆಯದೇ ಫ್ರಿಜ್‌ನಲ್ಲಿಟ್ಟು ಬೇಕಾದಾಗ ತೊಳೆದು ಉಪಯೋಗಿಸುವುದೇ ಅಥವಾ ತೊಳೆದು ಫ್ರಿಜ್‌ನಲ್ಲಿ ಶೇಖರಿಸಿಡುವುದೇ ಎಂಬ ಗೊಂದಲ ಹಲವರದ್ದು. ಆದಷ್ಟೂ ಮಣ್ಣೆಲ್ಲ ತೊಳೆದು ಸ್ವಚ್ಛ ಮಾಡಿ ಶೇಖರಿಸುವುದು ಸೂಕ್ತ. ಆದರೆ ಇಲ್ಲೊಂದು ಸಮಸ್ಯೆಯಿದೆ. ತೊಳೆದರೆ ಬೇಗ ಕೊಳೆಯುತ್ತದೆ ಎಂಬುದು ಹಲವರ ಅನುಭವ. ಹಾಗಾಗಿ, ತೊಳೆದ ಮೇಲೆ ನೀರು ಆರಿಸುವುದು ಮುಖ್ಯ. ಪೇಪರ್‌ ಟವೆಲ್‌ನಿಂದ (ಅದನ್ನು ಬಳಸುವವರಾದರೆ) ಒತ್ತಿ ನೀರು ತೆಗೆದು ಮನೆಯೊಳಗೇ ನರಳಿನಲ್ಲಿ ಆರಹಾಕಿ. ಅದಿಲ್ಲದಿದ್ದರೆ ನೇರವಾಗಿ ಸ್ವಚ್ಛ ಹತ್ತಿಯ ಬಟ್ಟೆಯ ಮೇಲೆ ತಂಪಾದ ಜಾಗದಲ್ಲಿ ಸೊಪ್ಪು, ತರಕಾರಿಗಳನ್ನು ಹರವಿಡಿ. ಒಂದೆರಡು ತಾಸುಗಳಲ್ಲಿ ಅಥವಾ ಅವುಗಳಲ್ಲಿರುವ ನೀರು ಸಂಪೂರ್ಣ ಆರಿದ ಮೇಲೆ ಶೇಖರಿಸಿ ಇಟ್ಟುಕೊಳ್ಳಬಹುದು.

ಶೇಖರಿಸುವುದು ಹೇಗೆ?

ಶೇಖರಿಸಿದ ಚೀಲಗಳಲ್ಲಿ ತೇವಾಂಶ ಒಳಗೇ ಉಳಿದರೆ ಒಳಗಿರುವ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಯಾವುದೇ ಚೀಲಗಳಲ್ಲಿ ಅವುಗಳನ್ನು ಶೇಖರಿಸಿದರೂ, ತೇವ ಆವಿಯಾಗುವುದಕ್ಕೆ ರಂಧ್ರಗಳಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಜಿಪ್‌ಲಾಕ್‌ ಉಪಯೋಗಿಸುತಿದ್ದರೆ, ಅವುಗಳ ಬಾಯನ್ನು ಸಂಪೂರ್ಣ ಸೀಲ್‌ ಮಾಡದೆ ಸ್ವಲ್ಪವೇ ತೆರೆದಿರಿಸಿ. ಅದಿಲ್ಲದಿದ್ದರೆ ಮಾಮೂಲಿ ಪ್ಲಾಸ್ಟಿಕ್‌ ಬ್ಯಾಗ್‌ಗಳಿಗೇ ಸಣ್ಣ ರಂಧ್ರಗಳನ್ನು ಮಾಡಿ ಶೇಖರಿಸಿಡಬಹುದು. ಅಂತೂ ಸೊಪ್ಪು-ತರಕಾರಿಗಳಲ್ಲಿ ನೀರು, ತೇವಾಂಶ ಸಿಲುಕದಂತೆ ಜಾಗ್ರತೆ ಮಾಡಿ.

ಸೊಪ್ಪುಗಳು

ಇಷ್ಟೆಲ್ಲಾ ಮಾಡಿದರೂ ಸೊಪ್ಪುಗಳು ಹಾಳಾಗುತ್ತಿವೆಯೇ? ಫ್ರಿಜ್‌ನ ಕ್ರಿಸ್ಪರ್‌ ಹೊರತಾಗಿ ಬೇರೆಲ್ಲೂ ಸೊಪ್ಪುಗಳನ್ನು ಇರಿಸಬೇಡಿ. ಹೆಚ್ಚಿನ ತೇವಾಂಶವನ್ನು ನಿಭಾಯಿಸುವಂತೆ ಫ್ರಿಜ್‌ನ ಈ ಭಾಗವನ್ನು ವಿನ್ಯಾಸಗೊಳಿಸಲಾಗಿದೆ. ಹಾಗಾಗಿ ಮೆಂತೆ, ಪಾಲಕ್‌, ಲೆಟೂಸ್‌, ಸಬ್ಬಸಿಗೆಯಂಥ ಸೊಪ್ಪುಗಳನ್ನು ಕಾಪಾಡಿಕೊಳ್ಳಲು ಸೂಕ್ತವಾದ ಸ್ಥಳವಿದು.

ಸುತ್ತಿಡಿ

ಹೂಕೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಪೇಪರ್‌ ಟವೆಲ್‌ನಲ್ಲಿ ಸುತ್ತಿಡಿ. ಇದರಿಂದ ತೇವವನ್ನು ಇನ್ನಷ್ಟು ಹೀರಿ, ಹಸಿಹಸಿಯಾಗಿ ಇರದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗೆ ಸುತ್ತಿದ ಸರಕಾರಿಗಳನ್ನು ರಂಧ್ರವುಳ್ಳು ಬ್ಯಾಗ್‌ಗಳಲ್ಲಿ ಇರಿಸಿ. ಇದರಿಂದ ವಾರಗಟ್ಟಲೆ ಇವುಗಳನ್ನು ತಾಜಾ ಆಗಿ ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟೇ ಅಲ್ಲ

ಕೊತ್ತಂಬರಿ, ಪುದೀನಾ, ಬೆಸಿಲ್‌ನಂಥ ಪರಿಮಳದ ಸೊಪ್ಪುಗಳನ್ನು ಉಳಿದೆಲ್ಲ ಸೊಪ್ಪುಗಳಂತೆ ಕಾದುಕೊಳ್ಳುವುದು ಕಷ್ಟ. ಹಾಗಾಗಿ ಪುಟ್ಟ ಜಾರ್‌ನಲ್ಲಿ ನೀರಿರಿಸಿ, ಅದರಲ್ಲಿ ಈ ಸೊಪ್ಪಿನ ಕಂತೆಗಳನ್ನು ಬೇರು ಮುಳುಗುವಂತೆ ಇರಿಸಿ ತಂಪಾದ ಜಾಗದಲ್ಲಿಡಿ. ನಾಲ್ಕಾರು ದಿನಗಳವರೆಗೆ ಇವು ತಾಜಾ ಆಗಿಯೇ ಇರುತ್ತವೆ. ಇದಕ್ಕೆ ಅಳ್ಳಕವಾದ ಪ್ಲಾಸ್ಟಿಕ್‌ ಮುಚ್ಚಿ, ಹಾಗೆಯೇ ಫ್ರಿಜ್‌ನಲ್ಲಿ ಇರಿಸಲೂಬಹುದು.

ತರಕಾರಿಗಳು

ಹಣ್ಣು ಮತ್ತು ತರಕಾರಿಗಳನ್ನು ಎಂದಿಗೂ ಒಂದೇ ಬ್ಯಾಗ್‌ನಲ್ಲಿ ಇರಿಸಬೇಡಿ. ಹಣ್ಣುಗಳಿಂದ ಸಾಮಾನ್ಯವಾಗಿ ಇಥಿಲೀನ್‌ ಅನಿಲ ಬಿಡುಗಡೆಯಾಗುತ್ತದೆ. ಇದು ಪಕ್ವವಾಗುವುದನ್ನು ಹೆಚ್ಚಿಸುತ್ತದೆ. ಇದರಿಂದ ತರಕಾರಿಗಳು ಬೇಗ ಹಾಳಾಗುತ್ತವೆ. ಹಾಗಾಗಿ ಹಣ್ಣು ಮತ್ತು ತರಕಾರಿಗಳನ್ನು ಫ್ರಿಜ್‌ನಲ್ಲಿ ಪ್ರತ್ಯೇಕವಾಗಿಯೇ ಶೇಖರಿಸಿಡಿ.

ತಾಪಮಾನ

ಫ್ರಿಜ್‌ನ ತಾಪಮಾನ ೧ರಿಂದ ೪ ಡಿ. ಸೆ. ಒಳಗೇ ಇರುವಂತೆ ನೋಡಿಕೊಳ್ಳಿ. ಇದರಿಂದ ವಸ್ತುಗಳು ದೀರ್ಘಕಾಲ ಕೆಡದಂತೆ ಕಾಪಾಡಿಕೊಳ್ಳಬಹುದು. ಶೇಖರಿಸಿಟ್ಟು ಮರೆತುಬಿಟ್ಟರೆ ಅದೂ ಕಷ್ಟವೆ. ಇರುವ ವಸ್ತುಗಳ ಸ್ಥಿತಿಗತಿಯನ್ನು ಆಗಾಗ ವಿಚಾರಿಸಿಕೊಳ್ಳಿ. ಇದರಿಂದ ಒಂದೊಮ್ಮೆ ಯಾವುದಾದರೂ ಹಾಳಾಗಿದ್ದರೆ, ಅದನ್ನು ಬಿಸಾಡಿ ಉಳಿದವುಗಳೂ ಹಾಳಾಗದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Millets For Health: ಸಿರಿಧಾನ್ಯಗಳನ್ನು ನಾವು ಏಕೆ ತಿನ್ನಬೇಕೆಂದರೆ…

Exit mobile version