ಬೇಸಿಗೆ ಎಂಬ ಕಾಲ ಎಷ್ಟೇ ಕಷ್ಟ ಎನಿಸಿದರೂ ಅದರ ಖುಷಿ ಬೇಸಿಗೆಯಲ್ಲಿ ನಾವು ಹೊಟ್ಟೆಗಿಳಿಸುವ ತಂಪು ತಂಪು ಆಹಾರಗಳಲ್ಲಿದೆ. ತಣ್ಣನೆಯ ತಾಜಾ ಮಾವಿನಹಣ್ಣು, ಹಲಸಿನ ಹಣ್ಣು, ಕಲ್ಲಂಗಡಿ, ಲಿಚಿ ಮತ್ತಿತರ ಥರಹೇವಾರಿ ಹಣ್ಣುಗಳು, ಮನಸೋ ಇಚ್ಛೆ ಸವಿಯಬಹುದಾದ ಬಗೆಬಗೆಯ ಸ್ವಾದಗಳ ಐಸ್‌ಕ್ರೀಮುಗಳು, ಶೇಕ್‌ಗಳು, ಐಸ್‌ಕ್ಯಾಂಡಿಗಳು (Ice candy) ಹೀಗೆ ಬೇಸಿಗೆ ಇಷ್ಟ ಎನ್ನಲು ನೂರಾರು ಕಾರಣಗಳು. ಮಕ್ಕಳ ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಆಗಾಗ ಏನಾದರೊಂದು ತಿನ್ನಲು ಕೊಡುತ್ತಿರಬೇಕಾದುದು ಬಹಳಷ್ಟು ಹೆತ್ತವರ ತಲೆನೋವು. ಮಕ್ಕಳು ಮನೆಯಲ್ಲಿದ್ದು, ಗೆಳೆಯರನ್ನೋ ಗೆಳತಿಯರನ್ನೋ ಸೇರಿಸಿ ರಜೆಯ ಮಜಾ (summer tips) ಅನುಭವಿಸುತ್ತಿರಲು, ಹೆತ್ತವರು ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತದೆ.
ಮಕ್ಕಳ ಖುಷಿಗೆ ಬಗೆಬಗೆಯ ತಿನಿಸು, ಹೊಸಹೊಸ ರುಚಿಗಳನ್ನು ಮಾಡುವುದೇ ಹೆತ್ತವರಿಗೆ ಚಾಲೆಂಜು. ಅದರಲ್ಲೂ, ಹೆತ್ತವರು ತಮ್ಮ ಕೆಲಸದ ನಡುವೆ ಮಕ್ಕಳ ರಜೆಯಲ್ಲಿ ಸಮಯ ಹೊಂದಿಸಿಕೊಳ್ಳಬೇಕಾಗುವುದು ಇನ್ನೊಂದು ದೊಡ್ಡ ಕೆಲಸ. ಇಂಥ ಸಮಯದಲ್ಲಿ ಆಪತ್ಬಾಂಧವನ ಹಾಗೆ ಕಾಪಾಡುವುದು ಸುಲಭದ ರೆಸಿಪಿಗಳಾದ ಐಸ್‌ಕ್ಯಾಂಡಿಗಳು. ಈ ಬಗೆಬಗೆಯ ಐಸ್‌ಕ್ಯಾಂಡಿಗಳನ್ನು ಮಾಡುವುದೂ ಸುಲಭ. ಮಕ್ಕಳಿಗೂ ಇಷ್ಟ. ಬೇಸಿಗೆಯಲ್ಲಿ ಮಕ್ಕಳ ದಾಹವನ್ನೂ ಇಂಗಿಸುವ ಸುಲಭೋಪಾಯ. ಹಾಗಾದರೆ ಬನ್ನಿ, ಮಕ್ಕಳಿಗಾಗಿ ಬೇಸಿಗೆಯಲ್ಲಿ ಯಾವೆಲ್ಲ ಐಸ್‌ಕ್ಯಾಂಡಿಗಳನ್ನು ಮನೆಯಲ್ಲೇ ಮಾಡಬಹುದು ಎಂದು ನೋಡೋಣ.
1. ಮಾವಿನ ಹಣ್ಣಿನ ಐಸ್‌ಕ್ಯಾಂಡಿ: ಬೇಸಿಗೆಯಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿನ ಐಸ್‌ಕ್ಯಾಂಡಿ ಮಾಡದಿದ್ದರೆ ಹೇಗೆ ಹೇಳಿ. ಮಾವಿನಹಣ್ಣಿನ ಸಿಪ್ಪೆ ತೆಗೆದು ಅದನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಂಡು. ಸ್ವಲ್ಪ ನೀರು, ಸಕ್ಕರೆ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಐಸ್‌ಕ್ಯಾಂಡಿ ಮೌಲ್ಡ್ ಅಥವಾ ಅಚ್ಚಿನಲ್ಲಿ ಸುರಿದು, ಕಡ್ಡಿ ಇಟ್ಟು ಫ್ರೀಜರ್‌ನಲ್ಲಿ ಡೀಪ್ ಫ್ರೀಜ್ ಮಾಡಿದರೆ ಮುಗೀತು, ಮ್ಯಾಂಗೋ ಐಸ್‌ಕ್ಯಾಂಡಿ ರೆಡಿ.
2. ಕಲ್ಲಂಗಡಿ ಐಸ್‌ಕ್ಯಾಂಡಿ: ಬೇಸಿಗೆಯಲ್ಲಿ ಬಿಸಿಲಲ್ಲಿ ಸುತ್ತಿ ಡಿಹೈಡ್ರೇಶನ್ ಸಮಸ್ಯೆಳನ್ನು ಎದುರಿಸುವ ಮಕ್ಕಳಿಗೆ ಕಲ್ಲಂಗಡಿ ಹಣ್ಣು ತಿನ್ನಲು ಕೊಟ್ಟ್ರೆ ಬಹುತೇಕರು ಮುಖ ಕಿವುಚುತ್ತಾರೆ. ಅದನ್ನೇ ಐಸ್‌ಕ್ಯಾಂಡಿ ಮಾಡಿ ಕೊಟ್ಟ್ರೆ ಚಪ್ಪರಿಸುತ್ತಾರೆ. ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, ಸಿಪ್ಪೆ ಹಾಗೂ ಬೀಜಗಳನ್ನು ಪ್ರತ್ಯೇಕಿಸಿ, ಸಕ್ಕರೆ ಹಾಗೂ ಸ್ವಲ್ಪ ನಿಂಬೆಹಣ್ಣಿನ ರಸ ಸೇರಿಸಿ ಮಿಕ್ಸಿಯಲ್ಲಿ ತಿರುಗಿಸಿ. ಬೇಕಿದ್ದ್ರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು ಐಸ್‌ಕ್ಯಾಂಡಿ ಅಚ್ಚಿನೊಳಗೆ ಸುರಿದು ಕಡ್ಡಿ ಇಟ್ಟು ಫ್ರೀಜ್ ಮಾಡಿ. ಕಲ್ಲಂಗಡಿ ಹಣ್ಣಿನ ಐಸ್ ಕ್ಯಾಂಡಿ ಎಂಬ ಗುರುತೇ ಹತ್ತದು.
ಇದನ್ನೂ ಓದಿ: Summer Tips: ಬೇಸಿಗೆಯ ಸಾಥಿ: ಮಣ್ಣಿನ ಮಡಕೆಯ ತಂಪು ನೀರು ಕುಡಿದು ಆರೋಗ್ಯ ಹೆಚ್ಚಿಸಿ!
3. ಕಿವಿ ಹಾಗೂ ನಿಂಬೆಹಣ್ಣಿನ ಐಸ್‌ಕ್ಯಾಂಡಿ: ಕಿವಿ ಹಣ್ಣು ಕಂಡರೆ ಆಗದ ಮಕ್ಕಳು ಈ ಐಸ್‌ಕ್ಯಾಂಡಿಗೆಮಾತ್ರ ನೋ ಎನ್ನಲಾರರು. ಕಿವಿ ಹಣ್ಣಿನ ಸಿಪ್ಪೆಸುಲಿದು, ನಿಂಬೆ ರಸ ಸೇರಿಸಿ, ಬೇಕಾದಷ್ಟು ಸಕ್ಕರೆ ಸೇರಿಸಿ ನೀರು ಹಾಕಿ ಮಿಕ್ಸಿಯಲ್ಲಿ ತಿರುಗಿಸಿ ಅಚ್ಚಿಗೆ ಹುಯ್ಯಿರಿ. ಕಟ್ಟಿ ಇಟ್ಟು ಫ್ರೀಜ್ ಮಾಡಿ. ಇದೇ ಮಾದರಿಯಲ್ಲಿ ಲಿಚಿ ಹಣ್ಣಿನ ಐಸ್ ಕ್ಯಾಂಡಿಯೂ ಬಹಳ ರುಚಿಕಟ್ಟಾಗಿರುತ್ತದೆ.
ನಿಮ್ಮ ಮಕ್ಕಳಿಗೆ ಯಾವ ಹಣ್ಣು ಇಷ್ಟವೋ ಆ ಎಲ್ಲ ಹಣ್ಣುಗಳಿಂದಲೂ ಇಂಥ ಐಸ್‌ಕ್ಯಾಂಡಿಗಳನ್ನು ನಾವು ಮನೆಯಲ್ಲೇ ತಯಾರಿಸಬಹುದು. ಮಕ್ಕಳು ಮನೆಯಲ್ಲಿಯೇ ಮಾಡಿದ ಐಸ್‌ಕ್ಯಾಂಡಿ ತಿನ್ನುತ್ತಿದ್ದಾರೆ ಎಂಬ ನೆಮ್ಮದಿಯೂ ನಿಮಗಾಗುತ್ತದೆ. ಅಷ್ಟೇ ಅಲ್ಲ, ಹಣ್ಣುಗಳು ಬೇರೆ ರೂಪಗಳಲ್ಲಿ ಮಕ್ಕಳ ಹೊಟ್ಟೆ ಸೇರುತ್ತದೆ ಎಂಬ ಧನ್ಯತೆಯೂ ನಿಮ್ಮದು.
ಇದನ್ನೂ ಓದಿ: Summer Tips: ನೀವು ಸಾಕಷ್ಟು ನೀರು ಕುಡಿಯುತ್ತಿಲ್ಲ ಎಂಬುದರ 7 ಸೂಚನೆಗಳು!