Site icon Vistara News

Vegetarian Meat: ಆಹಾರ ಸಂಸ್ಕೃತಿಯಲ್ಲೊಂದು ಹೊಸ ಟ್ರೆಂಡ್‌!

vegan

ಹೀಗೊಂದು ಹೊಸ ಟ್ರೆಂಡ್‌ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಸಸ್ಯಾಹಾರಿ ಮಾಂಸ! ಮಾಂಸದ್ದೇ ರುಚಿ, ಹೆಸರು ಎಲ್ಲವೂ, ಆದರೆ ಮಾಂಸ ಅಲ್ಲ. ಸಸ್ಯಾಹಾರಿಗಳಿಗೆ ಮಾಂಸದ ರುಚಿ ಹೇಗಿರುತ್ತದೆ ಎಂದು ನೋಡಲು ಇದೊಂದು ಆಯ್ಕೆಯಾದರೆ, ಮಾಂಸವನ್ನು ತ್ಯಜಿಸಿ ಸಸ್ಯಾಹಾರಿಗಳಾಗ ಬಯಸುವವರಿಗೂ ಆಗಾಗ ನಾಲಿಗೆ ಚಪಲಕ್ಕೆ ಸಿಗುವ ಆಯ್ಕೆ. ಇನ್ನೂ ಕೆಲವರಿಗೆ ಇದು ಆಧುನಿಕತೆಯ ಸಂಕೇತ. ಮತ್ತೆ ಕೆಲವರಿಗೆ ಇದು ಹೊಸರುಚಿಯ ಹೊಸ ಟ್ರೆಂಡ್‌!

ಸಸ್ಯಜನ್ಯ ಮೂಲಗಳಿಂದ ಮಾಂಸದೇ ರುಚಿಯ ಅಡುಗೆಗಳು, ತಿನಿಸುಗಳು ಇಂದು ಯುವಜನರ ಆಹಾರ ಸಂಸ್ಕೃತಿಯಲ್ಲಿ ಸ್ಥಾನ ಪಡೆಯುತ್ತಿದೆ. ಅತ್ಯುತ್ತಮ ವೇಗನ್‌ ಮಾಂಸಗಳು, ಮಾಂಸರಹಿತ ಮಾಂಸಗಳು ಇಂದು ಸಕತ್‌ ಟ್ರೆಂಡ್‌ ಆಗಿದ್ದು, ರುಚಿಯಿಲ್ಲದ ಪೇಲವ ವೇಗನ್‌ ಅಥವಾ ಸಸ್ಯಾಹಾರವನ್ನೇ ತಿನ್ನುವ ಕಾಲ ಈಗ ಮುಗಿದಿದೆ. ಇಂದು ಮಾರುಕಟ್ಟೆಯಲ್ಲಿ ಹಾಟ್‌ ಡಾಗ್‌ನಿಂದ ಬೇಕನ್‌ವರೆಗೆ ಎಲ್ಲ ಬಗೆಯ ರುಚಿಯಾದ ಮಾಂಸರಹಿತ ಮಾಂಸದಡುಗೆಗಳೂ ದೊರೆಯುತ್ತಿದ್ದು, ವೇಗನ್‌ಗಳು, ಸಸ್ಯಾಹಾರಿಗಳು ಯಾವುದೇ ಬೇಸರವಿಲ್ಲದೆ ತಮಗಿಷ್ಟದ ರುಚಿಯನ್ನು ಸವಿಯಬಹುದಾಗಿದೆ. ಬರ್ಗರ್‌ನಿಂದ ಹಿಡಿದು ಚಿಕನ್‌ ಸಾಸೇಜ್‌ವರೆಗೆ ಎಲ್ಲದಕ್ಕೂ ವೇಗನ್‌ನಲ್ಲಿಯೂ ಹೊಸಬಗೆಯ ಆದರೆ ರುಚಿಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲದಂತಹ ಆಯ್ಕೆಗಳು ಈಗ ಲಭ್ಯವಿವೆ.

ವರದಿಗಳ ಆಧಾರದ ಪ್ರಕಾರ ಇಂದು ೨೦೨೦ರಲ್ಲಿ ಭಾರತ ಆರು ಮಿಲಿಯನ್‌ ಟನ್‌ಗಳಷ್ಟು ಮಾಂಸವನ್ನು ಆಹಾರವಾಗಿ ಉಪಯೋಗಿಸಿದೆ. ಭಾರತದಲ್ಲಿ ಶೇ.೭೧ರಷ್ಟು ಮಂದಿ ಮಾಂಸಾಹಾರಿಗಳಾಗಿದ್ದು, ಅರ್ಧದಷ್ಟು ಜನತೆ, ವಾರಕ್ಕೊಮ್ಮೆ ಮಾಂಸದಡುಗೆಯನ್ನು ಉಣ್ಣುತ್ತಾರೆ ಎನ್ನಲಾಗಿದೆ. ಪ್ರಾಣಿಜನ್ಯ ಪ್ರೊಟೀನ್‌ ಮೂಲಗಳನ್ನು ಬಳಸುವವರ ಸಂಖ್ಯೆ ಹೆಚ್ಚಿದೆ. ಈ ಸಂಖ್ಯೆ ಏರುತ್ತಲೂ ಇದೆ. ಇದೇ ಸಂದರ್ಭ ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲಿ ಸಸ್ಯಜನ್ಯ ಮಾಂಸದ ತಿನಿಸುಗಳನ್ನು ಇಷ್ಟಪಡುವವರ ಸಂಖ್ಯೆ ದಿನೇದಿನೇ ಟ್ರೆಂಡ್‌ ಆಗಿ ಬದಲಾಗುತ್ತಿದ್ದು, ಮುಖ್ಯವಾಗಿ ಯುವಜನರು, ಈ ಹೊಸ ಆಹಾರ ಸಂಸ್ಕೃತಿಯತ್ತ ವಾಲುತ್ತಿದ್ದಾರೆ. ಇದಕ್ಕೆ ಸರಿಯಾಗಿ, ಈ ಕ್ಷೇತ್ರದಲ್ಲಿ ಇದೀಗ ಭಾರೀ ಅನ್ವೇಷಣೆಗಳಾಗುತ್ತಿದ್ದು, ವೇಗನ್‌ ಚೀಸ್‌ಗಳು, ಶೇ.೧೦೦ರಷ್ಟು ಪ್ರಾಣಿಜನ್ಯರಹಿತ ಮಾಂಸಗಳು ಸೇರಿದಂತೆ ಅನೇಕ ಹೊಸ ಪದಾರ್ಥಗಳು ದೊರೆಯುತ್ತಿವೆ. ಮಾಂಸರಹಿತ ಮಾಂಸದ ಅಡುಗೆಗಳನ್ನು ನಿಮ್ಮ ಮನೆಯವರೆಗೆ ತಲುಪಿಸುವ ಹಲವು ಬ್ರ್ಯಾಂಡ್‌ಗಳೂ ಈಗ ಲಭ್ಯವಿವೆ.

ಇದನ್ನೂ ಓದಿ: Jail life: ಈ ಜೈಲಿನಲ್ಲಿ ಅಪರಾಧಿಗಳೇ ಪಕ್ಕದವರನ್ನು ಕೊಂದು ಮಾಂಸ ತಿನ್ನುತ್ತಿದ್ದರಂತೆ!

ಗುಡ್‌ ಡಾಟ್‌ ಎಂಬ ಹೆಸರಿನ ಸಂಸ್ಥೆ ೨೦೧೬ರಲ್ಲಿ ಆರಂಭವಾಗಿದ್ದು, ಇದು ಭಾರತದಲ್ಲಿ ಮೊತ್ತಮೊದಲ ಬಾರಿಗೆ ಸಸ್ಯಜನ್ಯ ಚಿಕನ್‌ ತಿನಿಸುಗಳನ್ನು ಪರಿಚಯಿಸಿತ್ತು. ವೆಜ್‌ ಬೈಟ್ಸ್‌ ಹೆಸರಿನ ಚಿಕನ್‌ ಸ್ಟಿಪ್ಸ್‌, ಪ್ರೊಟೀನ್ಝ್‌ ಹೆಸರಿನ ದಿಡೀರ್‌ ಅಡುಗೆಯ ಪ್ಯಾಕೆಟ್ಟುಗಳು ಇವರ ವಿಶೇಷತೆಗಳು. ಎವೋ ಫುಡ್ಸ್‌ ಹೆಸರಿನ ಮುಂಬೈ ಮೂಲದ ಇನ್ನೊಂದು ಸಂಸ್ಥೆ, ಮೊಟ್ಟೆರಹಿತ ಮೊಟ್ಟೆಯನ್ನು ಪರಿಚಯಿಸಿದೆ. ಮೊಟ್ಟೆಗೆ ಪರ್ಯಾಯವಾಗಿರುವ ಇದು ಮೊಟ್ಟೆಯಂತೆ ಪ್ರೊಟೀನಿನ ಆಯ್ಕೆಯಾಗಿದ್ದು, ಶೇ.೧೦೦ರಷ್ಟು ಸಸ್ಯಜನ್ಯ ದ್ರವರೂಪದ ಮೊಟ್ಟೆಯೇ ಆಗಿದೆ.

ಫರೀದಾಬಾದ್‌ ಮೂಲದ ಮಿಸ್ಟರ್‌ ವೆಜ್‌ ಹೆಸರಿನ ಸಂಸ್ಥೆ ಸಸ್ಯಜನ್ಯ ಸೀಫುಡ್‌ ಆಯ್ಕೆಯಾಗಿದ್ದು, ಮೀನು ಸೇರಿದಂತೆ ಸಮುದ್ರ ಜೀವಿಗಳ ಆಹಾರವನ್ನು ತ್ಯಜಿಸಿ ಸಸ್ಯಜನ್ಯದ ಆದರೆ ಅದೇ ರುಚಿ ಬೇಕೆಂದು ಅರಸುವ ಮಂದಿಗೆ ಹೇಳಿ ಮಾಡಿಸಿದ್ದಾಗಿದೆ. ಬೆಂಗಳೂರು ಮೂಲದ ಗುಡ್‌ಮಿಲ್ಕ್‌ ಹೆಸರಿನ ಇನ್ನೊಂದು ಸಂಸ್ಥೆಯೂ ಇದೇ ರಂಗದಲ್ಲಿ ಕೆಲಸ ಮಾಡುತ್ತಿದೆ. ಇದು ಹಾಲಿನ ಉತ್ಪನ್ನಗಳಿಗೆ ಪರ್ಯಾಯ ಬಯಸುವ ವೇಗನ್‌ ಆಹಾರ ಸಂಸ್ಕೃತಿಯನ್ನು ಫಾಲೋ ಮಾಡುವ ಮಂದಿಗೆ ತಕ್ಕುದಾಗಿದೆ. ಗೋಡಂಬಿಯ ಹಾಲು, ನೆಲಗಡಲೆಯ ಮೊಸರು, ಸಸ್ಯಮೂಲ ಬೆಣ್ಣೆ, ವೇಗನ್‌ ಮಯೋನೀಸ್‌ ಎಲ್ಲವೂ ಈ ಬ್ರ್ಯಾಂಡ್‌ ಅಡಿಯಲ್ಲಿ ಲಭ್ಯವಿವೆ. ಮುಂಬೈ ಮೂಲದ ಸಾಫ್ಟ್‌ ಸ್ಪಾಟ್‌ ಫುಡ್ಸ್‌ ಸಸ್ಯಮೂಲದ ಹಲವು ಬಗೆಯ ಚೀಸ್‌ಗಳನ್ನೇ ತಯಾರಿಸುವ ಸಂಸ್ಥೆಯಾಗಿದ್ದು, ವೇಗನ್‌ ಆಗಿದ್ದು ಪಿಜ್ಜಾ ತಿನ್ನಲು ಆಸೆ ಪಡುವ ಮಂದಿ ಇದನ್ನು ಸಂಪರ್ಕಿಸಬಹುದು.

ಹಾಗಾದರೆ ಸಸ್ಯಜನ್ಯ ಮಾಂಸಗಳ ಮೂಲ ಪದಾರ್ಥವೇನು ಎಂಬ ಸಂಶಯವೂ ಬರದೇ ಇರದು. ಪ್ರಮುಖವಾಗಿ ಹಲಸಿನಕಾಯಿ, ಟೋಫು ಹಾಗೂ ಸೋಯಾಬೀನ್‌ನಂತಹ ವಸ್ತುಗಳಿಂದ ಇಂತಹ ಸಸ್ಸಜನ್ಯ ಮಾಂಸದಡುಗೆಗಳನ್ನು ತಯಾರಿಸುತ್ತಾರೆ. ಸೀಟನ್‌ ಎಂಬ ಗೋಧಿಯ ಗ್ಲುಟೆನ್‌ ಕೂಡಾ ಇದರಲ್ಲಿ ಬಳಕೆಯಾಗುತ್ತದಂತೆ. ಕೇವಲ ಅಷ್ಟೇ ಅಲ್ಲ. ಬೀನ್ಸ್‌, ಬಟಾಣಿ ಪ್ರೊಟೀನ್‌, ಆಲೂಗಡ್ಡೆಯ ಸ್ಟಾರ್ಚ್‌, ತೆಂಗಿನೆಣ್ಣೆ, ಒಣಬೀಜಗಳು ಹಾಗೂ ಇನ್ನಿತರ ತರಕಾರಿ ಹಾಗೂ ಕಾಳುಗಳನ್ನು ಮೂಲವಾಗಿಟ್ಟುಕೊಂಡೂ ತಯಾರಿಸುತ್ತಾರಂತೆ. ಹೀಗೆ ತಯಾರಿಸಿದ ಆಹಾರಕ್ಕೆ ಮಾಂಸಾಹಾರದ ಅಡುಗೆಯಲ್ಲಿ ಬಳಸುವ ಮಸಾಲೆಯನ್ನೇ ಬಳಸಿ ಆಯಾ ಹೆಸರಿನ ಅಡುಗೆಗಳನ್ನು ತಯಾರಿಸಲಾಗುತ್ತದೆ. ಈ ಆಹಾರದಲ್ಲಿನ ಪ್ರೊಟೀನು, ಪೋಷಕಾಂಶಗಳ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಿಲ್ಲ ಎಂದು ಈ ಕ್ಷೇತ್ರದಲ್ಲಿರುವ ಸಂಸ್ಥೆಗಳು ಹೇಳಿ ಅದರ ವಿವರಗಳನ್ನೂ ಕೊಡುತ್ತವೆ. ಆದರೂ, ಇಂತಹ ಸಂಸ್ಕರಿಸಿದ ಆಹಾರ ವಸ್ತುಗಳ ದಿನನಿತ್ಯ ಬಳಕೆ ಮಾತ್ರ ಅಷ್ಟು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತೇ ಇದೆ.

ಇದನ್ನೂ ಓದಿ: ಮನುಷ್ಯನ ಮಾಂಸದ ರುಚಿ ಸವಿಯೋ ಆಸೆ ಇದೆಯಾ? ಈ ಬರ್ಗರ್ ತಿನ್ನಿ!

Exit mobile version