ಬೇಸಿಗೆ ಬಂದಿದೆ. ದಿನೇ ದಿನೇ ಬಿಸಿಲಿನ ಝಳ ಏರುತ್ತಿದೆ. ಈ ಸಂದರ್ಭ ದೇಹವನ್ನು ತಂಪು ಮಾಡಿಕೊಳ್ಳಲು ಕಲ್ಲಂಗಡಿಯಷ್ಟು ರುಚಿಯಾದ ಜೊತೆಗೆ ಅಷ್ಟೇ ಒಳ್ಳೆಯ ಹಣ್ಣು ಇನ್ನೆಲ್ಲಿ ಸಿಕ್ಕೀತು? ಕತ್ತರಿಸಿರೆ ಸಾಕ ರಸ ಸುರಿವ ತಂಪು ತಂಪಾದ ಈ ಕೆಂಪು ಹಣ್ಣು ಕಣ್ಣಿಗೂ ಮನಸ್ಸಿಗೂ ದೇಹಕ್ಕೂ ತಂಪನ್ನೇ ಎರೆಯುತ್ತದೆ. ಅತಿಯಾದ ಬಿಸಿಲಿನ ಝಳಕ್ಕೆ ತಿರುಗುವ ತಲೆಗೆ, ಸುರಿವ ಬೆವರಿಗೆ ಕಲ್ಲಂಗಡಿ ಅಮೃತವೇ ಸರಿ. ಕಲ್ಲಂಗಡಿಯನ್ನು ಯಾವ ರೂಪದಲ್ಲೇ ಸೇವಿಸಿದರೂ ಅದರ ಪರಿಣಾಮ ಮಾತ್ರ ತಂಪೇ. ಸಲಾಡ್, ಸ್ಮೂದಿ, ಡ್ರಿಂಕ್‌ಗಳೇ ಇರಲಿ ತಿಂದ ಅಥವಾ ಕುಡಿದ ತಕ್ಷಣ ದೇಹವನ್ನು ತಣ್ಣಗೆ ಇಡಬಲ್ಲ ಶಕ್ತಿ ಇದಕ್ಕಿದೆ. ಹಾಗಾದರೆ ಬನ್ನಿ, ಈ ಬೇಸಿಗೆಯಲ್ಲಿ ಕಲ್ಲಂಗಡಿಯಿಂದ ಮಾಡಬಲ್ಲ ಬಗೆಬಗೆಯ ರುಚಿಕರ ಡ್ರಿಂಕ್‌ಗಳನ್ನು ನೋಡೋಣ.
೧. ಕಲ್ಲಂಗಡಿ ಲೆಮನೇಡ್: ಸಾಮಾನ್ಯ ಲೆಮನೇಡ್ ಕುಡಿಯಲು ಬೋರಾಗಿದೆಯೇ? ಹಾಗಿದ್ದರೆ ಕಲ್ಲಂಗಡಿ ಲೆಮನೇಡ್ ಮಾಡಿ ನೋಡಿ. ಕೆಲವು ಕಲ್ಲಂಗಡಿ ತುಂಡುಗಳು, ಸಕ್ಕರೆ, ಚಿಟಿಕೆ ಉಪ್ಪು, ಹಾಗೂ ನಿಂಬೆಹಣ್ಣಿನ ರಸ ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ಪಿಂಕ್ ಬಣ್ಣದ ಈ ಲೆಮನೇಡ್ ಎಷ್ಟು ರಿಫ್ರೆಷಿಂಗ್ ಆಗಿದೆಯೆಂದು ನೋಡಿ.
೨. ಕಲ್ಲಂಗಡಿ ಗಂಜಿ: ಗಂಜಿ ಭಾರತದ ಅತ್ಯಂತ ಪುರಾತನ ಪೇಯ. ರಾಗಿ, ಬಾರ್ಲಿಯಿಂದ ದೇಹ ತಂಪು ಮಾಡಬಲ್ಲ ಗಂಜಿಗಳು ಬೇಸಿಗೆಯಲ್ಲಿ ಮನೆಗಳಲ್ಲಿ ತಯಾರಾಗುತ್ತಿದ್ದವು. ಆದರೆ, ಕಲ್ಲಂಗಡಿ ಗಂಜಿ ಮಾಡಿ ನೋಡಿದಿದ್ದೀರಾ? ಮಾಡಿಲ್ಲ ಅಂದರೆ ಈ ಬೇಸಿಗೆಯಲ್ಲಿ ಮರೆಯದೆ ಪ್ರಯತ್ನಿಸಿ. ವಿಶೇಷವೆಂದರೆ, ಕಲ್ಲಂಗಡಿ ಹಣ್ಣನ್ನು ತಿಂದು ಸಿಪ್ಪೆಯನ್ನು ಕಸದ ಡಬ್ಬಿಗೆ ಎಸೆದಿರುತ್ತೀರಲ್ಲ, ಅದೇ ಸಿಪ್ಪೆಯಿಂದ ಈ ಗಂಜಿ ಮಾಡಬಹುದು. ಅರ್ಧ ಕಲ್ಲಂಗಡಿಯ ಬಿಳಿ ಭಾಗದ ಕೆಲವು ತುಂಡುಗಳನ್ನು ತೆಗೆದುಕೊಳ್ಳಿ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸುಮಾರು ಒಂದು ಲೀಟರ್ ನೀರು ಹಾಕಿ. ಸೆರಾಮಿಕ್ ಜಾರ್ ಅಥವ ಉಪ್ಪಿನಕಾಯಿಗೆ ಬಳಸುವಂಥ ಭರಣಿಯಲ್ಲಿ ಇವನ್ನು ಹಾಕಿ ಇದಕ್ಕೆ ಮೂರು ಚಮಚ ಸಾಸಿವೆ ಪುಡಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಚಿಟಿಕೆ ಅಚ್ಚಕಾರದ ಪುಡಿಯೂ ಹಾಕಿ. ಇದನ್ನು ಮುಚ್ಚಿ ನಾಲ್ಕು ದಿನಗಳ ಕಾಲ ಬಿಸಿಲಿನಲ್ಲಿಡಿ. ನಂತರ ಕೊಂಚ ಹುಳಿ ರುಚಿಯ ಅದ್ಭುತವಾದ ಕಲ್ಲಂಗಡಿ ಗಂಜಿ ರೆಡಿ. ಇದನ್ನು ಕುಡಿಯುವ ಮೊದಲು ಫ್ರಿಡ್ಜ್‌ನಲ್ಲಿಟ್ಟು ತಣ್ಣಗಾಗಿಸಿ ಕುಡಿದರೆ ಆಹಾ ರುಚಿ!
೩. ಕಲ್ಲಂಗಡಿ ಲಿಚಿ ಡ್ರಿಂಕ್: ಲಿಚಿಯ ಸ್ವಾದ ಕಲ್ಲಂಗಡಿಯ ಜೊತೆ ಸೇರಿದರೆ ಹೇಗಿದ್ದೀತು ಯೋಚಿಸಿ. ಬರಿಯ ಯೋಚಿಸಬೇಡಿ, ಈ ಬಾರಿ ಟ್ರೈ ಮಾಡಿ. ಬೇಸಗೆಯಲ್ಲಿ ಸಿಗುವ ಲಿಚಿ ಹಾಗೂ ಕಲ್ಲಂಗಡಿ ಹಣ್ಣನ್ನು ಮಿಕ್ಕಿಸಗೆ ಹಾಕಿ ತಿರುಗಿಸಿ. ಅದರ ಜೊತೆಗೆ ಸಣ್ಣ ತುಂಡು ಶುಂಠಿ ಹಾಗೂ ಕೆಲವು ಪುದಿನ ಎಲೆಗಳನ್ನೂ ಹಾಕಬಹುದು. ರುಚಿಗೆ ಬೇಕಿದ್ದರೆ ಸಕ್ಕರೆ ಸೇರಿಸಬಹುದು. ಇವೆಲ್ಲವೂ ಸೇರಿದ ಕಲ್ಲಂಗಡಿ ಲಿಚಿ ಡ್ರಿಂಕ್ ಬಹಳ ರುಚಿ.
೪. ಕಲ್ಲಂಗಡಿ ತುಳಸಿ ಕೂಲರ್: ಕಲ್ಲಂಗಡಿ ಹಣ್ಣಿನ ಜ್ಯೂಸ್ ಮಾಡಲು ತುಂಡುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕುತ್ತೀರಲ್ಲಾ, ಆಗ ಕೆಲವು ಎಲೆ ತುಳಸಿಯನ್ನೂ ಹಾಕಿ ತಿರುಗಿಸಿ. ಇದಕ್ಕೆ ನಿಂಬೆಹಣ್ಣನ್ನೂ ಹಿಂಡಿ. ಇದಕ್ಕೆ ಚಿಟಿಕೆ ಕರಿಮೆಣಸಿನ ಪುಡಿ, ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ತಾಜಾ ಅನುಭೂತಿ. ಬೇಸಿಗೆಯಲ್ಲಿ ಕಲ್ಲಂಗಡಿ ತಿಂದರೆ ಅಥವಾ ಕುಡಿದರೆ ನೆಗಡಿಯಾಗುತ್ತದೆ ಎನ್ನುವವರಿಗೆ ಈ ಜ್ಯೂಸ್ ಉತ್ತಮ.
ಇದನ್ನೂ ಓದಿ: Watermelon Protein: ರಸಭರಿತ ಕಲ್ಲಂಗಡಿ ತಿನ್ನುವುದರ ಲಾಭಗಳೇನು?