Site icon Vistara News

Friendship Day : ಫ್ರೆಂಡ್‌ಶಿಪ್‌ ಡೇ ಬಂದೇಬಿಡ್ತು! ಎಂದು? ಏನಿದರ ವಿಶೇಷ?

friendship day

ಪ್ರತಿ ವರ್ಷ ಆಗಸ್ಟ್‌ ಮೊದಲನೇ ಭಾನುವಾರದಂದು ಸ್ನೇಹಿತರ ದಿನ (Friendship Day) ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್‌ ಮೊದಲನೇ ಭಾನುವಾರವಾದ ಆಗಸ್ಟ್‌ 6ರಂದು ಫ್ರೆಂಡ್‌ಶಿಪ್‌ ಡೇ ಆಚರಿಸಲಾಗುತ್ತಿದೆ. ಸ್ನೇಹದ ಪ್ರಾಮುಖ್ಯತೆಯನ್ನು ಜಗತ್ತಿಗೆ ತಿಳಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಈ ಅಂತಾರಾಷ್ಟ್ರೀಯ ಫ್ರೆಂಡ್‌ಶಿಪ್‌ ಆಚರಣೆಯು ದೇಶದಿಂದ ದೇಶಕ್ಕೆ ಬದಲಾಗುತ್ತದೆ. ಭಾರತದ ಜತೆಯಲ್ಲಿ ಮಲೇಷಿಯಾ, ಅರಬ್‌ ಸಂಯುಕ್ತ ಸಂಸ್ಥಾನ, ಅಮೆರಿಕ ಮತ್ತು ಬಾಂಗ್ಲಾದೇಶದಲ್ಲಿ ಆಗಸ್ಟ್‌ ಮೊದಲನೇ ಭಾನುವಾರದಂದು ಆಚರಿಸಲಾಗುತ್ತದೆ. ಆದರೆ ಇನ್ನೂ ಕೆಲವು ದೇಶಗಳಲ್ಲಿ ಈ ದಿನವನ್ನು ಜುಲೈ 30ರಂದು ಆಚರಣೆ ಮಾಡಲಾಗುತ್ತದೆ. ಸ್ನೇಹವೆನ್ನುವುದು ಮಾನವನ ಎಲ್ಲ ರೀತಿಯ ಸಂಬಂಧಗಳನ್ನು ಮೀರಿದ್ದಾಗಿದೆ. ಜಾತಿ, ಧರ್ಮ, ಬಣ್ಣ, ವಯಸ್ಸು ಮತ್ತು ಜನಾಂಗೀಯತೆಗಳೆಲ್ಲವನ್ನೂ ಮೀರಿ ಬೇಷರತ್ತಾಗಿ ಹುಟ್ಟಿಕೊಳ್ಳುವುದೇ ಸ್ನೇಹವಾಗಿದೆ. ನಿಷ್ಕಲ್ಮಶವಾದ ಸ್ನೇಹವನ್ನು ಆಚರಿಸಲೆಂದೇ ಜಗತ್ತಿನ ಹಲವು ದೇಶಗಳು ವರ್ಷದ ಒಂದು ದಿನವನ್ನು ಮೀಸಲಿಟ್ಟಿವೆ.

ಇದನ್ನೂ ಓದಿ: Sreeleela Astrology : ಶ್ರೀಲೀಲಾ ಭವಿಷ್ಯ ನುಡಿದ ವೇಣುಸ್ವಾಮಿ; ಸೂಪರ್‌ ಸ್ಟಾರ್‌ ನಟಿ ಜಾತಕಕ್ಕೆ ಹೋಲಿಕೆ ಇದ್ಯಂತೆ!

ಇತಿಹಾಸ

ಈ ಸ್ನೇಹಿತರ ದಿನಾಚರಣೆ ಮೂಲ ಯಾವುದು ಎನ್ನುವ ಪ್ರಶ್ನೆ ನಿಮ್ಮಲ್ಲಿರಬಹುದು. ಹಾಲ್ಮಾರ್ಕ್‌ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ್‌ ಹಾಲ್‌ ಅವರು 1930ರ ಆಗಸ್ಟ್‌ 2ರಂದು ತಮ್ಮ ಸ್ನೇಹಿತರೆಲ್ಲರನ್ನು ಒಗ್ಗೂಡಿಸಿಕೊಂಡು ಸಂಭ್ರಮಾಚರಣೆ ಮಾಡಿದರು. ಆದರೆ ಅದರ ನಂತರದ ವರ್ಷಗಳಲ್ಲಿ ಅದನ್ನು ಮರೆಯಲಾಯಿತು. 1935ರಲ್ಲಿ ಯುಎಸ್‌ ಕಾಂಗ್ರೆಸ್‌ ಆಗಸ್ಟ್‌ ತಿಂಗಳ ಮೊದಲ ಭಾನುವಾರವನ್ನು ಸ್ನೇಹಿತರ ದಿನ ಎಂದು ಆಚರಿಸಲಾರಂಭಿಸಿತು. 1958ರಲ್ಲಿ ಜುಲೈ 30ನ್ನು ಸ್ನೇಹಿತರ ದಿನವನ್ನಾಗಿ ಆಚರಿಸಲು ಕ್ರುಸೇಡ್‌ ಪ್ರಸ್ತಾವನೆಯನ್ನು ಮುಂದಿಟ್ಟಿತು. ಅದೇ ವರ್ಷ ಪರಾಗ್ವೆಯಲ್ಲಿ ಜುಲೈ 30ಅನ್ನು ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನಾಗಿ ಆಚರಿಸಲಾಯಿತು. ನಂತರ 2011ರಲ್ಲಿ ವಿಶ್ವಸಂಸ್ಥೆಯು ಜುಲೈ 30ನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹಿತರ ದಿನ ಎಂದು ಘೋಷಿಸಿತು. ಆದರೂ ಭಾರತದಲ್ಲಿ ಸ್ನೇಹಿತರ ದಿನವನ್ನು ಆಗಸ್ಟ್‌ ತಿಂಗಳ ಮೊದಲನೇ ಭಾನುವಾರದಂದೇ ಆಚರಿಸಿಕೊಂಡು ಬರಲಾಗುತ್ತಿದೆ.

ಹಳದಿ ಹೂವು

ಕೆಂಪನ್ನು ಪ್ರೀತಿಯ ಪ್ರತೀಕ ಎನ್ನಲಾಗುತ್ತದೆ. ಕೆಂಪು ಗುಲಾಬಿಯನ್ನು ಪ್ರೀತಿಯ ಸಂಕೇತವಾಗಿ ಕೊಡಲಾಗುತ್ತದೆ. ಅದೇ ರೀತಿಯಲ್ಲಿ ಹಳದಿ ಗುಲಾಬಿಯನ್ನು ಸ್ನೇಹದ ಸಂಕೇತ ಎಂದು ಗುರುತಿಸಲಾಗುತ್ತದೆ. ಹಾಗಾಗಿ ಕೆಲವು ದೇಶಗಳಲ್ಲಿ ಸ್ನೇಹಿತರ ದಿನದಂದು ಸ್ನೇಹಿತರು ಪರಸ್ಪರ ಹಳದಿ ಬಣ್ಣದ ಗುಲಾಬಿಯನ್ನು ಕೊಟ್ಟುಕೊಳ್ಳುತ್ತಾರೆ.

ಆಚರಣೆ ಹೇಗೆ?

ಈ ದಿನವನ್ನು ಬೇರೆ ಬೇರೆ ದೇಶದ ಜನರು ಬೇರೆ ಬೇರೆ ರೀತಿಗಳಲ್ಲಿ ಸ್ನೇಹಿತರ ದಿನವನ್ನು ಆಚರಿಸುತ್ತಾರೆ. ತಮ್ಮ ಪ್ರೀತಿಯ ಸ್ನೇಹಿತರಿಗೆ ಫ್ರೆಂಡ್‌ಶಿಪ್‌ ಡೇ ಗ್ರೀಟಿಂಗ್‌ ಕಾರ್ಡ್‌, ಉಡುಗೊರೆಗಳನ್ನು ಕೊಡುವ ಮೂಲಕ, ಕೇಕ್‌ ಕತ್ತರಿಸಿ ಸಂಭ್ರಮಿಸಿ ಮೂಲಕ ಸ್ನೇಹಿತರ ದಿನವನ್ನು ವಿಶೇಷವಾಗಿಸಲಾಗುತ್ತದೆ. ಹಾಗೆಯೇ ಇನ್ನು ವಿಶೇಷವಾಗಿ ಈ ದಿನಕ್ಕೆಂದೇ ಫ್ರೆಂಡ್‌ಶಿಪ್‌ ಬ್ಯಾಂಡ್‌ಗಳನ್ನೂ ರಚಿಸಲಾಗುತ್ತದೆ. ಭಾರತದಲ್ಲಿ ರಕ್ಷಾ ಬಂಧನದಂದು ಸಹೋದರರಿಗೆ ರಕ್ಷೆ ಕಟ್ಟಿ ಸಂಭ್ರಮಾಚರಣೆ ಮಾಡುವಂತೆ, ಪ್ರಪಂಚದ ಹಲವು ದೇಶಗಳಲ್ಲಿ ಸ್ನೇಹಿತರ ದಿನದಂದು ಸ್ನೇಹಿತರಿಗೆ ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಆ ಮೂಲಕ ತಮ್ಮ ಸ್ನೇಹ ಎಂದೆಂದಿಗೂ ಗಟ್ಟಿಯಾಗಿರಲಿ ಎಂದು ಸಂದೇಶ ರವಾನಿಸಿಕೊಳ್ಳಲಾಗುತ್ತದೆ.

ಏನೇನು ಗಿಫ್ಟ್‌ ಕೊಡುತ್ತಾರೆ?

ಮುಖ್ಯವಾಗಿ ಸ್ನೇಹಿತರ ದಿನ ಫ್ರೆಂಡ್‌ಶಿಪ್‌ ಡೇ ಕಾರ್ಡ್‌ ವಿನಿಮಯ ಮಾಡಿಕೊಳ್ಳುತ್ತಾರೆ. ಫ್ರೆಂಡ್‌ಶಿಪ್‌ ಡೇಗೆಂದೇ ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಗ್ರೀಟಿಂಗ್‌ ಕಾರ್ಡ್‌ಗಳು ಸಿಗುತ್ತವೆ. ಇದರ ಜತೆಗೆ ಈಗ ಡಿಜಿಟಲ್‌ ಇಮೇಜ್‌ ಮೂಲಕವೂ ಸ್ನೇಹಿತರ ದಿನದ ಶುಭಾಶಯ ಹಂಚಿಕೊಳ್ಳಲಾಗುತ್ತದೆ. ಹೂವು ಅಥವಾ ಬೊಕ್ಕೆ, ಸುಗಂಧ ದ್ರವ್ಯ, ಚಾಕೊಲೇಟ್‌, ಎಲೆಕ್ಟ್ರಾನಿಕ್‌ ಸಾಧನ ಇತ್ಯಾದಿ ವಸ್ತುಗಳೂ ಸ್ನೇಹಿತರ ನಡುವೆ ವಿನಿಮಯ ಆಗುತ್ತವೆ.

ಸ್ನೇಹಿತರ ದಿನಕ್ಕಾಗಿಯೇ ವಿಶೇಷ ಔತಣಕೂಟ

ಸ್ನೇಹಿತರ ದಿನವು ಇತ್ತೀಚಿಗೆ ವಾಣಿಜ್ಯಾತ್ಮಕವಾಗಿಯೂ ಲಾಭದಾಯವಾಗುತ್ತಿದೆ. ಈ ದಿನದ ಹಿನ್ನೆಲೆಯಲ್ಲಿ ಪ್ರಮುಖ ರೆಸಾರ್ಟ್‌, ರೆಸ್ಟೊರೆಂಟ್‌ಗಳಲ್ಲಿ ವಿಶೇಷ ಆಹಾರ ಮೇಳವನ್ನು ಆಯೋಜಿಸಲಾಗುತ್ತಿದೆ. ಸ್ನೇಹಿತರಿಗಾಗಿಯೇ ವಿಶೇಷ ತಿಂಡಿ – ತಿನಿಸು, ಪಾನೀಯಗಳ ಆಕರ್ಷಣೆ ಮಾಡಲಾಗುತ್ತದೆ. ಹಾಗಾಗಿ ಫ್ರೆಂಡ್‌ಶಿಪ್‌ ಡೇ ದಿನ ಕೋಟ್ಯಂತರ ರೂ. ವಹಿವಾಟು ನಡೆಯುತ್ತದೆ.

Exit mobile version