Site icon Vistara News

ಬಾಯಿಗೆ ಖಾರವಾದ್ರೂ ಹಲವು ಕಾಯಿಲೆ ಗಳಿಂದ ಪಾರು ಮಾಡುವ ಮಸಾಲೆ ಕಿಂಗ್‌ ಕರಿಮೆಣಸು

Black Pepper

ವಿಶ್ವದ ಅನೇಕ ವಿಧದ ಪಾಕಶಾಸ್ತ್ರದಲ್ಲಿ ಹೆಚ್ಚಾಗಿ ಬಳಸಲ್ಪಡುವ ಮಸಾಲೆಯೆಂದರೆ ಕರಿಮೆಣಸು. ಮಸಾಲೆಗಳ ದುನಿಯಾದಲ್ಲಿ ತನ್ನದೆ ಆದ ವರ್ಚಸ್ಸನ್ನು ಕಾಯ್ದುಕೊಂಡು ಬಂದಿರುವ ಕರಿಮೆಣಸಿಗೆ ಸಾಟಿ ಯಾವುದಾದರೂ ಇದ್ದರೆ ಅದು ಕರಿಮೆಣಸೇ ಸರಿ. ಸ್ಪೈಸಿ ಅಡುಗೆಗಳು ಕರಿಮೆಣಸು ಇಲ್ಲದೆ ಅಪೂರ್ಣ. ಇದು ಬರೀ ಅಡುಗೆಗೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಹಳ ಉಪಕಾರಿ. ತೂಕ ಇಳಿಕೆ, ಜೀರ್ಣಕ್ರಿಯೆ ಸುಧಾರಣೆ, ರಕ್ತದೊತ್ತಡ ಸುಧಾರಣೆ, ನೆಗಡಿ ಮತ್ತು ಶೀತ ನಿವಾರಣೆ, ಚಯಾಪಚಯ ಹಾಗೂ ಚರ್ಮ ಸಂಬಂಧಿತ ಸಮಸ್ಯೆಗಳ ನಿವಾರಣೆಗೆ ಉತ್ತಮವಾದದ್ದು. ಅಡುಗೆಯಲ್ಲಾಗಲೀ, ಔಷಧದಲ್ಲಾಗಲಿ ಕರಿಮೆಣಸಿನ ಬಳಕೆ ಇಂದು-ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಅಂದರೆ ಆಯುರ್ವೇದ ಪದ್ಧತಿಗಳಲ್ಲೂ ಇದನ್ನು ಬಳಸಿ ಅನೇಕ ರೋಗಗಳನ್ನು ಗುಣಪಡಿಸುತ್ತಿದ್ದರು. ಆಗಿನಿಂದ ಇವತ್ತಿನವರೆಗೆ ಕರಿಮೆಣಸಿನ ಬಳಕೆಯಾಗಲಿ, ವರ್ಚಸ್ಸಾಗಲೀ ಕಡಿಮೆಯಾಗಿಲ್ಲ.

ಉತ್ಕರ್ಷಣ ನಿರೋಧಕ
ಕರಿಮೆಣಸು ಒಂದು ಅದ್ಭುತ ಉತ್ಕರ್ಷಣ ನಿರೋಧಕ. ಅದೆಷ್ಟೋ ಆರೋಗ್ಯ ಸಮಸ್ಯೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತೊಡೆದು ಹಾಕಲು ಇದು ಸಹಕಾರಿ. ಮಾಲಿನ್ಯ, ಸಿಗರೇಟ್‌ ಹೊಗೆ ಮತ್ತಿತರ ಕಾರಣಗಳಿಂದ ಶ್ವಾಸಕೋಶದ ಸಮಸ್ಯೆಗಳು ಬರುತ್ತವೆ. ಅಂಥ ಶ್ವಾಸಕೋಶದ ತೊಂದರೆಗಳ ನಿವಾರಣೆ ಮಾಡುತ್ತದೆ. ಅಷ್ಟೇ ಅಲ್ಲ, ಚರ್ಮದ ಉರಿ, ಅಕಾಲಿಕ ವಯಸ್ಸಾಗುವುದು, ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್‌ ಅಪಾಯವನ್ನು ಕಡಿಮೆ ಮಾಡುತ್ತದೆ. ಕರಿಮೆಣಸಿನ ಎಲೆ ಮತ್ತು ಬೇರುಗಳೂ ಆರೋಗ್ಯಕ್ಕೆ ಒಳ್ಳೆಯದು.

ಉರಿಯೂತಕ್ಕೆ ಮದ್ದು
ದೀರ್ಘಕಾಲದ ಊರಿಯೂತ ಸಮಸ್ಯೆಗಳಿಂದ ಪಾರಾಗಲು ಕರಿಮೆಣಸು ಸಹಕಾರಿ. ಕರಿಮೆಣಸಿನಲ್ಲಿರುವ ಅಲ್ಕಲೈಡ್‌ ಅಂಶವಾದ ಪೈಪರಿನ್‌ ಉರಿಯೂತ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಸಂಧಿವಾತ, ಮೊಣಕಾಲು ನೋವಿನಿಂದ ಬಳಲುತ್ತಿರುವವರಿಗೆ ಕರಿಮೆಣಸನ್ನು ಅರಿಶಿಣ, ಶುಂಠಿಯೊಂದಿಗೆ ಮಿಶ್ರ ಮಾಡಿ ಕೊಡುವುದರಿಂದ ಬಲುಬೇಗನೇ ಗುಣಮುಖರಾಗುತ್ತಾರೆ. ಈ ಸಮಸ್ಯೆಗಳಿಗೆ ವೈದ್ಯರು ಕೊಡುವ ಔಷಧಿಗಳಷ್ಟೇ ಈ ಮಿಶ್ರಣವೂ ಪರಿಣಾಮಕಾರಿ ಎಂದು ಕಲ್ಬರ್ಟ್ಸನ್ ಎಂಬ ಅಧ್ಯಯನಕಾರರೊಬ್ಬರು ತಿಳಿಸಿದ್ದಾರೆ. 

ಇದನ್ನೂ ಓದಿ: World Milk Day: ನಿಮಗೆ ಗೊತ್ತಿರಲಿ ಹಾಲಿನ 5 ಸೋಜಿಗದ ಸಂಗತಿ

ಪೌಷ್ಟಿಕಾಂಶ ಹೀರಿಕೊಳ್ಳುತ್ತದೆ
ಕರಿಮೆಣಸಿನಲ್ಲಿರುವ ಪೈಪರಿನ್‌ ಅಂಶ ನಮ್ಮ ದೇಹ ಕಬ್ಬಿಣ ಮತ್ತು ಬೀಟಾ ಕ್ಯಾರೆಟನ್‌ ಅಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಅದರಲ್ಲೂ ಕರಿಮೆಣಸಿನ ಪೌಡರ್‌ನ್ನು ಅರಿಶಿಣದೊಂದಿಗೆ ಬೆರೆಸಿದಾಗ ಅದರ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಆಗ ಅದು ಉತ್ಕರ್ಷಣ ಮತ್ತು ಉರಿಯೂತ ನಿರೋಧಕವಾಗಿ ಕೆಲಸ ಮಾಡುತ್ತದೆ.

ಕರುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ಹಸಿಯಾದ ಕರಿಮೆಣಸು ಸೇವಿಸುವುದರಿಂದ ಹೊಟ್ಟೆಯಲ್ಲಿ ಹೈಡ್ರೋಕ್ಲೊನಿಕ್‌ ಆಮ್ಲದ ಬಿಡುಗಡೆ ಪ್ರಮಾಣ ಹೆಚ್ಚುತ್ತದೆ ಹಾಗೂ ಕರುಳಿನ ಪಚನಕ್ರೀಯೆ ಸುಧಾರಣೆ ಆಗುತ್ತದೆ. ಹೈಡ್ರೋಕ್ಲೊನಿಕ್‌ ಆಮ್ಲ ನಮ್ಮ ಕರುಳಿನ ಶುದ್ಧೀಕರಣ ಮಾಡುತ್ತದೆ. ಪಿತ್ತ ಸಂಬಂಧಿತ ಕಾಯಿಲೆಗಳೂ ನಿವಾರಣೆಯಾಗುತ್ತದೆ. ಅಷ್ಟೆ ಅಲ್ಲ, ದೇಹದೊಳಗೆ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಹೆಚ್ಚಿಸಿ, ಜಂತುಹುಳು ಸಮಸ್ಯೆ ನಿವಾರಣೆ ಮಾಡುತ್ತದೆ

ಚರ್ಮದ ಸಮಸ್ಯೆಯಿಂದ ಮುಕ್ತಿ
ಕರಿಮೆಣಸು ಪಿಗ್ಮೆಂಟೆಶನ್‌ ಅಥವಾ ಬಿಳಿತೊನ್ನು ಕಡಿಮೆ ಮಾಡುತ್ತದೆ. ಮುಖ ಅಥವಾ ದೇಹದ ಇತರೆ ಭಾಗಗಳಲ್ಲಿನ ಬಿಳಿ ಮಚ್ಚೆ ನಿವಾರಣೆ ಮಾಡಿಕೊಳ್ಳಲು ಕೆಲವರು ಎಷ್ಟೆಷ್ಟೋ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಕರಿಮೆಣಸಿನ ಅಂಶವಿರುವ ಉತ್ಪನ್ನಗಳನ್ನು ತೆಗೆದುಕೊಳ್ಳಿ. ಇವುಗಳ ಬಳಕೆಯಿಂದ ಚರ್ಮ ಸುಕ್ಕುಗಟ್ಟುವಿಕೆ, ಪಿಗ್ಮಂಟೇಶನ್‌ಗಳನ್ನು ತಡೆಯಬಹುದು. ಅಷ್ಟೇ ಅಲ್ಲ, ಮನೆಯಲ್ಲೂ ಕೂಡ ನೀವು ಕರಿಮೆಣಸಿನ ಪೌಡರ್‌ನಿಂದ ಕ್ರೀಮ್‌ತಯಾರಿಸಿಕೊಳ್ಳಬಹುದು. ಕರಿಮೆಣಸಿನ ಪೌಡರ್‌ಗೆ ಜೇನು ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಿ ಹೀಗೆ ಬಿಳಿ ಮಚ್ಚೆ, ಪಿಗ್ಮಂಟೇಶನ್‌ಇರುವ ಜಾಗದಲ್ಲಿ ಹಚ್ಚಿದರೆ ಅದು ಕಡಿಮೆಯಾಗುತ್ತದೆ. ತ್ವಚೆಯೂ ಸುಧಾರಣೆಯಾಗುತ್ತದೆ ಮತ್ತು ಮುಖ ಭಾಗದ ರಕ್ತಸಂಚಲನ ಸರಿಯಾಗುತ್ತದೆ. 

ಇದನ್ನೂ ಓದಿ: ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

Exit mobile version