Site icon Vistara News

Heart Surgery | ಮ್ಯಾರಾಥಾನ್‌ ಶಸ್ತ್ರಚಿಕಿತ್ಸೆ ಮೂಲಕ 11 ಮಕ್ಕಳ ಹೃದಯದೋಷ ನಿವಾರಣೆ

ಮುಂಬಯಿ : ನಾಲ್ಕರಿಂದ ಹದಿಮೂರು ವರ್ಷಗಳ 11 ಮಕ್ಕಳ ಹೃದಯಗಳಲ್ಲೂ () ಜನನ ಕಾಲದಲ್ಲೇ ದೋಷವಿತ್ತು. ಇದರಿಂದಾಗಿ ತೀವ್ರ ಉಸಿರಾಟ, ಅತಿಯಾಗಿ ಬೆವರುವುದು, ಹಾಲು ಕುಡಿಯುವಲ್ಲಿ ತೊಂದರೆ, ಹೃದಯದಲ್ಲಿ ಹೆಚ್ಚುವರಿ ಶಬ್ದ, ಪದೇ ಪದೆ ಕಾಡುವ ಸೋಂಕುಗಳಂಥ ಗಂಭೀರ ಸಮಸ್ಯೆ ಎದುರಿಸುತ್ತಿದ್ದರು. ಇದಕ್ಕೆ ಚಿಕಿತ್ಸೆ ನೀಡದೇ ಹೋಗಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ತೊಂದರೆಗಳು ಎದುರಾಗುತ್ತಿತ್ತು. ಇವರೆಲ್ಲರಿಗೂ ಮುಂಬಯಿಯ ವೈದ್ಯರ ತಂಡವೊಂದು ನಿರಂತರ 11 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ (Heart Surgery) ಮಾಡಿ ಸಮಸ್ಯೆಗಳನ್ನು ನಿವಾರಿಸಿದ್ದಾರೆ.

ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದ ೧೧ ಮಕ್ಕಳ ಪೈಕಿ ಐವರಿಗೆ ಹೃದಯದ ಕೆಳಭಾಗದಲ್ಲಿ ರಂಧ್ರವಿತ್ತು. ಮೂವರು ಚಿಣ್ಣರಿಗೆ ಶ್ವಾಸಕೋಶದಲ್ಲಿ ರಕ್ತಪರಿಚಲನೆಯ ದೋಷವಿತ್ತು. ಇಬ್ಬರ ಹೃದಯಗಳ ಮೇಲಿನ ಕವಾಟದ ಗೋಡೆಗಳಲ್ಲಿ ರಂಧ್ರಗಳಿದ್ದವು. ಮತ್ತೊಂದು ಮಗುವಿನ ಹೃದಯದ ವಾಲ್ವ್‌ ಒಂದು ಮುಚ್ಚಿಕೊಂಡಿತ್ತು. ಈ ಎಲ್ಲಾ ಮಕ್ಕಳೂ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿದ್ದಾರೆ. ಮೂರು ದಿನಗಳ ಬಳಿಕ, ಮನೆಗೂ ಮರಳಿದ್ದಾರೆ. ಇನ್ನೀಗ ಆ ಮಕ್ಕಳಿಗೆ ವೈದ್ಯಕೀಯ ಸಲಹೆ ಬಿಟ್ಟರೆ ಇನ್ಯಾವ ಚಿಕಿತ್ಸೆಯ ಅಗತ್ಯ ಇಲ್ಲ.

“ವಾಶಿಂನ ಸಾರ್ವಜನಿಕ ಆಸ್ಪತ್ರೆಯೊಂದಕ್ಕೆ ನಮ್ಮ ತಂಡ ಸೆಪ್ಟೆಂಬರ್‌ನಲ್ಲಿ ಭೇಟಿ ನೀಡಿದಾಗ, ಅಲ್ಲಿನ ೧೨೦ ಮಕ್ಕಳಿಗೆ ಹುಟ್ಟಿನಿಂದಲೇ ಹೃದಯದ ತೊಂದರೆಗಳು ಇರುವ ಅನುಮಾನ ಎದುರಾಗಿತ್ತು. ಅವರಲ್ಲಿ ೩೫ ಮಕ್ಕಳಲ್ಲಿ ಸಮಸ್ಯೆ ಇರುವುದು ಖಾತರಿಯಾಗಿತ್ತು. ದೋಷವಿದ್ದ ೩೫ ಮಕ್ಕಳಲ್ಲಿ ಶೇ. ೪೦ರಷ್ಟು ಮಕ್ಕಳಿಗೆ ಆಂಜಿಯೊಗ್ರಫಿ ಮೂಲಕ ಚಿಕಿತ್ಸೆ ಸಾಧ್ಯವಿತ್ತು” ಎಂದು ಇಡೀ ವೈದ್ಯರ ತಂಡದ ನೇತೃತ್ವ ವಹಿಸಿದ್ದ ಮಕ್ಕಳ ಹೃದ್ರೋಗ ತಜ್ಞ ಡಾ. ಭೂಷಣ್‌ ಚವನ್‌ ಹೇಳಿದ್ದಾರೆ.

ಭಾರತೀಯ ಪೀಡಿಯಾಟ್ರಿಕ್ಸ್‌ ಸಂಸ್ಥೆಯ ಮಾಹಿತಿ ಪ್ರಕಾರ, ಹುಟ್ಟುವ ಸಾವಿರ ಶಿಶುಗಳಲ್ಲಿ ೯ಕ್ಕೆ ಇಂಥ ಜನ್ಮದೋಷಗಳು ಕಂಡುಬರುತ್ತಿವೆ. ಪ್ರತಿವರ್ಷ ೨,೦೦,೦೦೦ ಮಕ್ಕಳು ಹೃದಯದಲ್ಲಿ ದೋಷಗಳನ್ನು ಹೊತ್ತುಕೊಂಡೇ ಹುಟ್ಟುತ್ತಾರೆ. ಅವುಗಳಲ್ಲಿ ಶೇ. ೨೦ರಷ್ಟು ಮಕ್ಕಳಿಗೆ ತಮ್ಮ ವರ್ಷದಲ್ಲೇ ವೈದ್ಯಕೀಯ ನೆರವು ಬೇಕಾಗುತ್ತದೆ. ಅದರಲ್ಲೂ ಜನ ಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಜನಿಸುವ ಮಕ್ಕಳಲ್ಲಿ ಇಂಥ ಸಮಸ್ಯೆಗಳು ಬೆಳಕಿಗೆ ಬರುವುದೇ ಅಪರೂಪ.

ಒಪ್ಪಿಸುವುದೇ ಕಷ್ಟ

ಶಸ್ತ್ರ ಚಿಕಿತ್ಸೆಗೆ ಮಕ್ಕಳ ಹೆತ್ತವರನ್ನು ಒಪ್ಪಿಸುವುದೇ ಕಷ್ಟದ ಕೆಲಸ. ಕೇವಲ ಔಷಧ-ಮಾತ್ರೆಗಳಿಂದ ಗುಣವಾಗದ ಸಮಸ್ಯೆ ಅವರ ಮಕ್ಕಳಿಗಿದೆ. ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬ ಮಾಹಿತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇನ್ನು ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸುವುದೂ ಸವಾಲು. ಅರಿವಳಿಕೆ ಮದ್ದಿನ ಪ್ರಮಾಣ ಸ್ವಲ್ಪ ಹೆಚ್ಚು-ಕಡಿಮೆಯಾದರೂ ಜೀವಕ್ಕೆ ಅಪಾಯ. ಹೃದಯದ ದೋಷಗಳನ್ನು ಸರಿಪಡಿಸುವಲ್ಲಿ ಕೃತಕ ಉಪಕರಣಗಳನ್ನು ಬಳಸಬೇಕಾಗುತ್ತದೆ. ಈ ಉಪಕರಣಗಳ ಆಯ್ಕೆಯೂ ಸಮಂಜಸವಾಗಿರಬೇಕು. ಮಕ್ಕಳ ಪುಟ್ಟ ಶರೀರದಲ್ಲಿ ಯಾವುದನ್ನು, ಎಷ್ಟು ಪ್ರಯೋಗಿಸಬಹುದು ಎಂಬ ಅಂದಾಜು ಕಷ್ಟ ಎಂದು,” ಶಸ್ತ್ರ ಚಿಕಿತ್ಸೆ ವೇಳೆ ಎದುರಾದ ಸವಾಲುಗಳ ಬಗ್ಗೆ ಡಾ. ಚವನ್‌ ವಿವರಿಸಿದ್ದಾರೆ.

ಇದನ್ನೂ ಓದಿ | Robotic Technology | ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ಮ್ಯಾಕೋ ರೋಬೊಟಿಕ್‌ ತಂತ್ರಜ್ಞಾನ

Exit mobile version