ಹೊಟ್ಟೆಯ ಭಾಗದಲ್ಲಿರುವ ಕೊಬ್ಬನ್ನು ಕರಗಿಸಲು ನಾವು ಎಷ್ಟೆಲ್ಲಾ ಹರಸಾಹಸ ಮಾಡುತ್ತೇವಾದರೂ ಬೊಜ್ಜು ಬೆಂಬಿಡದ ಭೂತದ ಹಾಗೆ ಸದಾ ನಮ್ಮ ಜೊತೆಗೆ ಇರುತ್ತದೆ. ಹೇಗಾದರೂ ಮಾಡಿ ಬೊಜ್ಜು ಕರಗಿಸಲೇ ಬೇಕು ಅಂತ ಎಷ್ಟೆಲ್ಲಾ ಮಾತ್ರೆ ನುಂಗಿ, ಫಿಟ್‌ನೆಸ್ ಬೆಲ್ಟ್ ಧರಿಸಿ, ಜಿಮ್‌ಗೆ ಹೋಗಿ, ವ್ಯಾಯಾಮ ಮಾಡಿ, ಡಯಟ್ ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಮಾತ್ರ ಕರಗುವುದಿಲ್ಲ. ಕೆಲವರಿಗೆ ಆನುವಂಶಿಕವಾಗಿ ಬೊಜ್ಜು ಇದ್ದರೆ ಇನ್ನು ಕೆಲವರಿಗೆ ಆಹಾರ ಶೈಲಿ, ಜೀವನ ಶೈಲಿಯಿಂದ ಕೊಬ್ಬು ಬಂದಿರುತ್ತದೆ. ಸಭೆ ಸಮಾರಂಭಗಳಿಗೆ ಹೋದಾಗಲಂತೂ ಬೇಡವೇ ಬೇಡ, ಸಂಬಂಧಿಕರು, ಆತ್ಮೀಯರು ಮಾಡುವ ಲೇವಡಿ ನಮ್ಮ ಕಾನ್ಫಿಡೆಂಟ್ ಲೆವಲ್ ಕಡಿಮೆ ಮಾಡುತ್ತದೆ. ನಿಯಮಿತವಾದ ಆಹಾರ ಸೇವನೆ ಹಾಗೂ ಈ ಕೆಳಗಿನ 5 ಪಾನೀಯಗಳ ಸಹಾಯದಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕೊಬ್ಬು ಕರಗಿಸಿಕೊಳ್ಳಿ.
ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಕಡಿಮೆ ಮಾಡಲು ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದಾದ, ಸುಲಭವಾಗಿ ತಯಾರಿಸಬಹುದಾದ 5 ಪಾನೀಯಗಳನ್ನು ನಾವು ಪಟ್ಟಿ ಮಾಡಿದ್ದೇವೆ. ಅವನ್ನಿಲ್ಲಿ ನೋಡೋಣ:
1.. ಜೇನುತುಪ್ಪ ಮತ್ತು ನಿಂಬೆ ರಸ
ಬೆಳಿಗ್ಗೆ ಜೇನುತುಪ್ಪ ಮತ್ತು ನಿಂಬೆ ನೀರನ್ನು ಕುಡಿಯುವುದು ತೂಕ ಇಳಿಸಿಕೊಳ್ಳಲು ಮಾಡುವ ಹಳೆಯ ತಂತ್ರ. ಇದು ಭಾರತೀಯ ಕುಟುಂಬಗಳಲ್ಲಿ ಇದ್ದ ಸಾಮಾನ್ಯ ಅಭ್ಯಾಸ. ನಮ್ಮ ಅಜ್ಜಿಯರು ಮಾಡುತ್ತಿದ್ದ ಈ ವಿಧಾನದಿಂದ ಹೊಟ್ಟೆಯ ಕೊಬ್ಬನ್ನು ಕ್ರಮೇಣವಾಗಿ ಕಡಿಮೆ ಮಾಡಬಹುದು. ನೀವು ಮಾಡಬೇಕಾಗಿರುವುದು ಇಷ್ಟೇ, ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ದಿನವೂ ಕುಡಿಯಿರಿ. ಇದರಿಂದ ದಿನಕ್ಕೆ ಫ್ರೆಶ್ ಆರಂಭವನ್ನು ಪಡೆಯುವಿರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಪಾನೀಯ ಸಹಾಯ ಮಾಡುತ್ತದೆ.
2. ಆಪಲ್ ಸೈಡರ್ ವಿನೆಗರ್
ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ, ಒಂದು ಟೀಸ್ಪೂನ್ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ. ಬೆಳಿಗ್ಗೆ ಇದನ್ನು ಕುಡಿಯಿರಿ ಮತ್ತು ಮುಂದಿನ 30 ನಿಮಿಷಗಳವರೆಗೆ ಏನನ್ನೂ ತಿನ್ನಬೇಡಿ. ಹೀಗೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಇದಲ್ಲದೆ, ಆಪಲ್ ಸೈಡರ್ ವಿನೆಗರ್ ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
3. ಜೀರಿಗೆಯ ನೀರು
ಜೀರಿಗೆ ಪ್ರತಿಯೊಬ್ಬರ ಮನೆಯಲ್ಲಿ ಇರುವ ಕಾಮನ್ ಅಡುಗೆ ಪದಾರ್ಥ. ಜೀರಿಗೆ ಇಲ್ಲದೆ ಬಹುತೇಕ ಅಡುಗೆಗಳು ಕಂಪ್ಲೀಟ್ ಆಗಲಾರವು. ಇದು ನಿಮ್ಮ ನೆಚ್ಚಿನ ಅಡುಗೆಗಳ ಪರಿಮಳವನ್ನು ಹೆಚ್ಚಿಸುವುದು ಮಾತ್ರವಲ್ಲದೆ ನಿಮ್ಮ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಸಕ್ಕರೆ ಪ್ರಮಾಣ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ನೀವು ಒಂದು ಚಮಚ ಜೀರಿಗೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಬೇಕು. ನೀರನ್ನು ಸೋಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
4. ಸೋಂಪು ನೀರು
ಬೆಳಿಗ್ಗೆ ಸೋಂಪು (ಸೋಂಪು ಬೀಜಗಳು) ನೀರನ್ನು ಕುಡಿಯುವುದರಿಂದ ತೂಕ ನಷ್ಟವನ್ನು ಉತ್ತೇಜಿಸುವುದು ಮಾತ್ರವಲ್ಲದೆ ಜೀರ್ಣಕ್ರಿಯೆ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಒಂದು ಟೀಸ್ಪೂನ್ ಸೋಂಪು ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಇದನ್ನು ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
5. ಗ್ರೀನ್ ಟೀ
ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದರೆ ಪುದೀನಾ ಎಲೆಗಳೊಂದಿಗಿನ ಬಿಸಿ ಗ್ರೀನ್ ಟೀ ಜೊತೆಗೆ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ನೀವು ಒಂದೂವರೆ ಕಪ್ ನೀರಿಗೆ ಕೆಲವು ಪುದೀನ ಹಸಿರು ಎಲೆಗಳನ್ನು ಹಾಕಿ ಕುದಿಸಬೇಕು. ನೀರು ಕುದಿಯುತ್ತಿದ್ದಂತೆ, ಗೀನ್ ಟೀ ಸೇರಿಸಿ. ಮತ್ತೆ 2-3 ನಿಮಿಷಗಳ ಕಾಲ ಕುದಿಸಿ. ಇದನ್ನು ಒಂದು ಲೋಟಕ್ಕೆ ಸೋಸಿ ಬೆಳಿಗ್ಗೆ ಸೇವಿಸಿ. ತೂಕ ಇಳಿಸಿಕೊಳ್ಳಲು ಇದು ಪರಿಣಾಮಕಾರಿ ಪಾನೀಯ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ವಿಟಮಿನ್ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ