ದೇಹದ ಆರೋಗ್ಯದ ಬಗ್ಗೆ, ಆಹಾರ ಸೇವನೆಯ (health tips) ಬಗ್ಗೆ ನಾವು ಎಷ್ಟು ಸಂಗತಿಗಳನ್ನು ಪರೀಕ್ಷಿಸದೇ ನಂಬಿರುತ್ತೇವೆ. ಅವುಗಳ ಇನ್ಯಾರಿಂದಲೋ ನಮಗೆ ದಾಟಿರುತ್ತವೆ; ಅಥವಾ ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದಿರುತ್ತವೆ. ಹಲವಾರು ಸಂಶೋಧಕರು, ವಿಜ್ಞಾನಿಗಳು ಮತ್ತು ತಜ್ಞರು ಆಧಾರರಹಿತವೆಂದು ಪದೇ ಪದೆ ಸಾಬೀತುಪಡಿಸಿದ ನಂತರವೂ ಮಿಥ್‌ಗಳು ಹಾಗೇ ಉಳಿದಿವೆ. ಅಂಥ ಕೆಲವು ಆರೋಗ್ಯದ ಮಿಥ್‌ಗಳು (health myths) ಇಲ್ಲಿವೆ.
೧. ಸಾವಯವ ಆಹಾರದಲ್ಲಿ ಕೀಟನಾಶಕ ಇರುವುದಿಲ್ಲ
ತಮ್ಮ ಉತ್ಪನ್ನಗಳಲ್ಲಿ ಯಾವುದೇ ಕೀಟನಾಶಕಗಳು ಇರುವುದಿಲ್ಲ ಎಂದು ಯಾರೂ ಇಂದು ಖಾತರಿಪಡಿಸಲು ಸಾಧ್ಯವಿಲ್ಲ. ನೇರವಾಗಿ ಕೀಟನಾಶಕ ಸುರಿಯದೇ ಇದ್ದರೂ, ಗಾಳಿ ಮತ್ತು ನೀರಿನ ಮೂಲಕವೂ ಕೀಟನಾಶಕಗಳ ಅಂಶ ಸಾವಯವ ಆಹಾರದಲ್ಲಿ ಸೇರಿಕೊಂಡಿರಬಹುದು. ಕೆಲವು ಸಾವಯವ ಕೀಟನಾಶಕಗಳು, ರಾಸಾಯನಿಕಗಳಿಗಿಂತಲೂ ಅಪಾಯಕಾರಿಯಾಗಿರಬಹುದು.
೨. ಆಹಾರ ಸೇವಿಸಿ ಕೂಡಲೇ ಈಜಬಾರದು
ಊಟ ಮಾಡಿದ ನಂತರದ ಒಂದು ಗಂಟೆಯೊಳಗೆ ಈಜಿದರೆ ಹೊಟ್ಟೆಯಲ್ಲಿ ಕ್ರಾಂಪ್ ಉಂಟಾಗಬಹುದು ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಜೀರ್ಣಕ್ರಿಯೆಗೆ ಹೆಚ್ಚಿನ ಪ್ರಮಾಣದ ಆಮ್ಲಜನಕಯುಕ್ತ ರಕ್ತದ ಅಗತ್ಯವಿರುವುದು ನಿಜ. ಆದರೆ ಇದರಿಂದ ಹೊಟ್ಟೆಯಲ್ಲಿ ಕ್ರಾಂಪ್ ಉಂಟಾಗುತ್ತದೆ ಎಂದೇನಿಲ್ಲ. ತಿಂದ ನಂತರ ಈಜಿದರೆ ಸೆಳೆತ ಅನುಭವಿಸುವ ಅಪಾಯ ತುಂಬಾ ಕಡಿಮೆ.
೩. ಸಂಧಿವಾತ ವಯಸ್ಸಾದವರಿಗೆ ಮಾತ್ರ
ಸಂಧಿವಾತದಿಂದ (arthritis) ಬಳಲುತ್ತಿರುವವರಲ್ಲಿ ಮೂರನೇ ಎರಡರಷ್ಟು ಜನರು ವಾಸ್ತವವಾಗಿ 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ 100ಕ್ಕೂ ಹೆಚ್ಚು ಸಂಧಿವಾತಗಳಿವೆ. ಉದಾಹರಣೆಗೆ ಪ್ರತಿ 1,000 ಮಕ್ಕಳಲ್ಲಿ ಸುಮಾರು ಮೂವರನ್ನು ಬಾಧಿಸುವ ಸಂಧಿವಾತ ಮಕ್ಕಳಲ್ಲಿ ಅತ್ಯಂತ ಸಾಮಾನ್ಯವಾದ ಕಾಯಿಲೆಗಳಲ್ಲಿ ಒಂದಾಗಿದೆ.
೪. ಶುಗರ್‌ನಿಂದ ಮಕ್ಕಳಲ್ಲಿ ಹೈಪರ್ ಆಕ್ಟಿವಿಟಿ
ಸಕ್ಕರೆ ಸೇವನೆ ಮಕ್ಕಳಿಗೆ ಹಾನಿಕರ ಹೌದು. ಆದರೆ ಸಕ್ಕರೆ ಸೇವನೆ ಮತ್ತು ಹೈಪರ್ ಆಕ್ಟಿವಿಟಿ (hyper activity) ನಡುವಿನ ಸಂಬಂಧವನ್ನು ಸ್ಥಾಪಿಸುವ ಯಾವುದೇ ವೈಜ್ಞಾನಿಕ ಪುರಾವೆ ಇಲ್ಲ. ಮಕ್ಕಳಲ್ಲಿ ಸಕ್ಕರೆಯುಕ್ತ ಪಾನೀಯಗಳ ಸೇವನೆ ಮತ್ತು ತೂಕ ಹೆಚ್ಚಳದ ನಡುವಿನ ಸಂಬಂಧವನ್ನು ವಿವಿಧ ಅಧ್ಯಯನಗಳು ತೋರಿಸಿವೆ.
೫. ತಂಪಾಗಿದ್ದರೆ ಶೀತ ಉಂಟಾಗುತ್ತದೆ
ಚಳಿಗಾಲದ ವೇಳೆಯಲ್ಲೆಲ್ಲಾ ಶೀತ ಉಂಟಾಗುವುದಿಲ್ಲ. ಇದು ಋತುಮಾನಕ್ಕೆ ಸಂಬಂಧಿಸಿಲ್ಲ. ಶೀತಕ್ಕೆ ನಮ್ಮ ಜೀವನಶೈಲಿ ಕಾರಣ. ಗಾಳಿಯನ್ನು ಮರುಬಳಕೆ ಮಾಡುವ ಸ್ಥಳದಲ್ಲಿ ಹೆಚ್ಚು ಸಮಯವನ್ನು ಕಳೆದರೆ, ಸೋಂಕಿತ ವ್ಯಕ್ತಿಗಳ ಸಮೀಪ ಇದ್ದರೆ, ಶೀತಕ್ಕೆ ಕಾರಣವಾಗುವ ವೈರಸ್ ಹರಡುವಿಕೆ ಸುಲಭ.
೬. ಐದು ಸೆಕೆಂಡುಗಳ ನಿಯಮ
ನೆಲಕ್ಕೆ ಬಿದ್ದ ಆಹಾರ ವಸ್ತುವನ್ನು ಐದು ಸೆಕೆಂಡ್‌ಗಳ ಒಳಗೆ ಎತ್ತಿಕೊಂಡರೆ ಧಾರಾಳವಾಗಿ ಸೇವಿಸಬಹುದು ಎಂಬ ಮಿಥ್ ಇದೆ. ಆದರೆ ಇದು ರೋಗಾಣುಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂಬುದಕ್ಕೆ ಖಾತ್ರಿಯಿಲ್ಲ. ಕೆಲವು ಬ್ಯಾಕ್ಟೀರಿಯಾಗಳು ನೆಲದ ಮೇಲೆ ಬೀಳುವ ಆಹಾರದ ಮೇಲೆ ತಕ್ಷಣವೇ ಜಿಗಿಯಬಹುದು. ನೆಲದ ಮೇಲೆ ಬಿದ್ದರೆ ಮಾಲಿನ್ಯದ ಅಪಾಯ ಇಲ್ಲದೆ ಇರುವುದಿಲ್ಲ.
೭. ಚಾಕೊಲೇಟ್ ಕಾಮೋತ್ತೇಜಕ
ಚೊಕೊಹಾಲಿಕ್‌ಗಳು (chocolates) ಕಾಮಾಸಕ್ತರೇ (Aphrodisiac) ಎಂಬುದನ್ನು ನೀವು ಪರೀಕ್ಷಿಸಿ ನೋಡಿ! ಚಾಕೊಲೇಟ್ ಕಾಮೋತ್ತೇಜಕ ಎಂಬುದೊಂದು ಮಿಥ್. ಚಾಕೊಲೇಟ್ ತಿನ್ನುವ ಮತ್ತು ತಿನ್ನದ ಮಹಿಳೆಯರ ನಡುವೆ ಯಾವುದೇ ಜೈವಿಕ ವ್ಯತ್ಯಾಸವಾಗುವುದಿಲ್ಲ ಎಂದು ಅಧ್ಯಯನ ತೋರಿಸಿದೆ. ಆದರೆ ಇದು ಕಾಮಾಸಕ್ತಿಯ ಮೇಲೆ ಮಾನಸಿಕ ಪರಿಣಾಮವನ್ನು ಉಂಟುಮಾಡಬಹುದು.
೮. ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು
ಆರೋಗ್ಯವಾಗಿರಲು ನಾವು ಪ್ರತಿದಿನ ಎಂಟು 8 ಗ್ಲಾಸ್ ನೀರನ್ನು ಕುಡಿಯಬೇಕು ಎಂದು ಹೇಳಲಾಗುತ್ತದೆ. ಆದರೆ ಇದನ್ನು ಸಾಬೀತುಪಡಿಸುವ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ. ವಾಸ್ತವವಾಗಿ, ಮಹಿಳೆಯರು ದಿನಕ್ಕೆ 2.7 ಲೀಟರ್ (91 ಔನ್ಸ್) ನೀರನ್ನು ಕುಡಿಯಬೇಕು, ಆದರೆ ಪುರುಷರು 3.7 ಲೀಟರ್ (125 ಔನ್ಸ್) ಕುಡಿಯಬೇಕು ಎಂದು ಸಂಶೋಧನೆ ಸೂಚಿಸುತ್ತದೆ.
ಇದನ್ನೂ ಓದಿ: Health Tips: ಒಣಹಣ್ಣು ಹಾಗೂ ಬೀಜಗಳನ್ನು ನೆನೆಹಾಕಿ ತಿನ್ನಬೇಕೇ? ನಿಮ್ಮ ಗೊಂದಲಕ್ಕೆ ಉತ್ತರ ಇಲ್ಲಿದೆ!