ಚರ್ಮ ಹಾಗೂ ಕೂದಲ ಆರೋಗ್ಯಕ್ಕೆ ಆಲೋವೆರಾ ಅಥವಾ ಲೋಳೆಸರದ ಉಪಯೋಗಗಳು ಸಾಕಷ್ಟು ಪ್ರಸಿದ್ಧ. ಚರ್ಮದ ತೊಂದರೆಗಳಿಗೆ, ಮೊಡವೆಗೆ, ಮೊಡವೆ ಕಲೆಗಳಿಗೆ, ಸನ್‌ಬರ್ನ್‌ಗೆ, ಸುಕ್ಕು, ಕಪ್ಪು ಕಲೆಗಳಿಗೆ, ನುಣುಪು ಕೂದಲಿಗೆ ಹೀಗೆ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣ ಈ ಲೋಳೆಸರ. ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡ್‌ಗಳಲ್ಲಿ ಸಿಗುವ ಆಲೋವೆರಾ ಜೆಲ್ ಕೊಂಡು ತಂದು ಕೂದಲಿಗೆ, ಚರ್ಮಕ್ಕೆ ಹಚ್ಚಿಕೊಳ್ಳುತ್ತೇವೆ. ಆದರೆ, ಆಲೋವೆರಾವನ್ನು ಸೇವಿಸುವುದರಿಂದಲೂ ಸಾಕಷ್ಟು ಆರೋಗ್ಯದ ಲಾಭಗಳಿವೆ. ಚರ್ಮದ ಸೌಂದರ್ಯವನ್ನು ಒಳಗಿನಿಂದ ವೃದ್ಧಿಸುವುದರಿಂದ ಚರ್ಮಕ್ಕೆ ಹೊಳಪು ಬರುವುದಷ್ಟೇ ಅಲ್ಲ, ಸಾಕಷ್ಟು ರೋಗಗಳಿಗೂ ಆಲೋವೆರಾ ಶಮನಕಾರಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ, ಕ್ಯಾನ್ಸರ್, ಹೃದಯ ಸಂಬಂಧೀ ತೊಂದರೆ ಇದ್ದವರಿಗೂ ಅಲೋವೆರಾ ಒಳ್ಳೆಯದು. ಪಚನದ ತೊಂದರೆ ಇರುವವರಿಗೂ ಇದು ಉತ್ತಮ. ಹಲ್ಲು ಹಾಗೂ ಬಾಯಿ ಆರೋಗ್ಯವನ್ನೂ ವೃದ್ಧಿಸುವ ಇದು ಮಹಿಳೆಯರ ಋತುಚಕ್ರದ ಸಮಸ್ಯೆಗಳಿಗೂ ಅತ್ಯುತ್ತಮ ಪರಿಹಾರ ನೀಡುತ್ತದೆ. ಹಾಗಾದರೆ, ಆಲೋವೆರಾವನ್ನು ಹೇಗೆ ನಮ್ಮ ಆಹಾರದ ಜೊತೆಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.
೧. ಆಲೊವೆರಾ ಜ್ಯೂಸ್: ಒಂದೆರಡು ಆಲೋವೆರಾ ಎಲೆ, ಸಣ್ಣ ತುಂಡು ಶುಂಠಿ, ಅರ್ಧ ತುಂಡು ನಿಂಬೆಹಣ್ಣು ಒಂದರ್ಧ ಚಮಚ ಜೇನುತುಪ್ಪ ಹಾಗೂ ಕಾಲು ಕಪ್ ನೀರು ಇಷ್ಟಿದ್ದರೆ, ಅಲೊವೆರಾ ಜ್ಯೂಸ್ ಮಾಡಿಕೊಳ್ಳಬಹುದು. ಆಲೋವೆರಾ ಒಂದೆರಡು ಎಲೆ ಕೊಯ್ದುಕೊಂಡು ಅದರ ಹಸಿರು ಭಾಗವನ್ನು ತೆಗೆದು ಕೇವಲ ಲೋಳೆಯನ್ನು ಮಾತ್ರ ಪ್ರತ್ಯೇಕಿಸಿ ಮಿಕ್ಸಿಯಲ್ಲಿ ಹಾಕಿ, ಕಾಲು ಕಪ್ ನೀರು ಹಾಕಿ, ಶುಂಠಿ ತುಂಡು, ನಿಂಬೆ ರಸ, ಜೇನುತುಪ್ಪ ಸೇರಿಸಿ ಮಿಕ್ಸಿ ತಿರುಗಿಸಿ. ಹೆಚ್ಚಿಗೆ ನೀರು ಬೇಕಿದ್ದರೆ ಸೇರಿಸಿ. ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೆಚ್ಚು ಲಾಭ.
ಇದನ್ನೂ ಓದಿ: Winter skin care: ಚಳಿಗಾಲದ ಒಣ ತ್ವಚೆಯ ಮಂದಿಗೆ ಇಲ್ಲಿವೆ ಸುಲಭ ಪರಿಹಾರ!
೨. ಆಲೊವೆರಾ ಬರ್ಫಿ: ಆಲೋವೆರಾ ಗಿಡ ಹುಲುಸಾಗಿ ಬೆಳೆದಿದ್ದರೆ, ತುಂಬ ಎಲೆಗಳು ಕೊಯ್ಯಲು ಸಿಕ್ಕಿದ್ದರೆ ಏನು ಮಾಡುವುದು ಎಂಬ ಯೋಚನೆಯಾದರೆ ಸಿಹಿತಿಂಡಿಯೂ ಮಾಡಬಹುದು. ಆಲೊವೆರಾ ಬರ್ಫಿಗೆ, ಒಂದೂವರೆ ಲೀಟರ್ ಹಾಲು, ಐದಾರು ಎಲೆ ಆಲೊವೆರಾ, ನೂರು ಗ್ರಾಂ ಸಕ್ಕರೆ, ಒಂದು ಕಪ್ ತೆಂಗಿನ ತುರಿ, ಒಂದು ಚಮಚ ತುಪ್ಪ, ಚಿಟಿಕೆ ಏಲಕ್ಕಿ ಪುಡಿ ಇವಿಷ್ಟು ರೆಡಿ ಮಾಡಿಟ್ಟುಕೊಳ್ಳಿ. ಆಲೊವೆರಾ ಎಲೆಯಿಂದ ಹಸಿರು ಭಾಗವನ್ನು ಬೇರ್ಪಡಿಸಿ ಲೋಳೆಯನ್ನು ತೆಗೆದಿಡಿ. ಇದನ್ನು ಮಿಕ್ಸಿಯಲ್ಲಿ ತಿರುಗಿಸಿ. ಬಾಣಲೆಯಲ್ಲಿ ಹಾಲು ಕುದಿಸಿ ಅದು ಕುದಿ ಬಂದಾಗ ಅದಕ್ಕೆ ಅಲೊವೆರಾ ಸೇರಿಸಿ. ಒಂದೆರಡು ನಿಮಿಷ ಕುದಿಸಿ ಅದಕ್ಕೆ ಸಕ್ಕರೆ ಸೇರಿಸಿ. ಮತ್ತೆ ಕುದಿಯಲು ಬಿಡಿ. ತೆಂಗಿನತುರಿ ಸೇರಿಸಿ. ತಳ ಹಾಗೂ ಬದಿ ಬಿಡುತ್ತಾ ಬಂದಾಗ ತುಪ್ಪ ಸೇರಿಸಿ. ಏಲಕ್ಕಿಯನ್ನೂ ಹಾಕಿ. ಉರಿ ಆರಿಸಿ, ತಟ್ಟೆಗೆ ಸುರುವಿ. ಬೇಕಾದ ಆಕಾರಕ್ಕೆ ಕತ್ತರಿಸಿ.
೩. ಆಲೊವೆರಾ ಸಲಾಡ್: ತೂಕ ಕಡಿಮೆ ಮಾಡಬಯಸುವರಿಗೆ, ಆರೋಗ್ಯದ ಕಾಳಜಿ ಇರುವ ಮಂದಿಗೆ ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಬಗೆಯಿದು. ಅಲೋವೆರಾ ಎಲೆಯಿಂದ ಹಸಿರು ಭಾಗವನ್ನು ತೆಗೆದು ಕೇವಲ ಲೋಳೆಯನ್ನು ತೆಗೆದು ಪುಟ್ಟ ಪುಟ್ಟ ತುಂಡುಗಳನ್ನಾಗಿ ಕತ್ತರಿಸಿಡಿ. ಸ್ವಲ್ಪ ತುಳಸೀ ಎಲೆಗಳು, ಕತ್ತರಿಸಿದ ಸೇಬು, ಕತ್ತರಿಸಿದ ಸ್ಟ್ರಾಬೆರಿ, ಕತ್ತರಿಸಿದ ಬ್ಲೂಬೆರಿ, ಪುದಿನ ಎಲೆಗಳನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಕೇವಲ ಇಷ್ಟೇ ಅಲ್ಲ, ಆಯಾ ಋತುವಿನಲ್ಲಿ ಸಿಗುವ ತರಕಾರಿ ಅಥವಾ ಹಣ್ಣುಗಳನ್ನೂ ಇವುಗಳ ಬದಲಿಗೆ ಆಲೋವೆರಾದ ಜೊತೆಗೆ ಸೇರಿಸಿಕೊಳ್ಳಬಹುದು. ಮೊಳಕೆ ಕಾಳುಗಳನ್ನೂ ಹಾಕಬಹುದು. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ, ಒಂದೆರಡು ಹನಿ ನಿಂಬೆರಸ ಸೇರಿಸಿದರೆ ಸಲಾಡ್ ರೆಡಿ.
ಇದನ್ನೂ ಓದಿ: Mayonnaise Ban | ಅಷ್ಟೊಂದು ರುಚಿಯಾದ ಮೆಯೋನೀಸ್ ಅನಾರೋಗ್ಯಕರವೇ?