Site icon Vistara News

Anjeer Water Benefits: ಅಂಜೂರದ ಹಣ್ಣಿನ ನೀರನ್ನು ಬೆಳಗ್ಗೆ ಕುಡಿಯುವುದರಿಂದ ಏನೆಲ್ಲ ಪ್ರಯೋಜನಗಳಿವೆ ಗೊತ್ತೇ?

anjeer fruit

ಆರೋಗ್ಯಕರ ಎಂಬ ಶಬ್ದವೇ ಇತ್ತೀಚೆಗಿನ ದಿನಗಳಲ್ಲಿ ಬಹಳ ಗೊಂದಲ ಹುಟ್ಟಿಸುವಂತಾಗಿದೆ ಎಂದರೂ ಅತಿಶಯೋಕ್ತಿ ಅಲ್ಲ. ಯಾಕೆಂದರೆ, ಈಚೆಗೆ ಪ್ರತಿಯೊಂದೂ ಆರೋಗ್ಯಕರ ಎಂಬ ಹೆಸರಿನಡಿ ಲೇಬಲ್‌ ಆಗಿ ಮಾರುಕಟ್ಟೆ ಬರುತ್ತವೆ. ಯಾವುದು ಆರೋಗ್ಯಕ್ಕೆ ನಿಜವಾಗಿ ಒಳ್ಳೆಯದನ್ನು ಮಾಡುತ್ತದೆ ಎಂಬ ತಿಳುವಳಿಕೆಗೆ ಅವಕಾಶ ಕಡಿಮೆ. ವಿಪರೀತ ಮಾಹಿತಿಗಳ ಹಾವಳಿಯಿಂದಾಗಿ, ಇತ್ತೀಚೆಗೆ, ನಾವು ತಿನ್ನುವ ಪ್ರತಿಯೊಂದರ ಬಗೆಗಗೂ ಗೊಂದಲಗಳು ಸೃಷ್ಟಿಯಾಗಿವೆ. ಯಾವುದನ್ನು ಹೇಗೆ ತಿನ್ನಬೇಕು, ಹೇಗೆ ತಿನ್ನಬಾರದು, ಎಣ್ಣೆ ಹಾಕಬೇಕಾ, ಬೇಡವಾ, ತುಪ್ಪ ತಿನ್ನಬಹುದಾ, ತಿನ್ನಬಾರದಾ, ಒಣಹಣ್ಣುಗಳನ್ನು ಹೇಗೆ ತಿನ್ನಬೇಕು, ಬೀಜಗಳನ್ನು ಎಷ್ಟು ತಿನ್ನಬೇಕು ಇತ್ಯಾದಿ ಇತ್ಯಾದಿ ಆಹಾರಕ್ಕೆ ಸಂಬಂಧಿಸಿದ ಗೊಂದಲಗಳು ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ. ಈ ಅಂಜೂರ (Anjeer fruit) ಅಥವಾ ಫಿಗ್‌ (Fig fruit) ಎಂಬ ಒಣಹಣ್ಣುಗಳ ವಿಚಾರದಲ್ಲೂ ಅಷ್ಟೇ, ಇದು ಒಳ್ಳೆಯದು ಹೌದಾದರೂ, ಎಷ್ಟು ತಿನ್ನಬೇಕು, ಇದರಿಂದಾಗುವ ನಿಜವಾದ ಲಾಭಗಳೇನು ಎಂಬಿತ್ಯಾದಿ ಗೊಂದಲಗಳೂ ಇರುತ್ತವೆ. ಹಾಗಾದರೆ ಬನ್ನಿ, ಅಂಜೂರವೆಂಬ ಒಣಹಣ್ಣಿನಿಂದಾಗುವ ಲಾಭಗಳೇನು (Anjeer Water benefits) ಎಂಬುದನ್ನು ನೋಡೋಣ.

1. ಅಂಜೂರ ಅಥವಾ ಫಿಗ್‌ ಹಣ್ಣನ್ನು ನೆನೆನಸಿ ಅದರ ನೀರನ್ನು ಕುಡಿಯುವುದರಿಂದ ಸಾಕಷ್ಟು ಲಾಭಗಳಿವೆ. ಮುಖ್ಯವಾಗಿ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಇದರಲ್ಲಿ ಪ್ರೊಬಯಾಟಿಕ್‌ ಗುಣಗಳೂ ಹೇರಳವಾಗಿದ್ದು, ನಾರಿನಂಶವೂ ಇರುವುದರಿಂದ ಜೀರ್ಣಾಂಗವ್ಯೂಹಕ್ಕೆ ಇದು ಬಹಳ ಒಳ್ಳೆಯದು.

2. ಅಂಜೂರ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಅವು ಫ್ರೀ ರ್ಯಾಡಿಕಲ್ಸ್‌ ವಿರುದ್ಧ ರಕ್ಷಣಾತ್ಮಕವಾಗಿ ಕೆಲಸ ಮಾಡುತ್ತವೆ. ದೇಹದ ಅಂಗಾಂಶಗಳಿಗೆ ಇವು ರಕ್ಷಣೆಯನ್ನು ನೀಡುವ ಮೂಲಕ ಹಾನಿಯನ್ನು ತಪ್ಪಿಸಿ ಚರ್ಮವನ್ನೂ ಹೊಳೆಯುವಂತೆ ಮಾಡುತ್ತದೆ.

3. ರಕ್ತದಲ್ಲಿರುವ ಸಕ್ಕರೆಯ ಪ್ರಮಾಣದ ಸಮತೋಲನವನ್ನು ಕಾಫಾಡುವಲ್ಲಿಯೂ ಅಂಜೂರದ ಹಣ್ಣು ಸಹಾಯ ಮಾಡುತ್ತವೆ. ಅಂಜೂರವು ದೇಹದಲ್ಲಿ ಇನ್ಸುಲಿನ್‌ ಉತ್ಪಾದನೆಯನ್ನು ಪ್ರಚೋದಿಸಿ, ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಂಶವು ಕೂಡಾ ಈ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.

4. ನಮ್ಮ ದೇಹದಲ್ಲಿ ಎಲುಬುಗಳಿಗೂ ಕಾಳಜಿ ಅತ್ಯಂತ ಅಗತ್ಯ. ಎಲುಗು ಗಟ್ಟಿಯಾಗಿರುವುದು ಎಲ್ಲಕ್ಕಿಂತ ಮುಖ್ಯ. ಎಲುಬಿನ ಆರೋಗ್ಯವನ್ನು ನಾವು ನಿರ್ಲಕ್ಷ್ಯ ಮಾಡುವಂತಿಲ್ಲ. ಅಂಜೂರ ಹಣ್ಣಿನ ಸೇವನೆ ಎಲುಬಿನ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇದರಲ್ಲಿರುವ ಕ್ಯಾಲ್ಶಿಯಂ, ಮೆಗ್ನೀಶಿಯಂ, ಪಾಸ್ಪರಸ್‌ಗಳು ಎಲುಬಿಗೆ ಶಕ್ತಿ ನೀಡುತ್ತವೆ. ಕ್ಯಾಲ್ಶಿಯಂ ಎಲುಬಿನ ರಕ್ಷಣೆಯಲ್ಲಿ, ಶಕ್ತಿಯಲ್ಲಿ ಮುಖ್ಯಪಾತ್ರ ವಹಿಸುತ್ತದೆ.

5. ತೂಕ ಇಳಿಸುವ ಬಗೆಗೆ ಕಾಳಜಿ ಮಾಡುತ್ತಿದ್ದೀರೆಂದಾದಲ್ಲಿಅಂಜೂರವು ಅತ್ಯಂತ ಉತ್ತಮ. ಇದರಲ್ಲಿ ನಾರಿನಂಶವು ಇರುವುದರಿಂದ ಹಾಗೂ ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಹೊಟ್ಟೆ ಬೇಗ ಫುಲ್‌ ಆದ ಭಾವನೆ ಬರುವುದರಿಂದ, ಅನಗತ್ಯ ತಿನ್ನುವ ಚಾಳಿ ಕಡಿಮೆಯಾಗುತ್ತದೆ. ಆಗಾಗ ಏನಾದರೊಂದು ತಿನ್ನಬೇಕೆಂದು ಅನಿಸುವ, ಸಿಹಿ ತಿನ್ನಬೇಕೆಂದು ಬಯಕೆಯಾಗುವ ಮಂದಿಗೆ ಇದು ಉತ್ತಮ ಪರ್ಯಾಯ ಆಹಾರ.

ಅಂಜೂರ ಒಳ್ಳೆಯದೇನೋ ಹೌದು, ಆದರೆ ಇದನ್ನು ಎಷ್ಟು ತಿನ್ನಬಹುದು ಹಾಗೂ ಹೇಗೆ ತಿಂದರೆ ಒಳ್ಳೆಯದು ಎಂಬ ಬಗ್ಗೆ ಗೊಂದಲಗಳಾಗುವುದು ಕೂಡಾ ಸಹಜ. ಎರಡರಿಂದ ಮೂರು ಅಂಜೂರದ ಒಣ ಹಣ್ಣುಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆ ಹಾಕಿಟ್ಟು, ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರ ಮೂಲಕ ಅಂಜೂರದ ಈ ಎಲ್ಲ ಪ್ರಯೋಜನಗಳನ್ನು ಪಡೆಯಬಹುದು. ನೀರಲ್ಲಿ ನೆನೆದ ಹಣ್ಣುಗಳನ್ನೂ ತಿನ್ನಬಹುದು. ಇಡೀ ದಿನ ಈ ಹಣ್ಣಿನಿಂದಾಗುವ ಚೈತನ್ಯದ ಅನುಭೂತಿಯನ್ನು ನೀವು ಪಡೆಯಬಹುದು.

ಇದನ್ನೂ ಓದಿ: Anjeer benefits | ಪೋಷಕಾಂಶಗಳ ಆಗರ ಅಂಜೂರದ 8 ಆರೋಗ್ಯ ಪ್ರಯೋಜನ

Exit mobile version