Site icon Vistara News

Art Therapy: ಕಲಾ ಚಿಕಿತ್ಸೆ: ಏನಿದರ ಪ್ರಯೋಜನ?

art therapy

art therapy

ಮನಸ್ಸಿನ ಮೇಲೆ ಪರಿಣಾಮ ಬೀರುವ ಹಲವಾರು ಸಂಗತಿಗಳು ದೈಹಿಕವಾಗಿ ನಾನಾ ರೀತಿಯ ಕಾಯಿಲೆಗಳ ರೂಪದಲ್ಲಿ ತೋರಿಸಿಕೊಳ್ಳುವ ಸಂದರ್ಭಗಳು ಬೇಕಾದಷ್ಟಿವೆ. ಇಂಥ ಮನೋದೈಹಿಕ (psychosomatic) ಕಾಯಿಲೆಗಳು ಗುಣವಾಗಬೇಕಾದರೆ ದೇಹಕ್ಕೆ ಚಿಕಿತ್ಸೆ ಬೇಕಾಗುವಷ್ಟೇ ಪ್ರಮುಖವಾಗಿ ಮತ್ತು ಆದ್ಯತೆಯ ಮೇರೆಗೆ ಮನಸ್ಸಿಗೆ ಚಿಕಿತ್ಸೆ ಬೇಕಾಗುತ್ತದೆ. ಸುಪ್ತ ಮನದಲ್ಲಿರುವ ಸಮಸ್ಯೆಗಳು ಗುಪ್ತವಾಗಿಯೇ ಉಳಿದರೆ ಚಿಕಿತ್ಸೆ ನೀಡುವುದು ಹೇಗೆ? ಕಲೆಯ ಮೂಲಕ ಸಮಸ್ಯೆಯನ್ನು ಅಭಿವ್ಯಕ್ತಿಸಿ, ಮಾನಸಿಕ ಆರೋಗ್ಯವನ್ನು ವೃದ್ಧಿಸುವ ವಿಧಾನವನ್ನು (Art Therapy) ಆರ್ಟ್‌ ಥೆರಪಿ ಎನ್ನಲಾಗುತ್ತದೆ.

ಸರಳವಾಗಿ ಹೇಳುವುದಾದರೆ, ಕಲಾ ಚಿಕಿತ್ಸೆಯೂ ಒಂದು ಬಗೆಯ ಮನೋಚಿಕಿತ್ಸೆಯೇ. ಹಲವಾರು ಶರಮಾನಗಳಿಂದ ಮಾನವ ಸಂವಹನಕ್ಕಾಗಿ ಬಳಸುತ್ತಿರುವ ಮಾಧ್ಯಮಗಳಲ್ಲಿ ಕಲೆಯೂ ಒಂದು ಪ್ರಮುಖ ಮಾಧ್ಯಮ. ಈ ಮೂಲಕ ಮಾನಸಿಕ ಒತ್ತಡಗಳನ್ನು ಹೊರಹಾಕಿ, ಮನಸ್ಸಿನ ಸಮಸ್ಯೆಗಳನ್ನು ಗುಣಪಡಿಸುವ ಸಶಕ್ತ ಚಿಕಿತ್ಸೆಯಾಗಿಯೂ ಬಳಕೆಯಲ್ಲಿದೆ. ಮಾನಸಿಕ ಸಮಸ್ಯೆಗಳನ್ನು ಹೊಂದಿರುವವರು ಚಿತ್ರಕಲೆ ಮತ್ತು ಬಣ್ಣಗಳ ಮೂಲಕ ತಮ್ಮನ್ನು ಹೆಚ್ಚು ಸಮರ್ಥವಾಗಿ ಅಭಿವ್ಯಕ್ತಿಸಿಕೊಳ್ಳುತ್ತಾರೆ ಎಂಬುದು ಮನೋವಿಜ್ಞಾನಿಗಳ ಅಭಿಮತ.

ಏನೆಲ್ಲಾ ಬಳಕೆಯಾಗುತ್ತದೆ?

ಕೊಲಾಜ್‌ ಮಾಡುವುದು, ರೇಖಾಚಿತ್ರ, ವರ್ಣಚಿತ್ರ, ಸುಮ್ಮನೆ ಗೀಚುವುದು, ಶಿಲ್ಪಕಲೆ, ಜೇಡಿಮಣ್ಣಿನ ಬಳಕೆ, ಛಾಯಾಗ್ರಹಣ- ಇಂತಹ ಹಲವು ರೀತಿಯ ಕಲಾ ಮಾಧ್ಯಮಗಳನ್ನು ಚಿಕಿತ್ಸೆಯಾಗಿ ಬಳಸಲಾಗುತ್ತದೆ. ನೊಂದ ಮನಸ್ಸುಗಳಿಗೆ ಸಾಂತ್ವನವಾಗಿಯೂ ಇವು ಪ್ರಯೋಜನವಾಗಬಲ್ಲವು. ಹಾಗಾದರೆ ಯಾವುದಕ್ಕೆಲ್ಲಾ ಕಲಾಚಿಕಿತ್ಸೆಯನ್ನು ಬಳಸಬಹುದು?

ಒತ್ತಡ ನಿವಾರಣೆಗೆ

ಆತಂಕ ಮತ್ತು ಒತ್ತಡದಲ್ಲಿರುವ ಮನಸ್ಸುಗಳಿಗೆ ಕೋಡಿ ಬಿದ್ದ ಹಾಗೆ ಸರಳ, ಸಮರ್ಥ ಮತ್ತು ಸುರಕ್ಷಿತವಾದ ಉಪಾಯವಿದು ಕಲಾಚಿಕಿತ್ಸೆ. ನಮ್ಮದೇ ಭಾವನೆ ಮತ್ತು ಆಲೋಚನೆಗಳ ಮೇಲೆ ನಮ್ಮ ಹಿಡಿತ ಹೆಚ್ಚಿದಂತೆಲ್ಲಾ ಮನಸ್ಸಿನ ಮೇಲಿರುವ ಆತಂಕ, ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ.

ಆತ್ಮಗೌರವ ವೃದ್ಧಿಗೆ

ನಮ್ಮ ಮನದಲ್ಲೇನಿದೆ ಮತ್ತು ನಮಗೇನು ಬೇಕು ಎಂಬುದು ನಮಗೇ ಅರ್ಥವಾಗದೆ ಒದ್ದಾಡುವ ಸನ್ನಿವೇಶಗಳು ಎಷ್ಟಿಲ್ಲ ಬದುಕಿನಲ್ಲಿ? ಈ ಮಾಧ್ಯಮಗಳನ್ನು ಹೆಚ್ಚೆಚ್ಚು ಅನ್ವೇಷಿಸುತ್ತಾ ಹೋದಂತೆ, ನಮ್ಮ ಆಲೋಚನೆಗಳು ಮತ್ತು ವರ್ತನೆಗಳ ಬಗ್ಗೆ ನಮಗೇ ಹೆಚ್ಚಿನ ಅರಿವು ಮೂಡುತ್ತದೆ. ಈ ಮೂಲಕ ಕೀಳರಿಮೆಯನ್ನು ಬಿಟ್ಟು ಆತ್ಮಗೌರವ ಮತ್ತು ವಿಶ್ವಾಸದಿಂದ ಬದುಕಲು ಸಾಧ್ಯವಿದೆ.

ಆಘಾತದಿಂದ ಹೊರಬರಲು

ಕೆಲವು ಖಾಸಗಿ ಘಟನೆಗಳು ವ್ಯಕ್ತಿಗಳನ್ನು ಭಯಂಕರ ಆಘಾತಕ್ಕೆ ದೂಡಬಹುದು. ತಮ್ಮವರ ಸಾವು, ಯಾವುದೋ ಸೋಲು ಅಥವಾ ಇನ್ಯಾವುದೋ ಘಟನೆಗಳಿಂದ ಹೊರಬರಲಾರದೆ ನಾನಾ ರೀತಿಯ ಮನೋದೈಹಿಕ ಸಮಸ್ಯೆಗಳಲ್ಲಿ ನರಳುವಂತಾಗುತ್ತದೆ. ಹೀಗೆ ಹೆಪ್ಪುಗಟ್ಟಿದ ನೋವು ಹರಿದು ಹೊರಹೋಗದಿದ್ದರೆ ಸಮಸ್ಯೆಗಳು ಹೆಚ್ಚುತ್ತವೆ. ಕಲಾಚಿಕಿತ್ಸೆ ಇಂಥ ಸಂದರ್ಭಗಳಲ್ಲಿ ನೆರವಾಗಬಲ್ಲದು.

ಇದಲ್ಲದೆ, ಖಿನ್ನತೆ, ವೃದ್ಧಾಪ್ಯದ ಸವಾಲುಗಳು, ಸಂಬಂಧಗಳ ತೊಡಕುಗಳು, ವ್ಯಸನಗಳಂಥ ಸಮಸ್ಯೆಗಳಿಂದ ಮುಕ್ತರಾಗಲು ಸಹ ಕಲಾಮಾಧ್ಯಮಗಳು ಪ್ರಯೋಜನಕಾರಿ. ಜೊತೆಗೆ, ಸಮಸ್ಯಾಪೂರಣ, ನಿರ್ಧಾರ ತೆಗೆದುಕೊಳ್ಳುವುದು ಮುಂತಾದ ಅಗತ್ಯ ಜೀವನಕಲೆಗಳನ್ನು ರೂಢಿಸಿಕೊಳ್ಳುವಲ್ಲಿಯೂ ಕಲಾಚಿಕಿತ್ಸೆ ಬಳಕೆಯಲ್ಲಿದೆ.

ಇದನ್ನೂ ಓದಿ: Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

Exit mobile version