Site icon Vistara News

Baby’s Food: ಶಿಶು ಆಹಾರಗಳಲ್ಲಿ ಸಕ್ಕರೆ ಅಂಶ ಇರಬೇಕೆ?

Baby's Food

ಜನಪ್ರಿಯ ಬ್ರಾಂಡ್‌ಗಳ ಶಿಶು ಆಹಾರಗಳಲ್ಲಿ (Baby’s Food) ಅತಿ ಹೆಚ್ಚಿನ ಪ್ರಮಾಣದ ಸಕ್ಕರೆ ಸೇರಿರುವ ಬಗ್ಗೆ ಇತ್ತೀಚೆಗಷ್ಟೇ ವಿಸ್ತೃತವಾಗಿ ಚರ್ಚೆಯಾಗಿತ್ತು. ಶಿಶು ಆಹಾರಗಳಲ್ಲಿ ಸಕ್ಕರೆ ಅಥವಾ ಸಿಹಿ ಸೇರಿಸುವ ಪರಿಪಾಠ ಸುಮಾರು 50 ವರ್ಷಗಳಷ್ಟು ಹಿಂದಿನದ್ದು. ಅದು ಕೇವಲ ಶಿಶು ಅಹಾರಗಳಲ್ಲಿ ಮಾತ್ರವಲ್ಲ, ಸೀರಿಯಲ್‌ಗಳು, ಫ್ಲೇವರ್‌ ಇರುವ ಪೇಯಗಳು, ಬೇಕ್‌ ಮಾಡಿದ ತಿನಿಸುಗಳಿಂದ ಹಿಡಿದು ಲೆಕ್ಕವಿಲ್ಲದಷ್ಟು ಆಹಾರಗಳಲ್ಲಿ ನಮಗರಿವಿಲ್ಲದಂತೆಯೇ ಸಕ್ಕರೆ ವಕ್ಕರಿಸಿದೆ. ಸಂಸ್ಕರಿಸಿದ ಸಿಹಿ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಾಬೀತಾಗಿದ್ದರೂ, ಎಳೆಯ ಮಕ್ಕಳ ಆಹಾರದಿಂದ ಹಿಡಿದು ದೊಡ್ಡವರ ತಿನಿಸುಗಳವರೆಗೆ ಇದನ್ನು ಸೇರಿಸುವುದೇಕೆ? ಮಕ್ಕಳಿಗೂ ಹೀಗೆ ಬಾಯಿ ಸಿಹಿ ಮಾಡುವ ಉದ್ದೇಶವೇನು?
ಆಹಾರದಲ್ಲಿ ನೈಸರ್ಗಿಕವಾಗಿ ಇರುವಂಥ ಸಕ್ಕರೆಯ ಹೊರತಾಗಿ ಹೆಚ್ಚುವರಿಯಾಗಿ ಸಕ್ಕರೆಯನ್ನು ಸೇರಿಸುವುದರ ಹಿಂದೆ ಹಲವು ಕಾರಣಗಳಿಗೆ. ಆ ತಿನಿಸು ಅಥವಾ ಪೇಯದ ರುಚಿ, ಬಣ್ಣ ಮತ್ತು ಮೇಲ್ಮೈಯನ್ನು ಆಕರ್ಷಕವಾಗಿ ಮಾಡುವುದು ಎಲ್ಲಕ್ಕಿಂತ ಮೊದಲ ಕಾರಣ. ಎರಡನೆಯದು, ಸಕ್ಕರೆ ಎಂಬ ಗ್ಲೂಕೋಸ್‌ ಮತ್ತು ಫ್ರಕ್ಟೋಸ್‌ಗಳ ಮಿಶ್ರಣವು ವ್ಯಸನವನ್ನು ಉಂಟುಮಾಡುವಂಥದ್ದು. ಒಮ್ಮೆ ಸಕ್ಕರೆಯ ರುಚಿ ಕಂಡುಕೊಳ್ಳುವ ಪುಟ್ಟ ಮಕ್ಕಳನ್ನು ಅದರಿಂದ ಹೊರತಾಗಿಸುವುದು ಕಷ್ಟದ ಕೆಲಸ. ಅದು ಮಕ್ಕಳಿಗೆ ಮಾತ್ರ ಸೀಮಿತವಲ್ಲ, ಸಿಹಿ ಇಷ್ಟ ಎನ್ನುವ ಎಲ್ಲರ ವಿಷಯದಲ್ಲೂ ಇದು ಸತ್ಯ. ಇದಲ್ಲದೆಯೇ ಬೇರೆ ಕಾರಣಗಳೂ ಸಕ್ಕರೆ ಸೇರಿಸುವುದಕ್ಕಿರಬಹುದು. ಉಪ್ಪಿನಂತೆಯೇ ಸಕ್ಕರೆಯನ್ನೂ ಸಂರಕ್ಷಕವಾಗಿ ಕೆಲವೊಮ್ಮೆ ಬಳಸುವುದಿದೆ.

ಮಿತಿ ಇದೆ

ಆಹಾರ ತಜ್ಞರ ಪ್ರಕಾರ, ನೈಸರ್ಗಿಕವಾಗಿ ಹಣ್ಣು, ತರಕಾರಿ, ಅಂಜೂರ, ಖರ್ಜೂರದಂಥ ಆಹಾರಗಳಲ್ಲಿ ದೊರೆಯುವ ಸಕ್ಕರೆಯ ಬಗ್ಗೆ ತೀರಾ ಗಾಬರಿ ಬೀಳಬೇಕಿಲ್ಲ. ಸ್ವಲ್ಪ ಆಚೀಚೆ ಆದರೂ ದೇಹ ಸುಧಾರಿಸಿಕೊಳ್ಳುತ್ತದೆ. ಆದರೆ ಹೆಚ್ಚುವರಿ ಸಕ್ಕರೆಯನ್ನು ಸೇವಿಸುವುದಕ್ಕೆ ಮಿತಿಯಿದೆ. 2 ವರ್ಷದ ನಂತರದ ಮಕ್ಕಳಿಗೆ, ದಿನಕ್ಕೆ ಹೆಚ್ಚೆಂದರೆ ನಾಲ್ಕು ಟೀ ಚಮಚ ಹೆಚ್ಚುವರಿಯಾಗಿ ಸಕ್ಕರೆ ನೀಡಬಹುದು. ಅದರಲ್ಲಿ ಮಕ್ಕಳು ತಿನ್ನುವ ನಿತ್ಯದ ಆಹಾರ, ಸಿಹಿ ತಿನಿಸುಗಳು, ಬಿಸ್ಕೆಟ್‌ನಂಥವು, ಹಾಲಿಗೆ ಬೆರೆಸುವ ಪುಡಿಗಳು ಎಲ್ಲವೂ ಸೇರಿವೆ. ಅದಕ್ಕಿಂತ ಪುಟ್ಟ ಮಕ್ಕಳಿಗೆ ಹೆಚ್ಚುವರಿ ಸಕ್ಕರೆಯನ್ನು ನೀಡುವುದೇ ಬೇಡ ಎನ್ನುತ್ತಾರೆ ಆಹಾರ ತಜ್ಞರು. ಹಾಗಿರುವಾಗ ಶಿಶುಪೋಷಣೆಯ ಆಹಾರಗಳಲ್ಲೇ ಸಕ್ಕರೆ ಸೇರಿಸಬಹುದೇ?

ವ್ಯತ್ಯಾಸವಿದೆ

ಮಾರುಕಟ್ಟೆಯಲ್ಲಿ ದೊರೆಯುವ ಬೇಬಿ ಸೀರಿಯಲ್‌ಗಳಲ್ಲಿನ ಸಕ್ಕರೆಯ ಅಂಶದಲ್ಲಿ ವ್ಯತ್ಯಾಸವಿದೆ. ಒಂದೇ ಬ್ರಾಂಡ್‌ನ ಭಿನ್ನ ವೇರಿಯೆಂಟ್‌ಗಳಲ್ಲಿ ಮಾತ್ರವಲ್ಲ, ಅದೇ ಹೆಸರಿನ ಸೀರಿಯಲ್‌ಗಳು ಬೇರೆ ಬೇರೆ ದೇಶಗಳಲ್ಲಿ ಮಾರಾಟ ಆಗುವಾಗಲೂ ಸಿಹಿ ಪ್ರಮಾಣ ವ್ಯತ್ಯಾಸವಾಗುತ್ತದೆ. ಅಂದರೆ ಬಡ ಮತ್ತು ಅಭಿವೃದ್ಧಶೀಲ ದೇಶಗಳ ಮಾರುಕಟ್ಟೆಯಲ್ಲಿ ಮಾರಾಟವಾಗುವ ಸೀರಿಯಲ್‌ಗಳಲ್ಲಿ ಸಾಮಾನ್ಯವಾಗಿ ಸಿಹಿ ಹೆಚ್ಚಿರುತ್ತದೆ. ಇದರಿಂದ ಮಕ್ಕಳು ಅವುಗಳನ್ನೇ ಹೆಚ್ಚು ಬಯಸಿ, ಕಂಪೆನಿಗಳ ಮಾರಾಟವೂ ಹೆಚ್ಚಲೆಂಬ ಸರಳ ಹುನ್ನಾರವಷ್ಟೇ ಇವುಗಳ ಹಿಂದಿದೆ. ಹಾಗಾಗಿಯೇ ಇಂಥ ಸಕ್ಕರೆಭರಿತ ಪೇಯಗಳನ್ನು ʻಹೆಲ್ತ್‌ ಡ್ರಿಂಕ್‌ʼಗಳ ಪಟ್ಟಿಯಿಂದ ತೆಗೆಯುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಇತ್ತೀಚೆಗೆ ಆದೇಶಿಸಿದ್ದು.

ಏನು ಸಮಸ್ಯೆ?

ಮಕ್ಕಳಿಗೆ ಆಹಾರ ತಿನ್ನಿಸುವುದಕ್ಕೆ ಬಹಳಷ್ಟು ಹೆತ್ತವರು ಸರ್ಕಸ್‌ ಮಾಡಬೇಕು. ಹಾಗಿರುವಾಗ ಸಿಹಿಭರಿತ ಸೀರಿಯಲ್‌ಗಳನ್ನು ಅವು ರಗಳೆಯಿಲ್ಲದೆ ತಿನ್ನುತ್ತವೆ ಎಂದಾದರೆ, ಯಾಕೆ ಬೇಡ? ಆಹಾರ ಮತ್ತು ಆರೋಗ್ಯ ತಜ್ಞರ ಪ್ರಕಾರ, ಎಳೆಯ ವಯಸ್ಸಿನಲ್ಲಿ ಸಿಹಿ ತಿನ್ನಿಸುವುದರಿಂದ ಆಗುವ ತೊಂದರೆಗಳು ಬಹಳಷ್ಟು. ಮೊದಲಿಗೆ, ಹಾಲು ಹಲ್ಲುಗಳು ಮೊಳೆಯುತ್ತಲೇ ಹುಳುಕಾಗುತ್ತವೆ. ಪುಟಾಣಿಗಳು ಹಲ್ಲುನೋವಿನ ಪ್ರಕೋಪವನ್ನು ಮೂರ್ನಾಲ್ಕು ವರ್ಷಗಳ ಪ್ರಾಯದಲ್ಲೇ ಎದುರಿಸಬೇಕಾಗುತ್ತದೆ. ಇದಕ್ಕಿಂತ ಚಿಂತೆಯ ವಿಷಯವೆಂದರೆ ಮಕ್ಕಳಲ್ಲಿ ಪೇರಿಸಿಕೊಳ್ಳುವ ಬೊಜ್ಜು.

ರುಚಿಯೆಂದರೆ…!

ಇಷ್ಟಕ್ಕೇ ಮುಗಿಯುವುದಿಲ್ಲ. ಷಡ್ರಸೋಪೇತ ಆಹಾರ ಎನ್ನುವ ಕಲ್ಪನೆ ಈಗಲೇ ಮಕ್ಕಳ ಮನಕ್ಕೆ ನಿಲುಕುತ್ತಿಲ್ಲ. ಕಹಿ, ಒಗರು ಮುಂತಾದ ರುಚಿಗಳನ್ನೆಲ್ಲ ಬದಿಗೊತ್ತಿದ್ದಾಗಿದೆ. ಇದನ್ನೂ ಮೀರಿ, ರುಚಿಯೆಂದರೆ ಸಿಹಿ ಮಾತ್ರ ಎನ್ನುವಂತಾಗುತ್ತದೆ. ಜೀವನದುದ್ದಕ್ಕೂ ಇದನ್ನೇ ರೂಢಿಸಿಕೊಂಡರೆ ಮಧುಮೇಹ, ಹೃದ್ರೋಗಗಳೆಲ್ಲ ಮುತ್ತಿಕೊಳ್ಳುವುದಕ್ಕೆ ದೀರ್ಘ ಸಮಯ ಬೇಡ. ಇದೇ ಪರಿಪಾಠ ಉಪ್ಪಿಗೂ ಅನ್ವಯಿಸುತ್ತದೆ. ಹೆಚ್ಚು ಸೋಡಿಯಂ ಇರುವಂಥ ಪ್ಯಾಕೆಟ್‌ ತಿನಿಸುಗಳು ಮತ್ತು ಸಂಸ್ಕರಿತ ಆಹಾರಗಳು ಆರೋಗ್ಯವನ್ನು ಬುಡಮೇಲು ಮಾಡುತ್ತವೆ.

ಪರ್ಯಾಯ ಉಂಟೇ?

ಯಾಕಿಲ್ಲ! ಮಾರುಕಟ್ಟೆಯಲ್ಲಿ ದೊರೆಯುವ ಸೀರಿಯಲ್‌ಗಳನ್ನೇ ತಿಂದು ಮಕ್ಕಳು ಬದುಕಬೇಕಿಲ್ಲ, ಬೆಳೆಯಬೇಕಿಲ್ಲ. ಮನೆಯಲ್ಲೇ ಮಾಡುವ ಆರೋಗ್ಯಕರ ಗಂಜಿಗಳು, ಅಂಬಲಿಗಳು ಯಾವತ್ತಿಗೂ ಶ್ರೇಷ್ಠ. ಇದಕ್ಕೆಲ್ಲ ಸಮಯವಿಲ್ಲ ಎಂದಿದ್ದರೆ, ಹಲವು ರೀತಿಯ ಮೊಳಕೆ ಕಟ್ಟಿದ ಪುಡಿಗಳನ್ನು ಮಾಡಿರಿಸಿಕೊಳ್ಳುವುದು ಲಾಗಾಯ್ತಿನಿಂದಲೂ ಬಂದ ಕ್ರಮ. ಇದಕ್ಕೆ ಹೆಚ್ಚುವರಿ ಸಿಹಿಯ ಬದಲಿಗೆ ಹಣ್ಣಿನ ರಸಗಳು, ಋತುವಿನ ತರಕಾರಿಗಳು, ಖರ್ಜೂರ ಅಥವಾ ಅಂಜೂರದ ಪೇಸ್ಟ್‌ ಇತ್ಯಾದಿಗಳನ್ನು ಸೇರಿಸಿ ರುಚಿ ಹೆಚ್ಚಿಸಬಹುದು.

ಇದನ್ನೂ ಓದಿ: Dental Braces: ಹಲ್ಲುಗಳ ಸೌಂದರ್ಯ ವೃದ್ಧಿಗೆ ಬ್ರೇಸಸ್‌ ಹಾಕುವ ಯೋಚನೆ ಇದೆಯೇ? ಈ ಮಾಹಿತಿ ತಿಳಿದಿರಲಿ

Exit mobile version