ಸ್ಥಿರವಾದ ಆಧಾರವನ್ನು ʻಬೆನ್ನೆಲುಬುʼ ( backbone health) ಎಂದು ಸಂಬೋಧಿಸುವುದು ವಾಡಿಕೆ. ಬೆನ್ನೆಲುಬಿನಂಥದ್ದು ಎಲ್ಲಾ ಹಂದರಗಳನ್ನೂ ಗಟ್ಟಿಯಾಗಿ ನಿಲ್ಲಿಸಬಲ್ಲದು ಎಂಬುದು ಇದರ ಅರ್ಥವಷ್ಟೇ. ಆದರೆ ಬೆನ್ನೆಲುಬೇ ಗಟ್ಟಿಯಿಲ್ಲದಿದ್ದರೆ? ಹೀಗಾಗುವುದಕ್ಕೂ ಖಂಡಿತ ಸಾಧ್ಯ. ಮೆದುಳಿಗೆ ಮತ್ತು ನಮ್ಮ ದೇಹದ ಇತರೆಲ್ಲ ಭಾಗಗಳಿಗೆ ಸಂವಹನ ಕಲ್ಪಿಸುವ ಕೆಲಸವೂ ಇದೆ ಬೆನ್ನೆಲುಬಿಗೆ. ಇಷ್ಟೊಂದು ಕಾರ್ಯಭಾರ ಹೊತ್ತಿರುವ ಬೆನ್ನೆಲುಬಿಗೆ ಭಾರ ಹೆಚ್ಚಾಗಿ ನೋವು, ಕಿರಿಕಿರಿ ಮತ್ತು ಅನಾರೋಗ್ಯಕ್ಕೆ ಕಾರಣ ಆಗುವುದೂ ಇದೆ. ಹಾಗಾದರೆ ನಮ್ಮ ಬೆನ್ನುಹುರಿಗೆ ತೊಂದರೆಯಾಗುವುದಕ್ಕೆ ಏನು ಕಾರಣಗಳಿವೆ? ಇದಕ್ಕೇನು ಮಾಡಬಹುದು?
ಅಸಮರ್ಪಕ ಭಂಗಿ
ಏಳುವಾಗ, ಕೂರುವಾಗ, ನಡೆಯುವಾಗ, ಬಗ್ಗುವಾಗ, ತಿರುಗುವಾಗ- ಹೀಗೆ ನಮ್ಮ ದೇಹ ಏನೇ ಚಟುವಟಿಕೆ ಮಾಡಬೇಕಿದ್ದರೂ ಬೆನ್ನು ಮೂಳೆಯ ಕ್ರಿಯೆ ಇದ್ದೇ ಇರುತ್ತದೆ. ಅದರಲ್ಲೂ ಯಾವುದೇ ಒಂದು ಭಂಗಿಯಲ್ಲಿ ದೀರ್ಘ ಕಾಲ ಇರಬೇಕೆಂದರೆ, ಅದರ ಭಂಗಿ ಸೂಕ್ತವಾಗಿರಬೇಕು. ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವವರು ಅದಕ್ಕೆ ಸರಿಯಾದ ಭಂಗಿಯನ್ನು ಅಳವಡಿಸಿಕೊಳ್ಳದಿದ್ದರೆ ಬೆನ್ನುಹುರಿ, ಸೊಂಟದ ಡಿಸ್ಕ್ ಅಥವಾ ಕುತ್ತಿಗೆಗೆ ತೊಂದರೆ ತಪ್ಪಿದ್ದಲ್ಲ. ಹಾಗಾಗಿ ನಮ್ಮ ಭಂಗಿಗಳು ಸೂಕ್ತವಾಗಿದ್ದರೆ ಬೆನ್ನು ಹುರಿಯನ್ನು ನೋವಿಲ್ಲದಂತೆ ಕಾಪಾಡಿಕೊಳ್ಳಬಹುದು.
ಜೀವನ ಶೈಲಿ
ಜಡವಾದ ಜೀವನಶೈಲಿಯಂತೂ ಬೆನ್ನುಹುರಿಯ ಸ್ವಾಸ್ಥ್ಯದ ಮೊದಲ ಶತ್ರು. ನಮ್ಮ ಮಾಂಸಖಂಡಗಳಿಗೆ ಸರಿಯಾದ ಬಲವೃದ್ಧಿ ಇಲ್ಲದಿದ್ದರೆ, ಅವು ನಮ್ಮ ದೇಹದ ಕೀಲುಗಳನ್ನು ರಕ್ಷಿಸುವುದು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಬೆನ್ನಿಗೂ ಸರಿಯಾದ ವ್ಯಾಯಾಮ ಬೇಕು. ನಡಿಗೆ, ಈಜು, ಯೋಗ- ಇಂಥ ಯಾವುದಾದರೂ ಸರಿ. ಇವುಗಳಿಂದ ಬೆನ್ನು ಮೂಳೆಯ ಸುತ್ತಲಿನ ಮಾಂಸಖಂಡಗಳನ್ನು ಸದೃಢ ಮಾಡಬಹುದು.
ಬೊಜ್ಜು
ದೇಹದ ತೂಕ ಹೆಚ್ಚುತ್ತಿದ್ದಂತೆ ಎಲ್ಲಾ ಕೀಲುಗಳ ಮೇಲೂ ಒತ್ತಡ ಹೆಚ್ಚುತ್ತದೆ. ಇದಕ್ಕೆ ಬೆನ್ನು ಹುರಿಯೂ ಹೊರತಲ್ಲ. ಅತಿಯಾದ ಒತ್ತಡದಿಂದ ಕೀಲುಗಳು ಸವೆಯಲು ಪ್ರಾರಂಭಿಸುತ್ತವೆ. ಹಾಗಾಗಿ ದೇಹದ ತೂಕ ಅನಗತ್ಯವಾಗಿ ಹೆಚ್ಚದಂತೆ ಎಚ್ಚರ ವಹಿಸುವುದರಿಂದ ಬೆನ್ನು ಮೂಳೆಯ ಆರೋಗ್ಯ ಕಾಪಾಡಬಹುದು.
ಧೂಮಪಾನ
ಸಿಗರೇಟ್‌ನಲ್ಲಿರುವ ನಿಕೋಟಿನ್ ಅಂಶ ರಕ್ತಪರಿಚಲನೆಗೆ ಅಡ್ಡಿ ಮಾಡುತ್ತದೆ. ಬೆನ್ನುಹುರಿಗೂ ರಕ್ತದ ಸರಬರಾಜು ಕುಂಠಿತವಾಗುತ್ತದೆ. ಇದರಿಂದ ಎಲ್ಲಾ ಸಣ್ಣ ಸಮಸ್ಯೆಗಳೂ ಬೆಟ್ಟದಂತಾಗಿ, ಬೆನ್ನು ಮೂಳೆಯ ಆರೋಗ್ಯ ಕುಸಿಯುತ್ತದೆ. ಹಾಗಾಗಿ ಧೂಮಪಾನ ನಿಲ್ಲಿಸುವುದು ಮಾತ್ರವಲ್ಲ, ಇದನ್ನು ಮಾಡುತ್ತಿರುವ ಇತರರಿಂದಲೂ ದೂರ ಇರುವುದು ಅಗತ್ಯ.
ಗಾಯ
ಗಂಭೀರವಾದ ಗಾಯ ಅಥವಾ ಅಪಘಾತದಂಥ ಘಟನೆಗಳಿಂದಲೂ ಬೆನ್ನುಹುರಿಗೆ ತೊಂದರೆಯಾಗುವುದಕ್ಕೆ ಸಾಧ್ಯ. ಮೂಳೆ ಮುರಿತ ಅಥವಾ ಮಾಂಸಖಂಡಗಳು ಜಖಂ ಆದಾಗ ಹೆಚ್ಚಿನ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ಅಗತ್ಯವಾಗಿ ಬೇಕು. ಸೂಕ್ತ ಪುನರ್ವಸತಿ ದೊರೆಯದಿದ್ದರೆ, ಬೆನ್ನುಹುರಿ ಕಾಯಂ ಊನವಾಗುವ ಸಾಧ್ಯತೆಯೂ ಇಲ್ಲದಿಲ್ಲ.
ಇದಲ್ಲದೆ, ಆನುವಂಶಿಕ ಕಾರಣಗಳೂ ಕೆಲವೊಮ್ಮೆ ಬೆನ್ನು ಮೂಳೆಯ ಆರೋಗ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಚಟುವಟಿಕೆಯ ಭಂಗಿಗಳನ್ನು ಸರಿಯಾಗಿರಿಸಿಕೊಂಡು, ಸೂಕ್ತ ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಅಳವಡಿಸಿಕೊಂಡರೆ, ಬೆನ್ನುಹುರಿಯನ್ನು ಸದೃಢವಾಗಿ ಇರಿಸಿಕೊಳ್ಳುವುದು ಕಷ್ಟವಲ್ಲ.
ಇದನ್ನೂ ಓದಿ: Mental Health Institute : ದೇಶದ ಯಾವುದೇ ಸರ್ಕಾರಿ ಮಾನಸಿಕ ಆರೋಗ್ಯ ಸಂಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿಲ್ಲ!