Site icon Vistara News

Banana Benefits For Pregnant Women: ಗರ್ಭಿಣಿಯರು ಬಾಳೆಹಣ್ಣನ್ನು ತಿನ್ನಲೇಬೇಕು, ಏಕೆಂದರೆ…

Banana Benefits For Pregnant Women

ಬಾಳೆಹಣ್ಣು ಸಾಮಾನ್ಯವಾಗಿ ಎಲ್ಲರನ್ನೂ ತಲುಪಬಲ್ಲ ಜನಸಾಮಾನ್ಯರ ಹಣ್ಣು. ಸಾರ್ವಕಾಲಿಕ ಹಣ್ಣೂ ಕೂಡ. ಸುಲಭವಾಗಿ ತಿನ್ನಬಲ್ಲ, ರುಚಿಯಾಗಿರುವ, ವರ್ಷವಿಡೀ, ಜಗತ್ತಿನ ಎಲ್ಲ ಭಾಗಗಳಲ್ಲೂ ಲಭ್ಯವಿರುವ ಹಣ್ಣಿದು. ಎಲ್ಲೇ ಪ್ರವಾಸ ಮಾಡಲಿ, ಏನೂ ತಿನ್ನಲು ಸಿಗದಿದ್ದರೂ, ಕೊನೆಗೆ ಬಾಳೆಹಣ್ಣನ್ನಾದರೂ ಮಾರುಕಟ್ಟೆಯಲ್ಲಿ ಖರೀದಿಸಬಹುದು. ಜೊತೆಗೆ ಒಂದೆರಡು ಬಾಳೆಹಣ್ಣು ತಿಂದರೆ, ಕೆಲಗಂಟೆಗಳ ಕಾಲ ಹೊಟ್ಟೆ ತುಂಬಿಸಿ ಇಟ್ಟುಕೊಳ್ಳಬಹುದಾದ ಹಣ್ಣು. ಸಾಮಾನ್ಯರ ಕೈಗೆ ಎಟಕಬಹುದಾದ, ಬಡವರೂ ಖರೀದಿಸಿ ತಿಂದು ಹೊಟ್ಟೆ ತುಂಬಿಸಬಹುದಾದ ಹಣ್ಣು. ಅಷ್ಟೇ ಅಲ್ಲ, ಪೋಷಕಾಂಶಗಳ ವಿಚಾರದಲ್ಲೂ ಈ ಹಣ್ಣು ಯಾವ ಹಣ್ಣಿಗೂ ಕಡಿಮೆಯಿಲ್ಲ. ಆದರೂ ಬಾಳೆಹಣ್ಣು ತಿನ್ನಲು ಜನರು ಹಿಂದೆಮುಂದೆ ನೋಡುವುದುಂಟು. ಕಾರಣ ಇದು ಬಹಳ ಸಿಹಿಯಾದ ಹಣ್ಣು ಅಷ್ಟೇ ಅಲ್ಲ, ಡಯಟ್‌ ಇತ್ಯಾದಿ ಮಾಡುವವರಿಗೆ, ಮಧುಮೇಹಿಗಳಿಗೆ ಸೇರಿದಂತೆ ಕೆಲವು ಆರೋಗ್ಯದ ಸಮಸ್ಯೆ ಇರುವ ಮಂದಿಗೆ ಈ ಹಣ್ಣು ಸೂಕ್ತವಲ್ಲ ಎಂಬ ನಂಬಿಕೆ. ಜೊತೆಗೆ, ಇದನ್ನು ತಿಂದರೆ ತೂಕ ಹೆಚ್ಚುತ್ತದೆ ಎಂಬುದೂ ಕೂಡಾ. ಆದರೆ, ಇವೆಲ್ಲ ದೂರುಗಳಿದ್ದರೂ, ಬಾಳೆಹಣ್ಣು ಬಡವರ ಬಂಧು. ಇಂತಹ ಬಾಳೆಹಣ್ಣು ಗರ್ಭಿಣಿಯರಿಗೆ (Banana Benefits For Pregnant Women) ಅತ್ಯುತ್ತಮ ಆಹಾರ ಕೂಡ ಎಂಬುದು ನಿಮಗೆ ಗೊತ್ತೇ? ಹೌದು. ಬಾಳೆಹಣ್ಣಿನಲ್ಲಿ ಗರ್ಭಿಣಿಯರಿಗೆ ಅಗತ್ಯವಾಗಿ ಬೇಕಾಗಿರುವ ಫೋಲಿಕ್‌ ಆಸಿಡ್‌, ಕಬ್ಬಿಣಾಂಶ ಸೇರಿದಂತೆ ಹಲವಾರು ಖನಿಜಾಂಶಗಳೂ, ವಿಟಮಿನ್‌ಗಳೂ ಇರುವುದರಿಂದ ಇದು ಗರ್ಭಿಣಿಯರಿಗೆ ಒಳ್ಳೆಯದನ್ನೇ ಮಾಡುತ್ತದೆ. ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೂ ಇದು ಪೂರಕ. ಬನ್ನಿ, ಹಾಗಾದರೆ ಗರ್ಭಿಣಿಯರು ಬಾಳೆಹಣ್ಣನ್ನು ಏಕೆ ತಿನ್ನಬೇಕು ಎಂಬುದನ್ನು (Banana Benefits For Pregnant Women) ವಿವರವಾಗಿ ನೋಡೋಣ.

ಮಾರ್ನಿಂಗ್‌ ಸಿಕ್‌ನಸ್‌ಗೆ

ಗರ್ಭಿಣಿಯರನ್ನು ಕಾಡುವ ಬಹುದೊಡ್ಡ ಸಮಸ್ಯೆ ಎಂದರೆ ಇದು. ಮಾರ್ನಿಂಗ್‌ ಸಿಕ್‌ನೆಸ್‌. ಬೆಳಗ್ಗೆ ಏಳುವಾಗಲೇ ತಲೆನೋವು, ತಲೆಸುತ್ತು, ವಾಂತಿ, ಹೊಟ್ಟೆ ತೊಳಸಿದಂತಾಗುವುದು, ಕೆಲವು ವಾಸನೆಗಳು ಸಹ್ಯವೆನಿಸದಿರುವುದು ಇತ್ಯಾದಿ ಇತ್ಯಾದಿ ಸಮಸ್ಯೆಗಳು ಗರ್ಭಿಣಿಯರಲ್ಲಿ ಸಾಮಾನ್ಯ. ಆದರೆ ಬಾಳೆಹಣ್ಣು ತಿನ್ನುವುದಿಂದ ಈ ಸಮಸ್ಯೆಗಳಿಗೆ ಕೊಂಚ ಆರಾಮ ದೊರೆಯುತ್ತದಂತೆ. ಬಾಳೆಹಣ್ಣಿನಲ್ಲಿ ವಿಟಮಿನ್‌ ಬಿ ಹೇರಳವಾಗಿ ಇರುವುದರಿಂದ ಇದು ನೈಸರ್ಗಿಕವಾಗಿ ಇವುಗಳಿಗೆ ಪರಿಹಾರ ಕೊಡಬಲ್ಲವು.

ರಕ್ತದೊತ್ತಡ ನಿಯಂತ್ರಣಕ್ಕೆ

ಬಾಳೆಹಣ್ಣಿನಲ್ಲಿ ಹೇರಳವಾಗಿ ಫೋಟಾಶಿಯಂ ಇದೆ. ಇದು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಲು, ಸಮತೋಲನದಲ್ಲಿಡಲು ನೆರವಾಗುವ ಪೋಷಕಾಂಶ. ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ರಕ್ತದೊತ್ತಡ ಏರುಪೇರಾಗುವ ಸಮಸ್ಯೆಯೂ ಕಾಡುವುದರಿಂದ ಬಾಳೆಹಣ್ಣು ಒಳ್ಳೆಯದು.

ರಕ್ತಹೀನತೆ ತಡೆಯಲು

ಕಬ್ಬಿಣಾಂಶದ ಕೊರತೆ ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಲ್ಲಿ ಕಂಡುಬರುತ್ತದೆ. ಇದರ ಪರಿಣಾಮ ನಿಶಕ್ತಿ, ರಕ್ತಹೀನತೆಯೂ ಬರಬಹುದು. ಬಾಳೆಹಣ್ಣಿನಲ್ಲಿ ಕಬ್ಬಿಣಾಂಶವೂ ಹೇರಳವಾಗಿ ಇರುವುದರಿಂದ, ಇದು ಗರ್ಭಿಣಿಯರಿಗೆ ಈ ಸಮಸ್ಯೆ ಬರದಂತೆ ತಡೆಯುವಲ್ಲಿ ಸಹಾಯ ಮಾಡುತ್ತದೆ.

ಮಿದುಳಿನ ಬೆಳವಣಿಗೆಗೆ

ವಿಟಮಿನ್‌ ಬಿ 6, ಕಬ್ಬಿಣಾಂಶ ಹಾಗೂ ಫೋಲಿಕ್‌ ಆಸಿಡ್‌ ಈ ಮೂರೂ ಪೋಷಕಾಂಶಗಳು ಮಿದುಳಿನ ಆರೋಗ್ಯಕ್ಕೆಒಳ್ಳೆಯದು. ಇವು ಮೂರೂ ಕೂಡಾ ಬಾಳೆಹಣ್ಣಿನಲ್ಲಿದೆ. ಹಾಗಾಗಿ ಹೊಟ್ಟೆಯೊಳಗೆ ಬೆಳೆಯುವ ಮಗುವಿನ ಮಿದುಳಿನ ಬೆಳವಣಿಗೆಗೆ ಇದು ಒಳ್ಳೆಯದು.

ಎದೆಯುರಿಗೆ

ಗರ್ಭಿಣಿ ಮಹಿಳೆಯರಿಗೆ ಸಾಮಾನ್ಯವಾಗಿ ಕಂಡು ಬರುವ ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಎದೆಯುರಿ. ಇದನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವಿಲ್ಲವಾದರೂ ಕೊಂಚ ಮಟ್ಟಿನ ಸಹಾಯಕ್ಕೆ ಬರುವುದು ಬಾಳೆಹಣ್ಣು. ಇದು ಅಸಿಡಿಟಿಯನ್ನು ಕಡಿಮೆ ಮಾಡಿ, ಎದೆಯುರಿಯನ್ನು ಹತೋಟಿಗೆ ತರುತ್ತದೆ.
ಗರ್ಭಿಣಿಯರು ಇತ್ತೀಚಿನ ದಿನಗಳಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿಕೆಯಂತ ಸಮಸ್ಯೆಯನ್ನೂ ಎದುರಿಸುವುದರಿಂದ, ಬಾಳೆಹಣ್ಣು ತಿನ್ನುವ ಮೊದಲು ಗರ್ಭಿಣಿಯರು ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

ಇದನ್ನೂ ಓದಿ: World Hearing Day: ಹೇಳಿದ್ದು ಕೇಳಿಸ್ತಾ… ಇವತ್ತು ವಿಶ್ವ ಶ್ರವಣ ದಿನ!

Exit mobile version