ಬೆಳ್‌ಬೆಳಗ್ಗೆ ಎದ್ದ ಕೂಡಲೇ ಬೀಟ್‌ರೂಟ್ ಜ್ಯೂಸ್ (beetroot juice) ಕುಡಿಯುವುದು ಅತ್ಯುತ್ತಮ ಅಭ್ಯಾಸ ಎಂಬುದು ಗೊತ್ತೇ? ಬೇರೆ ಹೊತ್ತಿನಲ್ಲಿ ಬೀಟ್‌ರೂಟ್ ಜ್ಯೂಸ್ ಕುಡಿಯುವುದಕ್ಕಿಂತಲೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ (empty stomach) ಬೀಟ್‌ರೂಟ್‌ನ ಜ್ಯೂಸ್ ಸೇವಿಸುವುದರಿಂದ ಉಪಯೋಗ (Beetroot Juice Benefits) ಹೆಚ್ಚು. ಯಾಕೆಂದರೆ, ಬೀಟ್‌ರೂಟಿನಲ್ಲಿರುವ ವಿಟಮಿನ್ ಎ, ಸಿ ಹಾಗೂ ಖನಿಜಾಂಶಗಳಾದ ಕಬ್ಬಿಣಾಂಶ, ಪೊಟಾಶಿಯಂ ಹಾಗೂ ನಾರಿನಂಶವು ದೇಹಕ್ಕೆ ಎಲ್ಲಕ್ಕಿಂತ ಮೊದಲು ಸಿಕ್ಕು, ತತ್ಕ್ಷಣವೇ ದೇಹವು ಕಾರ್ಯಪ್ರವೃತ್ತರಾಗುವಂತೆ ಮಾಡುತ್ತದೆ. ಇದು ಎಂತಹ ಶಕ್ತಿವರ್ಧಕ (energy booster) ಎಂದರೆ, ಇದರಲ್ಲಿರುವ ನೈಸರ್ಗಿಕ ಸಕ್ಕರೆಯ ಅಂಶವು ದೇಹಕ್ಕೆ ಎದ್ದ ಕೂಡಲೇ ಸಿಗುವುದರಿಂದ ದೇಹದಲ್ಲಿ ಕೂಡಲೇ ಶಕ್ತು ಉತ್ಪಾದನೆಯಾಗಿ, ಚುರುಕುತನ ಮೈಗೂಡುತ್ತದೆ. ರಕ್ತಪರಿಚಲನೆ ಜಾಗೃತವಾಗಿ, ರಕ್ತದೊತ್ತಡ ಮತ್ತಿತರ ಸಮತೋಲನಗಳು ತಾನೇತಾನೇಗಿ ಆಗುತ್ತದೆ.
ಇಷ್ಟೇ ಅಲ್ಲ, ಬೀಟ್‌ರೂಟಿಗೆ ಇಡೀ ದೇಹವನ್ನು ಡಿಟಾಕ್ಸ್ (body detox) ಮಾಡುವ ಸಾಮರ್ಥ್ಯವಿದೆ. ಇದು ಪಿತ್ತಕೋಶವನ್ನು ಚುರುಕಾಗುವಂತೆ ಮಾಡುತ್ತದೆ. ಪಚನಕ್ರಿಯೆಯನ್ನೂ ಚುರುಕುಗೊಳಿಸುತ್ತದೆ. ಇದರಲ್ಲಿರುವ ಹೆಚ್ಚಿನ ಆಂಟಿ ಆಕ್ಸಿಡೆಂಟ್‌ಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬನ್ನಿ, ಬೆಳಗ್ಗೆ ಎದ್ದ ಕೂಡಲೇ ಬೀಟ್‌ರೂಟ್ ಜ್ಯೂಸನ್ನು ಕುಡಿಯುವುದರಿಂದ ಯಾವೆಲ್ಲ ಲಾಭಗಳಿವೆ (Beetroot Juice health Benefits) ಎಂಬುದನ್ನು ವಿಸ್ತೃತವಾಗಿ ನೋಡೋಣ ಬನ್ನಿ.
1. ಹೃದಯಕ್ಕೆ ಬೆಸ್ಟ್: ಬೀಟ್‌ರೂಟಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೈಟೇಟ್ ಇರುವುದರಿಂದ ಇದು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ. ಮುಖ್ಯವಾಗಿ ಹೃದಯದ ಆರೋಗ್ಯಕ್ಕೆ ಇದು ಯಾವುದೂ ಮಾಡದ ಸಹಾಯವನ್ನು ಮಾಡುತ್ತದೆ.
2. ಕ್ಯಾನ್ಸರ್ ವಿರುದ್ಧವೂ ಸೈ: ಬೀಟ್‌ರೂಟ್‌ನಲ್ಲಿರುವ ಬೀಟಾ ಸಯನಿನ್ ಎಂಬ ಅಂಶವು ಕ್ಯಾನ್ಸರ್‌ಕಾರಕ ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಟ ಮಾಡುತ್ತದೆ. ಲಿಂಪೋಸೈಟಿಕ್ ಲುಕೇಮಿಯಾದಂತಹ ಕ್ಯಾನ್ಸರ್‌ನ ವಿರುದ್ಧ ಹೋರಾಡಲು ಬೀಟ್‌ರೂಟ್‌ನ ಆಂಟಿ ಇನ್‌ಫ್ಲಮೇಟರಿ ಗುಣಗಳು ಸಹಾಯ ಮಾಡುತ್ತದೆ.
3. ಪಿತ್ತಕೋಶದ ಆರೋಗ್ಯದ ಗೆಳೆಯ: ನಿಮ್ಮ ಪಿತ್ತಕೋಶದ ಆರೋಗ್ಯವನ್ನು ಬಹಳ ಸರಳವಾಗಿ ಹಾಗೂ ಆರೋಗ್ಯಕರ ನೈಸರ್ಗಿಕ ಮಾದರಿಯಲ್ಲಿ ಮಾಡಬಹುದಾಗಿದ್ದರೆ ಅದು ಬೀಟ್‌ರೂಟ್ ಸೇವನೆಯ ಮೂಲಕ. ಬೀಟ್‌ರೂಟಿನಲ್ಲಿರುವ ಬೀಟೈನ್ ಅಂಶವು ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಸಮಸ್ಯೆಯ ವಿರುದ್ಧ ಹೋರಾಡುವ ಮೂಲಕ ಪಿತ್ತಕೋಶದ ಆರೋಗ್ಯವನ್ನು ಕಾಪಾಡುತ್ತದೆ.
4. ಹೊಳೆಯುವ ಚರ್ಮಕ್ಕೆ ಇದರ ಹೊರತು ಬೇರೇನೂ ಬೇಡ: ಪಳಪಳನೆ ಹೊಳೆಯುವ, ಸಮಸ್ಯೆಗಳಿಂದ ರಹಿತವಾದ ಚರ್ಮ (skin tone) ಬೇಕೆಂಬ ಆಸೆ ನಿಮಗಿದ್ದರೆ, ಬೆಳಗ್ಗೆ ಬೀಟ್‌ರೂಟ್ ಜ್ಯೂಸ್ ಕುಡಿಯಿರಿ. ಇದು ಒಳ್ಳೆಯ ಡಿಟಾಕ್ಸ್ ಕೂಡಾ ಆಗಿರುವುದರಿಂದ ದೇಹದಲ್ಲಿರುವ ಕಶ್ಮಲಗಳನ್ನೆಲ್ಲ ಹೊರಕ್ಕೆ ಕಳಿಸಿ ಆರೋಗ್ಯವನ್ನು ಹೆಚ್ಚಿಸುತ್ತದೆ. ಉತ್ತಮ ಆರೋಗ್ಯದ ಪರಿಣಾಮ ನಮ್ಮ ಚರ್ಮ ಹಾಗೂ ಕೂದಲ ಮೂಲಕ ಕಾಣುತ್ತದೆ. ಅಷ್ಟೇ ಅಲ್ಲ, ವಯಸ್ಸಾಗುತ್ತಿದ್ದಂತೆ ಕಾಣುವ ಚರ್ಮದ ಸಮಸ್ಯೆಗಳಾದ ಹೈಪರ್ ಪಿಗ್ಮೆಂಟೇಶನ್‌ನಂತಹ ಸಮಸ್ಯೆಗಳಿಗೂ ಕೂಡಾ ಇದು ನೆರವಾಗುತ್ತದೆ.
5. ಮಧುಮೇಹಕ್ಕೂ ಒಳ್ಳೆಯದು: ಬೆಳ್‌ಬೆಳಗ್ಗೆ ದಿನವೂ ಅರ್ಧ ಕಪ್ ಬೀಟ್‌ರೂಟ್ ಜ್ಯೂಸ್ ಕುಡಿಯುವುದೂ ಕೂಡಾ ಮಧುಮೇಹಿಗಳಿಗೆ ಒಳ್ಳೆಯದು. ಊಟವಾದ ನಂತರ ಏರುವ ಸಕ್ಕರೆಯ ಪ್ರಮಾಣವನ್ನು ಇದು ಕಡಿಮೆಗೊಳಿಸುವಂತೆ ಮಾಡುವ ತಾಕತ್ತನ್ನು ಹೊಂದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳ ಪರಿಣಾಮದಿಂದ ಈ ಲಾಭ ದೊರೆಯುತ್ತದೆ.
ಇದನ್ನೂ ಓದಿ: Health Tips: ಶೀತ, ನೆಗಡಿಯಾದಾಗ ಈ ಎಲ್ಲ ಹಣ್ಣುಗಳಿಂದ ದೂರವಿರುವುದು ಒಳ್ಳೆಯದು!