Site icon Vistara News

ತೂಕ ಇಳಿಸಿಕೊಳ್ಳುವ ಸವಾಲು: ಬೆಳಗಿನ ಉಪಾಹಾರ ಬೇಕೋ? ಬೇಡವೋ?

breakfast

ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕೆಲವೊಂದು ವಾದಗಳಿವೆ. ಅವುಗಳಲ್ಲಿ ಬೆಳಗ್ಗಿನ ಉಪಾಹಾರ ಬೇಕೋ ಬೇಡವೋ ಎಂಬುದು ಕೂಡಾ ಬಹುಮುಖ್ಯವಾದ ವಾದ. ಬಹಳಷ್ಟು ಮಂದಿ ಬೆಳಗಿನ ಉಪಾಹಾರದ ಅಗತ್ಯವೇ ದೇಹಕ್ಕಿರುವುದಿಲ್ಲ ಎಂದು ವಾದ ಮಾಡುವುದುಂಟು. ದೇಹಕ್ಕೆ ಪ್ರತಿದಿನ ಎಷ್ಟು ಕ್ಯಾಲರಿಯ ಅಗತ್ಯ ಇದೆಯೋ ಅಷ್ಟು ಸಿಕ್ಕರೆ ಆಯಿತು, ದಿನಕ್ಕೆ ಎರಡು ಹೊತ್ತು ತಿನ್ನುವುದರಿಂದಲೂ, ದೇಹಕ್ಕೆ ಬೇಕಾದ್ದೆಲ್ಲ ಸಿಗುತ್ತದೆ. ಅದು ಬೆಳಗ್ಗಿನ ಉಪಾಹಾರದಿಂದಲೇ ಆಗಬೇಕೆಂದೇನಿಲ್ಲ ಎಂಬ ವಾದ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚಿದೆ.

ತೂಕ ಇಳಿಸಿಕೊಳ್ಳಲು ಪ್ರಯತ್ನ ಪಡುವ ಎಲ್ಲರೂ, ಇಂತಹ ಗೊಂದಲದಲ್ಲೇ ಏನು, ಹೇಗೆ, ಎಷ್ಟು, ಯಾವಾಗ ತಿನ್ನಬೇಕೆಂಬ ಪ್ರಶ್ನೆಯನ್ನು ಉಳಿಸಿಕೊಂಡೇ ಇರುತ್ತಾರೆ. ಅರೆಬರೆ ಜ್ಞಾನದಿಂದ ಆಹಾರ ಅಭ್ಯಾಸದಲ್ಲಿ ಏನೇನೋ ಬದಲಾವಣೆಗಳನ್ನು ಮಾಡಿಕೊಂಡು, ತೂಕವನ್ನು ಇಳಿಸಿಕೊಳ್ಳಲಾಗದೆ, ಅತ್ತ ಆರೋಗ್ಯವನ್ನೂ ಸರಿಯಾಗಿ ಕಾಪಾಡಿಕೊಳ್ಳಲಾಗದೆ ಹೆಣಗಾಡುವುದುಂಟು. ಹಾಗಾದರೆ, ನಿಜವಾಗಿ ಬೆಳಗಿನ ಉಪಾಹಾರದ ಅಗತ್ಯ ದೇಹಕ್ಕಿದೆಯೇ? ಇದರಿಂದ ತೂಕ ಇಳಿಕೆಯನ್ನು ಸುಲಭ ಮಾಡಿಕೊಳ್ಳಬಹುದೇ ಎಂಬ ವಿಚಾರಗಳ ಬಗ್ಗೆ ಗಮನ ಹರಿಸೋಣ.

ತೂಕ ಇಳಿಸುವುದಕ್ಕೂ ಬೆಳಗಿನ ಉಪಾಹಾರಕ್ಕೂ ಯಾವುದೇ ನೇರಾನೇರ ಸಂಬಂಧವಿಲ್ಲ. ತೂಕ ಇಳಿಕೆಯಲ್ಲಿ ಬಹಳಷ್ಟು ವಿಚಾರಗಳು ಮುಖ್ಯವಾಗುತ್ತದೆ. ದಿನಕ್ಕೆ ತೆಗೆದುಕೊಳ್ಳುವ ಕ್ಯಾಲರಿಯಲ್ಲಿ ಇಳಿಕೆ ಮಾಡಿಕೊಳ್ಳುವುದರಿಂದ ತೂಕ ಇಳಿಸಬಹುದು ಎಂಬುದು ಮೇಲ್ನೋಟಕ್ಕೆ ನಿಜವೇ ಆದರೂ ತೂಕ ಇಳಿಸುವಲ್ಲಿ ಬಹಳಷ್ಟು ಬೇರೆ ವಿಚಾರಗಳಲೂ ಇಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಉದಾಹರಣೆಗೆ ನಿದ್ದೆ, ಒತ್ತಡ, ಊಟ ಮಾಡುವ ಸಮಯ, ನೀರು ಕುಡಿಯುವುದು ಇತ್ಯಾದಿ.

ಒಂದು ರಾತ್ರಿ ನಿದ್ದೆಯ ಏರುಪೇರಿನಿಂದ ನಿಮ್ಮ ತೂಕ ಹೆಚ್ಚಾಗುತ್ತದೆ ಎಂದಲ್ಲವಾದರೂ, ಅನಿಯಮಿತ ನಿದ್ದೆ, ಯಾವಾಗಲೂ ನಿದ್ದೆಗೆಡುವುದು, ನಿದ್ದೆಗೆ ಹೋಗುವ ಸಮಯದಲ್ಲಿ ಏರುಪೇರು, ತಡವಾಗಿ ನಿದ್ದೆ ಮಾಡುವುದು ಖಂಡಿತವಾಗಿಯೂ ತೂಕದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Vegetarian Meat: ಆಹಾರ ಸಂಸ್ಕೃತಿಯಲ್ಲೊಂದು ಹೊಸ ಟ್ರೆಂಡ್‌!

ಬೆಳಗ್ಗೆ ಎದ್ದು ಉಪಾಹಾರ ಮಾಡುವುದರಿಂದ ಅನೇಕ ಲಾಭಗಳಿವೆ ಎಂಬುದನ್ನು ನಾವು ಮುಖ್ಯವಾಗಿ ಗಮನಿಸಬೇಕು. ಬೆಳಗಿನ ತಿಂಡಿ, ಆ ದಿನದ ಮಧ್ಯಾಹ್ನದ ಹಸಿವಿನವರೆಗೆ ನಮ್ಮ ಹೊಟ್ಟೆಯನ್ನು ಚೆನ್ನಾಗಿಟ್ಟಿರುತ್ತದೆ. ಇದರಿಂದ ಹೆಚ್ಚು ತಿನ್ನುವುದು, ಹೊಟ್ಟೆಬಾಕರಂತೆ ಮುಕ್ಕುವುದು ತಪ್ಪುತ್ತದೆ. ಮಧ್ಯಾಹ್ನದ ಊಟ ಹಿತಮಿತವಾಗುತ್ತದೆ. ಆದರೆ, ಬೆಳಗಿನ ತಿಂಡಿ ಮಿಸ್‌ ಮಾಡಿ ಸೀದಾ ಮಧ್ಯಾಹ್ನದ ಊಟಕ್ಕೇ ಹೊರಟಿರೆಂದಾದಲ್ಲಿ, ಹೆಚ್ಚು ಹೆಚ್ಚು ತಿನ್ನಬೇಕೆನಿಸುವ ಬಯಕೆ, ಜಂಕ್‌ ತಿನ್ನಬೇಕೆನ್ನುವ ಬಯಕೆ ಹೆಚ್ಚುತ್ತದೆ. ಇದರಿಂದ ಬಾಯಿ ಚಪಲ ಹೆಚ್ಚಿ, ಸಿಹಿತಿಂಡಿ, ಕುರುಕಲು ತಿನ್ನುವ ಮೂಲಕ ಇನ್ನೂ ಹೆಚ್ಚು ಕ್ಯಾಲರಿ ದೇಹದೊಳಕ್ಕೆ ಸೇರುವ ಸಂಭವವೇ ಹೆಚ್ಚು.

ಬೆಳಗಿನ ಉಪಾಹಾರ ಒಂದು ಮ್ಯಾಜಿಕ್‌ನಂತೆ. ಅದು ನಮ್ಮ ಇಡೀ ದೇಹಕ್ಕೆ ಇನ್‌ಸ್ಟಂಟ್‌ ಎನರ್ಜಿ ನೀಡಿ ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ. ಒಂದು ದಿನ ಪಾಸಿಟಿವ್‌ ಆಗಿ ಆರಂಭವಾಗುವಲ್ಲಿ ಬೆಳಗಿನ ಉಪಾಹಾರ ಮುಖ್ಯ ಪಾತ್ರ ವಹಿಸುತ್ತದೆ. ನಮ್ಮ ಮಾಂಸಖಂಡಗಳಿಗೆ ಶಕ್ತಿ ನೀಡಿ, ನಮ್ಮ ಇಡೀ ದಿನವನ್ನು ಚುರುಕುಗೊಳಿಸುವ ತಾಕತ್ತು ಬೆಳಗಿನ ಉಪಹಾರಕ್ಕಿದೆ. ನ್ಯಾಷನಲ್‌ ವೈಟ್‌ ಕಂಟ್ರೋಲ್‌ ರಿಜಿಸ್ಟ್ರೀ ಪ್ರಕಾರ ಶೇ.೭೮ರಷ್ಟು ಮಂದಿಗೆ ತೂಕ ಇಳಿಸಲು ಸಹಾಯವಾಗಿರುವುದೇ ಬೆಳಗಿನ ತಿಂಡಿ ತಿನ್ನುವ ಮೂಲಕ ಎಂಬುದು ಇಲ್ಲಿ ಗಮನಾರ್ಹ.

ಆದರೆ, ಇನ್ನೂ ಒಂದು ವಿಚಾರವನ್ನು ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಉಪಾಹಾರ ಮುಖ್ಯವೆಂದು ಬೇಕು ಬೇಕಾದ್ದನ್ನೆಲ್ಲ ತಿನ್ನುವುದು ಒಳ್ಳೆಯದಲ್ಲ ಎಂಬುದನ್ನು ಆರೋಗ್ಯದ ಹಾಗೂ ತೂಕ ಇಳಿಸುವ ಹಾದಿಯಲ್ಲಿರುವ ಮಂದಿ ನೆನಪಿನಲ್ಲಿಟ್ಟುಕೊಳ್ಳಬೇಕು. ತೂಕ ಇಳಿಕೆಗೆ ಪೂರಕವಾಗುವ ಆರೋಗ್ಯಕರ ಉಪಾಹಾರಗಳು ಬಹಳ ಮುಖ್ಯ. ಭಾರತೀಯ ಸಾಂಪ್ರದಾಯಿಕ ಬೆಳಗಿನ ಉಪಾಹಾರಗಳು ಆದ್ಯತೆಯಾಗಿರಲಿ. ಇಡ್ಲಿ, ವಿವಿಧ ದೋಸೆಗಳು, ಉಪ್ಪಿಟ್ಟು, ಪೋಹಾ, ಹಣ್ಣುಗಳು ಹೀಗೆ ನಾನಾ ತರಹದ ಆರೋಗ್ಯಕರ ತಿನಿಸುಗಳು ಬೆಳಗಿನ ಆದ್ಯತೆಯಾದರೆ, ಒಂದು ಚೆಂದದ ದಿನದ ಆರಂಭ ಅಲ್ಲಿಂದಲೇ ಆರಂಭವಾಗುತ್ತದೆ.

ಇದನ್ನೂ ಓದಿ: smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು

Exit mobile version