Site icon Vistara News

Blueberry Benefits: ಮಾನಸಿಕ ಒತ್ತಡ, ಖಿನ್ನತೆಯನ್ನು ನಿಯಂತ್ರಿಸಬಲ್ಲದು ಬ್ಲೂ ಬೆರಿ

Blueberry Benefits

ನಮ್ಮ ಆರೋಗ್ಯ ರಕ್ಷಣೆಗೆ ಬೇಕಾಗಿ ಹಲವಾರು ರೀತಿಯ ಅತ್ತ್ಯುತ್ತಮ ಆಹಾರಗಳನ್ನು ನಿಸರ್ಗ ನಮಗೆ ಒದಗಿಸಿಕೊಟ್ಟಿದೆ. ಬಣ್ಣ, ಗಾತ್ರ, ವಿನ್ಯಾಸ, ರುಚಿ- ಹೀಗೆ ಒಂದೊಂದೂ ಮತ್ತೊಂದಕ್ಕಿಂತ ಭಿನ್ನ ಮತ್ತು ಅನನ್ಯ ಎನ್ನುವಂಥ ಆಹಾರಗಳನ್ನು ಹುಡುಕಿ, ಬಯಸಿ ತಿನ್ನುವುದಕ್ಕೆ ಕಾರಣಗಳೂ ಅಷ್ಟೇ ಭಿನ್ನವಾಗಿವೆ. ರುಚಿಯಾದ ಬಣ್ಣ-ಬಣ್ಣದ ಮತ್ತು ಆಕರ್ಷಕ ವಿನ್ಯಾಸಗಳ ಬೆರಿಗಳು ಸಹ ಆರೋಗ್ಯವನ್ನು ಹೆಚ್ಚಿಸುವಲ್ಲಿ ನಿಸರ್ಗವೇ ನಮಗೆ ನೀಡಿದಂಥ ಕಿರುಕಾಣಿಕೆಗಳು. ಉದಾಹರಣೆಗೆ ಹೇಳುವುದಾದರೆ ಬ್ಲೂ ಬೆರಿ ಹಣ್ಣು, ಗಾತ್ರದಲ್ಲಿ ಚಿಕ್ಕದೇ ಆದರೂ ಸಕಲ ಗುಣಗಳ ಗಣಿಯಂತಿದೆ. ಹಲವು ರೀತಿಯ ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ಶ್ರೀಮಂತವಾದ ಈ ಹಣ್ಣು ಮೆದುಳಿನ ಕ್ಷಮತೆಯನ್ನೂ ವೃದ್ಧಿಸಬಲ್ಲದು ಎನ್ನುತ್ತದೆ ಆಹಾರ ವಿಜ್ಞಾನ. ಹಾಗಾದರೆ ಇದನ್ನು ತಿನ್ನುವುದರ (Blueberry Benefits) ಲಾಭಗಳೇನು?

ಮೆದುಳಿನ ಕ್ಷಮತೆ ಹೆಚ್ಚಳ

ವಯಸ್ಕರಲ್ಲಿ, ಅದರಲ್ಲೂ ವೃದ್ಧಾಪ್ಯ ಸಮೀಪಿಸಿದವರಲ್ಲಿ ಮೆದುಳಿನ ಕ್ಷಮತೆ ಕ್ಷೀಣಿಸುವುದು ಸಹಜ ವಿದ್ಯಮಾನ. ಅಂಥವರು ಸಹ, ನಿಯಮಿತವಾಗಿ ಬ್ಲೂಬೆರಿ ಹಣ್ಣುಗಳ ಸೇವನೆ ಮಾಡಿದಲ್ಲಿ, ಮೆದುಳಿನ ಸಾಮರ್ಥ್ಯ ಕುಗ್ಗದಂತೆ ಕಾಪಾಡಿಕೊಳ್ಳಲು ಸಾಧ್ಯವಿದೆ. ನೆನಪಿನ ಶಕ್ತಿಯಲ್ಲಿ ಹೆಚ್ಚಳ, ನಿರ್ಧಾರಗಳನ್ನು ತೆಗೆದುಕೊಳ್ಳುವಾಗಿನ ಸ್ಪಷ್ಟತೆ ಮತ್ತು ಬೌದ್ಧಿಕ ಸಾಮರ್ಥ್ಯದಲ್ಲಿ ಉತ್ತಮ ಸಾಧ್ಯತೆ ಕಂಡುಬಂದಿದೆ. ಅದರಲ್ಲೂ ವೃದ್ಧಾಪ್ಯ ಸಮೀಪಿಸುತ್ತಿದ್ದಂತೆ ಉಂಟಾಗುವ ಮೆದುಳು ಸಂಬಂಧಿ ಸಮಸ್ಯೆಗಳು ನಿಯಮಿತವಾಗಿ ಬ್ಲೂಬೆರಿ ಸೇವನೆಯಿಂದ ಮುಂದೂಡಲ್ಪಡುತ್ತದೆ ಎಂಬುದು ತಜ್ಞರ ಅಧ್ಯಯನಗಳ ಅಭಿಮತ. ಅಲ್‌ಜೈಮರ್ಸ್‌, ಪಾರ್ಕಿನ್ಸನ್‌ನಂಥ ಮಾರಕ ರೋಗಗಳು ಅಮರಿಕೊಳ್ಳುವ ಭೀತಿಯನ್ನು ಬ್ಲೂಬೆರಿಯಲ್ಲಿರುವ ಫ್ಲೆವನಾಯ್ಡ್‌ಗಳು ತಡೆಯುತ್ತವೆ.

ಉರಿಯೂತ ತಡೆ

ನರ ಸಂಬಂಧಿ ರೋಗಗಳು ಅಮರಿಕೊಳ್ಳುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ದೇಹದಲ್ಲಿ ಹೆಚ್ಚುವ ಉರಿಯೂತ. ಸಹಜವಾಗಿ ನಾಶ ಹೊಂದುವ ಕೋಶಗಳು ಅಷ್ಟೇ ಸಹಜವಾಗಿ ಪುನರುತ್ಪತ್ತಿ ಆಗದಿದ್ದಾಗ ಅಥವಾ ಆಗುವ ಪ್ರಕ್ರಿಯೆ ತೀವ್ರ ನಿಧಾನವಾದಾಗ ಮೆದುಳಿನ ಕೋಶಗಳು ಸಾವನ್ನಪ್ಪಲು ಆರಂಭಿಸುತ್ತವೆ. ಹೀಗಾಗದಿರಲು ದೇಹದಲ್ಲಿ ಉರಿಯೂತಗಳನ್ನು ತಡೆಯುವುದು ಪ್ರಮುಖವಾದ ಕೆಲಸ. ಇದನ್ನು ಬ್ಲೂಬೆರಿ ದಕ್ಷತೆಯಿಂದಲೇ ನಿರ್ವಹಿಸುತ್ತದೆ ಎನ್ನುತ್ತಾರೆ ಪರಿಣಿತರು.

ಕೋಶಗಳ ಮರುನಿರ್ಮಾಣ

ಮೆದುಳಿನಲ್ಲಿ ವಯೋಸಹಜ ವಿದ್ಯಮಾನದಿಂದಾಗಿ ನಾಶ ಹೊಂದುವ ಮತ್ತು ಪುನರುತ್ಪತ್ತಿಯಲ್ಲಿ ನಿಧಾನವಾಗುವ ಕೋಶಗಳಿಂದಲೇ ಮೆದುಳಿಗೆ ಹೆಚ್ಚಿನ ಹಾನಿ ಸಂಭವಿಸುತ್ತದೆ. ಹೀಗೆ ನಾಶ ಹೊಂದುವ ಕೋಶಗಳ ಮರುನಿರ್ಮಾಣದಲ್ಲಿ ಬ್ಲೂಬೆರಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ದೇಹದ ಕೋಶಗಳು ನಶಿಸುವುದು ಸಹಜ ಹೌದಾದರೂ, ಮರುನಿರ್ಮಾಣ ಸರಿಯಾಗಿ ಆಗದಿದ್ದರೆ ದೇಹಕ್ಕೆ ಶೀಘ್ರವೇ ವಯಸ್ಸಾಗುತ್ತದೆ.

ರಕ್ತ ಪರಿಚಲನೆ ವೃದ್ಧಿ

ದೇಹದ ಅಂಗಾಂಗಗಳಿಗೆ ಸರಿಯಾದ ರೀತಿಯಲ್ಲಿ ರಕ್ತ ಪರಿಚಲನೆ ಆಗದಿದ್ದರೆ, ಸೂಕ್ತ ರೀತಿಯಲ್ಲಿ ಆಮ್ಲಜನಕವೂ ದೊರೆಯುವುದಿಲ್ಲ, ಇತರ ಪೋಷಕಾಂಶಗಳ ಪೂರೈಕೆಯಲ್ಲೂ ಕೊರತೆ ಉಂಟಾಗುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯದಿದ್ದರೆ ಕೋಶಗಳ ನಾಶ ತಪ್ಪಿದ್ದಲ್ಲ. ಹಾಗಾಗಿ ದೇಹದ ಅಂಗಾಂಗಗಳಿಗೆ, ಅದರಲ್ಲೂ ಮುಖ್ಯವಾಗಿ ಮೆದುಳಿಗೆ, ಸರಿಯಾಗಿ ರಕ್ತ ಪರಿಚಲನೆ ಆಗುವಂತೆ ಮಾಡುವ ಶಕ್ತಿ ಬ್ಲೂಬೆರಿ ಹಣ್ಣಿಗಿದೆ.

ಮೂಡ್‌ ಬದಲಾವಣೆ

ಇದರಲ್ಲಿ ಹೇರಳವಾಗಿರುವ ವಿಟಮಿನ್‌ ಸಿ ಸತ್ವದಿಂದಾಗಿ ಮಾನಸಿಕ ಒತ್ತಡ, ಆತಂಕದಂಥ ಸಮಸ್ಯೆಗಳಿಗೆ ಬ್ಲೂಬೆರ್ರಿ ಪರಿಹಾರ ಒದಗಿಸಬಲ್ಲದು. ಮಾತ್ರವಲ್ಲ, ಖಿನ್ನತೆಯಿಂದ ಬಳಲುತ್ತಿರುವವರಲ್ಲೂ ಬ್ಲೂಬೆರಿ ಸೇವನೆ ಒಳ್ಳೆಯ ಫಲಿತಾಂಶಗಳನ್ನು ಒದಗಿಸಿದೆ. ಮಾನಸಿಕ ಮತ್ತು ಬೌದ್ಧಿಕ ಬಲವರ್ಧನೆಗೆ ಬ್ಲೂಬೆರ್ರಿ ಪೂರಕವಾಗಿ ಕೆಲಸ ಮಾಡುತ್ತದೆ ಎನ್ನುವ ಬಗ್ಗೆ ಅನುಮಾನಗಳಿಲ್ಲ. ಆದರೆ ಕೇವಲ ಬ್ಲೂಬೆರಿ ಸೇವನೆ ಮಾತ್ರದಿಂದಲೇ ಎಲ್ಲವೂ ಸಾಧ್ಯವಾಗುತ್ತದೆ ಎಂಬುದೂ ಸರಿಯಲ್ಲ.

ಮೆದುಳಿನ ಆರೋಗ್ಯಕ್ಕೆ ಪೂರಕವಾದ ಬಹಳಷ್ಟು ಪೋಷಕಾಂಶಗಳು ಬ್ಲೂಬೆರಿಯಲ್ಲಿದೆ ಎಂಬುದು ನಿಜವಾದರೂ, ದೈಹಿಕ ಮತ್ತು ಬೌದ್ಧಿಕ ಆರೋಗ್ಯಕ್ಕೆ ಬೇಕಾಗುವಂತೆ ಸಮತೋಲಿತ ಆಹಾರ ಸೇವನೆ ಅತಿ ಮುಖ್ಯವಾಗಿದೆ. ನಿಯಮಿತವಾಗಿ ವ್ಯಾಯಾಯ ಅಥವಾ ಯಾವುದಾದರೂ ದೈಹಿಕ ಚಟುವಟಿಕೆಗಳಲ್ಲಿ ತೊಡಗುವುದು ಅಷ್ಟೇ ಅಗತ್ಯ. ಹೊಸದೇನಾದರೂ ಕಲಿಯುತ್ತಿರುವುದು, ದೈಹಿಕ ಮತ್ತು ಮಾನಸಿಕ ಉಲ್ಲಾಸಕ್ಕೆ ಬೇಕಾದಂತೆ ಓದು, ಸಂಗೀತ, ಪ್ರಯಾಣ, ಸ್ನೇಹಿತರು ಎಲ್ಲವೂ ಬದುಕಿಗೆ ಪೂರಕವಾದ ಅಂಶಗಳು. ಇವೆಲ್ಲದರ ಜೊತೆಗೆ ರುಚಿ ಹೆಚ್ಚಿಸಲೋ ಎನ್ನುವಂತೆ ಬ್ಲೂಬೆರಿ ಸೇವನೆಯನ್ನು ಮರೆಯುವಂತಿಲ್ಲ.

ಇದನ್ನೂ ಓದಿ: Health Tips: ರಾತ್ರಿಯೂಟದ ಸಂದರ್ಭ ಯಾವೆಲ್ಲ ಆಹಾರಗಳನ್ನು ತಿನ್ನುವುದು ಒಳ್ಳೆಯದಲ್ಲ ಗೊತ್ತೇ?

Exit mobile version