Site icon Vistara News

Body Fitness: ದೇಹದ ಕ್ಷಮತೆ ಹೆಚ್ಚಿಸಬೇಕೆ?: ಈ ಐದು ಪೇಯಗಳು ಅಗತ್ಯ!

Body Fitness

ಹಿಂದಿನವರಂತೆ ಈಗಿನವರು ಸಶಕ್ತರಲ್ಲ ಎಂಬ ಮಾತಿದೆ. ಹಾಗೆಲ್ಲ ಹೇಳುವುದಕ್ಕೆ ನಮಗೇನು ಸಮುದ್ರ ಹಾರಬೇಕೆ ಅಥವಾ ಸಂಜೀವಿನಿ ಪರ್ವತ ಹೊತ್ತು ತರಬೇಕೆ ಎಂದು ಕೇಳಿಯಾರು ಇಂದಿನವರು. ಅಂಥ ಕೆಲಸಗಳು ಇಲ್ಲದಿದ್ದರೂ, ದಿನದ ಜಂಜಾಟಕ್ಕೇನೂ ಕಡಿಮೆಯಿಲ್ಲವಲ್ಲ. ಅವುಗಳನ್ನಾದರೂ ಸರಿಯಾಗಿ ನಿಭಾಯಿಸುವುದಕ್ಕೆ ಸಾಕಷ್ಟು ಶಕ್ತಿ ಬೇಕಲ್ಲ. ಗಡಿಬಿಡಿಯಲ್ಲಿ ಸರಿಯಾಗಿ ತಿನ್ನಲೂ ಆಗದಂಥ ದಿನಗಳಲ್ಲಿ, ಎಲ್ಲಾ ಕೆಲಸಗಳನ್ನು ನಿರ್ವಹಿಸಿ, ದೇಹವೂ ಸೊರಗದಂತೆ ಕಾಪಾಡಿಕೊಳ್ಳುವುದೆಂದರೆ ಸಾಮಾನ್ಯದ್ದಲ್ಲ. ಇದಕ್ಕೆ ಪೂರಕವಾಗಿ ವ್ಯಾಯಾಮ ಮತ್ತು ಆಹಾರ ಮುಖ್ಯವಾಗಿ ಬೇಕಾಗುತ್ತದೆ. ಬೆವರು ಹರಿಸಿ ವ್ಯಾಯಾಮ ಮಾಡುವ ಸಂದರ್ಭದಲ್ಲಿ ಅಗತ್ಯವಾಗುವ ಐದು ಉತ್ತಮ ಎನರ್ಜಿ ಡ್ರಿಂಕ್‌ಗಳು ಇಲ್ಲಿವೆ.

ಎಳನೀರು
ದೇಹದ ಶಕ್ತಿಯ ಮಟ್ಟವನ್ನು ಕಾಯ್ದುಕೊಳ್ಳುವಂಥ ಅತ್ತ್ಯುತ್ತಮ ಪೇಯವಿದು. ಇದರಲ್ಲಿರುವ ವಿಟಮಿನ್‌ ಬಿ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ, ಕ್ಯಾಲ್ಶಿಯಂ ಮುಂತಾದ ಸತ್ವಗಳು ದೇಹಕ್ಕೆ ಅಗತ್ಯ ಸಮತೋಲನವನ್ನು ಒದಗಿಸುತ್ತವೆ. ಕ್ರೀಡಾ ಚಟುವಟಿಕೆಗಳ ನಂತರ ಎಳನೀರು ಕುಡಿದಾಗ ಅತ್ತ್ಯುತ್ತಮ ರೀತಿಯಲ್ಲಿ ನೀರು ಮತ್ತು ಎಲೆಕ್ಟ್ರೋಲೈಟ್‌ಗಳ ಮಿಶ್ರಣ ದೇಹಕ್ಕೆ ದೊರೆಯುತ್ತದೆ.

ಬೀಟ್‌ರೂಟ್‌ ಜ್ಯೂಸ್
ಅಥ್ಲೀಟ್‌ಗಳಿಗೆ ಹೇಳಿ ಮಾಡಿಸಿದ ಪೇಯವಿದು. ಅದರಲ್ಲೂ ರನ್ನರ್‌ಗಳಿಗೆ ಅಗತ್ಯವಾಗಿ ಬೇಕಾದ ಡ್ರಿಂಕ್.‌ ದೇಹದ ಕ್ಷಮತೆಯನ್ನು ಹೆಚ್ಚಿಸಿ, ರಕ್ತ ಪರಿಚಲನೆಯನ್ನು ಸರಾಗಗೊಳಿಸಿ, ರಕ್ತದ ಒತ್ತಡವನ್ನು ನಿಯಂತ್ರಿಸುವ ಗುಣ ಬೀಟ್‌ರೂಟ್‌ಗಿದೆ. ಇದರಲ್ಲಿರುವ ನೈಟ್ರೇಟ್‌ಗಳಿಂದಾಗಿ ತನಗೆ ಬೇಕಾದ ನೈಟ್ರಿಕ್‌ ಆಕ್ಸೈಡನ್ನು ದೇಹ ತಯಾರಿಸಿಕೊಳ್ಳುತ್ತದೆ.

ಬಾಳೆಹಣ್ಣಿನ ಮಿಲ್ಕ್‌ಶೇಕ್
ಈ ಪೇಯ‌ ಬಾಯಿಗೂ ರುಚಿ, ದೇಹಕ್ಕೂ ಹಿತ. ಜೊತೆಗೊಂದಿಷ್ಟು ಬಾದಾಮಿಯನ್ನು ಸೇರಿಸಿದರಂತೂ, ಬೆವರು ಹರಿಸುವವರಿಗೆ ಇನ್ನಷ್ಟು ಶಕ್ತಿ ದೊರೆಯುವುದು ಖಚಿತ

ಪಾಲಕ್‌ ಸ್ಮೂದಿ
ಅಥ್ಲೀಟ್‌ಗಳಿಗೆ ಇದು ಹೇಗೆ ಸಹಕಾರಿ ಎಂದು ಹುಬ್ಬೇರಿಸಬೇಡಿ. ಮಾತ್ರವಲ್ಲ, ಹೆಚ್ಚಿನ ಜನ ಇದರ ಹೆಸರು ಕೇಳಿಯೇ ಮುಖ ತಿರುಗಿಸುತ್ತಾರೆ. ಆದರೆ ದೂರ ಓಡುವ ಅಥ್ಲೀಟ್‌ಗಳ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಇದು ಒಳ್ಳೆಯ ಉಪಾಯ. ಇದರಲ್ಲಿರುವ ಫೋಲೇಟ್‌, ಕ್ಯಾಲ್ಶಿಯಂ, ನಾರು ಮತ್ತು ವಿಟಮಿನ್‌ಗಳು ದೇಹದ ಸ್ನಾಯುಗಳ ಸಾಮರ್ಥ್ಯ ಹೆಚ್ಚಿಸುತ್ತವೆ.

ಬಾದಾಮಿ ಹಾಲು
ಯಾವುದೇ ಸಿಹಿ ಸೇರಿಸದೆ, ಬಾದಾಮಿ ಮತ್ತು ಹಾಲು- ಇದಿಷ್ಟೇ ಒಳ್ಳೆಯ ಆಯ್ಕೆ. ಹಾಲು ಬೇಡದಿದ್ದರೆ ಕೇವಲ ಬಾದಾಮಿಯನ್ನೇ ನೀರಿನಲ್ಲಿ ನೆನೆಸಿ ಮಿಕ್ಸಿ ಮಾಡಬಹುದು. ಇದರಲ್ಲಿರುವ ಪೊಟಾಶಿಯಂ, ಮೆಗ್ನೀಶಿಯಂ, ಫಾಸ್ಫರಸ್‌, ವಿಟಮಿನ್‌, ಖನಿಜ ಮತ್ತು ಪ್ರೊಟೀನ್‌ಗಳು ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.

ಇದನೂ ಓದಿ: Winter Health Care | ಚಳಿಯಿಂದಾಗಿ ಆಗಾಗ ತಲೆನೋವು ಬರುತ್ತಿದೆಯೇ? ಇವುಗಳನ್ನು ಪ್ರಯತ್ನಿಸಿ

Exit mobile version