Site icon Vistara News

Breast Cancer: ಪುರುಷರಲ್ಲೂ ಸ್ತನ ಕ್ಯಾನ್ಸರ್‌! ಈ ಸಂಗತಿ ತಿಳಿದಿರಲಿ

Breast Cancer

ಸ್ತನ ಕ್ಯಾನ್ಸರ್‌ ಎನ್ನುತ್ತಿದ್ದಂತೆ ಅವೆಲ್ಲ ಮಹಿಳೆಯರಿಗೆ ಮಾತ್ರ ಎಂಬ ಭಾವನೆ ಬಂದರೆ ಅಚ್ಚರಿಯಿಲ್ಲ. ಆದರೆ ಈ ಸಮಸ್ಯೆ ಪುರುಷರನ್ನೂ ಬಾಧಿಸಬಹುದು (breast cancer). ಹೌದು, ಪ್ರಕರಣಗಳು ಅಪರೂಪ ಎನಿಸಿದರೂ, ಹೀಗಾಗುವುದು ಅಸಹಜವೇನಲ್ಲ. ಅಮೆರಿಕದಂಥ ದೇಶಗಳಲ್ಲಿ ನೂರು ಸ್ತನ ಕ್ಯಾನ್ಸರ್‌ ಪ್ರಕರಣಗಳಲ್ಲಿ ಒಬ್ಬರು ಪುರುಷರಿದ್ದಾರೆ ಎನ್ನುತ್ತವೆ ಅಂಕಿ-ಅಂಶಗಳು. ಭಾರತದಲ್ಲಿ ಈ ಸಮಸ್ಯೆ ಸಣ್ಣ ಪ್ರಾಯದವರನ್ನೂ ಬಾಧಿಸುತ್ತಿದ್ದು, ರೋಗ ತೀವ್ರವಾಗಿಯೂ ಇರುತ್ತದೆ ಎಂಬುದಾಗಿ ತಜ್ಞರು ಹೇಳುತ್ತಾರೆ.

ಅರ್ಥ ಮಾಡಿಕೊಳ್ಳೋಣ

ಈ ಸಮಸ್ಯೆಯನ್ನೀಗ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಪ್ರಕರಣಗಳು ಅಪರೂಪ ಎಂಬ ಕಾರಣಕ್ಕೆ ಈ ಬಗ್ಗೆ ಅರಿವು ಜಾಗೃತಿ ಕಡಿಮೆ ಇರುವುದು ಸಹಜ. ಇದಲ್ಲದೆಯೂ ಪುರುಷರನ್ನು ಕಾಡುವ ಸ್ತನ ಕ್ಯಾನ್ಸರ್‌ನ ಚಿಕಿತ್ಸೆ ಮತ್ತು ನಿರ್ವಹಣೆಯಲ್ಲಿ ಕೆಲವು ವಿಶಿಷ್ಟ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದು ಮಹಿಳೆಯರನ್ನು ಕಾಡುವ ಸ್ತನ ಕ್ಯಾನ್ಸರ್‌ನಂತೆಯೇ ಇರುತ್ತದಾದರೂ, ಇದರ ಸ್ವರೂಪದಲ್ಲಿ ಮತ್ತು ಚಿಕಿತ್ಸೆಯಲ್ಲಿ ಕೆಲವು ಭಿನ್ನತೆಗಳನ್ನು ಕಾಣಬಹುದು.

ಮೊದಲಿಗೆ, ಇದು ಪುರುಷರಲ್ಲಿ ಅಪರೂಪ ಎನ್ನುವ ಕಾರಣಕ್ಕಾಗಿಯೇ ಆರಂಭಿಕ ಹಂತದಲ್ಲಿ ಪತ್ತೆಯಾಗದೇ ಹೋಗಬಹುದು. ಇಂಥವು ಯಾರ ನಿರೀಕ್ಷೆಗೂ ಪ್ರಾರಂಭದಲ್ಲಿ ದಕ್ಕುವುದೇ ಇಲ್ಲ. ಹೆಚ್ಚಿನವರಿಗೆ ಹೀಗೊಂದು ಆಗುವುದಕ್ಕೆ ಸಾಧ್ಯ ಎಂಬ ಕಲ್ಪನೆಯೂ ಇಲ್ಲದಿರುವುದರಿಂದ, ರೋಗದ ಉದ್ಭವಾವಸ್ಥೆಯಲ್ಲಿ ಉಪೇಕ್ಷಿಸುವ ಸಾಧ್ಯತೆಗಳೇ ಹೆಚ್ಚು. ಇದರಿಂದಾಗಿ ವೈದ್ಯರಲ್ಲಿ ಹೋಗುವಷ್ಟರಲ್ಲಿ ಕೆಲವೊಮ್ಮೆ ತಡವಾಗಿರುತ್ತದೆ.
ಲಕ್ಷಣಗಳೇನು?: ಬಹಳಷ್ಟು ಲಕ್ಷಣಗಳು ಮಹಿಳೆಯರಲ್ಲಿ ಇದ್ದಂತೆಯೇ ಇರುತ್ತವೆ. ಸ್ತನದ ಅಂಗಾಂಶಗಳಲ್ಲಿ ವ್ಯತ್ಯಾಸ ಕಾಣುವುದು, ನೋವು ಸಹಿತ ಅಥವಾ ನೋವಿಲ್ಲದಂಥ ಗಡ್ಡೆಗಳು ಕಂಡುಬರಬಹುದು, ಅಸ್ವಾಭಾವಿಕವಾಗಿ ಗಾತ್ರ ಹಿಗ್ಗಬಹುದು, ಚರ್ಮದ ಬಣ್ಣದಲ್ಲಿ ವ್ಯತ್ಯಾಸ ಕಾಣಬಹುದು, ಸ್ತನದ ತೊಟ್ಟುಗಳು ಒಳ ಸರಿಯಬಹುದು, ತೊಟ್ಟುಗಳಿಂದ ದ್ರವ ಒಸರಬಹುದು, ತೋಳಿನ ಅಡಿಗಿನ ಸ್ವೇದ ಗ್ರಂಥಿಗಳು ಹಿಗ್ಗಬಹುದು, ಕಂಕುಳಿನಲ್ಲಿ ಗಡ್ಡೆಗಳು ಕಾಣಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ಪುರುಷರು ಸಹ ವೈದ್ಯರ ಬಳಿ ತಪಾಸಣೆಗೆ ಹೋಗಬೇಕು.
ಕಾರಣಗಳೇನು?: ಮಹಿಳೆಯರಲ್ಲಿ ಕಂಡಂತೆ, ಪುರುಷರಲ್ಲೂ ಇದಕ್ಕೆ ಹಲವಾರು ಕಾರಣಗಳನ್ನು ವೈದ್ಯ ವಿಜ್ಞಾನ ಪಟ್ಟಿ ಮಾಡುತ್ತದೆ. ಸ್ತನ ಕ್ಯಾನ್ಸರ್‌ನ ಸಮಸ್ಯೆ ಆನುವಂಶಿಕವಾಗಿ ಇದ್ದಲ್ಲಿ, ವಯಸ್ಸು ಹೆಚ್ಚಿದ್ದಲ್ಲಿ, ಬಿಆರ್‌ಸಿಎ೨ ನಂಥ ವಂಶವಾಹಿಯ ಬದಲಾವಣೆ ಆನುವಂಶೀಯವಾಗಿ ಬಂದಿದ್ದರೆ, ಹಾರ್ಮೋನಿನ ಅಸಮತೋಲನಗಳು, ಬೊಜ್ಜು- ಅತಿತೂಕ, ಯಕೃತ್ತಿನ ಸಮಸ್ಯೆಗಳು- ಇಂಥ ಎಲ್ಲ ಸಮಸ್ಯೆಗಳು ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಬರುವುದಕ್ಕೆ ಮೂಲವಾಗಬಹುದು.

ಈ ರೋಗ ಪುರುಷರಲ್ಲಿ ಅಪರೂಪವಾದರೂ, ಅಸಹಜವಲ್ಲ. ಹಾಗಾಗಿ ಈ ಬಗ್ಗೆ ಅರಿವು ಹೆಚ್ಚಿಸುವುದು, ಜಾಗೃತಿ ಮೂಡಿಸುವುದು ಮುಖ್ಯವಾಗಿ ಆಗಬೇಕಿದೆ. ದೇಹದ ಉಳಿದೆಲ್ಲ ಅಂಗಗಳಿಗೆ ರೋಗ ಬಂದಂತೆಯೆ, ಇಲ್ಲಿಯೂ ಬರಬಹುದು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಲಕ್ಷಣಗಳು ಕಂಡರೂ ಅದನ್ನು ಉಪೇಕ್ಷೆ ಮಾಡದೆ, ವೈದ್ಯರಲ್ಲಿ ಸಲಹೆ ಕೇಳುವುದು ಸೂಕ್ತ. ಅದರಲ್ಲೂ ಆನುವಂಶಿಕವಾಗಿ ಈ ಸಮಸ್ಯೆಗಳಿದ್ದರೆ, ಇನ್ನಷ್ಟು ಜಾಗೃತರಾಗಿ ಇರುವುದು ಅಗತ್ಯ. ಈ ಬಗ್ಗೆ ಕುಟುಂಬದ ಸದಸ್ಯರಲ್ಲೂ ತಿಳುವಳಿಕೆಯಿದ್ದರೆ, ತೊಂದರೆಯನ್ನು ನಿರ್ವಹಿಸುವುದು ಕಷ್ಟವಾಗದು. ಆರಂಭಿಕ ಹಂತದಲ್ಲಿ ಪತ್ತೆಯಾಗಿ, ಬೇಗನೆ ಚಿಕಿತ್ಸೆ ದೊರೆತಷ್ಟೂ ಪ್ರಾಣ ಉಳಿಯುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

ಇದನ್ನೂ ಓದಿ: Sleep In The Winter: ಚಳಿಗಾಲದಲ್ಲಿ ನಿದ್ದೆ ಮುಗಿಯುವುದೇ ಇಲ್ಲವೇಕೆ?

Exit mobile version