Site icon Vistara News

Breast cancer: ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್‌ ಪ್ರಮಾಣ! ಏನಿದಕ್ಕೆ ಕಾರಣ?

Breast cancer

ಕರ್ನಾಟಕ, ತೆಲಂಗಾಣ, ತಮಿಳುನಾಡು ಮತ್ತು ದೆಹೆಲಿಯಲ್ಲಿ ಸ್ತನ ಕ್ಯಾನ್ಸರ್‌ (Breast cancer) ಪ್ರಮಾಣ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗಿಂತ ಹೆಚ್ಚಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್)‌ ನಡೆಸಿದ ಅಧ್ಯಯನ ಹೇಳಿದೆ. 2025ರ ವೇಳೆಗೆ ಭಾರತದಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಕಾಣಲಿದೆ ಎಂಬುದಾಗಿಯೂ ಇತ್ತೀಚೆಗೆ ಪ್ರಕಟವಾದ ವರದಿ ತಿಳಿಸಿದೆ. ರಾಜ್ಯವಾರು ಮಟ್ಟದಲ್ಲಿ 2012ರಿಂದ 2016ನೇ ಸಾಲಿನ ಅವಧಿಯಲ್ಲಿ ಸ್ತನ ಕ್ಯಾನ್ಸರ್‌ ಸ್ಥಿತಿ-ಗತಿಯ ಬಗ್ಗೆ ಈ ವರದಿಯಲ್ಲಿ ಗಮನ ಕೇಂದ್ರೀಕರಿಸಲಾಗಿದೆ. ಈ ಕಾಯಿಲೆಯ ದೆಸೆಯಿಂದಾಗಿ ವ್ಯಕ್ತಿಯು ಕಳೆದುಕೊಂಡ ಜೀವಿತಾವಧಿ (ವೈಎಲ್‌ಎಲ್‌), ವೈಕಲ್ಯಕ್ಕೆ ತುತ್ತಾಗಿ ಕಳೆದುಕೊಂಡ ಜೀವಿತಾವಧಿ (ವೈಎಲ್‌ಡಿ) ಹಾಗೂ ಅನಾರೋಗ್ಯ, ಅಂಗವಿಕಲತೆ ಮತ್ತು ಅಕಾಲಿಕ ಸಾವಿನಿಂದ ಕಳೆದುಕೊಂಡ ಆಯಸ್ಸು (ಡಿಎಎಲ್‌ವೈ)- ಇವಿಷ್ಟರ ಆಧಾರದ ಮೇಲೆ 2025ರ ವೇಳೆಗೆ ದೇಶದಲ್ಲಿ ಈ ಕಾಯಿಲೆಯ ಹೊರೆ ಎಷ್ಟಾಗಲಿದೆ ಎಂಬುದನ್ನು ಅಧ್ಯಯನವು ಅಂದಾಜು ಮಾಡಿದೆ. ಇದಕ್ಕಾಗಿ ರಾಷ್ಟ್ರೀಯ ಕ್ಯಾನ್ಸರ್‌ ನೋಂದಣಿ ಕಾರ್ಯಕ್ರಮದ ಅಡಿಯಲ್ಲಿನ 28 ಕ್ಯಾನ್ಸರ್‌ ಮಾಹಿತಿ ಕೇಂದ್ರಗಳಿಂದ ದತ್ತಾಂಶಗಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ.

ತೀವ್ರ ಹೆಚ್ಚಳದ ಅಂದಾಜು

ರಾಜ್ಯವಾರು ಅಂಕಿ-ಅಂಶಗಳನ್ನು ಗಮನಿಸಿದರೆ, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ದೆಹೆಲಿಯಲ್ಲಿ ಸ್ತನ ಕ್ಯಾನ್ಸರ್‌ನ ಹೊರೆ ದೇಶದ ಪೂರ್ವ ಮತ್ತು ಈಶಾನ್ಯ ರಾಜ್ಯಗಳಿಗಿಂತ ಹೆಚ್ಚಿದೆ. 2016ರ ಪ್ರಕಾರ, ಭಾರತೀಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಹೊರೆ ಪ್ರತಿ ಒಂದು ಲಕ್ಷ ಮಹಿಳೆಯರಿಗೆ 515.4 ಡಿಎಎಲ್‌ವೈ ಇತ್ತು. ಆದರೆ 2025ರ ವೇಳೆಗೆ ಈ ಪ್ರಮಾಣವು 5.6 ದಶಲಕ್ಷ ಡಿಎಎಲ್‌ವೈಗೆ ಏರಲಿದೆ ಎಂದು ಅಂದಾಜಿಸಲಾಗಿದೆ. ಸ್ತ್ರೀಯರ ವಯಸ್ಸನ್ನಾಧರಿಸಿ ಪ್ರತ್ಯೇಕ ಗುಂಪುಗಳಾಗಿ ವಿಭಜಿಸಿ ಅಧ್ಯಯನವನ್ನು ನಡೆಸಲಾಗಿತ್ತು. ನಗರದ ಮಹಿಳೆಯರಿಗೆ ಹೋಲಿಸಿದರೆ ಗ್ರಾಮೀಣ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ಪ್ರಮಾಣ ಕಡಿಮೆ ಕಂಡುಬಂದಿದೆ. ಅದರಲ್ಲೂ ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹೆಲಿಯಂಥ ಮೆಟ್ರೊ ನಗರಗಳಲ್ಲಿ ಈ ಪ್ರಮಾಣ ಹೆಚ್ಚಿದೆ. ವರದಿಯ ಪ್ರಕಾರ, ಅಕಾಲಿಕವಾಗಿ ಜೀವ ಕಳೆದುಕೊಳ್ಳುವವರ ಕ್ಯಾನ್ಸರ್‌ ಹೊರೆ 5.3 ದಶಲಕ್ಷ ಡಿಎಎಲ್‌ವೈಗೆ ಏರಲಿದೆ. ಆದರೆ ದತ್ತಾಂಶಗಳನ್ನು ತೆಗೆದುಕೊಂಡ ಕ್ಯಾನ್ಸರ್‌ ಮಾಹಿತಿ ಕೇಂದ್ರಗಳಲ್ಲಿ ಹೆಚ್ಚಿನವು ನಗರ ಪ್ರದೇಶದಲ್ಲೇ ಇದ್ದುದರಿಂದ, ಗ್ರಾಮೀಣ ಪ್ರದೇಶದಲ್ಲಿನ ಪ್ರಕರಣಗಳು ಅಷ್ಟಾಗಿ ದಾಖಲಾಗದೆ ಹೋಗಿರುವ ಸಾಧ್ಯತೆಯಿದೆ.

ನಗರಗಳಲ್ಲಿ ಹೆಚ್ಚೇಕೆ?

ನಗರಗಳಲ್ಲಿರುವ ದೈಹಿಕ ಶ್ರಮವಿಲ್ಲದ ಜೀವನ, ಹೆಚ್ಚುತ್ತಿರುವ ಬೊಜ್ಜು, ಮದುವೆಯಾಗುವ ಮತ್ತು ಮಕ್ಕಳನ್ನು ಪಡೆಯುವ ವಯಸ್ಸನ್ನು ಮುಂದೂಡುತ್ತಿರುವುದು, ಸ್ತನ್ಯಪಾನವನ್ನು ಕಡಿಮೆ ಮಾಡುವುದು- ಇವೆಲ್ಲವೂ ಸ್ತನ ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣಗಳಾಗಿವೆ. ಸಾಮಾಜಿಕ-ಆರ್ಥಿಕ ಅಂಶಗಳು ಸಹ ಸ್ತನ ಕ್ಯಾನ್ಸರ್‌ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ. ಸಕಾಲಕ್ಕೆ ಆರೋಗ್ಯ ಸೌಲಭ್ಯಗಳು ದೊರೆಯದಿರುವುದು, ಕ್ಯಾನ್ಸರ್‌ ತಡೆಗೆ ಇರುವ ಕ್ರಮಗಳು ಲಭ್ಯವಾಗದಿರುವುದು ಮತ್ತು ಚಿಕಿತ್ಸೆಯ ಫಲಿತಾಂಶಗಳು ಸಹ ಕ್ಯಾನ್ಸರ್‌ ಹೊರೆಯ ಮೇಲೆ ಪರಿಣಾಮ ಬೀರುತ್ತಿವೆ.
“ಭಾರತದಲ್ಲಿ ಸಾಮಾಜಿಕ-ಆರ್ಥಿಕ ಅಸಮಾನತೆ ಮತ್ತು ಕ್ಯಾನ್ಸರ್‌ ಪ್ರಮಾಣದ ನಡುವೆ ಸ್ಪಷ್ಟ ಸಂಬಂಧವಿದೆ. ಹಾಗಾಗಿ ಸಂಪನ್ಮೂಲಗಳ ಹಂಚಿಕೆಯನ್ನು ಮರುಪರಿಶೀಲಿಸುವ ಅಗತ್ಯವಿದೆ. ವೈದ್ಯಕೀಯ ಸೌಲಭ್ಯಗಳ ಲಭ್ಯತೆಯನ್ನೂ ಹೆಚ್ಚಿಸುವ ಆವಶ್ಯಕತೆಯಿದೆ. ಸ್ವಯಂ ತಪಾಸಣೆ ಮತ್ತು ಮೆಮೊಗ್ರಫಿ ಸೇರಿದಂತೆ, ಸ್ತನ ಕ್ಯಾನ್ಸರ್‌ನ ನಿಯಮಿತ ತಪಾಸಣೆಯೇ ಭಾರತದಲ್ಲಿ ಅತಿ ಕಡಿಮೆ. ಹಾಗಾಗಿ ರೋಗ ಪತ್ತೆಯಾಗುವಷ್ಟರಲ್ಲಿ ಪ್ರಾರಂಭಿಕ ಹಂತವನ್ನು ದಾಟಿರುತ್ತದೆ” ಎಂದು ವರದಿ ಕಳವಳ ವ್ಯಕ್ತಪಡಿಸಿದೆ.

Exit mobile version