ಚಳಿಗಾಲ ಎಲ್ಲರಿಗೂ ಹಲವು ರೀತಿಯ ಸವಾಲುಗಳನ್ನು ಒಡ್ಡುವಂಥ ಋತು. ಅದರಲ್ಲೂ ಮನೆಯಲ್ಲಿ ನವಜಾತ ಕೂಸುಗಳಿದ್ದರೆ ಅವುಗಳನ್ನು ಜತನ ಮಾಡಿಕೊಳ್ಳುವುದು ಸುಲಭವಲ್ಲ. ಚಳಿ ಮತ್ತು ಒಣಹವೆ ಕೂಸುಗಳನ್ನು ಮತ್ತು ಹಾಲುಣಿಸುವ ತಾಯಂದಿರನ್ನು ನಾನಾ ರೀತಿಯಲ್ಲಿ ಕಾಡಬಹುದು. ಹಾಗಾದರೆ ಚಳಿಗಾಲದಲ್ಲಿ ಇಂಥ ಸಮಸ್ಯೆಗಳನ್ನು ನಿಭಾಯಿಸುವುದು ಹೇಗೆ?
ಚಳಿಗಾಲದಲ್ಲಿ ಹಾಲು ಕಟ್ಟಿಕೊಳ್ಳುವ ಸಮಸ್ಯೆ ಉಳಿದೆಲ್ಲಾ ಕಾಲಗಳಿಗಿಂತ ಸ್ವಲ್ಪ ಹೆಚ್ಚು. ಹಾಲುಣಿಸುವ ತಾಯಂದಿರಿಗೆ ಇದು ನಿಜಕ್ಕೂ ನೋವು ಮತ್ತು ಕಿರಿಕಿರಿ ಸಂಗತಿ. ಹಾಲಿನ ಹರಿವು ಸರಾಗವಾಗಿ ಇರದಿದ್ದರೆ, ಸರಿಯಾಗಿ ಹೊಟ್ಟೆ ತುಂಬದೆ ಮಗುವೂ ಅತೃಪ್ತಿಯಿಂದ ರಚ್ಚೆ ಹಿಡಿದು ಇನ್ನಷ್ಟು ಕಷ್ಟ ಕೊಡುತ್ತದೆ. ಮಾತ್ರವಲ್ಲ ಕೋಪದಿಂದ ಕಚ್ಚುವ ಮತ್ತು ಶಕ್ತಿ ಹಾಕುವಂಥ ಪ್ರತಿಕ್ರಿಯೆಗಳನ್ನು ಮಗು ತೋರಿಸುವುದರಿಂದ ತಾಯಿಗೆ ಗಾಯವಾಗಿ, ಹಾಲುಣಿಸುವ ಪ್ರಕ್ರಿಯೆಯೇ ನೋವಿನದ್ದು ಎನ್ನುವಂತಾಗುತ್ತದೆ.
ಏನು ಮಾಡಬಹುದು?
ಮಗುವನ್ನು ಇರಿಸಿದಂತೆಯೇ ತಾಯಿಯನ್ನೂ ಬೆಚ್ಚಗಿರಿಸುವುದು ಒಂದು ಸುಲಭ ಮಾರ್ಗ. ಬಾಣಂತಿ ಮತ್ತು ಕೂಸನ್ನಿರಿಸುವ ಸ್ಥಳವನ್ನು ಬೆಚ್ಚಗೇ ಇರಿಸುವುದು ಮೊದಲಿನಿಂದಲೂ ಬಂದ ರೂಢಿ. ಚಳಿಗಾಲದಲ್ಲಂತೂ ಇದು ನಿಜಕ್ಕೂ ಅನುಕೂಲಕರ. ಎರಡು ಅಥವಾ ಮೂರು ಪದರಗಳಲ್ಲಿ ಬಟ್ಟೆಯನ್ನು ಧರಿಸಿ ಶರೀರವನ್ನು ಬೆಚ್ಚಗೆ ಇರಿಸಿಕೊಳ್ಳುವುದರಿಂದ, ಚಳಿಗಾಲದಲ್ಲಿ ಸ್ತನಗಳಲ್ಲಿ ಹಾಲು ಕಟ್ಟಿಕೊಳ್ಳುವುದನ್ನು ಬಹುಪಾಲು ತಪ್ಪಿಸಬಹುದು.
ಹೀಗೆ ಹಾಲು ಕಟ್ಟಿಕೊಳ್ಳುವುದಕ್ಕೆ ಚಳಿ ಮಾತ್ರವೇ ಕಾರಣವಾಗುವುದಿಲ್ಲ. ಮಗು ಸರಿಯಾಗಿ ಹಾಲು ಕುಡಿಯದಿದ್ದರೆ ಅಥವಾ ನಿದ್ದೆ ಹೋದ ಮಗುವಿನಿಂದಾಗಿ ಫೀಡಿಂಗ್‌ಗಳ ನಡುವೆ ದೀರ್ಘ ಅಂತರವಾದರೆ, ಪಂಪ್ ಮಾಡುವ ತಾಯಂದಿರಿಗೆ ಪಂಪಿಂಗ್ ಸಮಯ ತಪ್ಪಿ ಹೋದರೆ, ಹಾಲು ಉತ್ಪತ್ತಿಯಾಗುವ ಗ್ರಂಥಿಗಳ ಸುತ್ತಲಿನ ಅಂಗಾಶಗಳಲ್ಲಿ ಉರಿಯೂತ ಕಾಣಿಸಿಕೊಂಡರೆ- ಇಂಥ ಹಲವು ಕಾರಣಗಳಿಂದ ಹಾಲು ಕಟ್ಟಿಕೊಳ್ಳಬಹುದು. ಇದರಿಂದ ಸ್ತನಗಳಲ್ಲಿ ನೋವು ಕಾಣಿಸಿಕೊಂಡು, ಊದಿಕೊಂಡು, ಹಾಲುಣಿಸುವುದೇ ಸಾಹಸ ಎಂಬಂತಾಗುತ್ತದೆ. ಇದನ್ನು ಹೀಗೆಯೇ ಬಿಟ್ಟರೆ ತಲೆ, ಕುತ್ತಿಗೆ, ಕೈಗಳೆಲ್ಲೆಲ್ಲಾ ನೋವು ವ್ಯಾಪಿಸಿ ಜ್ವರ ಬಂದ ಅನುಭವ ಉಂಟಾಗುತ್ತದೆ.
ಶಾಖ ನೀಡುವುದು ಇದಕ್ಕೆ ಉತ್ತಮ ಉಪಶಮನ. ಇದಕ್ಕಾಗಿ ಹೀಟ್ ಪ್ಯಾಡ್ ಬಳಸಬಹುದು ಅಥವಾ ಬಟ್ಟೆಯನ್ನು ಬಿಸಿಬಿಸಿ ನೀರಿನಲ್ಲಿ ಅದ್ದಿ ಶಾಖ ಕೊಡಬಹುದು. ಬಿಸಿನೀರಿನ ಸ್ನಾನವೂ ಪರಿಣಾಮಕಾರಿ ಪರಿಹಾರ ನೀಡುತ್ತದೆ. ಅಂತೂ ಮಗುವಿಗೆ ಹಾಲುಣಿಸುವ ಮೊದಲು ಕನಿಷ್ಟ ೧೦ ನಿಮಿಷಗಳವರೆಗೆ ಶಾಖ ನೀಡುವುದರಿಂದ ಹಾಲಿನ ಹರಿವನ್ನು ಸರಾಗ ಮಾಡಬಹುದು. ಹಾಲುಣಿಸುವಾಗ ಮಗುವನ್ನು ಬೇರೆಬೇರೆ ಭಂಗಿಯಲ್ಲಿ ಹಿಡಿಯುವುದು ಸಹ ಸಹಾಯಕವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಶಾಖ ಕೊಟ್ಟ ನಂತರ ಮಗುವಿಗೆ ಹಾಲುಣಿಸಲೇ ಬೇಕು. ಇದರಿಂದಲೇ ಈ ಸಮಸ್ಯೆಗೆ ಪರಿಹಾರ ಸಾಧ್ಯ.
ನೀರು ಬೇಕೇಬೇಕು
ಹಾಲುಣಿಸುವ ತಾಯಂದಿರು ಹೇರಳವಾಗಿ ನೀರು ಕುಡಿಯುವುದು ಅತಿ ಮುಖ್ಯ. ಇದರಿಂದ ನಿರ್ಜಲೀಕರಣ ಮತ್ತು ಮಲಬದ್ಧತೆಯನ್ನು ತಪ್ಪಿಸಬಹುದು. ಮಾತ್ರವಲ್ಲ, ಶಿಶುವಿಗೆ ಸಾಕಾಗುವಷ್ಟು ಹಾಲನ್ನು ಸಿದ್ಧಪಡಿಸಿಕೊಳ್ಳಲು ತಾಯಿಯ ದೇಹಕ್ಕೆ ಸಾಧ್ಯವಾಗುತ್ತದೆ. ತಾಯಿಯ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ಮಗುವಿಗೆ ಹಾಲು ಬರುವುದು ಕಡಿಮೆಯಾಗುತ್ತದೆ. ದಿನಕ್ಕೆರಡು ಬಾರಿ ಬೆಚ್ಚನೆಯ ನೀರಿಗೆ ಸ್ವಲ್ಪವೇ ಜೇನುತುಪ್ಪ ಮತ್ತು ಒಂದೆರಡು ಹನಿ ನಿಂಬೆ ರಸವನ್ನು ಸೇವಿಸಬಹುದು.
ಹಸಿರು ಸೊಪ್ಪು, ತರಕಾರಿಗಳು ಮತ್ತು ಚಳಿಗಾಲದಲ್ಲಿ ದೊರೆಯುವ ಋತುಮಾನದ ಹಣ್ಣುಗಳು ತಾಯಿಗೆ ಅಗತ್ಯವಾಗಿ ಬೇಕು. ಟೊಮೇಟೊ, ಕ್ಯಾರೆಟ್, ಹುರುಳಿಕಾಯಿ, ಮೆಂತೆ-ಪಾಲಕ್‌ನಂಥ ಸೊಪ್ಪುಗಳು, ಬೀಜ ಮತ್ತು ಒಣಹಣ್ಣುಗಳು, ಕಿತ್ತಳೆ ಮತ್ತು ಮೆಲನ್ ಜಾತಿಯ ಹಣ್ಣುಗಳು ಆಹಾರದಲ್ಲಿ ಇದ್ದಷ್ಟೂ ಅನುಕೂಲ. ಇದರಿಂದ ಇಬ್ಬರ ದೇಹಕ್ಕೆ ಸಾಕಾಗುವಷ್ಟು ಸೂಕ್ಷ್ಮ ಪೋಷಕಾಂಶಗಳು, ಖನಿಜಗಳು ದೊರೆತು ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ಸಹ ಪ್ರೊಟೀನ್ ಪೂರೈಕೆಗೆ ಸಹಕಾರಿ. ತಾಯಿಯ ಊಟದಲ್ಲಿ ಶುಂಠಿ, ಬೆಳ್ಳುಳ್ಳಿಯಂಥವು ಇರುವುದು ಲಾಭದಾಯಕ. ಆದರೆ ಕೆಫೇನ್, ಮಸಾಲೆಯುಕ್ತ ತಿನಿಸುಗಳು, ಸಕ್ಕರೆಭರಿತ ಮತ್ತು ಕರಿದ ತಿಂಡಿಗಳು, ಬೇಯಿಸದ ಹಸಿ ಆಹಾರಗಳನ್ನು ದೂರ ಇಡುವುದು ಕ್ಷೇಮ.
ಇದನ್ನೂ ಓದಿ| Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ