ಬೇಸಿಗೆ ಬಂತೆಂದರೆ ಸಾಕು ನಾವು ದೇಹ ತಂಪಾಗಿಸಲು ಪಾನೀಯಗಳ ಮೊರೆ ಹೋಗುತ್ತೇವೆ. ಮಾರುಕಟ್ಟೆಯ ತಣ್ಣಗಿನ ಪಾನೀಯಗಳಿಗಿಂತಲೂ, ಮನೆಯಲ್ಲೇ ಹಣ್ಣು ಹಂಪಲುಗಳು, ಎಳನೀರು, ಮಜ್ಜಿಗೆ, ಬಾರ್ಲಿ ನೀರು, ರಾಗಿ ಅಂಬಲಿ ಮತ್ತಿತರ ಪಾನೀಯಗಳನ್ನು ಮಾಡಿ ಕುಡಿಯುವ ಮೂಲಕ ದೇಹವನ್ನು ತಂಪಾಗಿಸಿಕೊಳ್ಳುವ ಪ್ರಯತ್ನ ಆರೋಗ್ಯಕರ ಎಂಬುದು ಎಲ್ಲರೂ ತಿಳಿದಿರುವ ಸತ್ಯ. ಇವುಗಳಲ್ಲಿ ಮಜ್ಜಿಗೆ ಅತ್ಯಂತ ಸರಳ ಹಾಗೂ ನಿತ್ಯವೂ ಎಲ್ಲರ ಮನೆಗಳಲ್ಲೂ ಬಳಕೆ ಮಾಡುವಂಥದ್ದು. ಆದರೆ, ಅದೇ ಮಜ್ಜಿಗೆ ನಿತ್ಯ ಕುಡಿದು ಬೋರಾಗಿದೆ ಅನಿಸಿದರೆ, ಬಗೆಬಗೆಯ ಮಜ್ಜಿಗೆಯ ಪಾನೀಯಗಳು ಇಲ್ಲಿವೆ. ಈ ಸುಲಭ ಸರಳ ಮಜ್ಜಿಗೆಯ ಪಾನೀಯಗಳನ್ನು ನೀವೂ ಟ್ರೈ ಮಾಡಿ.
1. ಮಸಾಲಾ ಮಜ್ಜಿಗೆ: ಹುಳಿ ಮಜ್ಜಿಗೆಗೆ ಉಪ್ಪು, ಮಸಾಲೆಗಳ್ನು ಸೇರಿಸಿ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ, ಹಾಗೂ ಮಾರುಕಟ್ಟೆಯಲ್ಲಿ ಬಾಟಲ್ ಹಾಗೂ ಟೆಟ್ರಾ ಪ್ಯಾಕೆಟ್‌ಗಳಲ್ಲಿ ಲಭ್ಯವಿರುವ ಮಜ್ಜಿಗೆಯ ಬಗೆಯಿದು. ಮಸಾಲಾ ಮಜ್ಜಿಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುವುದಲ್ಲದೆ, ದೇಹಕ್ಕೆ ತಂಪು ಕೂಡಾ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಸೈಂದವ ಲವಣ, ಚಾಟ್ ಮಸಾಲಾ, ಹಸಿಮೆಣಸು ಇವಿಷ್ಟನ್ನು ಮಜ್ಜಿಗೆಗೆ ಚೆನ್ನಾಗಿ ಮಿಕ್ಸ್ ಮಾಡಿದರೆ ತಾಜಾ ಅನುಭೂತಿ ನೀಡುವ ಮಸಾಲೆ ಮಜ್ಜಿಗೆ ತಣ್ಣಗೆ ಕುಡಿಯಬಹುದು.
2. ಗುಜರಾತಿನ ಕೋಮಲ್: ಗುಜರಾತಿನ ಸಾಂಪ್ರದಾಯಿಕ ಶೈಲಿ ಕೋಮಲ್ ಕೂಡಾ ಹೆಸರಿನಂತೆ ದೇಹಕ್ಕೆ ಕೋಮಲವೇ ಆಗಿರುತ್ತದೆ. ಒಂದು ಕಪ್ ಮಜ್ಜಿಗೆ, ಒಂದು ಕಪ್ ತೆಂಗಿನ ಹಾಲು, ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಎರಡು ಸೀಳಿದ ಹಸಿ ಮೆಣಸಿನ ಕಾಯಿ, ೨-೩ ಕರಿಬೇವು, ಚಿಟಿಕೆ ಇಂಗು, ಅರ್ಧ ಚಮಚ ಜೀರಿಗೆ, ರುಚಿಗೆ ಉಪ್ಪು, ಒಗ್ಗರಣೆಗೆ ಸ್ವಲ್ಪ ಎಣ್ಣೆ ಇಷ್ಟಿದ್ದರೆ ಕೋಮಲ್ ಮಾಡಿ ಕುಡಿಯಬಹುದು. ಒಂದು ಪಾತ್ರೆಯಲ್ಲಿ ಮಜ್ಜಿಗೆಯನ್ನೂ ತೆಂಗಿನ ಹಾಲನ್ನೂ ಮಿಕ್ಸ್ ಮಾಡಿ. ಅದಕ್ಕೆ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿ ಸೇರಿಸಿ ಮಿಕ್ಸಿಯಲ್ಲೊಮ್ಮೆ ತಿರುಗಿಸಿ. ಒಗ್ಗರಣೆ ಸೌಟಿನಲ್ಲಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಅದಕ್ಕೆ ಜೀರಿಗೆ, ಇಂಗು, ಕರಿಬೇವು ಹಾಕಿ. ಈ ಒಗ್ಗರಣೆಯನ್ನು ಮಿಕ್ಸಿಯಲ್ಲಿ ತಿರುಗಿಸಿಟ್ಟ ಮಜ್ಜಿಗೆ ಹಾಗೂ ತೆಂಗಿನ ಹಾಲಿನ ಮಿಶ್ರಣಕ್ಕೆ ಹಾಕಿ. ಚಟ್‌ಪಟಾಯಿಸುವ ರಿಫ್ರೆಶಿಂಗ್ ಕೋಮಲ್ ರೆಡಿ.
ಇದನ್ನೂ ಓದಿ: Food Tips: ಹಾಲು ಸೀದರೆ ತಲೆ ಕೆಡಿಸಿಕೊಳ್ಳಬೇಡಿ, ಹೀಗೆ ಮಾಡಿಯೂ ಬಳಸಬಹುದು!
3. ಮಹಾರಾಷ್ಟ್ರದ ತಾಕ್: ಮಹಾರಾಷ್ಟ್ರದಲ್ಲಿ ತಾಕ್ ಎಂಬ ಮಜ್ಜಿಗೆ ಬಹು ಪ್ರಸಿದ್ಧ. ಮಜ್ಜಿಗೆ, ರುಚಿಗೆ ಬೇಕಾಗುವಷ್ಟು ಸೈಂದವ ಲವಣ, ಚಿಟಿಕೆ ಇಂಗು, ಒಂದು ಚಮಚ ಜೀರಿಗೆ ಪುಡಿ, ಅರ್ಧ ಚಮಚ ತುರಿದ ಶುಂಠಿ, ಸ್ವಲ್ಪ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಇವಿಷ್ಟನ್ನು ಸೇರಿಸಿ ತಾಕ್ ಮಾಡಬಹುದು.
4. ಸೌತೆಕಾಯಿ ಮಜ್ಜಿಗೆ: ಸೌತೆಕಾಯಿಯೂ ತಂಪು, ಮಜ್ಜಿಗೆಯೂ ತಂಪು. ಇವೆರಡೂ ಸೇರಿದರೆ ದೇಹ ಸೂಪರ್ ಕೂಲ್. ಸೌತೆಕಾಯಿ ಹೋಳುಗಳು, ಸ್ವಲ್ಪ ಪುದಿನ, ಹಸಿಮೆಣಸು ಸೇರಿಸಿ ಮಿಕ್ಸಿಯಲ್ಲಿ ಹಾಕಿ ತಿರುಗಿಸಿ. ಮಜ್ಜಿಗೆಗೆ ಈ ರುಬ್ಬಿದ ಸೌತೆಕಾಯಿ ಮಿಶ್ರಣವನ್ನು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆಯಷ್ಟು ಜೀರಿಗೆಪುಡಿ ಸೇರಿಸಿ. ಸೌತೆಕಾಯಿ ಮಜ್ಜಿಗೆ ರೆಡಿ.
5. ಬೀಟ್‌ರೂಟ್ ಮಜ್ಜಿಗೆ: ಹದವಾದ ಪಿಂಕ್ ಬಣ್ಣದ ಮಜ್ಜಿಗೆ ಕುಡಿಯಬೇಕಾ? ಹಾಗಿದ್ದರೆ ಬೀಟ್‌ರೂಟ್ ಮಜ್ಜಿಗೆ ಮಾಡಿ. ಬೇಯಿಸಿದ ಒಂದು ಸಣ್ಣ ಬೀಟ್‌ರೂಟ್ ಅನ್ನು ಮಿಕ್ಸಿ ಜಾರಲ್ಲಿ ಹಾಕಿ ರುಬ್ಬಿಕೊಳ್ಳಿ. ಅದಕ್ಕೆ ಒಂದು ಲೋಟ ಮಜ್ಜಿಗೆಗೆ ಅರ್ಧ ಚಮಚ ತುರಿದ ಶುಂಠಿ, ಕತ್ತರಿಸಿದ ಹಸಿಮೆಣಸಿನ ಕಾಯಿ, ರುಚಿಗೆ ಉಪ್ಪು, ಚಿಟಿಕೆ ಜೀರಿಗೆ ಪುಡಿ, ಪುದಿನ ಎಲೆಗಳನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಜೀರಿಗೆ, ಇಂಗು ಹಾಗೂ ಕರಿಬೇವಿನ ಒಗ್ಗರಣೆಯನ್ನು ಮಾಡಿ ಹಾಕಿ.
ಇದನ್ನೂ ಓದಿ: Food Tips: ಪಾವ್ ಬಾಜಿ ರುಚಿಯಾಗಿರಬೇಕೆಂದರೆ ಈ ಐದು ಸೂತ್ರಗಳನ್ನು ಮರೆಯದಿರಿ!