Site icon Vistara News

Caffeine Addiction: ಕಾಫಿ ಪ್ರಿಯರೇ? ಚಟವಾಗದಿರಲಿ ನಿಮ್ಮ ಅಭ್ಯಾಸ!

Caffeine Addiction

ಕಾಫಿ (caffeine addiction) ಪ್ರಿಯರಿಗೆ ಹೊತ್ತಾರೆ ಒಂದು ಸ್ಟ್ರಾಂಗ್‌ ಕಾಫಿ ಹೊಟ್ಟೆ ಸೇರದಿದ್ದರೆ ಸರಿಯಾಗಿ ಬೆಳಗೇ ಆಗುವುದಿಲ್ಲ. ಸಂಜೆಯಾಗುತ್ತಿದ್ದಂತೆ ಮತ್ತೆ ಕಾಫಿಯತ್ತ ಮನಸ್ಸು ತುಡಿಯಲು ಆರಂಭಿಸುತ್ತದೆ. ಇನ್ನು ಚಳಿ ದೇಶಗಳಲ್ಲಂತೂ ಕಾಫಿಯ ಅಳತೆ ಕಪ್‌ಗಳಲ್ಲಿ ಅಲ್ಲ, ಮಗ್‌ಗಳಲ್ಲಿ! ಘಂ ಎನ್ನುವ ಪರಿಮಳ ಮತ್ತು ರುಚಿಗೆ ಮನಸೋತು, ದೇಹದಲ್ಲೂ ಶಕ್ತಿ ಸಂಚಯನ ಆಗುತ್ತದೆಂಬ ನೆಪವೊಡ್ಡಿ ಆಗಾಗ ಕಾಫಿ ಕುಡಿಯುವ ಅಭ್ಯಾಸ ಅಥವಾ ಚಟ ಮಾಡಿಕೊಂಡರೆ ಮಾತ್ರ ಕೆಲಸ ಕೆಟ್ಟಿತೆಂದೇ ಅರ್ಥ. ಕಾಫಿ ಚಟ ಆರೋಗ್ಯಕ್ಕೆ ಮಾರಕವಾಗುವ ಹಾಗೆ ಇರದಂತೆ ಏನು ಮಾಡಬಹುದು?

ಓವರ್‌ಡೋಸ್!

ಇದೇ ದೊಡ್ಡ ಸಮಸ್ಯೆ. ಬೆಳಗ್ಗೆ ಮತ್ತು ಸಂಜೆ ಮಾಮೂಲಿ ಡೋಸ್‌ ಕಾಫಿ; ನಡುವೆ ಮನೆಗ್ಯಾರೋ ಬಂದರು- ಅವರೊಂದಿಗೆ; ಹೊರಗೆ ಹೋದಾಗ ಫ್ರೆಂಡ್‌ ಸಿಕ್ಕಿದ್ದರು- ಅವರೊಂದಿಗೆ; ಆಫೀಸ್‌ನಲ್ಲಿ ಸಹೋದ್ಯೋಗಿ ಕಾಫಿಗೆ ಕರೆದಾಗ ಇಲ್ಲ ಎನ್ನುವುದು ಹೇಗೆ? ಇಷ್ಟರಲ್ಲಾಗಲೇ ಐದು ಕಪ್‌ ಕಾಫಿ ಹೊಟ್ಟೆ ಸೇರಿಯಾಯ್ತು. ದೇಹ ಹಾಳಾಗುವುದಕ್ಕೆ ಈ ಪ್ರಮಾಣದ ಕಾಫಿ ಬೇಕಾದಷ್ಟಾಯಿತು. ನಿದ್ದೆಗೇಡು, ಬಿಪಿ, ಹೃದ್ರೋಗ- ಯಾವುದು ಬೇಕು? ಅತ್ಯಂತ ಕಟ್ಟುನಿಟ್ಟಾಗಿ, ಏನೇ ಆದರೂ ದಿನಕ್ಕೆ ಮೂರು ಕಪ್‌ ಮೀರುವುದಿಲ್ಲ ಎಂಬ ನಿಶ್ಚಯ ಮಾಡಿಕೊಂಡು- ಅದರಂತೆ ನಡೆಯಿರಿ. ಅಂದಹಾಗೆ, ಕಪ್‌ ಅಳತೆ ಸಣ್ಣದಿದ್ದಷ್ಟೂ ಒಳ್ಳೆಯದು

ಹೆಚ್ಚು ನೀರು

ಕಾಫಿ ಕುಡಿದಷ್ಟೂ ಹೆಚ್ಚಿನ ಮೂತ್ರ ದೇಹದಿಂದ ಹೊರಹೋಗುತ್ತದೆ. ಅಂದರೆ, ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರನ್ನೂ ಒದಗಿಸಬೇಕಾಗುತ್ತದೆ. ಇಲ್ಲದಿದ್ದರೆ ಸುಸ್ತು, ಆಯಾಸ, ತಲೆನೋವು ಮುಂತಾದ ಹಲವು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ಬೇಸಿಗೆಯಲ್ಲಿ ಕಾಫಿ ಮಾತ್ರ ಕುಡಿದು, ನೀರು ಸರಿಯಾಗಿ ಕುಡಿಯದಿದ್ದರೆ ಆಸ್ಪತ್ರೆ ಸೇರುವುದು ಖಚಿತ. ಹಾಗಾಗಿ ನಿರ್ಜಲೀಕರಣ ತಪ್ಪಿಸಲು ಬೇಕಾಗಿ, ಚನ್ನಾಗಿ ನೀರು ಕುಡಿಯಲೇಬೇಕು.

ಕಾಫಿ ಬೀಜವೂ ಮುಖ್ಯ

ಕಾಫಿಯ ಪರಿಮಳ ಮತ್ತು ರುಚಿ ನಿರ್ಧಾರವಾಗುವುದು, ಬೀಜವನ್ನು ಪುಡಿ ಮಾಡುವ ವಿಧಾನದ ಮೇಲೆ. ಅದಕ್ಕಿಂತಲೂ ಮುಖ್ಯವಾಗಿ ಕಾಫಿ ಬೀಜಗಳ ಗುಣಮಟ್ಟ ಮತ್ತು ಆಯಸ್ಸಿನ ಮೇಲೆ. ಹಾಗಾಗಿ ಆದಷ್ಟೂ ತಾಜಾ ಬೀಜಗಳನ್ನೇ ಪುಡಿ ಮಾಡಿಸಿ. ಬೀಜಗಳು ಹಳೆಯದಾದಷ್ಟೂ ರುಚಿಯೊಂದೇ ಕೆಡುವುದಲ್ಲ, ಆರೋಗ್ಯವೂ.

ಕ್ರೀಮ್‌ ಯಾಕೆ?

ಕಾಫಿಯ ಮೇಲೆ ವಿಪ್‌ ಕ್ರೀಮ್‌ನ ಚಿತ್ತಾರಗಳನ್ನು ಬರೆದುಕೊಂಡು, ಅದರೊಂದಿಗೆ ಸೆಲ್ಫೀ ತೆಗೆದು ಎಲ್ಲೆಂದರಲ್ಲಿ ಅಪ್ಲೋಡ್‌ ಮಾಡಿದರೆ ಮಾತ್ರವೇ ಕಾಫಿ ರುಚಿಸುವುದು ಎಂದೇನಿಲ್ಲವಲ್ಲ. ಹಾಗೆಲ್ಲ ವಿಪ್‌ ಕ್ರೀಮ್‌ ಸೇರಿಸಿಕೊಳ್ಳಲು ಕಾಫಿಯೇನು ಚಾಕಲೇಟ್‌ ಪೇಯವೇ? ಕಾಫಿಗೆ ಅಷ್ಟೊಂದು ಪ್ರಮಾಣದ ಕೊಬ್ಬು ಸೇರಿಸಿಕೊಂಡರೆ ಆರೋಗ್ಯದ ಗತಿಯೇನು?

ಕಹಿಯೇ ಇರಲಿ!

ಕಾಫಿಗೆ ಸಿಕ್ಕಾಪಟ್ಟೆ ಸಕ್ಕರೆ ಸುರಿದುಕೊಂಡು ಕುಡಿಯುವವರೂ ಇದ್ದಾರೆ. ಕಾಫಿಯ ರುಚಿ ಸ್ವಲ್ಪ ಕಹಿಯಿದ್ದರೇ ಹಿತ. ಪಾಯಸದಂತಿದ್ದರೆ ಆರೋಗ್ಯಕ್ಕೆ ಇನ್ನಷ್ಟು ತೊಂದರೆಯೇ ಹೊರತು ಮತ್ತೇನಿಲ್ಲ. ಅತಿಯಾದ ಸಕ್ಕರೆ ಸೇವನೆಯೂ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗಬಲ್ಲದು.

ಅತಿ ಬಿಸಿ ಬೇಡ

ಯಾವುದೇ ಪೇಯವಾದರೂ ಸುಡುವಂಥ ಬಿಸಿ ಕುಡಿಯುವ ಅಗತ್ಯವಿಲ್ಲ. ಇದರಿಂದ ಅನ್ನನಾಳಕ್ಕೆ ಹಾನಿ ಎನ್ನುತ್ತಾರೆ ಆರೋಗ್ಯ ಪರಿಣತರು. ಅತಿಯಾದ ಬಿಸಿ ಸೇವನೆಯಿಂದ ಅನ್ನನಾಳದ ಕ್ಯಾನ್ಸರ್‌ ಬರುವ ಸಾಧ್ಯತೆ ಮೂರು ಪಟ್ಟು ಹೆಚ್ಚು. ಹಾಗಾಗಿ ಒಲೆ ಮೇಲಿಂದ ನೇರ ಗಂಟಲಿಗೆ ಸುರಿಯುವ ಬದಲು, ಸ್ವಲ್ಪ ಒಗ್ಗಲಿ, ಬಿಡಿ!

ಇದನ್ನೂ ಓದಿ: Health Care Tips: ನಮ್ಮ ಆಹಾರದಲ್ಲಿ ಇರಬೇಕಾದ ಬೀಜಗಳು ಮತ್ತು ಅವುಗಳ ಕೆಲವು ಸತ್ವಗಳ ಬಗ್ಗೆ ತಿಳಿಯಿರಿ

Exit mobile version