ಸಂಶೋಧಕರು ಹೊಸದಾಗಿ ಅಭಿವೃದ್ಧಿ ಪಡಿಸಿದ ಉಪಕರಣವೊಂದು ರಕ್ತದಲ್ಲಿ ಮುಕ್ತವಾಗಿ ತೇಲಾಡುತ್ತಿರುವ ಕ್ಯಾನ್ಸರ್ ಕಣಗಳನ್ನು ಪತ್ತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆಯಂತೆ. ಈ ಉಪಕರಣದಿಂದಾಗಿ ಕ್ಯಾನ್ಸರ್ ಪತ್ತೆ ಹಚ್ಚಲೆಂದು ಬಯಾಪ್ಸಿಯಂಥ ಶಸ್ತ್ರಚಿಕಿತ್ಸಾ ಕ್ರಮಗಳನ್ನು ಅನುಸರಿಸುವ ಅಗತ್ಯ ಬರುವುದಿಲ್ಲ ಎನ್ನಲಾಗಿದೆ.
ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಸ್ಟ್ಯಾಟಿಕ್ ಡ್ರಾಪ್‌ಲೆಟ್ ಮೈಕ್ರೋ ಫ್ಲೂಯಿಡ್ ಡಿವೈಸ್ (Static Droplet Microfluidic device) ಎಂಬ ಉಪಕರಣವು, ರಕ್ತದಲ್ಲಿ ಮುಕ್ತವಾಗಿ ಚಲಿಸುತ್ತಿರುವ ಕ್ಯಾನ್ಸರ್ ಗಡ್ಡೆಗಳ ಕಣಗಳನ್ನು ತ್ವರಿತವಾಗಿ ಪತ್ತೆಮಾಡುತ್ತದೆ. ಆರೋಗ್ಯವಂತ ಕೋಶಗಳು ಮತ್ತು ಕ್ಯಾನ್ಸರ್‌ಗ್ರಸ್ತ ಕೋಶಗಳ ನಡುವಿನ ವ್ಯತ್ಯಾಸವನ್ನು ಈ ಉಪಕರಣವು ಗುರುತಿಸುವ ಸಾಮಾರ್ಥ್ಯವನ್ನು ಹೊಂದಿದೆ. ಈಗಾಗಲೇ ಇರುವಂಥ ಕ್ಯಾನ್ಸರ್ ಪತ್ತೆ ತಂತ್ರಜ್ಞಾನಗಳು- ಲ್ಯಾಬ್ ಪರೀಕ್ಷೆಯಿಂದ, ಸ್ಕ್ಯಾನ್ ಮತ್ತು ಎಂಆರ್‌ಐ ಪರೀಕ್ಷೆಗಳು ಮತ್ತು ಬಯಾಪ್ಸಿಯಂಥ ಶಸ್ತ್ರಚಿಕಿತ್ಸೆ ಮಾಡುವ ತಂತ್ರಜ್ಞಾನಗಳನ್ನು ಆಧರಿಸಿವೆ. ಈಗ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವು ಇವೆಲ್ಲದಕ್ಕಿಂತ ಭಿನ್ನವಾಗಿದೆ.
ಕ್ಯಾನ್ಸರ್‌ನಿಂದ ಸಂಭವಿಸುತ್ತಿರುವ ಮರಣಗಳಲ್ಲಿ ಶೇ. ೯೦ರಷ್ಟು ಪ್ರಕರಣಗಳು ಒಂದೆಡೆಯಿಂದ ಇನ್ನೊಂದೆಡೆಗೆ ಹರಡುವ ಮೆಟಾಸ್ಟ್ಯಾಸಿಸ್ ಸ್ವರೂಪದವು. ಅಂದರೆ, ಎಲ್ಲಿ ಮೊದಲಿಗೆ ಕ್ಯಾನ್ಸರ್ ಆರಂಭವಾಗಿತ್ತೋ ಅಲ್ಲಿಂದ ದೇಹದ ಉಳಿದ ಆರೋಗ್ಯವಂತ ಅಂಗಗಳಿಗೆ ಮೂಲದಿಂದ ಬೇರ್ಪಟ್ಟ ಕಣಗಳು ರೋಗವನ್ನು ಹಬ್ಬಿಸುತ್ತವೆ. ಅಂದರೆ, ರಕ್ತದಲ್ಲಿ ಈಜಾಡುತ್ತಿರುವ ಮುಕ್ತ ಕಣಗಳು ಎಷ್ಟಿವೆ ಎಂಬುದು ಕ್ಯಾನ್ಸರ್‌ನ ಸ್ವರೂಪವನ್ನು ಪತ್ತೆ ಮಾಡುವಲ್ಲಿ ನೆರವಾಗುವುದಂತೂ ಖಂಡಿತ.
ಈವರೆಗಿನ ತಂತ್ರಜ್ಞಾನಗಳ ಬಗ್ಗೆ ಹೇಳುವುದಾದರೆ, ಲ್ಯಾಬ್ ಪರೀಕ್ಷೆಯಿಂದ ಪತ್ತೆ ಮಾಡುವ ಕ್ರಮದಲ್ಲಿ ನೂರಕ್ಕೆ ನೂರರಷ್ಟು ನಿಖರ ಫಲಿತಾಂಶ ಬರುವುದಿಲ್ಲ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್ ಸೂಚನೆ ಕಂಡುಬಂದರೆ, ಬಯಾಪ್ಸಿ ಮತ್ತು ಇಮೇಜಿಂಗ್ ಪರೀಕ್ಷೆಗಳ ಮೂಲಕ ಅದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ. ಸಿಟಿ ಸ್ಕ್ಯಾನ್, ಎಂಆರ್‌ಐ, ನ್ಯೂಕ್ಲಿಯರ್ ಸ್ಕ್ಯಾನ್ (ಮೂಳೆಗಳ ಪರೀಕ್ಷೆಗೆ) ಮತ್ತಿತರ ಇಮೇಂಜಿಗ್ ಪರೀಕ್ಷೆಗಳ ಮೂಲಕ ಟ್ಯೂಮರ್ ಪತ್ತೆ ಮಾಡುವುದು ಇನ್ನೊಂದು ವಿಧಾನ. ಇದೆಲ್ಲದಕ್ಕೂ ಸೂಕ್ತ ಉಪಕರಣಗಳು ಮತ್ತು ತಂತ್ರಜ್ಞರ ಅಗತ್ಯವಿದೆ.
ಇವುಗಳೆಲ್ಲದರ ಹೊರತಾಗಿ ಬಯಾಪ್ಸಿ ಮಾಡುವುದು ಮತ್ತೊಂದು ವಿಧಾನ. ಅನುಮಾನವಿರುವ ಕೋಶಗಳನ್ನು ಶಸ್ತ್ರಚಿಕಿತ್ಸೆ ಅಥವಾ ಎಂಡೋಸ್ಕೋಪಿ ಮೂಲಕ ತೆಗೆದು ಪರಾಂಬರಿಸುವ ಈ ಕ್ರಮ, ರೋಗಿಗಳಿಗೆ ನೋವು, ಕಿರಕಿರಿಯನ್ನು ತರಬಲ್ಲದು. ಇಂಥ ಯಾವುದೇ ಕ್ಯಾನ್ಸರ್ ಪತ್ತೆ ಕ್ರಮಗಳು ಕೆಲವೊಮ್ಮೆ ಸಾಕಷ್ಟು ದುಬಾರಿಯೂ ಆಗುತ್ತವೆ.
ಇದನ್ನೂ ಓದಿ: Herbs That Improve Lung Health: ಶ್ವಾಸಕೋಶದ ಆರೋಗ್ಯ ಹೆಚ್ಚಿಸುವ ಮೂಲಿಕೆಗಳಿವು