ನಟಿ ಪೂನಂ ಪಾಂಡೆ ಗರ್ಭಕೊರಳಿನ ಕ್ಯಾನ್ಸರ್‌ಗೆ (cervical cancer) ಬಲಿಯಾಗಿದ್ದಾರೆ ಎಂಬ ವದಂತಿ ಬೆನ್ನಲ್ಲೇ, ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಲಾದ ಸರ್ವೈಕಲ್ ಕ್ಯಾನ್ಸರ್ ವಿರುದ್ಧದ ಲಸಿಕೆಯನ್ನು ಬಾಲಕಿಯರಿಗೆ ನೀಡುವ ಕೇಂದ್ರ ಸರಕಾರದ ಪ್ರಸ್ತಾಪ ಇನ್ನಷ್ಟು ಮಹತ್ವ ಪಡೆದಿದೆ. ಹ್ಯುಮನ್ ಪ್ಯಾಪಿಲೋಮ ಎಂಬ ವೈರಸ್‌ನಿಂದ (ಎಚ್‌ಪಿವಿ) ಬರುವ ಈ ಕ್ಯಾನ್ಸರ್ ವಿರುದ್ಧ ಲಸಿಕೆ ಲಭ್ಯವಿದ್ದರೂ, ಅತಿ ಕಡಿಮೆ ಪ್ರಮಾಣದಲ್ಲಿ ಇದನ್ನು ಮಹಿಳೆಯರು ಪಡೆಯುತ್ತಿದ್ದಾರೆ. ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಹೊಸಿಲಲ್ಲಿ, ಈ ರೋಗದ ಬಗೆಗೆ ಮತ್ತು ಅದನ್ನು ತಡೆಯುವ ಬಗೆಗಿನ ಒಂದಿಷ್ಟು ವಿವರಗಳು ಇಲ್ಲಿವೆ. ಹ್ಯೂಮನ್ ಪ್ಯಾಪಿಲೋಮ ವೈರಸ್ ಅಥವಾ ಎಚ್‌ಪಿವಿ ಎಂದು ಕರೆಯಲಾಗುವ ವೈರಸ್‌ನಿಂದ ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತದೆ. ಲೈಂಗಿಕವಾಗಿ ಸಕ್ರಿಯರಾಗಿರುವವರಲ್ಲಿ ಈ ವೈರಸ್ ಹರಡುತ್ತದೆ. ಒಮ್ಮೆ ವೈರಸ್ ಬಂದ ಮೇಲೆ ಹಲವಾರು ವರ್ಷಗಳ ನಂತರ ಗರ್ಭಕೋಶದ ಕಂಠದಲ್ಲಿ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಏಷ್ಯಾ ಖಂಡದಲ್ಲಿ ಮಹಿಳೆಯರು ತುತ್ತಾಗುತ್ತಿರುವ ಕ್ಯಾನ್ಸರ್‌ಗಳ ಪೈಕಿ ಮುಂಚೂಣಿಯಲ್ಲಿ ಸರ್ವೈಕಲ್ ಕ್ಯಾನ್ಸರ್ ಸಹ ಒಂದು. ಗ್ರಾಮೀಣ ಮತ್ತು ನಗರ ಭಾಗಗಳೆಂಬ ವ್ಯತ್ಯಾಸವಿಲ್ಲದಂತೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ತಡೆಯಲು ಸಾಧ್ಯವಿದೆ
ಎಚ್‌ಪಿವಿ ರೋಗಾಣುವಿನಿಂದ ಬರುವ ಗರ್ಭಕೊರಳಿನ ಕ್ಯಾನ್ಸರ್ ತಡೆಯಲು ಸಾಧ್ಯವಿದೆ. ಇದಕ್ಕಾಗಿ ಪರಿಣಾಮಕಾರಿ ಲಸಿಕೆ ಲಭ್ಯವಿದ್ದು, 9- 14 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಇದನ್ನು ನೀಡಿದರೆ, ಅತಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸಿದೆ. ಆನಂತರ 26 ವರ್ಷ ವಯಸ್ಸಿನವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದು, ಯಶಸ್ಸಿನ ಪ್ರಮಾಣ ಸಮಾಧಾನಕರವಾಗಿದೆ. ಆನಂತರ 45 ವರ್ಷಗಳವರೆಗೂ ಮಹಿಳೆಯರು ಇದನ್ನು ಪಡೆಯಬಹುದಾಗಿದ್ದರೂ ವಯಸ್ಸು ಹೆಚ್ಚಿದಂತೆಲ್ಲಾ ಲಸಿಕೆಯ ಯಶಸ್ಸಿನ ಪ್ರಮಾಣ ಕಡಿಮೆಯಾಗುತ್ತದೆ.
ಸುರಕ್ಷಿತ ಲೈಂಗಿಕತೆಯನ್ನು ಪಾಲಿಸುವುದು ಕಡ್ಡಾಯ. ಇದರಿಂದ ಎಚ್‌ಪಿವಿ ರೋಗಾಣು ಹರಡುವ ಪ್ರಮಾಣವನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಬಹುದು. ಏಕ ಸಂಗಾತಿಯ ಸಂದರ್ಭಗಳಲ್ಲೂ ಕಾಂಡೊಮ್ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಇದರಿಂದ ಕೇವಲ ಸರ್ವೈಕಲ್ ಕ್ಯಾನ್ಸರ್ ಮಾತ್ರವಲ್ಲ, ಎಚ್‌ಐವಿಯಂಥ ಮಾರಣಾಂತಿಕ ಲೈಂಗಿಕ ರೋಗಗಳನ್ನೂ ತಡೆಗಟ್ಟಬಹುದು.
ಪರೀಕ್ಷೆಗಳು ಅಗತ್ಯ
ಆರಂಭಿಕ ಹಂತದಲ್ಲಿ ಈ ರೋಗ ಪತ್ತೆಯಾಗದೆ ಹೋಗುವುದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಋತುಚಕ್ರದಲ್ಲಿ ಏರುಪೇರು, ಋತುಬಂಧದ ನಂತರವೂ ರಸ್ತಸ್ರಾವವಾಗುವುದು, ಮೂತ್ರದಲ್ಲಿನ ರಕ್ತ ಮುಂತಾದ ಹಲವು ಲಕ್ಷಣಗಳು ಆರಂಭದಲ್ಲಿ ಕಾಣದೇ ಹೋಗಬಹುದು. ಸ್ಪಷ್ಟ ಲಕ್ಷಣಗಳು ಗೋಚರಿಸುವಷ್ಟರಲ್ಲಿ ರೋಗವು ಚಿಕಿತ್ಸೆಯ ಹಂತವನ್ನು ದಾಟಿರುತ್ತದೆ. ನಟಿ ಪೂನಂ ಪಾಂಡೆ ಅವರ ಪ್ರಕರಣದಲ್ಲೂ ರೋಗ ಪತ್ತೆಯಾಗಿದ್ದು ತಡವಾಗಿ. ಈ ಹಿನ್ನೆಲೆಯಲ್ಲಿ ೨೧ ವರ್ಷ ವಯಸ್ಸಿನ ನಂತರ, ಪ್ರತಿ ಮೂರು ವರ್ಷಕ್ಕೆ ನಿಯಮಿತವಾಗಿ ಪ್ಯಾಪ್ ಟೆಸ್ಟ್ ಮಾಡಿಸಿಕೊಳ್ಳುವಂತೆ ಮಹಿಳೆಯರಿಗೆ ಸೂಚಿಸಲಾಗುತ್ತಿದೆ.
ಏನು ಪರೀಕ್ಷೆಯಿದು?
ಗರ್ಭ ಕಂಠದ ಕೆಲವು ಅಂಗಾಂಶಗಳನ್ನು ತೆಗೆಯುವ ವೈದ್ಯರು, ಅದನ್ನು ಪರೀಕ್ಷೆ ಮಾಡಿಸುತ್ತಾರೆ. ಅದರಲ್ಲಿ ಯಾವುದಾದರೂ ಅಸ್ವಾಭಾವಿಕ ಬೆಳವಣಿಗೆಗಳು ಇವೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಾಗಲೇ ಕ್ಯಾನ್ಸರ್ ಬಂದಿರುವುದು ಮಾತ್ರವಲ್ಲ, ಮುಂದಿನ ನಾಲ್ಕಾರು ವರ್ಷಗಳಲ್ಲಿ ಈ ಕೋಶಗಳಲ್ಲಿ ಅನಿಯಂತ್ರಿತ ಬೆಳವಣಿಗೆ ಆಗಬಹುದೇ ಎಂಬುದನ್ನೂ ಈ ಪರೀಕ್ಷೆಯಲ್ಲಿ ಪತ್ತೆ ಮಾಡಬಹುದು. ಹಾಗಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಪ್ಯಾಪ್ ಸ್ಮೇರ್ ಪರೀಕ್ಷೆಯನ್ನು ಮಹಿಳೆಯರು ತಪ್ಪದೆ ಮಾಡಿಸುವುದು ಸೂಕ್ತ. ಈ ಪರೀಕ್ಷೆಯಲ್ಲಿ ಕ್ಯಾನ್ಸರ್ ಸಂಭಾವ್ಯತೆಯನ್ನು ಉದ್ಭವಾವಸ್ಥೆಯಲ್ಲೇ ಪತ್ತೆ ಮಾಡಬಹುದು.
ಜೀವನಶೈಲಿಯ ಬದಲಾವಣೆಗಳು
ಬದುಕಿನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇಂಥ ಮಾರಣಾಂತಿಕ ರೋಗಗಳು ಕರಡುವ ಸಂಭಾವ್ಯತೆಯನ್ನು ತಡೆಯಬಹುದು.
ಸಮತೋಲನದಿಂದ ಕೂಡಿದ ತಾಜಾ ಆಹಾರಗಳ ಸೇವನೆ, ಸಂಸ್ಕರಿತ ಮತ್ತು ಕೆಟ್ಟ ಕೊಬ್ಬಿನ ಆಹಾರಗಳ ಮೇಲೆ ನಿಯಂತ್ರಣ ಹೇರುವುದು, ಸಿಗರೇಟ್ ಮತ್ತು ಮದ್ಯಗಳನ್ನು ದೂರ ಮಾಡುವುದು ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳು. ನಿಯಮಿತವಾದ ವ್ಯಾಯಾಮ ಮತ್ತು ಒತ್ತಡ ನಿವಾರಣೆಯ ಕ್ರಮಗಳು ನಮ್ಮ ರೋಗನಿರೋಧಕ ಶಕ್ತಿಯ ಮೇಲೆ ಪ್ರಬಲ ಪರಿಣಾಮವನ್ನು ಬೀರುತ್ತವೆ.
ಸುರಕ್ಷಿತ ಲೈಂಗಿಕ ಅಭ್ಯಾಸಗಳು ಬದುಕಿನಲ್ಲಿ ಅತ್ಯಂತ ಮಹತ್ವವನ್ನು ಹೊಂದಿವೆ. ಒಂದಕ್ಕಿಂತ ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದುವುದು ಮತ್ತು ಕಾಂಡೊಮ್ ಬಳಸದೆ ಇರುವುದು ಹಲವು ರೋಗಗಳನ್ನು ತರಬಹುದು. ಅತಿ ಸಣ್ಣ ಪ್ರಾಯದಲ್ಲಿ ಲೈಂಗಿಕವಾಗಿ ಸಕ್ರಿಯರಾಗುವುದು ಸಹ ಕ್ಯಾನ್ಸರ್ ಸೇರಿದಂತೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಇದನ್ನೂ ಓದಿ: Menopause: ಪುರುಷರಲ್ಲೂ ಮೆನೋಪಾಸ್!; 40 ದಾಟಿದ ಪುರುಷರ ಸಮಸ್ಯೆಗಳೇನು ನೋಡಿ…