Site icon Vistara News

Chewing Gum : ಚ್ಯೂಯಿಂಗ್‌ ಗಮ್‌ ನುಂಗಿದ್ರಾ? ಹೆದರಬೇಡಿ, ಜೀವ ಹೋಗುವುದಿಲ್ಲ!

Chewing gum? Don't worry, life won't go away!

#image_title

ಬಾಯಿಯನ್ನು ಸದಾ ವ್ಯಸ್ತವಾಗಿಡುವ (Chewing Gum) ಚ್ಯೂಯಿಂಗ್‌ ಗಮ್‌ (ಅಥವಾ ಚಿಕ್ಕದಾಗಿ ಗಮ್‌!) ಬಹಳಷ್ಟು ಜನರಿಗಿಷ್ಟ. ಯಾರೊಂದಿಗೂ ಹೆಚ್ಚು ಮಾತಾಡುವ ತ್ರಾಸಿಲ್ಲದೇ, ಬಾಯಿಯ ದುರ್ಗಂಧವನ್ನೂ ತೊಡೆಯುವ, ತಿನ್ನುವ ಚಪಲವನ್ನೂ ಹತ್ತಿಕ್ಕುವ ಗಮ್‌ ಅಗಿಯುತ್ತಿರುವುದು ಕೆಲವರಿಗೆ ಪ್ರಿಯ. ಅದನ್ನು ಜಗಿದಾದ ಮೇಲೆ ಎಲ್ಲೆಂದರಲ್ಲಿ ಅಂಟಿಸುವ (ದುರ್‌)ಉದ್ದೇಶಕ್ಕಾಗಿಯೇ ತಿನ್ನುವವರಿದ್ದಾರೆ. ಹಾಗೆ ನೋಡಿದರೆ ಚ್ಯೂಯಿಂಗ್‌ ಗಮ್‌ ತಿನ್ನುವುದಲ್ಲ, ಅಗಿಯುವುದಷ್ಟೇ. ಅದನ್ನು ನುಂಗುವಂತಿಲ್ಲ, ನುಂಗಬಾರದು. ಆದಾಗ್ಯೂ ಎಂದಾದರೊಮ್ಮೆ ಆಕಸ್ಮಿಕವಾಗಿ ಅದು ಹೊಟ್ಟೆಗೆ ಹೋದರೆ? ʻಹೊಟ್ಟೆಯಲ್ಲೇ ಅಂಟಿಕೊಂಡರೆ? ಹೊರಗೆ ಬಾರದೇ ಇದ್ದರೇನು ಮಾಡುವುದು?ʼ ಎಂದು ಆತಂಕ ಹಲವರಿಗೆ. ಇದಕ್ಕೂ ಮುನ್ನ ಗಮ್‌ ತಿನ್ನುವುದು ಸುರಕ್ಷಿತವೇ? ಏನಿದೆ ಅದರಲ್ಲಿ ಎಂದು ನೋಡೋಣ.

ಏನಿದೆ ಇದರಲ್ಲಿ?: ಇದನ್ನು ರೆಸಿನ್‌, ಪ್ಲಾಸ್ಟಿಸೈಜರ್‌ ಮತ್ತು ಪಾಲಿಮರ್‌ಗಳ ಮಿಶ್ರಣವಾದ ಗಮ್‌ ಬೇಸ್‌ನಿಂದ ಮಾಡಿಸುತ್ತಾರೆ. ಕೆಲವೊಮ್ಮೆ ಇದನ್ನು ಮೃದುವಾಗಿಸಲು ಆಹಾರ ದರ್ಜೆಯ ಸಾಫನರ್‌ಗಳು, ಕೆಡದಂತೆ ಉಳಿಸಲು ಪ್ರಿಸರ್ವೇಟಿವ್‌ಗಳು, ಕೃತಕ ಬಣ್ಣ, ಸಿಹಿ ಮತ್ತು ರುಚಿಗಳನ್ನು ಸೇರಿಸಿರುತ್ತಾರೆ. ಕೆಲವೊಮ್ಮೆ ಪಾಲಿಯಾಲ್‌ ಎನ್ನುವ ರಾಸಾಯನಿಕದ ಹೊದಿಕೆಯೂ ಇದಕ್ಕಿರುತ್ತದೆ. ಮೂಲತಃ ಇದು ಹಲವಾರು ರಾಸಾಯನಿಕಗಳ ಮುದ್ದೆ, ಮತ್ತೇನಲ್ಲ. ಹಾಗಾಗಿ ಗಮ್‌ ಅಗಿಯದಿದ್ದರೆ ಗಂಟು ಹೋಗುವುದೇನಿಲ್ಲ ಎಂದಾದರೆ ʻದೂರವಿಡಿʼ ಎನ್ನುತ್ತವೆ ಹಲವಾರು ಅಧ್ಯಯನಗಳು. ಇದರಲ್ಲಿರುವ ಕೃತಕ ಬಣ್ಣ, ರುಚಿಗಳು ಅಥವಾ ರಾಸಾಯನಿಕಗಳು ಅಲರ್ಜಿ ತರಬಹುದು. ಕೃತಕ ಸಿಹಿಯ ಅಂಶ ಆರೋಗ್ಯಕ್ಕೆ ಮಾರಕ. ಹಾಗಾಗಿ ಬಾಯಿ ಚಪಲಕ್ಕೇ ಜಗಿದರೂ, ಅಪರೂಪಕ್ಕೆ ಸಾಕು ಎಂದು ಪರಿಣತರೂ ಹೇಳುತ್ತಾರೆ.

ನುಂಗಿದರೇನು ಗತಿ?: ಸುಮ್ಮನೆ ಜಗಿದರೇ ಆರೋಗ್ಯಕ್ಕೆ ಹೇಳಿಸಿದ್ದಲ್ಲ ಎನ್ನುವಾಗ ಇದನ್ನು ನುಂಗಿಬಿಟ್ಟರೆ? ಖಂಡಿತಾ ಜೀವಕ್ಕೆ ಅಪಾಯವಿಲ್ಲ ಅಥವಾ ಬೆಂಕಿಗೆ ಬಿದ್ದ ಹಾಗೆ ತುರ್ತುಚಿಕಿತ್ಸೆಗೆ ಓಡಬೇಕೆಂದೇನೂ ಇಲ್ಲ ಎನ್ನುತ್ತಾರೆ ತಜ್ಞರು. ಹೊಟ್ಟೆಯಲ್ಲಿ ಅದು ದೀರ್ಘಕಾಲ ಕುಳಿತಿರುವುದು ಹೌದು. ಕಠಿಣವಾದ ಗಮ್‌ಬೇಸ್‌ ಜಠರದಲ್ಲಿ ಕರಗಿ ಜೀರ್ಣವಾಗುವುದಕ್ಕೆ ಸಮಯ ಬೇಕು. ಅಂದರೆ ವರ್ಷಾನುಗಟ್ಟಲೆ ಅಲ್ಲಿಯೇ ಕುಳಿತಿರುತ್ತದೆ ಎಂದು ಮಕ್ಕಳನ್ನು ಹೆದರಿಸಿದ ಹಾಗೇನೂ ಆಗುವುದಿಲ್ಲ.

ಕೆಲವೊಮ್ಮೆ ಹೊಟ್ಟೆಯಗುಂಟ ಸಾಗಿ ಮಾರನೇದಿನ ಟಾಯ್ಲೆಟ್‌ನಲ್ಲಿ ಹೊರಗೆ ಬರುವ ಸಾಧ್ಯತೆಯೂ ಇಲ್ಲದಿಲ್ಲ. ಕೆಲವು ಅಪರೂಪದ ಸಂದರ್ಭಗಳಲ್ಲಿ ಜೀರ್ಣಾಂಗದ ಹಾದಿಯಲ್ಲಿ ಕುಳಿತು, ಆಹಾರದ ಪರಿಚಲನೆಗೆ ತೊಂದರೆ ಕೊಡುತ್ತದೆ. ಆಗ ಹೊಟ್ಟೆನೋವು, ವಾಂತಿಯಂಥ ಲಕ್ಷಣಗಳು ಕಾಣುವುದಿದೆ. ಇದಕ್ಕಿಂತ ಹೆಚ್ಚಾಗಿ ಇನ್ಯಾಗ ಅಪಾಯಗಳೂ ವಯಸ್ಕರಲ್ಲಿ ಕಂಡುಬಂದ ಉದಾಹರಣೆಗಳು ವಿರಳ.

ಮಕ್ಕಳಿಗೆ ಅಪಾಯವೇ?: ಗಮ್‌ ಪ್ರೀತಿ, ದೊಡ್ಡವರಿಗಿಂತ ಮಕ್ಕಳಲ್ಲೇ ಹೆಚ್ಚು; ಇದರಿಂದಾಗಿ ಬಹುಶಃ ನುಂಗುವ ಸಾಧ್ಯತೆಯೂ ಹೆಚ್ಚೇ. ಹಾಗೆಂದು ಮಕ್ಕಳಿಗೆ ಗಮ್‌ ನುಂಗಿದಷ್ಟಕ್ಕೆ ಪ್ರಾಣಾಪಾಯವಿಲ್ಲ. ಆದರೆ ನುಂಗುವಾಗ ಗಂಟಲಿಗೆ ಸಿಕ್ಕಿ ಸಮಸ್ಯೆಯಾಗಬಹುದು. ಎಲ್ಲೋ ಒಂದೆರಡು ನುಂಗಿದರೂ ಚಿಂತೆಯಿಲ್ಲ. ಹೆಚ್ಚು ಗಮ್‌ಗಳನ್ನು ನುಂಗಿದರೆ, ಕರುಳಿನ ಹಾದಿಯಲ್ಲಿ ಹೊರಹೋಗುವ ಕಶ್ಮಲಗಳ ದಾರಿ ಬಂದ್‌ ಮಾಡಿದ ಉದಾಹರಣೆಗಳಿವೆ. ಇದರಿಂದ ಮಗುವಿಗೆ ಅತಿಯಾದ ಹೊಟ್ಟೆನೋವು, ಮಲಬದ್ಧತೆ, ವಾಂತಿಯಂಥ ತೊಂದರೆಗಳು ಕಾಣಬಹುದು.

ಇದನ್ನೂ ಓದಿ : H3N2 Virus: ಎಚ್‌3ಎನ್‌2 ವೈರಸ್‌ನ ಮೂಲ ಪತ್ತೆಗಾಗಿ ಕ್ಲಿನಿಕಲ್ ಆಡಿಟ್‌ಗೆ ಮುಂದಾದ ಆರೋಗ್ಯ ಇಲಾಖೆ

ಇನ್ನೂ ಕೆಲವು ಅಪರೂಪದ ಪ್ರಕರಣಗಳಲ್ಲಿ, ನುಂಗಿದ ಗಮ್‌ಗಳ ಶೇಷಗಳು ಹೊಟ್ಟೆಯಲ್ಲೇ ಉಳಿದು, ಇತರ ಕಶ್ಮಲಗಳ ಜೊತೆ ಸೇರಿ, ಸಣ್ಣಸಣ್ಣ ಕಣಗಳೆಲ್ಲಾ ಒಟ್ಟಾಗಿ ದೊಡ್ಡದಾಗಿ ಜೀರ್ಣಾಂಗದ ಕೆಲಸಕ್ಕೆ ತಡೆಯಾದ ಉದಾಹರಣಗಳಿವೆ. ಹಾಗಾಗಿ ಚಿಕ್ಕ ಮಕ್ಕಳಿಗೆ ಗಮ್‌ ಜಗಿಯುವುದಕ್ಕೆ ಕೊಡದಿದ್ದರೇ ಕ್ಷೇಮ. ಹಾಗೂ ಕೊಡಲೇಬೇಕಾದರೆ ಅಪರೂಪಕ್ಕೆ ಕೊಟ್ಟರೆ ಸಾಕು. ಮಾತ್ರವಲ್ಲ, ಗಮ್‌ ಗಳು ಅಗಿಯುವುದಕ್ಕೆ ಮಾತ್ರ ಇರುವುದು, ಅವುಗಳನ್ನು ತಿನ್ನುವ ಅಥವಾ ನುಂಗುವ ಹಾಗಿಲ್ಲ ಎಂಬುದನ್ನು ಚಿಣ್ಣರಿಗೆ ಮನದಟ್ಟು ಮಾಡಿಸುವುದು ಅಗತ್ಯ. ಇಷ್ಟಾಗಿ ಮಕ್ಕಳು ಗಮ್‌ ನುಂಗಿದ ಸಂದರ್ಭದಲ್ಲಿ ವಾಂತಿ, ಉಸಿರಾಟದ ತೊಂದರೆ, ಹೊಟ್ಟೆನೋವು, ಮಲಬದ್ಧತೆ, ಹೊಟ್ಟೆ ಉಬ್ಬರದಂಥ ಲಕ್ಷಣಗಳು ಕಂಡರೆ ವೈದ್ಯರನ್ನು ಕಾಣಬೇಕಾಗುತ್ತದೆ.

Exit mobile version