Site icon Vistara News

Child care in monsoon: ಮಳೆಗಾಲದಲ್ಲಿ ಪುಟಾಣಿಗಳ ಆರೈಕೆ ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ

child care in monsoon

ಋತು ಬದಲಾದಂತೆ ನಮ್ಮ ದೇಹಧರ್ಮವೂ ಬದಲಾಗುವುದು ಸಹಜ. ಬೇಸಿಗೆಯಲ್ಲಿದ್ದಂತೆ ಮಳೆಗಾಲದಲ್ಲಿರುವುದಕ್ಕೆ ಆಗದು. ವಾತಾವರಣದಲ್ಲಿ ತೇವ, ಥಂಡಿಯ ಅಂಶಗಳು ಹೆಚ್ಚಿರುತ್ತವೆ. ಅತಿಯಾಗಿ ಮಳೆ ಸುರಿಯುವ ಜಾಗಗಳಲ್ಲಂತೂ ಒಣಗಿದ ಬಟ್ಟೆಗಳನ್ನು ಧರಿಸಿ ಬೆಚ್ಚಗಿರುವುದಕ್ಕೇ ಸಾಹಸ ಪಡುವಂತಾಗುತ್ತದೆ. ಈ ಬದಲಾವಣೆಗೆ ವಯಸ್ಕರ ದೇಹಗಳು ತ್ವರಿತವಾಗಿ ಸ್ಪಂದಿಸಿದರೂ ಪುಟ್ಟ ಮಕ್ಕಳು ಹಾಗಲ್ಲ. ಅವಕ್ಕೆ ಪ್ರತ್ಯೇಕ ಆರೈಕೆ ಅಗತ್ಯವಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ (Childcare in monsoon) ಎಳೆಗೂಸುಗಳ ಕಾಳಜಿಯನ್ನು ಹೇಗೆ ಮಾಡಬೇಕು?

ಸ್ಚಚ್ಛತೆ: ಎಲ್ಲೆಡೆ ತೇವ ಹೆಚ್ಚುವುದರಿಂದ ಕಿಚಪಿಚ ಕೆಸರಿನ ಭಾವನೆ ಆವರಿಸುವ ದಿನಗಳಿವು. ಶಿಶುಗಳ ಕಂಕುಳು, ಕುತ್ತಿಗೆ, ತೊಡೆ ಮುಂತಾದ ಚರ್ಮದ ಮಡಿಕೆಗಳಲ್ಲಿ ತೇವ ನಿಲ್ಲದಂತೆ ಎಚ್ಚರ ವಹಿಸಿ. ಬೆಚ್ಚಗಿನ ಬಟ್ಟೆಯಲ್ಲಿ ಅವುಗಳನ್ನು ಸ್ವಚ್ಛವಾಗಿ ಒರೆಸಿ. ತೇವ ಅತಿಯಾದ ಜಾಗಗಳು ರೋಗಾಣುಗಳ ಆಡುಂಬೊಲವಾಗುತ್ತವೆ. ಮಕ್ಕಳನ್ನು ಮುಟ್ಟುವವರೂ ಕೈಗಳನ್ನು ಶುಚಿ ಮಾಡಿಕೊಳ್ಳುವುದು ಅಗತ್ಯ.

ಆಹಾರ: ಘನ ಆಹಾರವನ್ನು ಆರಂಭಿಸಿರುವ ಶಿಶುಗಳಾದರೂ ತಾಯಂದಿರು ಹಾಲುಣಿಸುವುದನ್ನು ನಿಲ್ಲಿಸುವಂತಿಲ್ಲ. ಒಂದೊಮ್ಮೆ ತಾಯಿಗೆ ಕೊಂಚ ನೆಗಡಿಯಂಥ ಸೋಂಕಿನ ಲಕ್ಷಣಗಳಿದ್ದರೂ ಶಿಶುವಿಗೆ ಹಾಲುಣಿಸಲೇಬೇಕು. ತಾಯಿಯ ದೇಹದ ಪ್ರತಿರೋಧಕ ಶಕ್ತಿ ಮಗುವಿಗೆ ದೊರೆಯುವುದು ಅಗತ್ಯ. ಆದರೆ ಹಾಲುಣಿಸುವ ಸಮಯ ಬಿಟ್ಟು ಉಳಿದಂತೆ ತಾಯಿ-ಮಗುವನ್ನು ಪ್ರತ್ಯೇಕಿಸಬೇಕು.

ನೀರು: ಘನ ಆಹಾರ ಆರಂಭಿಸಿರುವ ಮಕ್ಕಳಿಗೆ ನೀರು ಕುಡಿಸುವಾಗ, ಕಡ್ಡಾಯವಾಗಿ ಕಾದಾರಿದ ನೀರನ್ನೇ ಕುಡಿಸಿ. ಯಾವುದೇ ಕಾರಣಕ್ಕೂ ಆಹಾರದ ತಾಜಾತನ ಮತ್ತು ಸ್ವಚ್ಛತೆಯಲ್ಲಿ ರಾಜಿ ಮಾಡಿಕೊಳ್ಳಬೇಡಿ.

ಬದಲಾಯಿಸಿ: ಆಗಾಗ ಬಟ್ಟೆ ಒದ್ದೆ ಮಾಡಿಕೊಳ್ಳುವ ಎಳೆಕೂಸುಗಳನ್ನು ತೇವರಹಿತವಾಗಿ ಇರಿಸುವುದು ಕಷ್ಟದ ಕೆಲಸ, ನಿಜ. ಆದರೆ ಬಟ್ಟೆ ನ್ಯಾಪಿ ಅಥವಾ ಡೈಪರ್‌- ಯಾವುದನ್ನೇ ಉಪಯೋಗಿಸಿದರೂ ಆಗಾಗ ಬದಲಾಯಿಸಿ. ಹೆಚ್ಚಿನ ಸಮಯ ಒದ್ದೆಯಲ್ಲಿರುವ ಮಕ್ಕಳ ಚರ್ಮದ ಮೇಲೆ ಗುಳ್ಳೆ, ದದ್ದುಗಳಂಥ ಕಿರಿಕಿರಿಗಳು ಆರಂಭವಾಗುತ್ತವೆ. ಸದಾ ಕಾಲ ಡೈಪರ್‌ ಧರಿಸುವ ಮಕ್ಕಳಿಗೆ ʻಡೈಪರ್ ಮುಕ್ತʼ ಸಮಯ ನೀಡುವುದೂ ಮಹತ್ವದ್ದು. ಮಳೆ ಬಾರದಿರುವ ಅಥವಾ ಚಳಿ ಇಲ್ಲದ ಹೊತ್ತಿನಲ್ಲಿ ಅವುಗಳನ್ನು ಡೈಪರ್‌ ಇಲ್ಲದೆಯೇ ಒಂದಿಷ್ಟು ಹೊತ್ತು ಬಿಡಬೇಕು

ಸೊಳ್ಳೆ, ಜೋಕೆ!: ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳು ಬೇಕಾಬಿಟ್ಟಿ ಹೆಚ್ಚುತ್ತವೆ. ಓಡಾಡುತ್ತಾ ಚಟುವಟಿಕೆಯಲ್ಲಿರುವ ವಯಸ್ಕರನ್ನೇ ಬೆನ್ನುಹತ್ತಿ ಕಚ್ಚುವ ಸೊಳ್ಳೆಗಳು ಪುಟ್ಟ ಮಕ್ಕಳನ್ನು ಬಿಟ್ಟಾವೆಯೇ? ಹಾಗಾಗಿ ಮನೆಯ ಸುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ. ಕಿಟಕಿಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳಿ. ಮಕ್ಕಳಿಗೆ ಸಡಿಲವಾದ ತುಂಬು ಬಟ್ಟೆಗಳನ್ನು ಹಾಕಿ. ಮಲಗುವಾಗ ಸೊಳ್ಳೆಪರದೆಗಳನ್ನು ಬಳಸಿ.

ಕತ್ತರಿಸಿ: ವಾತಾವರಣದಲ್ಲಿ ತೇವ, ಥಂಡಿ ಹೆಚ್ಚಿದಾಗ ಕೆಲವೊಮ್ಮೆ ಮೈಮೇಲೆ ಗುಳ್ಳೆಗಳಾಗಬಹುದು. ಸೊಳ್ಳೆಗಳ ಕಾಟಕ್ಕೂ ಚರ್ಮ ಕೆಂಪಾಗಬಹುದು. ಈ ಸಂದರ್ಭದಲ್ಲಿ ಮಕ್ಕಳು ಗಾಯವಾಗುವಂತೆ ತುರಿಸಿಕೊಳ್ಳುವ ಸಾಧ್ಯತೆಯಿದೆ. ಎಳೆಕೂಸುಗಳ ಕೈಗೆ ಮಿಟೆನ್‌ ಹಾಕಬಹುದು. ಸ್ವಲ್ಪ ದೊಡ್ಡ ಮಕ್ಕಳಾದರೆ ಅವುಗಳ ಉಗುರುಗಳನ್ನು ಜಾಗ್ರತೆಯಿಂದ ಕತ್ತರಿಸಿ.

ಇದನ್ನೂ ಓದಿ: Monsoon Food: ಮಲೆನಾಡಿನ ಈ ರುಚಿಕರ ತಿನಿಸು, ಮಳೆಗಾಲದಲ್ಲೇ ಸವಿದರೆ ಸೊಗಸು!

ಮನೆಮದ್ದು: ವರ್ಷದ ಮೇಲಿನ ಪುಟಾಣಿಗಳು ನಿಂತಲ್ಲಿ ನಿಲ್ಲುವವರಲ್ಲ. ಮಳೆಗಾಲದಲ್ಲಿ ಎಲ್ಲೆಂದರೆ ಓಡಾಡಿ ಜಾರಿ ಬೀಳಬಹುದು, ಮಳೆಯಲ್ಲಿ ನೆನೆದು ನೆಗಡಿ-ಕೆಮ್ಮು ಬರಬಹುದು. ಇಂಥ ಸಂದರ್ಭಗಳಲ್ಲಿ ಸಣ್ಣ-ಪುಟ್ಟ ಮನೆಮದ್ದು ಹಿತವಾಗುತ್ತದೆ. ಉದಾ, ನೆಗಡಿ ಆರಂಭವಾಗುತ್ತಿದ್ದಂತೆ, ದೊಡ್ಡಪತ್ರೆಯನ್ನು ಬಿಸಿ ಮಾಡಿ, ರಸಹಿಂಡಿ. ಅದಕ್ಕೆ ಕೊಂಚ ಜೇನುತುಪ್ಪ ಸೇರಿಸಿ ಮಕ್ಕಳಿಗೆ ಕೊಡಿ.

ಹೇಳಿಕೊಡಿ: ಮನೆಯ ಹೊರಗಿನಿಂದ ಬರುತ್ತಿದ್ದಂತೆ ಅಥವಾ ಬಾತ್‌ರೂಂ ಕೆಲಸಗಳು ಮುಗಿಯುತ್ತಿದ್ದಂತೆ ಕೈ-ಕಾಲುಗಳನ್ನು ಶುಚಿ ಮಾಡಿಕೊಳ್ಳಬೇಕು ಎನ್ನುವುದನ್ನು ಮಗುವಿಗೆ ಹೇಳಿಕೊಡಿ. ಮಕ್ಕಳನ್ನು ಮುಟ್ಟುವಾಗ ನೀವೂ ಕೈ ಶುಚಿ ಮಾಡಿಕೊಳ್ಳಿ. ಇದರಿಂದ ಮುಂದಿನ ಜೀವನಕ್ಕೆ ಬೇಕಾದ ಒಳ್ಳೆಯ ಅಭ್ಯಾಸವನ್ನು ಮಕ್ಕಳು ಕಲಿತಂತಾಗುತ್ತದೆ.

ದೂರವಿಡಿ: ಮಳೆಗಾಲದಲ್ಲಿ ಒಕ್ಕರಿಸಿಕೊಳ್ಳುವ ವೈರಸ್‌ ಕಾಟದಿಂದ ಅನಾರೋಗ್ಯದಿಂದ ಬಳಲುತ್ತಿರುವವರು ಯಾರಾದರೂ ಇದ್ದರೆ, ಅವರಿಂದ ಮಕ್ಕಳನ್ನು ದೂರ ಇರಿಸಿ. ಎಳೆಕೂಸುಗಳಾದರೆ ರೋಗಿಗಳ ಬಳಿಗೆ ಕರೆದೊಯ್ಯಬೇಡಿ. ಸ್ವಲ್ಪ ದೊಡ್ಡ ಮಕ್ಕಳಾದರೆ ಸಮೀಪ ಹೋಗಲು ಬಿಡಬೇಡಿ.

ಇದನ್ನೂ ಓದಿ: Monsoon Drive: ಡ್ರೈವಿಂಗ್‌ ಪ್ರಿಯರೇ, ಮಳೆಗಾಲದಲ್ಲಿ ಮರೆಯದೆ ಮಾಡಬೇಕಾದ ರೋಡ್‌ಟ್ರಿಪ್‌ಗಳಿವು!

Exit mobile version