Site icon Vistara News

Coffee Benefits: ಕಾಫಿಯಿಂದ ಆರೋಗ್ಯಕರ ಲಾಭ ಪಡೆಯಬೇಕಾದರೆ ಏನು ಮಾಡಬೇಕು ಗೊತ್ತೇ?

coffee drinking

ಕಾಫಿ ಎಂಬ ಪೇಯದ ಭಕ್ತರು ಜಗತ್ತಿನಾದ್ಯಂತ ಇದ್ದಾರೆ. ʻಯಾರೇನೇ ಅಂದರೂ, ಕಾಫಿನೇ ನಮ್‌ ದೇವರುʼ ಎಂದು ನಿತ್ಯವೂ ಕಾಫಿಯ ಭಜನೆ ಮಾಡುತ್ತಾ ದಿನಕ್ಕೊಮ್ಮೆಯಾದರೂ ಕಾಫಿ ಹೀರದಿದ್ದರೆ ಖಂಡಿತ ನೆಮ್ಮದಿ ಸಿಗುವುದಿಲ್ಲ ಎನ್ನುವ ಕಾಫಿ ಪ್ರಿಯರೂ ನಮ್ಮೊಳಗೆ ಇದ್ದಾರೆ. ಜೋರು ಮಳೆ ಬಂದಾಗ, ಗೆಳೆಯರ ಜೊತೆಗೆ, ಆಫೀಸಿನ ಕೆಲಸ ಮಧ್ಯೆ, ಅತೀವ ಒತ್ತಡದಲ್ಲಿದ್ದಾಗ, ಎಲ್ಲೋ ಪ್ರಯಾಣ ಮಾಡಿದಾಗ, ಸುಸ್ತಾಗಿ ಕೂತಾಗ, ಏಕಾಂಗಿತನ ಬಾಧಿಸಿದಾಗ, ನಿದ್ದೆ ಬಿಟ್ಟು ಹಾಸಿಗೆಯಿಂದ ಎದ್ದಾಗ, ಬೇಸರವಾದಾಗ, ಮೂಡು ಹಾಳಾದಾಗ, ಚೈತನ್ಯ ಕಳೆದುಕೊಂಡಾಗ ಹೀಗೆ ಒಂದಲ್ಲ ಒಂದು ಕಾರಣ ಸಾಕು (coffee time) ನಮಗೆ ಕಾಫಿ ಕುಡಿಯಲು. ಆ ಮಧುರ ಪರಿಮಳ ಕಾಫಿಯೆಂಬ ಪೇಯವನ್ನು ತುಟಿ ಹೀರಿದಾಕ್ಷಣ ಏನೋ ಒಂದು ಶಕ್ತಿ, ಚೈತನ್ಯ ದಕ್ಕುತ್ತದೆ (Coffee gives energy) ಎಂಬ ಉತ್ತರ ಕಾಫಿ ಪ್ರಿಯರದ್ದು.

ಹೀಗೆ ಕಾಫಿ ಹೆಚ್ಚು ಕುಡಿಯುವುದು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ಗೊತ್ತಿದೆ ನಿಜ. ಆದರೆ ಕಾಫಿಯಿಲ್ಲದೆ ದಿನ ಮುಗಿಸುವುದಾದರೂ ಹೇಗೆ ಹೇಳಿ! ಹಾಗಾಗಿ ನಾವು ಕಾಫಿಯ ಗುಣಗಳ ಪಟ್ಟಿ ಮಾಡುತ್ತಾ ನಾವು ಕಾಫಿ ಕುಡಿಯಲು ಬೇಕಾದ ನೂರಾರು ಒಳ್ಳೆಯ ಗುಣಗಳನ್ನು (coffee benefits) ಹಾಡಿ ಹೊಗಳುತ್ತಾ ಇರುತ್ತೇವೆ. ಹಾಗಾಗಿ ಇದು ಕಾಫಿ ಪ್ರಿಯರಿಗೆ ಸಂತಸದ ಸುದ್ದಿಯೇ ನಿಜ.

ಕಾಫಿಯನ್ನು ಹಿತಮಿತವಾಗಿ ಕುಡಿದರೆ, ಹಲವು ಆರೋಗ್ಯಕರ ಲಾಭಗಳೂ ಇವೆ. ಕಾಫಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳೂ ಹೇರಳವಾಗಿರುವುದರಿಂದ ಒತ್ತಡ, ತೂಕ, ಹೃದಯದ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳಿಗೆ ಉಪಕಾರವನ್ನೂ ಮಾಡುತ್ತದೆ. ಇದರಲ್ಲಿರುವ ಕೆಫೀನ್‌ (Caffeine) ಅಂಶವು ನಮ್ಮ ಬಾಡಿದ ಮೂಡನ್ನು ಒಡನೆಯೇ ಸರಿಪಡಿಸಿ ಚೈತನ್ಯಗೊಳಿಸುವ ಶಕ್ತಿಯಿರುವುದರಿಂದಲೇ ನಾವೆಲ್ಲ ಕಾಫಿಯ ಘಮಕ್ಕೆ, ರುಚಿಗೆ, ಮೋಹಕ್ಕೆ ದಾಸರಾಗಿದ್ದೇವೆ ಎಂಬುದು ನಿಜವಾದರೂ, ಇದರಲ್ಲಿರುವ ಕೆಫೀನ್‌ ಅಂಶವು ಮಿದುಳಿನಲ್ಲಿರುವ ಸೆರೆಟೋನಿನ್‌ ಹಾಗೂ ಅಸಿಟೈಲ್ಕೋನಿನ್‌ ಮಟ್ಟ್ವನ್ನು ಹೆಚ್ಚಿಸಿ ಆ ಮೂಲಕ ಮಿದುಳು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆಯಂತೆ. ಇದರಿಂದ ಯೋಚನಾ ಸಾಮರ್ಥ್ಯ, ಸ್ಮರಣಾ ಶಕ್ತಿ ಹೆಚ್ಚುತ್ತದೆ. ಮಿದುಳಿನ ಆರೋಗ್ಯಕ್ಕೂ ಕಾಫಿ ಸಹಾಯ ಮಾಡುತ್ತದೆ ಎಂದು ಹೇಳಿದೆ ಇತ್ತೀಚೆಗಿನ ಸಂಶೋಧನೆಗಳು.

ಹಾಗಾದರೆ, ಮಿದುಳಿಗೆ ಒಳ್ಳೆಯದು ಎಂದು ಬೇಕಾಬಿಟ್ಟಿ ಕಾಫಿ ಕುಡಿದರೆ ಆದೀತೋ ಹೇಳಿ! ದಿನಕ್ಕೆಷ್ಟು ಕಾಫಿ ಕುಡಿಯಬಹುದು ಎಂಬ ಅರಿವೂ ಇಲ್ಲಿ ಮುಖ್ಯವಾಗುತ್ತದೆ. ದೇಹದ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರಲು ಹೆಚ್ಚು ಕಾಫಿ ಕುಡಿಯಬಾರದು. ದಿನಕ್ಕೆ ನಾಲ್ಕರಿಂದ ಐದು ಕಪ್‌ ಕಾಫಿ ಹೀರಿದರೆ ಖಂಡಿತಾ ಒಳ್ಳೆಯದಾಗದು. ಹೆಚ್ಚೆಂದರೆ ಒಂದರಿಂದ ಎರಡು ಕಪ್‌ ದಿನಕ್ಕೆ ಕುಡಿಯಬಹುದು ಎನ್ನಲಾಗುತ್ತದೆ. ಆದರೆ, ಇದೂ ಕೂಡಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅವರವರ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು ಇದು.

ಕಾಫಿ ಪ್ರಿಯರು, ಇಷ್ಟು ಕೇಳಿ ಕಾಫಿ ಹೀರಲು ಹೊರಡುವ ಮೊದಲು ಒಂದು ವಿಚಾರ ಮಾತ್ರ ನೆನಪಿನಲ್ಲಿಟ್ಟುಕೊಳ್ಳಬೇಕು. ಒಂದರಿಂದ ಎರಡು ಕಪ್‌ ಕುಡಿಯಬಹುದು ಎಂದುಕೊಂಡು, ಸ್ಟ್ರಾಂಗ್‌ ಕಾಫಿ ಮಾಡಲು ಹಾಲು, ಸಕ್ಕರೆ ಡಬ್ಬಗಳನ್ನು ಹುಡುಕಲು ಹೊರಡುವ ಮುನ್ನ ಇಲ್ಲಿ ಕೇಳಿ. ಇಷ್ಟೂ ಆರೋಗ್ಯದ ಲಾಭಗಳನ್ನು ಕಾಫಿಯಿಂದ ಪಡೆದುಕೊಳ್ಳಬೇಕಾದರೆ, ನೀವು ಸಾಮಾನ್ಯ ಕಾಫಿಯನ್ನು ಹೀರಿದರೆ ಸಿಗುವುದಿಲ್ಲವಂತೆ. ಅದಕ್ಕಾಗಿ ಬ್ಲ್ಯಾಕ್‌ ಕಾಫಿ ಹೀರಬೇಕು. ಹೌದು. ಸಕ್ಕರೆ ಹಾಗೂ ಹಾಲು ಸೇರಿಸದ ಬ್ಲ್ಯಾಕ್‌ ಕಾಫಿ ಹೀರಿದರೆ ಈ ಎಲ್ಲ ಆರೋಗ್ಯಕರ ಲಾಭಗಳನ್ನು ಪಡೆಯಬಹುದು!

ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!

Exit mobile version