Site icon Vistara News

Cold Feeling | ಕೆಲವರಿಗೆ ಮಾತ್ರ ಏಕೆ ಚಳಿ ಹೆಚ್ಚು?

Cold Feeling

ಎಲ್ಲರಿಗೂ ಚಳಿಯಾದಾಗ ಸೆಕೆಯೆಂದು ಬೆವರೊರೆಸಿಕೊಳ್ಳುವವರು, ಯಾರಿಗೂ ಚಳಿಯಾಗಿದ್ದಾಗ ಚಳಿಯೆಂದು ನಡುಗುವವರು- ಇಂಥವರೆಲ್ಲಾ ಮೋಜಿನ ವಸ್ತುಗಳಾಗುವುದೇ ಹೆಚ್ಚು. ʻಅದೇನು ಹಂಗಾಡ್ತೀಯ? ಸ್ವಲ್ಪ ಸುಮ್ನಿರು!ʼ ಎಂದು ಜೊತೆಗಿರುವವರು ಮೂದಲಿಸುವುದು ಸಾಮಾನ್ಯ. ಆದರೆ ಕೆಲವರಿಗೇಕೆ ಉಳಿದವರಿಗಿಂತ ಹೆಚ್ಚು ಚಳಿಯಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಪರಿಶೀಲಿಸಬೇಕಾದ ವಿಚಾರ. ಹಾಗೆಂದೇ ತಜ್ಞರು ಅದನ್ನು ಮಾಡಿದ್ದಾರೆ. ಒಂದೇ ರೀತಿಯ ವಾತಾವರಣದಲ್ಲಿರುವ ಜನರು ಚಳಿಯನ್ನು ಬೇರೆಬೇರೆ ರೀತಿಯಲ್ಲಿ ಏಕೆ ಅನುಭವಿಸುತ್ತಾರೆ ಎಂಬುದಕ್ಕೆ ಸೂಕ್ತ ವಿವರಣೆ ಲಭ್ಯವಿದೆ.

ವಯಸ್ಸು…
ಪ್ರಾಯ ಹೆಚ್ಚಿದಂತೆ ಚಳಿಯ ಅನುಭವವೂ ಹೆಚ್ಚುತ್ತದೆ. ಚರ್ಮದ ಕೆಳಗಿನ ಕೊಬ್ಬಿನ ಶೇಖರಣೆ ಕಡಿಮೆಯಾದಂತೆ ಚಳಿಯ ಅನುಭವವೂ ಅಧಿಕವಾಗುತ್ತದೆ. ವಯಸ್ಸಾದಂತೆ ಚರ್ಮದಡಿಗಿನ ಶೇಖರಣೆ ತಗ್ಗುತ್ತದೆ. ಅವರ ದೈಹಿಕ ಚಟುವಟಿಕೆಯೂ ಕಡಿಮೆಯಾಗುವುದರಿಂದ ಬೆವರುವುದೂ ಕಡಿಮೆ. ಬೇರೇನಾದರೂ ಆರೋಗ್ಯದ ಸಮಸ್ಯೆ ಇದ್ದರೆ ಅಥವಾ ಔಷಧಿಗಳ ಮೇಲಿದ್ದರೂ ತಾಪಮಾನದ ಏರುಪೇರಿಗೆ ಬೇಗನೆ ಸ್ಪಂದಿಸುತ್ತಾರೆ.

ಲಿಂಗ…
ಹೌದು, ಸಮಾನತೆಯ ಅಭಾವ ಚಳಿಗೂ ಉಂಟು! ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಚಳಿಯ ಅನುಭವ ಆಗುತ್ತದಂತೆ. ಕಾರಣ, ಇಬ್ಬರಲ್ಲೂ ಭಿನ್ನವಾಗಿರುವ ಚಯಾಪಚಯ ಪ್ರಮಾಣ. ಮಾತ್ರವಲ್ಲ, ಪುರುಷರಿಗಿಂತ ಮಹಿಳೆಯರಲ್ಲಿ ಮಾಂಸಖಂಡಗಳ ಪ್ರಮಾಣ ಕಡಿಮೆ. ಮಾಂಸಖಂಡಗಳು ನೈಸರ್ಗಿಕವಾಗಿ ಶಾಖ ಉತ್ಪತ್ತಿ ಮಾಡುತ್ತವೆ. ಜೊತೆಗೆ, ಮಹಿಳೆಯರ ಚರ್ಮವೇ ಸ್ವಲ್ಪ ತಣ್ಣಗಿರುತ್ತದಂತೆ. ಈ ಎಲ್ಲಾ ಕಾರಣಗಳಿಂದಾಗಿ ಪುರುಷರ ಚರ್ಮ ಸ್ವಲ್ಪ ದಪ್ಪ. ಅಂದರೆ ಅನ್ಯಥಾ ಭಾವಿಸುವುದಲ್ಲ! ಅವರ ಚರ್ಮ ದೇಹವನ್ನು ಸ್ವಲ್ಪ ಹೆಚ್ಚು ಬೆಚ್ಚಗಿರಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ತೂಕ…
ಇದೂ ಒಂದು ಕಾರಣ ಹೌದು. ಹೆಚ್ಚಿನ ಬಿಎಂಐ ಇರುವವರು, ಅಂದರೆ ತೂಕ ಹೆಚ್ಚಿರುವವರಿಗೆ ಚಳಿ ಅಷ್ಟೊಂದು ತಾಗುವುದಿಲ್ಲವಂತೆ. ಚರ್ಮದ ಕೆಳಗಿನ ಕೊಬ್ಬಿನಂಶ ಅವರನ್ನು ಹೆಚ್ಚಿನ ಚಳಿಯಿಂದ ಕಾಪಾಡುತ್ತದೆ. ತೀರ ತೆಳ್ಳಗಿರುವವರು ಗಾಳಿಯಿಂದ ಮಾತ್ರವಲ್ಲ, ಚಳಿಯಿಂದಲೂ ರಕ್ಷಿಸಿಕೊಳ್ಳಬೇಕು.

ಆನುವಂಶಿಕ ಕಾರಣ
ತಲೆಮಾರಿನಿಂದ ತಲೆಮಾರಿಗೆ ಆಸ್ತಿ ಮಾತ್ರವಲ್ಲ, ಇದೂ ವರ್ಗಾಯಿಸಲ್ಪಡುತ್ತದಂತೆ. ಮಾಂಸಖಂಡಗಳಲ್ಲಿ ಕೆಲವರಿಗೆ ಆಲ್ಫಾ-ಆಕ್ಟಿನಿನ್‌-೩ ಎಂಬ ಪ್ರೊಟೀನ್‌ ಕೊರತೆಯಿರುತ್ತದೆ. ಇದು ಆನುವಂಶಿಕವಾಗಿ ಮುಂದುವರಿಯುತ್ತದೆ. ಈ ಪ್ರೊಟೀನ್‌ ಕೊರತೆ ಉಳ್ಳವರಲ್ಲಿ ಚಳಿ ಹೆಚ್ಚು ತಾಗುವುದಿಲ್ಲ.

ಕಂಡರೂ ಸಾಕು!
ಚಳಿಯೂ ಕೆಲವೊಮ್ಮೆ ಆಕಳಿಕೆಯಂತೆಯೇ, ಒಬ್ಬರು ನಡುಗುವುದನ್ನು ಕಂಡರೆ ಇನ್ನೂ ಕೆಲವರಲ್ಲಿ ನಡುಕ ಆರಂಭವಾಗುತ್ತದೆ. ಇದು ಅವರವರ ಮಾನಸಿಕ ಸ್ಥಿತಿ. ಇದಲ್ಲದೆ, ಸದಾ ಬೆಚ್ಚನೆಯ ವಾತಾವರಣಕ್ಕೆ ಹೊಂದಿಕೊಂಡವರಿಗೆ ಸ್ಪಲ್ಪ ಚಳಿ ಇದ್ದರೂ ನಡುಗುವಂತಾಗುತ್ತದೆ.

ಆರೋಗ್ಯ ಸಮಸ್ಯೆಗಳು
ಕೆಲವೊಂದು ಆರೋಗ್ಯ ಸಮಸ್ಯೆಗಳಿಂದಲೂ ಚಳಿಯ ಅನುಭವ ಹೆಚ್ಚಬಹುದು. ಉದಾ, ಥೈರಾಯ್ಡ್‌ ಸಮಸ್ಯೆ, ಮಧುಮೇಹ, ಕಬ್ಬಿಣದಂಶದ ಕೊರತೆ- ಇಂಥವೆಲ್ಲಾ ಇರುವವರಲ್ಲಿ ಚಳಿಯ ಅನುಭವ ಹೆಚ್ಚಾಗಿಯೇ ಇರುತ್ತದೆ.

ಇದನ್ನೂ ಓದಿ| Saffron benefits | ಆರೋಗ್ಯಕರ ಜೀವನಕ್ಕೆ ಬೇಕೇ ಬೇಕು ಕೇಸರಿಯ ರಂಗು!

Exit mobile version