Site icon Vistara News

Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

Constipation Problem

ಮಲಬದ್ಧತೆ ಎಂಬ ಸಮಸ್ಯೆ (Constipation problem) ನಾವು ಗಂಭೀರವಾಗಿ ಪರಿಗಣಿಸುವ ಆರೋಗ್ಯದ ಸಮಸ್ಯೆ ಅಲ್ಲವಾದರೂ, ಕೆಲವೊಮ್ಮೆ ಇದು ಗಂಭೀರ ಸ್ಥಿತಿಯನ್ನೇ ತಲುಪುತ್ತದೆ. ಎಲ್ಲ ಕಾಲದಲ್ಲೂ ಈ ಸಮಸ್ಯೆ ಬಾಧಿಸುತ್ತದೆ. ಯಾವುದೇ ಆಹಾರ ಹೊಟ್ಟೆಗೆ ಹೋದರೂ ಕೂಡ ಮಾರನೇ ದಿನ ಪಡುವ ಕಷ್ಟ ಅಷ್ಟಿಷ್ಟಲ್ಲ. ಮಲಬದ್ಧತೆಯ ಸಮಸ್ಯೆ ಇರುವ ಪ್ರತಿಯೊಬ್ಬರಿಗೂ ಇದರ ನೋವು ತಿಳಿದಿದೆ. ತಂಪು ಪ್ರಕೃತಿಯ ಆಹಾರವನ್ನೇ ಸೇವಿಸುವ ಮೂಲಕ ಮಲಬದ್ಧತೆ ಆಗದಂತೆ ಮುಂಜಾಗ್ರತೆ ವಹಿಸಬಹುದಾದರೂ, ಮಲಬದ್ಧತೆ ಆದರೆ, ಯಾವೆಲ್ಲ ಮನೆಮದ್ದುಗಳ ಮೂಲಕ ಮಲಬದ್ಧತೆಯನ್ನು ಹತೋಟಿಗೆ ತರಬಹುದು ಎಂಬುದನ್ನು ನೋಡೋಣ.

ನಿಂಬೆಹಣ್ಣಿನ ನೀರು

ನಿಂಬೆಹಣ್ಣಿನ ನೀರು ದೇಹಕ್ಕೆ ಬೇಕಾದ ನೀರಿನಂಶವನ್ನು ನೀಡುವ ಮೂಲಕ ದೇಹವನ್ನು ತಂಪಾಗಿಡುತ್ತದೆ. ಜೊತೆಗೆ ಪಚನಕ್ರಿಯೆ ಸರಿಯಾಗಿ ಆಗುತ್ತದೆ. ಇದರಲ್ಲಿರುವ ಸಿಟ್ರಿಕ್‌ ಆಸಿಡ್‌ ಜಠರ ರಸ ಬಿಡುಗಡೆಯಾಗುವಂತೆ ಪ್ರಚೋದಿಸುವ ಮೂಲಕ ಮಲವನ್ನು ಮೆದುವಾಗುವಂತೆ ಮಾಡುತ್ತದೆ. ಅರ್ಧ ನಿಂಬೆ ಹಣ್ಣನ್ನು ಉಗುರು ಬೆಚ್ಚಗೆ ನೀರಿಗೆ ಹಿಂಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೆಳಗ್ಗೆಯೇ ಮಲವಿಸರ್ಜನೆ ಸಹಜವಾಗಿ ಆಗುತ್ತದೆ.

ಆಲೊವೆರಾ ಜ್ಯೂಸ್

ಆಲೊವೆರಾ ಜ್ಯೂಸ್‌ನಲ್ಲಿ ಸಹಜವಾಗಿಯೇ ಮಲವನ್ನು ಮೆದುಗೊಳಿಸುವ ತಾಕತ್ತಿರುವುದರಿಂದ ಇದು ಮಲಬದ್ಧತೆಗೆ ಒಳ್ಳೆಯದು. ಇದು ಕರುಳಿನಲ್ಲಿರುವ ಉರಿಯೂತವನ್ನು ಶಮನಗೊಳಿಸಿ, ಜೀರ್ಣನಾಳವನ್ನು ಆರೋಗ್ಯವಾಗಿರಿಸುತ್ತದೆ. ನಿತ್ಯವೂ ಎರಡರಿಂದ ಮೂರು ಚಮಚ ಅಲೊವೆರಾ ಜ್ಯೂಸ್‌ ಅನ್ನು ನೀರಿನ ಜೊತೆಗೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.

ಎಳನೀರು

ಎಳನೀರಿನಲ್ಲಿ ನೈಸರ್ಗಿಕವಾದ ಎಲೆಕ್ಟ್ರೋಲೈಟ್‌ಗಳು ಇರುವುದರಿಂದ ಇದು ದೇಹವನ್ನು ಹೈಡ್ರೇಟ್‌ ಮಾಡುವುದಲ್ಲದೆ, ಜೀರ್ಣನಾಳದಲ್ಲಿ ಆಹಾರ ಸುಲಭವಾಗಿ ಸಾಗುವಂತೆ ಮಾಡುತ್ತದೆ. ಪಚನಕ್ರಿಯೆಯೂ ಸುಲಭವಾಗಿ ಆಗುತ್ತದೆ. ಇದು ನಾರಿನಂಶ ಹಾಗೂ ಜೀರ್ಣಕ್ರಿಯೆಯನ್ನು ಪ್ರಚೋದಿಸುವ ಕಿಣ್ವಗಳನ್ನು ಹೊಂದಿರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನೀಗಿಸುತ್ತದೆ.

ಮೆಂತ್ಯ ಕಾಳು

ಮೆಂತ್ಯಕಾಳು ತಂಪುಕಾರಕ ಗುಣಗಳನ್ನು ಹೊಂದಿದೆ. ಮೆಂತ್ಯಕಾಳನ್ನು ನೀರಿನಲ್ಲಿ ನೆನೆಹಾಕಿ ಮೊಳಗೆ ಬರಿಸಿ ಅಥವಾ ಮೆದುವಾಗಿಸಿ ಮಾರನೇ ದಿನ ತಿನ್ನುವುದರಿಂದ ದೇಹ ತಂಪಾಗುತ್ತದೆ. ಇದು ಗ್ಯಾಸ್‌ ಹಾಗೂ ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನು ನೀಗಿಸುತ್ತದೆ. ತೂಕ ಇಳಿಸಲೂ ಇದು ಒಳ್ಳೆಯದು. ಸಾಕಷ್ಟು ಪೋಷಕಾಂಶಗಳನ್ನೂ ಹೊಂದಿರುವ ಇದನ್ನು ಹಾಗೆಯೇ ತಿನ್ನಲು ಸಾಧ್ಯವಾಗದಿದ್ದರೆ, ಮೆಂತ್ಯಕಾಳನ್ನು ನೀರಿನಲ್ಲಿ ಕುದಿಸಿ ಚಹಾ ಮಾಡಿ ಕುಡಿಯಬಹುದು.

ಪುದಿನ ಚಹಾ

ಆಂಟಿಸೆಪ್ಟಿಕ್‌ ಗುಣಗಳನ್ನು ಹೊಂದಿರುವ ಪುದಿನವು ಜೀರ್ಣನಾಳ ಹಾಗೂ ಮಾಂಸಖಂಡಗಳನ್ನು ರಿಲ್ಯಾಕ್ಸ್‌ ಮಾಡಬಲ್ಲ ಗುಣವನ್ನು ಹೊಂದಿದೆ. ಜೀರ್ಣಕ್ರಿಯೆಗೂ ಇದು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ ಹಾಗೂ ಗ್ಯಾಸ್‌ನಂತಹ ಸಮಸ್ಯೆಗಳಿಗೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ಚಿಯಾ ಬೀಜಗಳು

ಎರಡು ಚಮಚ ಚಿಯಾ ಬೀಜಗಳನ್ನು ನೀರಿನಲ್ಲಿ ಒಂದು ಗಂಟೆ ನೆನೆಹಾಕಿ ಕುಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ಮಾಯವಾಗುತ್ತದೆ. ಈ ಬೀಜಗಳು ನೀರಿನಲ್ಲಿ ನೆನೆದ ತಕ್ಷಣ ಜೆಲ್‌ನಂತಹ ಗುಣವನ್ನು ಪಡೆಯುವುದರಿಂದ ಸುಲಭವಾಗಿ ಕರಗಿದ ಆಹಾರವು ಜೀರ್ಣನಾಳದ ಮೂಲಕ ಜಾರಿಕೊಂಡು ಹೋಗುವುದರಿಂದ ಮಲವೂ ಸುಲಭವಾಗಿ ಜಾರಿ ಹೊರಗೆ ಬರುತ್ತದೆ. ಚಿಯಾ ಬೀಜಗಳಲ್ಲಿ ಪೋಷಕಾಂಶಗಳೂ ಇರುವುದರಿಂದ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ. ಇದನ್ನು ನಿತ್ಯವೂ ಕುಡಿಯಬಹುದು.

ಮೊಸರು

ಮೊಸರು, ಮಜ್ಜಿಗೆಯಂತಹ ಪ್ರೊಬಯಾಟಿಕ್‌ ಪೇಯಗಳನ್ನೂ ನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಿ. ಇದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಜೊತೆಗೆ ಇದು ಬೇಸಿಗೆಯಲ್ಲಿ ಹೊಟ್ಟೆಗೆ ತಂಪು ಕೂಡಾ. ಪೋಷಕಾಂಶಗಳೂ ಹೊಟ್ಟೆ ಸೇರುವುದರಿಂದ ಇವು ನಿತ್ಯಾಹಾರದಲ್ಲಿ ಬೇಕೇಬೇಕು.

ಇದನ್ನೂ ಓದಿ: Snoring problem: ಗೊರಕೆಯ ಸಮಸ್ಯೆಯೇ? ನಿಮ್ಮ ಗೊರಕೆಯ ಮೂಲ ಕಾರಣ ಯಾವುದೆಂದು ಗೊತ್ತಿರಲಿ!

Exit mobile version