ಅಡುಗೆ ಮನೆಯಲ್ಲಿರುವ (kitchen tips) ಕೆಲವು ವಸ್ತುಗಳ ಆರೋಗ್ಯಕಾರಿ (health tips) ಉಪಯೋಗಗಳು ನಮ್ಮ ಹಿರಿಯರಿಗೆ ಚೆನ್ನಾಗಿ ಗೊತ್ತಿರುತ್ತದೆ. ನಿಮ್ಮ ಕಣ್ಣುಗಳಲ್ಲಿ ಕಿರಿಕಿರಿ, ನೋವು ಇದ್ದರೆ ನಿಮ್ಮ ಅಜ್ಜಿ ಕೊತ್ತಂಬರಿ ನೀರು ಬಿಟ್ಟು ಶಮನ ಮಾಡುವುದನ್ನು ನೀವು ಗಮನಿಸಿರಬಹುದು. ಕೊತ್ತಂಬರಿ ಬೀಜ ಅಥವಾ ಕೊತ್ತಂಬರಿ ಕಾಳಿನ ಆರೋಗ್ಯ ಪ್ರಯೋಜನಗಳು ಸಾಕಷ್ಟು. ಬನ್ನಿ, ಕೊತ್ತಂಬರಿ ಕಾಳನ್ನು ಬಳಸುವುದರ ಆರೋಗ್ಯ ಪ್ರಯೋಜನಗಳು (Coriander Seeds Benefits) ಏನೇನು ನೋಡೋಣ.
ರಕ್ತದೊತ್ತಡ ನಿಯಂತ್ರಣ (blood pressure control): ಕೊತ್ತಂಬರಿ ಬೀಜವನ್ನು ನೀರಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಅದನ್ನು ಚೆನ್ನಾಗಿ ರುಬ್ಬಿ, ಸೋಸಿ, ಕಲ್ಲುಸಕ್ಕರೆ ಬೆರೆಸಿ ಸೇವಿಸಿದರೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ತೂಕ ಇಳಿಸಲು (weight loss) ನೆರವಾಗುತ್ತದೆ: ನೀವು ತೂಕ ಇಳಿಸುವ ಪ್ರಯತ್ನದಲ್ಲಿದ್ದರೆ ಧನಿಯ ಕಾಳುಗಳು ನಿಮಗೆ ಸೂಕ್ತ. ಮೂರು ದೊಡ್ಡ ಚಮಚ ಧನಿಯ ಕಾಳುಗಳನ್ನು ಕನಿಷ್ಟ ಮೂರು ಘಂಟೆ ನೀರಿನಲ್ಲಿ ನೆನೆಸಿಟ್ಟು ಬಳಿಕ ಒಂದು ದೊಡ್ಡ ಲೋಟ ನೀರಿನಲ್ಲಿ ಕುದಿಸಿ ನೀರು ಅರ್ಧದಷ್ಟಾದ ಬಳಿಕ ಈ ನೀರನ್ನು ಸೋಸಬೇಕು. ಈ ನೀರಿನ ಪ್ರತಿ ಅರ್ಧಭಾಗವನ್ನು ಬೆಳಿಗ್ಗೆ ಪ್ರಥಮ ಆಹಾರ ಹಾಗೂ ರಾತ್ರಿಯ ಅಂತಿಮ ಆಹಾರವಾಗಿ ಸೇವಿಸಬೇಕು. ಇದರಿಂದ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳ್ಳುವುದಲ್ಲದೇ ತೂಕವಿಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ಸಿಗುತ್ತದೆ.
ಅಜೀರ್ಣಕ್ಕೆ ರಾಮಬಾಣ: ಕೊತ್ತಂಬರಿ ಕಾಳು ಇಂತಹ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ಸ್ವಲ್ಪ ನೀರಿಗೆ ಕೊತ್ತಂಬರಿ ಪುಡಿ ಮತ್ತು ಉಪ್ಪು ಬೆರೆಸಿ ಸೇವಿಸಿ. ಹೀಗೆ ಪ್ರತಿದಿನ ಒಂದು ಚಮಚೆ ಸೇವಿಸುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ.
ನಿದ್ರಾಹೀನತೆಗೆ ಮುಕ್ತಿ: ನಿದ್ರಾಹೀನತೆಯಿಂದ ಬಳಲುತ್ತಿರುವವರು ಕೊತ್ತಂಬರಿ ಕಷಾಯವನ್ನು ಸೇವಿಸಿ. ಕೊತ್ತಂಬರಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದರಿಂದಲೂ ನಿದ್ರೆ ಇಲ್ಲದೆ ತೊಂದರೆಗೀಡಾಗುವ ಸಮಸ್ಯೆ ದೂರವಾಗುತ್ತದೆ.
ಕೀಲು ನೋವು ನಿವಾರಕ: ಕೊತ್ತಂಬರಿ, ಜೀರಿಗೆ, ಬೆಲ್ಲವನ್ನು ಒಟ್ಟಿಗೆ ಬೆರೆಸಿ, ಸಣ್ಣ ಉಂಡೆಗಳನ್ನಾಗಿ ಮಾಡಿ ಪ್ರತಿ ದಿನ ಸೇವಿಸುವುದರಿಂದ ಕೀಲು ನೋವು ನಿವಾರಣೆಯಾಗುತ್ತದೆ. ವಯಸ್ಸಾದವರು ಈ ಅಭ್ಯಾಸವನ್ನು ಮಾಡಿಕೊಂಡರೆ ಆಗಾಗ ಬರುವ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.
ಗರ್ಭಾಶಯಕ್ಕೆ ಲಾಭಕಾರಿ: ಪ್ರತಿದಿನ ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ಕೊತ್ತಂಬರಿ ಸೇವಿಸುವುದು ಗರ್ಭಾಶಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ವಿಶೇಷವಾಗಿ ಹೆರಿಗೆಯ ಸಮಯದಲ್ಲಿ ಹೆಚ್ಚು ಶಕ್ತಿ ನೀಡುತ್ತದೆ. ಮಹಿಳೆಯರ ಆರೋಗ್ಯದಲ್ಲಾಗುವ ಅನೇಕ ಬದಲಾವಣೆಗೂ ಕೊತ್ತಂಬರಿ ಸೇವಿಸುವುದು ಉತ್ತಮ.
ಮಲಬದ್ಧತೆ ಕಡಿಮೆ ಮಾಡುತ್ತದೆ: ಅಜೀರ್ಣ, ಅತಿಸಾರ ಮತ್ತು ಮಲಬದ್ಧತೆಯಿಂದ ಬಳುತ್ತಿರುವವರು, ಕೊತ್ತಂಬರಿಯನ್ನು ಸೇವಿಸಿ. ತೊಳೆದ ಕೊತ್ತಂಬರಿ ಕಾಳನ್ನು ಹುರಿದು, ಉಪ್ಪಿನೊಂದಿಗೆ ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಹೀಗೆ ಮಾಡಿಟ್ಟುಕೊಂಡ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ.
ತಲೆನೋವು ನಿವಾರಕ: ಮಜ್ಜಿಗೆ ಮತ್ತು ಕೊತ್ತಂಬರಿ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದರ ಜತೆಗೆ ವಾಕರಿಕೆ ಬಂದಂತೆ ಆಗುವುದು, ಹೊಟ್ಟೆಯಲ್ಲಿ ಉರಿಯೂತ, ಹೊಟ್ಟೆ ನೋವು, ತಲೆನೋವು ಕಡಿಮೆಯಾಗುತ್ತದೆ.
ಕೆಮ್ಮಿಗೆ ಪರಿಹಾರ: ಕೊತ್ತಂಬರಿಯನ್ನು ಅಕ್ಕಿ ತೊಳೆದ ನೀರಿನಿಂದ ಪುಡಿಮಾಡಿ ಸೇವಿಸುವುದರಿಂದ ಮಕ್ಕಳಲ್ಲಿ ಆಗಾಗ್ಗೆ ಉಂಟಾಗುವ ಕೆಮ್ಮು ಕಡಿಮೆಯಾಗುತ್ತದೆ. ಜತೆಗೆ ಆಯಾಸದಂತಹ ಸಮಸ್ಯೆಯೂ ದೂರವಾಗುತ್ತದೆ.
ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸಲು: ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ದೇಹದ ಫ್ರೀ ರಾಡಿಕಲ್‌ಗಳನ್ನೂ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ. ಕೊತ್ತಂಬರಿ ವಿಟಮಿನ್ ಕೆ, ಸಿ ಮತ್ತು ಎಯಿಂದ ಸಮೃದ್ಧವಾಗಿದೆ. ಇದು ಕೂದಲನ್ನು ಬಲಪಡಿಸಲು ಮತ್ತು ಬೆಳೆಯಲು ಸಹಾಯ ಮಾಡುತ್ತದೆ.
ಉರಿಮೂತ್ರ ನಿವಾರಣೆ: ಒಂದು ಲೋಟ ಎಳನೀರಿಗೆ ಅರ್ಧ ಚಮಚ ಕೊತ್ತಂಬರಿ ಬೀಜದ ಪುಡಿ, ಸ್ವಲ್ಪ ಬೆಲ್ಲ ಸೇರಿಸಿ ಪ್ರತಿದಿನ ಸೇವಿಸಿದರೆ ಉರಿಮೂತ್ರ ರೋಗ ನಿವಾರಣೆಯಾಗುತ್ತದೆ. ಕೊತ್ತಂಬರಿ ಬೀಜ ಹಾಗೂ ಒಣ ಶುಂಠಿಯನ್ನು ಜಜ್ಜಿ ತಯಾರಿಸಿದ ಕಷಾಯಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಕೊತ್ತಂಬರಿ ಬೀಜದ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿದ್ದರೆ, ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ಕೊತ್ತಂಬರಿ ನೀರನ್ನು ಹೇಗೆ ತಯಾರಿಸುವುದು?
ರಾತ್ರಿ 1 ಕಪ್ ಕುಡಿಯುವ ನೀರಿನಲ್ಲಿ 1 ಟೀಸ್ಪೂನ್ ಕೊತ್ತಂಬರಿ ಬೀಜಗಳನ್ನು ನೆನೆಸಿ. ಬೆಳಿಗ್ಗೆ ಈ ನೀರನ್ನು ಸೋಸಿಕೊಳ್ಳಿ. ಹೀಗೆ ಸೋಸಿಕೊಂಡ ನಂತರ ಆ ನೀರನ್ನು ಕುಡಿಯಬಹುದು. ನೆನೆಸಿದ ಬೀಜಗಳನ್ನು ಮತ್ತೆ ಒಣಗಿಸುವ ಮೂಲಕ ಅದನ್ನು ಮತ್ತೆ ಬಳಸಬಹುದು.
ಇದನ್ನೂ ಓದಿ: Coriander Benefits | ಕೊತ್ತಂಬರಿ ಬೀಜ ಮತ್ತು ಸೊಪ್ಪು- ಅಡುಗೆಗೆ ರುಚಿ, ಆರೋಗ್ಯಕ್ಕೂ ಹಿತ