Site icon Vistara News

Cough Remedies: ಮಲಗುವಾಗ ಬಿಡದೆ ಕಾಡುವ ಕೆಮ್ಮು ಎಂಬ ದುಃಸ್ವಪ್ನ: ಪರಿಹಾರ ಇಲ್ಲಿದೆ!

cough

ಅನೇಕರಿಗೆ ಬೆಳಗ್ಗಿನಿಂದ ರಾತ್ರಿಯವರೆಗೆ ಏನೂ ತೊಂದರೆಯೇ ಇಲ್ಲದೇ ಇದ್ದರೂ, ರಾತ್ರಿ ಇನ್ನೇನು ಹಾಸಿಗೆಗೆ ಒರಗಿದ ತಕ್ಷಣ ಕೆಮ್ಮು (cough problem) ಆರಂಭವಾಗಿ ಬಿಡುತ್ತದೆ. ಇಷ್ಟರವರೆಗೆ ಎಲ್ಲಿತ್ತು ಈ ಕೆಮ್ಮು ಎಂದು ಅನಿಸುವಷ್ಟರ ಮಟ್ಟಿಗೆ ರಾತ್ರಿಯ ನಿದ್ದೆಗೆ ತೊಂದರೆ ಕೊಡುವ ಕೆಮ್ಮು ಅನೇಕರಿಗೆ ಎಷ್ಟು ಸಮಯವಾದರೂ ಗುಣವಾಗದು. ಶೀತವಾಗಲೀ, ನೆಗಡಿಯಾಗಲೀ ಏನೂ ತೊಂದರೆಯೇ ಇಲ್ಲದೇ ಕೇವಲ ಕೆಮ್ಮು ಮಾತ್ರ ಇನ್ನಿಲ್ಲದಂತೆ ಬಾಧಿಸುತ್ತದೆ. ನಿದ್ದೆಯನ್ನು ಕೊಲ್ಲುತ್ತದೆ. ರಾತ್ರಿಯನ್ನು ಯಾತನಾಮಯವನ್ನಾಗಿಸುತ್ತದೆ. ಹಾಗಾದರೆ ಬನ್ನಿ, ಕೆಮ್ಮಿನ ವಿಧಕ್ಕೆ ಅನುಸಾರವಾಗಿ, ಕೊಂಚ ಆರಾಮದಾಯಕವಾಗಿ ಸಹಜ ವಿಧಾನಗಳಿಂದಲೇ (cough remedies) ಹೇಗೆ ನಿರಾತಂಕವಾಗಿ ನಿದ್ರೆಗೆ ಜಾರಬಹುದು (health tips) ಎಂಬುದನ್ನು ನೋಡೋಣ.

ಶೀತ ಕೆಮ್ಮು: ಈ ಬಗೆಯ ಕೆಮ್ಮಿನಲ್ಲಿ ನಿಮಗೆ ಕಫ ಇರುತ್ತದೆ. ಒಳಗೆಲ್ಲೋ ಕಫ ಸಂಗ್ರಹವಾಗಿ ಮಲಗಿದ ತಕ್ಷಣ ಉಸಿರಾಟ ಕಷ್ಟವಾಗಿ ಕೆಮ್ಮು ಬರಲು ಆರಂಭವಾಗುತ್ತದೆ. ಇದಕ್ಕಾಗಿ ಔಷಧಿ ತೆಗೆದುಕೊಳ್ಳುತ್ತಿದ್ದರೂ, ಬಗೆಬಗೆಯ ಮನೆಮದ್ದುಗಳನ್ನು ಮಾಡುತ್ತಿದ್ದರೂ ಕೆಮ್ಮು ಮಾತ್ರ ಕಾಡುತ್ತಲೇ ಇರುತ್ತದೆ. ಆಗ ನಿದ್ದೆಯೇ ಕಷ್ಟ ಅಂತ ನಿಮಗನ್ನಿಸಿದರೆ, ಒಂದೆರಡು ಹೆಚ್ಚುವರಿ ದಿಂಬುಗಳ ಸಹಾಯದಿಂದ ಕೊಂಚ ದಿಂಬನ್ನು ಓರೆಯಾಗಿ ಇಟ್ಟುಕೊಂಡು ಅದರ ಮೇಲೆ ಮಲಗಲು ಪ್ರಯತ್ನಿಸಿ. ಎದೆ ಕೊಂಚ ಎತ್ತರದಲ್ಲಿರಲಿ. ಆಗ ಸರಾಗವಾಗಿ ಸಾಧ್ಯವಾಗುತ್ತದೆ.

ಇಂಥ ಶೀತ ಕೆಮ್ಮಿನ ಸಂದರ್ಭ ಮಲಗುವ ಮುನ್ನ ಒಂದು ಚಮಚ ಜೇನುತುಪ್ಪ ಸೇವಿಸಬಹುದು. ಅಥವಾ ಬಿಸಿಯಾಗಿ ಕಷಾಯ ಅಥವಾ ಗಂಟಲಿಗೆ ಹಿತವಾಗುವ ಕಫನಾಶಕ ಗುಣಗಳಿರುವ ಶುಂಠಿ ಸಹಾ, ಕರಿಮೆಣಸಿನ ಚಹಾ, ಪುದಿನ ಚಹಾ, ನಿಂಬೆರಸ ಜೇನುತುಪ್ಪದ ಚಹಾ ಇತ್ಯಾದಿಗಳನ್ನು ಬಿಸಿಬಿಸಿಯಾಗಿಯೇ ಹೀರಿ ಒಂದು ಗಂಟೆಯ ಬಳಿಕ ನಿದ್ದೆ ಮಾಡಿ. ಅಥವಾ ಮಲಗುವ ಮೊದಲು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ.

ಒಣ ಕೆಮ್ಮು: ಒಣ ಕೆಮ್ಮು ಕೆಲವರನ್ನು ಬಹಳ ಕಾಲ ಕಾಡುತ್ತದೆ, ಅಸ್ತಮಾ, ಶ್ವಾಸಕೋಶದ ಇನ್ಫೆಕ್ಷನ್‌, ಪೋಸ್ಟ್‌ ಏಟಲ್‌ ಡ್ರಿಪ್‌ ಸೇರಿದಂತೆ ಹಲವು ಕಾರಣಗಳಿಂದ ಇದು ಉಂಟಾಗುತ್ತದೆ. ಪದೇ ಪದೇ ಕೆಮ್ಮು, ನಿರಂತರವಾಗಿ ಕೆಮ್ಮು ಬರುತ್ತಲೇ ಇರುವುದು ರಾತ್ರಿ ಮಲಗುವಾಗಲೇ ಕೆಮ್ಮು ಹೆಚ್ಚಾಗುವುದು ಇತ್ಯಾದಿ ಇದರ ಮುಖ್ಯ ಲಕ್ಷಣಗಳು.

Vitamin C Benefits

ವಿಟಮಿನ್‌ ಸಿಯ ಆಹಾರ (vitamin c food) ಹೆಚ್ಚು ಸೇವನೆ ಮಾಡುವುದರಿಂದ ಗಂಟಲು ಕೆರೆತದಂತ ಸಮಸ್ಯೆಯಿದ್ದರೆ ಹತೋಟಿಗೆ ಬರಬಹುದು. ದಿನವಿಡೀ ಸರಿಯಾಗಿ ನೀರು ಕುಡಿಯಿರಿ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಸಿಗುವುದು ಇಂಥ ಸಂದರ್ಭ ಬಹಳ ಮುಖ್ಯ. ದಿನಕ್ಕೆ ಎಂಟು ಲೋಟವಾದರೂ ನೀರು ಕುಡಿಯುವುದು ಅಗತ್ಯ. ರಾತ್ರಿಯಾದ ಮೇಲೆ ನೀರು ಕಡಿಮೆ ಮಾಡಿ. ವೀಳ್ಯದೆಲೆಯನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದಲೂ ಒಣ ಕೆಮ್ಮು ಹತೋಟಿಗೆ ಬರುತ್ತದೆ. ಬೇಕಾದರೆ ಜೇನುತುಪ್ಪವನ್ನೂ ಇದಕ್ಕೆ ಆಮೇಲೆ ಸೇರಿಸಿಕೊಳ್ಳಬಹುದು. ಗಂಟಲು ಕೆರೆದಂತೆ ಕೆಮ್ಮು ಬರುತ್ತಿದ್ದರೆ ಇದು ಸಹಾಯವಾಗುತ್ತದೆ. ಅಷ್ಟೇ ಅಲ್ಲ, ಒಣ ಕೆಮ್ಮು ದಿನಗಟ್ಟಲೆ, ವಾರಗಟ್ಟಲೆ ನಿಲ್ಲುವ ಲಕ್ಷಣವಿದ್ದರೆ ಖಂಡಿತ ವೈದ್ಯರನ್ನು ಸಂಪರ್ಕಿಸಿ. ಮುಖ್ಯವಾಗಿ ಕೆಮ್ಮಿನ ಮೂಲ ಕಂಡುಹಿಡಿಯಲು ಪ್ರಯತ್ನಿಸಿ. ಅದು ಅಲರ್ಜಿಯಿಂದಾಗುತ್ತಿದೆಯಾ, ಅಥವಾ ಬೇರೆ ಯಾವ ಕಾರಣ ಎಂಬುದು ಬಹಳ ಮುಖ್ಯ.

ಯಾವುದೇ ಇನ್‌ಫೆಕ್ಷನ್‌ನಿಂದಾದ ಕೆಮ್ಮು ಮನೆಮದ್ದು ಅಥವ ಔಷಧಿಗಳಿಂದ ಹೆಚ್ಚೆಂದರೆ ಕೆಲವು ವಾರಗಳಲ್ಲಿ ಕಡಿಮೆಯಾಗುತ್ತದೆ. ಆದರೆ, ನಿಮ್ಮ ಕೆಮ್ಮು ಯಾವುದೇ ಬಗೆಯದ್ದಾಗಿರಲಿ, ಅದು ಮೂರು ವಾರಕ್ಕಿಂತ ಹೆಚ್ಚು ಸಮಯವಾದರೂ ಕಡಿಮೆಯಾಗಿಲ್ಲ ಎಂದಾದರೆ, ಅಥವಾ ನಿಮ್ಮ ಒಣ ಕೆಮ್ಮು ನಿಧಾನವಾಗಿ ಶೀತ ಕೆಮ್ಮಾಗಿ ಪರಿವರ್ತನೆ ಹೊಂದುತ್ತದೆಯೆಂದಾದರೆ, ಕಫ ಹೆಚ್ಚಾಗುತ್ತಿದೆ ಎನಿಸಿದರೆ, ಅಥವಾ ಜ್ವರ, ಉಸಿರಾಡಲು ಕಷ್ಟ, ವಾಂತಿ ಇತ್ಯಾದಿಗಳೂ ಆರಂಭವಾದರೆ, ದಮ್ಮು/ಉಬ್ಬಸ ಇದ್ದರೆ, ನಿಮ್ಮ ಪಾದದ ಸುತ್ತಮುತ್ತ ಊತ, ಬಾವು ಇದ್ದರೆ, ಇದ್ದಕ್ಕಿದ್ದಂತೆ ತೂಕ ಇಳಿಯಲು ಆರಂಭವಾದರೆ ಖಂಡಿತವಾಗಿಯೂ ಮನೆಮದ್ದುಗಳಲ್ಲೇ ಸುಮ್ಮನೆ ಕೂರಬೇಡಿ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಇದನ್ನೂ ಓದಿ: Home Remedies | ನೆಗಡಿ, ಕೆಮ್ಮು, ಗಂಟಲು ನೋವೇ? ಇಲ್ಲಿವೆ ಮನೆಮದ್ದು!

Exit mobile version